ಬೆಂಗಳೂರು ಬಿಡಿಎ ಶಿವರಾಮ ಕಾರಂತ ಬಡಾವಣೆಯ ನಿವೇಶನ ಖರೀದಿಸುವಿರಾ? 30x40 ಸೈಟ್‌ ದರವೆಷ್ಟು? ಅರ್ಜಿ ಸಲ್ಲಿಸೋದು ಹೇಗೆ, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಬಿಡಿಎ ಶಿವರಾಮ ಕಾರಂತ ಬಡಾವಣೆಯ ನಿವೇಶನ ಖರೀದಿಸುವಿರಾ? 30x40 ಸೈಟ್‌ ದರವೆಷ್ಟು? ಅರ್ಜಿ ಸಲ್ಲಿಸೋದು ಹೇಗೆ, ಇಲ್ಲಿದೆ ವಿವರ

ಬೆಂಗಳೂರು ಬಿಡಿಎ ಶಿವರಾಮ ಕಾರಂತ ಬಡಾವಣೆಯ ನಿವೇಶನ ಖರೀದಿಸುವಿರಾ? 30x40 ಸೈಟ್‌ ದರವೆಷ್ಟು? ಅರ್ಜಿ ಸಲ್ಲಿಸೋದು ಹೇಗೆ, ಇಲ್ಲಿದೆ ವಿವರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಶಿವರಾಮ ಕಾರಂತ ಬಡಾವಣೆ ನಿವೇಶನಗಳನ್ನು ಸದ್ಯದಲ್ಲಿಯೇ ವಿತರಣೆ ಮಾಡುವ ಸೂಚನೆ ದೊರಕಿದೆ. ಬೆಂಗಳೂರಲ್ಲಿ ಬಿಡಿಎ ಸೈಟ್‌ ಖರೀದಿಸಲು ಬಯಸುವವರಿಗೆ ಒಂದಿಷ್ಟು ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಡಾ. ಶಿವರಾಮ ಕಾರಂತ ಬಡಾವಣೆ ನಿವೇಶನ
ಬೆಂಗಳೂರು ಡಾ. ಶಿವರಾಮ ಕಾರಂತ ಬಡಾವಣೆ ನಿವೇಶನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಖರೀದಿಸಲು ಸಾಕಷ್ಟು ಜನರು ಕಾಯುತ್ತಿದ್ದಾರೆ. ಬಡಾವಣೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದರೂ ನಿಗದಿತ ವೇಳೆಗೆ ಹಂಚಿಕೆಯಾಗದೆ ಇರುವುದು ಬಿಡಿಎ ಸೈಟ್‌ ಪ್ರಿಯರಿಗೆ ನಿರಾಶೆ ತಂದಿತ್ತು. ಬಿಡಿಎ ಸೈಟ್‌ ವಿತರಣೆ ಸದ್ಯದಲ್ಲಿಯೇ ಹಂಚಿಕೆಯಾಗುವ ಸೂಚನೆಯಿದ್ದು, ಖಾಸಗಿ ಡೆವಲಪರ್‌ಗಳಿಂದ ಸೈಟ್‌ ಖರೀದಿಸದೆ ಬಿಡಿಎ ಸೈಟೇ ಬೇಕು ಎಂದು ಕಾಯುತ್ತಿರುವವರು ಅರ್ಜಿ ಸಲ್ಲಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಸೈಟ್‌ ಹಂಚಿಕೆಗೆ ಸಂಬಂಧಪಟ್ಟಂತೆ ಹಲವು ಸಮಸ್ಯೆಗಳೂ ಇವೆ. ಕೆಲವೊಂದು ಸಮಸ್ಯೆಗಳು ಯಾವಾಗ ಅಂತ್ಯವಾಗುವುದೋ ಎನ್ನುವ ಸ್ಪಷ್ಟತೆ ಇಲ್ಲ. ರೈತರಿಗೆ ಪರಿಹಾರ, ಚಂದ್ರಶೇಖರ್‌ ಕಮಿಟಿಯನ್ನು ಮುಂದುವರೆಸುತ್ತಾರ? ಸೈಟ್‌ ಹಂಚಿಕೆಯಲ್ಲಿ ಯಾರಿಗೆ ಆದ್ಯತೆ ದೊರಕುತ್ತದೆ? ಹೊಸ ಅರ್ಜಿದಾರರಿಗೆ ಸೈಟ್‌ ದೊರಕುವುದೇ? ಇತ್ಯಾದಿ ಹಲವು ಅಂಶಗಳು ಶಿವರಾಮ ಕಾರಂತ ಬಡಾವಣೆಯೊಳಗೆ ಇವೆ.

ಡಾ. ಕೆ. ಶಿವರಾಮ ಕಾರಂತ ಬಡಾವಣೆ 15 ವರ್ಷಗಳ ಹಿಂದೆ ಅಧಿಸೂಚನೆ ಹೊರಡಿಸಿದ ಪ್ರಾಜೆಕ್ಟ್‌. ಈ ಯೋಜನೆ ಇಷ್ಟೊಂದು ವಿಳಂಬವಾಗಲು ಹಲವೊಂದು ವಿಷಯಗಳು ಕಾರಣವಾಗಿತ್ತು. ಭೂಸ್ವಾಧೀನ, ಪರಿಹಾರ, ನ್ಯಾಯಾಲಯದಲ್ಲಿ ದಾವೆ ಇತ್ಯಾದಿ ಹಲವು ವಿಚಾರಗಳು ಈ ಪ್ರಾಜೆಕ್ಟ್‌ ಜತೆ ಥಳಕು ಹಾಕಿಕೊಂಡಿತ್ತು. ಕಳೆದ ವರ್ಷವೇ ಸೈಟ್‌ ಹಂಚಿಕೆ ಮಾಡಲು ಬಿಡಿಎ ವಿಫಲವಾಗಿತ್ತು. ಹೀಗಾಗಿ, ಈ ವರ್ಷದ ಆರಂಭದಲ್ಲಿಯೇ ನಿವೇಶನ ಹಂಚಿಕೆಯಾಗುವ ಸಾಧ್ಯತೆಯಿದೆ. 2018ರ ಹಿಂದಿನ ಭೂಸ್ವಾಧೀನ, ಕಟ್ಟಡ ಸಕ್ರಮ ವಿಚಾರಗಳನ್ನು ತನಿಖೆ ಮಾಡಲು ನ್ಯಾಯಮೂರ್ತಿ ಎವಿ ಚಂದ್ರಶೇಖರ್‌ ನೇತೃತ್ವದ ಮೇಲ್ವಿಚಾರಣಾ ಸಮಿತಿಯನ್ನು ಸುಪ್ರೀಂಕೋರ್ಟ್‌ ನೇಮಿಸಿತ್ತು. ಈ ಪ್ರಾಜೆಕ್ಟ್‌ಗೆ ಭೂಮಿ ನೀಡಿದವರಿಗೆ ಸೈಟ್‌ ನೀಡುವುದು ಸೇರಿದಂತೆ ಹಲವು ವಿಷಯಗಳು ಈ ಪ್ರಾಜೆಕ್ಟ್‌ನಲ್ಲಿವೆ.

ಶಿವರಾಮ ಕಾರಂತ ಬಡಾವಣೆ ಬಿಡಿಎಯ ಬೃಹತ್‌ ಪ್ರಾಜೆಕ್ಟ್‌

ಶಿವರಾಮ ಕಾರಂತ ಬಡಾವಣೆಯು ಬಿಡಿಎ ಅಭಿವೃದ್ಧಿಪಡಿಸಿದ ಬೆಂಗಳೂರಿನ ಎರಡನೇ ಬೃಹತ್‌ ಪ್ರಾಜೆಕ್ಟ್‌ ಆಗಿದೆ. ಸುಮಾರು 3,546 ಎಕರೆ ಮತ್ತು 12 ಗುಂಟಾ ಪ್ರದೇಶದಲ್ಲಿ ಸುಮಾರು 34 ಸಾವಿರ ನಿವೇಶನಗಳನ್ನು ನಿರ್ಮಿಸುವ ಯೋಜನೆಯಾಗಿದೆ. ಇದರಲ್ಲಿ ಸುಮಾರು 10-12 ಸಾವಿರ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತದೆ. 17 ಸಾವಿರ ನಿವೇಶನಗಳನ್ನು ಈ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ನೀಡಲಾಗುತ್ತದೆ. 20x30, 30x40, 40x60 ಹೀಗೆ ವಿವಿಧ ಗಾತ್ರದ ಸೈಟ್‌ಗಳು ಶಿವರಾಮ ಕಾರಂತ ಬಡಾವಣೆಯಲ್ಲಿದೆ.

ಶಿವರಾಮ ಕಾರಂತ ಬಡಾವಣೆಯಲ್ಲಿ ಸೈಟ್‌ ದರವೆಷ್ಟು?

ಶಿವರಾಮ ಕಾರಂತ ಲೇಔಟ್‌ನಲ್ಲಿ ಸೈಟ್‌ಗಳನ್ನು ಚದರಡಿಗೆ ಅಂದಾಜು 3,650 ರೂಪಾಯಿಗೆ ನೀಡುವ ಪ್ರಸ್ತಾಪವನ್ನು ಬಿಡಿಎ ಮಾಡಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಈ ಬಡಾವಣೆಯ ದೊಡ್ಡ ಗಾತ್ರದ ಸೈಟ್‌ಗಳನ್ನು ಚದರಡಿಗೆ 4,900 ರೂಪಾಯಿಗೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದಿನ ಪ್ರಸ್ತಾಪ 3,650 ರೂಪಾಯಿಗೆ ಹೋಲಿಸಿದರೆ ಭಾರೀ ಹೆಚ್ಚಳವಾಗಿದೆ. ಸದ್ಯ ಮಾರ್ಕೆಟ್‌ ದರ ಚದರಡಿಗೆ 6 ಸಾವಿರ ರೂಪಾಯಿ ಇರುವುದರಿಂದ 4,900 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿವರಾಮ ಕಾರಂತ ಲೇಔಟ್‌ ಸೈಟ್‌ ಹಂಚಿಕೆಗೆ ಮಾನದಂಡ

ಇಲ್ಲಿ ಸೈಟ್‌ ಪಡೆಯಲು ಸಾಕಷ್ಟು ಪೈಪೋಟಿ ಇರಲಿದೆ. ಜತೆಗೆ ಬಿಡಿಎಯು ಸೈಟ್‌ ಹಂಚಿಕೆಗೆ ವಿವಿಧ ಮಾನದಂಡಗಳನ್ನು ಅನುಸರಿಸಲಿದೆ. ಎಸ್‌ಸಿ/ಎಸ್‌ಟಿ, ವಿಶೇಷ ಚೇತನರಿಗೆ, ಸರಕಾರಿ ಉದ್ಯೋಗಿಗಳಿಗೆ, ಸೀನಿಯರ್‌ ಸಿಟಿಜನ್‌ಗಳಿಗೆ ಒಂದಿಷ್ಟು ಸೀಟುಗಳನ್ನು ಮೀಸಲಿಡಬೇಕು. ಇದೇ ರೀತಿ, ಕೆಂಪೇಗೌಡ ಲೇಔಟ್‌, ಅರ್ಕಾವತಿ ಲೇಔಟ್‌ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಿ ಸೈಟ್‌ ದೊರಕದೆ ಇರುವವರಿಗೂ ಆದ್ಯತೆ ನೀಡಬೇಕು. ಹೀಗೆ ಹಲವು ಮಾನದಂಡಗಳನ್ನು, ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸೈಟ್‌ ಹಂಚಿಕೆ ಮಾಡಲಿದೆ.

ಬೆಂಗಳೂರು ಶಿವರಾಮ ಕಾರಂತ ಪ್ರಾಜೆಕ್ಟ್‌ಗೆ ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿ ಸಲ್ಲಿಕೆಗೆ ಸಂಬಂಧಪಟ್ಟಂತೆ ಬಿಡಿಎಯು ಸುದ್ದಿಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ಹೊರಡಿಸಲಿದೆ. ಬಿಡಿಎ ಅಭಿವೃದ್ಧಿಪಡಿಸಿದ ಡಾ. ಶಿವರಾಮ ಕಾರಂತ ಬಡಾವಣೆಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಬಿಡಿಎ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಬಿಡಿಎ ವೆಬ್‌ಸೈಟ್‌ ವಿಳಾಸ: bda.karnataka.gov.in