ರಸ್ತೆ ಅಗಲೀಕರಣಕ್ಕೆ ಅರಮನೆ ಮೈದಾನದ ಒಂದು ಭಾಗ ಸ್ವಾಧೀನಕ್ಕೆ ಮುಂದಾದ ಬಿಡಿಎ; ಪ್ರತಿ ಚದರ ಮೀಟರ್‌ಗೆ ಕೇವಲ 120 ರೂ ನಿಗದಿ
ಬೆಂಗಳೂರಿನಲ್ಲಿ ವಸತಿ ಕಟ್ಟಡಗಳ ಮೌಲ್ಯ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ ಶೇ.57ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿತ್ತು. ಆದರೆ, ನಗರದ ಹೃದಯಭಾಗದಲ್ಲಿರುವ ಅರಮನೆ ಮೈದಾನದ ಒಂದು ಭಾಗವನ್ನು ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಮುಂದಾಗಿದ್ದು, ಪ್ರತಿ ಚದರ ಮೀಟರ್‌ಗೆ ರೂ. 120.68 ದರವಷ್ಟೇ ನಿಗದಿಪಡಿಸಿದೆ.

ಬೆಂಗಳೂರು: ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆಸ್ತಿ ಮೌಲ್ಯ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಉದ್ಯಾನ ನಗರಿಯು ವಿಶ್ವದ ದುಬಾರಿ ನಗರವಾಗುವತ್ತ ಬೆಳೆಯುತ್ತಿದೆ. ಹಲವು ಸ್ಟಾರ್ಟ್‌ಅಪ್‌ಗಳ ತವರಾಗಿರುವ ನಗರದಲ್ಲಿ, ವಿಶ್ವದರ್ಜೆಯ ಕಂಪನಿಗಳು ನೂರಾರು ಇವೆ. ಆದರೆ, ಈ ಮಧ್ಯೆ ನಗರದ ಹೃದಯಭಾಗದಲ್ಲಿರುವ ವಿಸ್ತಾರವಾದ 472 ಎಕರೆ ಅರಮನೆ ಮೈದಾನದ ಒಂದು ಭಾಗವನ್ನು ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ. ಆದರೆ, ಇದಕ್ಕೆ ನಿಗದಿಪಡಿಸಿರುವುದು ಪುಡಿಗಾಸು ಅಷ್ಟೇ. ಪ್ರತಿ ಚದರ ಮೀಟರ್‌ಗೆ ಕೇವಲ 120.68 ರೂಪಾಯಿಯಂತೆ ದರ ನಿಗದಿಪಡಿಸಿರುವುದು ಹಲವರ ಹುಬ್ಬೇರಿಸಿದೆ.
ಬೆಂಗಳೂರಿನಲ್ಲಿ ಭೂಮಿ ಬೆಲೆ ಬಂಗಾರದಷ್ಟೇ ಇದೆ. ಇದು ಹೊಸ ವಿಷಯವೇನಲ್ಲ. ಹೀಗಾಗಿ ಈ ಭೂಮಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ ಎಕರೆಗೆ 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ-1996ರ ಆಧಾರದ ಮೇಲೆ ಪರಿಹಾರ ಮೊತ್ತವನ್ನು ನಿಗದಿಪಡಿಸುವ ನಿರ್ಧಾರವನ್ನು ಬಿಡಿಎ ಸಮರ್ಥಿಸಿಕೊಂಡಿದೆ. ಆ ಮೂಲಕ ಇಡೀ ಅರಮನೆ ಮೈದಾನದ ಒಟ್ಟು ಮೌಲ್ಯ ಕೇವಲ 11 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ.
ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆ ಅಗಲೀಕರಣಕ್ಕಾಗಿ 15 ಎಕರೆ 17.5 ಗುಂಟೆ (62,475 ಚದರ ಮೀಟರ್) ಅರಮನೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2014ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಟಿಡಿಆರ್ ನೀಡಲಾಗಿತ್ತು. ಕಾಯಿದೆಯ ನಿಬಂಧನೆಗಳ ಪ್ರಕಾರ, ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಮೌಲ್ಯವನ್ನು 60 ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿದೆ.
ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಯು 2023-24ರಲ್ಲಿ ಪರಿಷ್ಕೃತ ಮೌಲ್ಯ ನಿಗದಿಪಡಿಸಿದೆ. ಅದರಂತೆ ಜಯಮಹಲ್ ಮುಖ್ಯರಸ್ತೆಯ ಚದರ ಮೀಟರ್‌ನ ಮೌಲ್ಯವನ್ನು ರೂ. 2.04 ಲಕ್ಷಕ್ಕೆ ನಿಗದಿಪಡಿಸಿದರೆ, ಬಳ್ಳಾರಿ ರಸ್ತೆಯಲ್ಲಿ ಪ್ರತಿ ಚದರ ಮೀಟರ್‌ಗೆ ರೂ. 2.85 ಲಕ್ಷ ನಿಗದಿಪಡಿಸಿದೆ. ಪ್ರತಿ ಚದರ ಮೀಟರ್‌ಗೆ ಸುಮಾರು 2.30 ಲಕ್ಷ ರೂ. ಸರಾಸರಿ ಮೌಲ್ಯವನ್ನು ಪರಿಗಣಿಸಿದರೆ, ಸ್ವಾಧೀನಪಡಿಸಿಕೊಳ್ಳಲಿರುವ ಭೂಮಿಯ ಮೌಲ್ಯ ರೂ. 1,400 ಕೋಟಿಗಿಂತ ಹೆಚ್ಚಾಗುತ್ತದೆ. ಇನ್ನು ಮಾರುಕಟ್ಟೆ ಮೌಲ್ಯವು ಅದಕ್ಕಿಂತ ಹೆಚ್ಚಿರುತ್ತದೆ.
ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಅಡಿಯಲ್ಲಿ, ಪರಿಹಾರವು ಮಾರುಕಟ್ಟೆ ಮೌಲ್ಯಕ್ಕಿಂತ 1.5 ಪಟ್ಟು ಹೆಚ್ಚಾಗಿರುತ್ತದೆ. ಇದು ಸುಮಾರು 2,100 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ ಎಂದು ಬೆಂಗಳೂರಿನ ಟಿಡಿಆರ್‌ನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆ ‘ದಿ ಹಿಂದೂ’ ವರದಿ ತಿಳಿಸಿದೆ.
ಜೂನ್ 2023 ರಲ್ಲಿ, ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದವರೆಗೆ ಜಯಮಹಲ್ ರಸ್ತೆಯ ಅಗಲೀಕರಣಕ್ಕಾಗಿ ಅರಮನೆಯ ಒಂದು ಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ಬಿಬಿಎಂಪಿ ಅಧಿಸೂಚನೆಯನ್ನು ಹೊರಡಿಸಿತ್ತು. ಆಗ ಅದು 'ಭೂಮಿಯ ಮಾರುಕಟ್ಟೆ ಮೌಲ್ಯ' ಎಂದು ಉಲ್ಲೇಖಿಸಿತ್ತು. ಈಗ ಮಾಡಿರುವಂತೆ ಕಾಯಿದೆಯ ಪ್ರಕಾರ ಭೂಮಿಯ ಮೌಲ್ಯವನ್ನು ಉಲ್ಲೇಖಿಸಿರಲಿಲ್ಲ.
ಟಿಡಿಆರ್ ಲೆಕ್ಕಾಚಾರದ ಬಗ್ಗೆ ಗೊಂದಲ
ಬೆಂಗಳೂರು ಮತ್ತು ಮೈಸೂರಿನಲ್ಲಿ ಅರಮನೆ ಸ್ವಾಧೀನದ ವಿರುದ್ಧ ಹೋರಾಟ ನಡೆಸುತ್ತಿರುವ ಮೈಸೂರು ರಾಜಮನೆತನದ ಹಿರಿಯ ಸದಸ್ಯರೊಬ್ಬರು, ‘ನಮಗೆ ನೀಡಿರುವ ನೋಟಿಸ್‌ನಲ್ಲಿ ಟಿಡಿಆರ್ ಲೆಕ್ಕಾಚಾರದ ಬಗ್ಗೆ ಹೇಳುತ್ತಿಲ್ಲ. ಎರಡು ಬಾರಿ, ನಾವು ಅಂಗೀಕರಿಸದ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರಗಳನ್ನು (DRC) ತೆಗೆದುಕೊಳ್ಳಬೇಕೆಂದು ಸೂಚಿಸಿದ್ದರು. ಅತ್ಯಲ್ಪ ದರ ನಿಗದಿಪಡಿಸಲಾಗಿರುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಯುತ್ತಿದೆ. ಬಿಡಿಎ ನೀಡಿರುವ ಟಿಡಿಆರ್ ವಿರುದ್ಧ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಯಾಕಿಷ್ಟು ಆತುರ?
‘ಸುಪ್ರೀಂ ಕೋರ್ಟ್‌ನಲ್ಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ತರಾತುರಿಯಲ್ಲಿ ಡಿಆರ್‌ಸಿಗಳನ್ನು ನೀಡಿದೆ’ ಎಂದು ಅರಮನೆ ಮೂಲಗಳು ಹೇಳಿವೆ. ಸುಪ್ರೀಂ ಕೋರ್ಟ್‌ನಲ್ಲಿ 2021, 2022 ಮತ್ತು 2023 ರಲ್ಲಿ ಮೂರು ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸಲಾಗಿದೆ.
‘ರಸ್ತೆ ಅಗಲೀಕರಣಕ್ಕೆ ಭೂಮಿ ಅಗತ್ಯವಿದೆಯೇ ಅಥವಾ ನ್ಯಾಯಾಂಗ ನಿಂದನೆಯನ್ನು ಎದುರಿಸಲು ಬಯಸುತ್ತದೆಯೇ ಎಂಬುದನ್ನು ನ್ಯಾಯಾಲಯವು ಸರ್ಕಾರದಿಂದ ತಿಳಿದುಕೊಳ್ಳಲು ಮುಂದಾಗಿದೆ. ಇದರಿಂದ ಪಾರಾಗಲು ರಾಜ್ಯ ಸರ್ಕಾರ ಅಗಲೀಕರಣವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ’ ಎಂದು ಅರಮನೆ ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್‌ನ ಮಾರ್ಚ್ 2024ರ ಆದೇಶದ ಪ್ರಕಾರ, ಟಿಡಿಆರ್ ನಿಯಮಗಳ ಪ್ರಕಾರ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಬಿಡಿಎ ಡಿಆರ್‌ಸಿಗಳನ್ನು ಹಸ್ತಾಂತರಿಸಬೇಕಾಗುತ್ತದೆ. ಇದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತರು ಒಪ್ಪಿಕೊಂಡಿದ್ದಾರೆ. ‘ಕಾಯ್ದೆಯ ಅಧ್ಯಾಯ 5ರ ಪ್ರಕಾರ ಹಕ್ಕುದಾರರ ಪಟ್ಟಿಯಲ್ಲಿ ರಾಜಮನೆತನದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕುಟುಂಬವನ್ನು ತಾರತಮ್ಯಕ್ಕಾಗಿ ಪ್ರತ್ಯೇಕಿಸಲಾಗಿದೆ’ ಎಂದು ರಾಜಮನೆತನದ ಸದಸ್ಯರೊಬ್ಬರು ಆರೋಪಿಸಿದ್ದಾರೆ.
ವರದಿ: ಪ್ರಿಯಾಂಕಾ ಗೌಡ
ಇನ್ನಷ್ಟು ಬೆಂಗಳೂರು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Tumkur News: ಸಿದ್ದಗಂಗಾ ಮಠದಲ್ಲಿ 13 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ
