ಬೆಂಗಳೂರು ಅಂಡರ್‌ಪಾಸ್‌ನಲ್ಲಿ ಡೇಂಜರ್ ಮಾರ್ಕ್ ಗಮನಿಸಿ, ಬಿಬಿಎಂಪಿ ಮನವಿ; ಅರ್ಧಕ್ಕಿಂತ ಹೆಚ್ಚು ನೀರು ನಿಂತರೆ ಈ ಪಟ್ಟಿ ಕಾಣುವುದೇ
ಬೆಂಗಳೂರು ಮಳೆ ಸಂಕಷ್ಟ; ಮಳೆಗಾಲದಲ್ಲಿ ಪ್ರಯಾಣಿಸುವಾಗ ಬೆಂಗಳೂರು ಅಂಡರ್‌ಪಾಸ್‌ಗೆ ನುಗ್ಗುವ ಮುನ್ನ ಡೇಂಜರ್ ಮಾರ್ಕ್ ನೋಡಿಬಿಡಿ ಎಂದು ಬಿಬಿಎಂಪಿ ಮನವಿ ಮಾಡಿದೆ. ಆದರೆ, ಅರ್ಧಕ್ಕಿಂತ ಹೆಚ್ಚು ನೀರು ನಿಂತರೆ ಈ ಪಟ್ಟಿ ಕಾಣುವುದೇ ಎಂಬುದು ಸವಾರರ ಪ್ರಶ್ನೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮಳೆ ಸಂಕಷ್ಟ ಅನೇಕ. ಅದರಲ್ಲೂ ಅಂಡರ್ ಪಾಸ್ ಪ್ರಯಾಣ ಬಹಳ ಕಷ್ಟ. ಮಳೆ ನೀರು ನಿಂತ ಅಂಡರ್‌ಪಾಸ್ ದಾಟುವುದೇ ಸಾಹಸ. ಕಳೆದ ವರ್ಷ ಅಂಡರ್ ಪಾಸ್‌ನಲ್ಲಿ ನಿಂತ ಮಳೆ ನೀರಿನಲ್ಲಿ ಕಾರು ಮುಳುಗಿ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ವರ್ಷ ಹಾಗಾಗದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಬಿಬಿಎಂಪಿ ವಾಹನ ಸವಾರರ ಅನುಕೂಲಕ್ಕೆ ಅಂಡರ್‌ಪಾಸ್‌ಗಳಲ್ಲಿ ಡೇಂಜರ್ ಮಾರ್ಕ್ ಅಳವಡಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಅಂಡರ್‌ಪಾಸ್‌ಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದು ಸಾಮಾನ್ಯ. ಪ್ರತಿ ವರ್ಷ ಈ ರೀತಿ ಆಗುತ್ತಿದ್ದು, ಆಗೆಲ್ಲ ವಾಹನ ಸವಾರರು ಒಂದೋ ನೀರು ಕಡಿಮೆಯಾಗುವ ತನಕ ಕಾಯುತ್ತಾರೆ. ಇಲ್ಲವೇ ಪರ್ಯಾಯ ಮಾರ್ಗ ಹಿಡಿದು ಹೋಗುವುದು ಕೂಡ ಸಾಮಾನ್ಯವಾಗಿದೆ. ಆದಾಗ್ಯೂ, ಇದರ ಅರಿವು ಇಲ್ಲದ ಬಹಳಷ್ಟು ವಾಹನ ಸವಾರರು ಅಂಡರ್ ಪಾಸ್‌ಗೆ ನುಗ್ಗಿ ಸಂಕಷ್ಟಕ್ಕೆ ಸಿಲುಕುವುದು ಕೂಡ ಸಹಜವಾಗಿ ಮುಂದುವರಿದಿದೆ. ಈ ವಿಚಾರವಾಗಿ ಬಹಳಷ್ಟು ಟೀಕೆ ಎದುರುಸುತ್ತಿರುವ ಬಿಬಿಎಂಪಿ ಈ ಬಾರಿ ಅಂಡರ್‌ಪಾಸ್‌ನಲ್ಲಿ ಡೇಂಜರ್ ಮಾರ್ಕ್ ಅಳವಡಿಸಿದೆ.
ಬೆಂಗಳೂರು ಮಳೆ ಸಂಕಷ್ಟ; ಅಂಡರ್‌ಪಾಸ್‌ನಲ್ಲಿ ಡೇಂಜರ್ ಮಾರ್ಕ್
ಕಳೆದ ವರ್ಷ ಬೆಂಗಳೂರು ನಗರದ ಕೆ.ಆರ್.ಸರ್ಕಲ್ ಅಂಡರ್ ಪಾಸ್‌ನಲ್ಲಿ ನಿಂತ ಮಳೆ ನೀರಿನಲ್ಲಿ ಕಾರು ಮುಳುಗಿ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ರೀತಿ ದುರಂತ ಮರುಕಳಿಸಬಾರದು ಎಂಬ ಕಾರಣಕ್ಕೆ ಬಿಬಿಎಂಪಿಯು ನಗರದ 18 ರೈಲ್ವೆ ಅಂಡರ್ ಪಾಸ್ ಸೇರಿ 56 ಅಂಡರ್ ಪಾಸ್‌ಗಳಲ್ಲಿ ಸುಮಾರು 1.5 ಅಡಿಯಿಂದ 2 ಅಡಿ ಎತ್ತರಕ್ಕೆ ಅಂಡರ್ ಪಾಸ್‌ನ ಗೋಡೆಗಳಿಗೆ ಕೆಂಪು ಬಣ್ಣದ ಪಟ್ಟಿ ಎಳೆದಿದೆ.
ಇದರಲ್ಲಿ ಅಪಾಯದ ಮಟ್ಟವನ್ನು ಡೇಂಜರ್ ಲೆವೆಲ್ ಎಂದು ಗುರುತಿಸಲಾಗಿದ್ದು, ಅದಕ್ಕಿಂತ ನೀರು ಹೆಚ್ಚಿದ್ದರೆ ಅಂಡರ್‌ಪಾಸ್ ಒಳಗೆ ವಾಹನ ಕೊಂಡೊಯ್ಯದಂತೆ ವಾಹನ ಸವಾರರಿಗೆ ಎಚ್ಚರಿಕೆ ನೀಡಿದೆ. ಈ ಪಟ್ಟಿಯನ್ನು ಗಮನಿಸುವಂತೆ ಸಾರ್ವಜನಿಕರಲ್ಲಿ ಬಿಬಿಎಂಪಿ ಮನವಿ ಮಾಡಿದೆ.
ಅಂಡರ್ ಪಾಸ್‌ನಲ್ಲಿ ಕೆಂಪು ಪಟ್ಟಿ; ಸಮಸ್ಯೆ ಪರಿಹಾರ ಸಾಧ್ಯವೇ?
ಧಾರಾಕಾರವಾಗಿ ಮಳೆ ಸುರಿದಾಗ ಅಂಡರ್‌ಪಾಸ್‌ನಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ತುಂಬಿಕೊಳ್ಳುತ್ತದೆ. ಅಂತಹ ಸನ್ನಿವೇಶದಲ್ಲಿ ಕೆಸರು ನೀರು ತುಂಬಿಕೊಳ್ಳುವ ಕಾರಣ ಬಿಬಿಎಂಪಿ ಈಗ ಬಳಿದಿರುವ ಕೆಂಪು ಪಟ್ಟಿ ಅದರಲ್ಲಿ ಮುಚ್ಚಿ ಹೋಗಲಿದೆ. ಇದರಿಂದ ಮಳೆ ಬಂದಾಗ ವಾಹನ ಸವಾರರಿಗೆ ಅನುಕೂಲ ಹೇಗೆ ಎಂಬ ಪ್ರಶ್ನೆ ಸವಾರರನ್ನು ಕಾಡಿದೆ.
ಇದರ ಬದಲು ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಬೇಕು ಎಂಬ ಆಗ್ರಹಕೇಳಿಬಂದಿದೆ.
ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಬಿ.ಎಸ್.ಪ್ರಹ್ಲಾದ್ ಅವರು ವಾಹನ ಸವಾರರ ಸಂದೇಹಗಳಿಗೂ ಉತ್ತರ ನೀಡಿದ್ದು, ಮೂರು ಹಂತದಲ್ಲಿ ಅಂಡರ್‌ಪಾಸ್ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ. ಮೊದಲ ಹಂತದಲ್ಲಿ ಮಳೆ ಬಂದ ತಕ್ಷಣ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ತಡೆಯುವುದು, ಎರಡನೇ ಹಂತದಲ್ಲಿ ತಾತ್ಕಾಲಿಕ ಕೆಂಪು ಪಟ್ಟಿ ಬಳಿದು ವಾಹನ ಸವಾರರನ್ನು ಎಚ್ಚರಿಸುವುದು, ಮೂರನೇ ಹಂತದ ಕ್ರಮವಾಗಿ ನೀರು ಶೇಖರಣೆ ಆಗದಂತೆ ಹೆಚ್ಚುವರಿ ಚರಂಡಿ ವ್ಯವಸ್ಥೆ ಮಾಡುವುದು ಎಂದು ವಿವರಿಸಿರುವುದಾಗಿ ಕನ್ನಡ ಪ್ರಭ ವರದಿ ಮಾಡಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
