ಬೆಂಗಳೂರು: ಬ್ಯೂಟಿಷಿಯನ್ ಮನೆಯ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡು ಕಳವು ಮಾಡಿದ್ದ ಮೂವರು ಕಳ್ಳರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಬ್ಯೂಟಿಷಿಯನ್ ಮನೆಯ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡು ಕಳವು ಮಾಡಿದ್ದ ಮೂವರು ಕಳ್ಳರ ಬಂಧನ

ಬೆಂಗಳೂರು: ಬ್ಯೂಟಿಷಿಯನ್ ಮನೆಯ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡು ಕಳವು ಮಾಡಿದ್ದ ಮೂವರು ಕಳ್ಳರ ಬಂಧನ

ಬೆಂಗಳೂರಲ್ಲಿ ಬ್ಯೂಟಿಷಿಯನ್ ಮನೆಯ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡು ಕಳವು ಮಾಡಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ- ಎಚ್ ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರು ಕೆಂಪೇಗೌಡ ನಗರ ಸಮೀಪ ಬ್ಯೂಟಿಷಿಯನ್ ಮನೆಯ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡು ಕಳವು ಮಾಡಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರು ಕೆಂಪೇಗೌಡ ನಗರ ಸಮೀಪ ಬ್ಯೂಟಿಷಿಯನ್ ಮನೆಯ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡು ಕಳವು ಮಾಡಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬ್ಯೂಟಿಷಿಯನ್ ಒಬ್ಬರನ್ನು ಮನೆಗೆ ಕರೆಯಿಸಿ ಮೇಕಪ್ ಮಾಡುವಾಗ ಆಕೆಯ ಪರ್ಸಿನಲ್ಲಿದ್ದ ಮನೆಯ ಬೀಗದ ಕೈಯನ್ನು ಕಳುವು ಮಾಡಿ ನಕಲಿ ಕೀ ಮಾಡಿಸಿಕೊಂಡು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಕೆಂಪೇಗೌಡನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬ್ಯೂಟಿಷಿಯನ್ ಮತ್ತು ಆಕೆಯ ತಾಯಿ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಕಳ್ಳತನ ನಡೆದಿರುವುದು ಕಂಡು ಬರುತ್ತದೆ. ಆದರೆ ಮನೆಯ ಮುಂಬಾಗಿಲು ಹಾಕಿದ ರೀತಿಯಲ್ಲೇ ಇದ್ದದ್ದು ಅನೇಕ ಸಂದೇಹಗಳಿಗೆ ಕಾರಣವಾಗಿತ್ತು.

ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಾರೆ. ಅಪ್ಪುರಾವ್‌ ಮುಖ್ಯರಸ್ತೆಯಲ್ಲಿ ಹೇರ್ ಡ್ರೆಸಿಂಗ್ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಮೂವರು ಅರೋಪಿಗಳನ್ನು ಬಂಧಿಸಿದ್ದಾರೆ. ಅರೋಪಿಗಳಿಂದ 2 ಜೊತೆ ಚಿನ್ನದ ಓಲೆ, ಒಂದು ಚಿನ್ನದ ಚೈನ್, 3,70,000 ನಗದು ಹಣ ಸೇರಿ 7,70,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ಹಲವು ದಿನಗಳ ಮುಂಚೆಯೇ ಪಿತೂರಿ ನಡೆಸಿದ್ದಾಗಿ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬಹಿರಂಗಪಡಿಸಿದ್ದಾರೆ. ಓರ್ವ ಆರೋಪಿಯು ಬ್ಯೂಟಿಷಿಯನ್‌ನನ್ನು ಮೇಕಪ್ ಮಾಡಿಸುವ ಸಲುವಾಗಿ ತನ್ನ ಮನೆಗೆ ಕರೆಸಿಕೊಂಡಿರುತ್ತಾನೆ. ಮೇಕಪ್ ಮಾಡುವ ಸಮಯದಲ್ಲಿ ಆಕೆಯ ಗಮನವನ್ನು ಬೇರೆಡೆಗೆ ಸೆಳೆದು, ಅಕೆಯ ಪರ್ಸಿನಲ್ಲಿದ್ದ ಮನೆಯ ಬೀಗದ ಕೈಯನ್ನು ಕಳುವು ಮಾಡಿ, ಅದರಿಂದ ನಕಲಿ ಕೀ ಮಾಡಿಸಿಕೊಂಡು, ಅಸಲಿ ಕೀಯನ್ನು ಆಕೆಯ ಪರ್ಸಿನಲ್ಲೇ ಇಟ್ಟಿರುತ್ತಾರೆ.

ನಂತರ ಬ್ಯೂಟಿಷಿಯನ್‌ ಮತ್ತು ಆಕೆಯ ತಾಯಿ ಮನೆಯಿಂದ ಹೊರಗೆ ಹೋದ ನಂತರ ಮಧ್ಯಾಹ್ನ 12 ಗಂಟೆಗೆ ಮೂವರು ಅರೋಪಿಗಳು ನಕಲಿ ಕೀಯಿಂದ ಮುಂಬಾಗಿಲು ತೆರೆದು ಮನೆಯೊಳಗೆ ಪ್ರವೇಶಿಸುತ್ತಾರೆ. ಬೀರುವಿನಲ್ಲಿದ್ದ ಚಿನ್ನದ ವಡವೆಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ

ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಲೋಕೇಶ್ ಭರಮಪ್ಪ ಜಗಲಾಸ‌ ಮತ್ತು ವಿ.ವಿ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಮೀದ್ ಭಾಷಾ ರವರ ಮಾರ್ಗದರ್ಶನದಲ್ಲಿ ಕೆಂಪೇಗೌಡನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಮತ್ತು ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ತಲೆಮರೆಸಿಕೊಂಡಿದ್ದ ರೌಡಿ ಮತ್ತು ಅತ್ಯಾಚಾರಿ ಬಂಧನ

ಕಳೆದ 6 ತಿಂಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಹಾಗೂ 9 ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಬೆಂಗಳೂರಿನ ಗಿರಿನಗರ ಮತ್ತು ಬಸವನಗುಡಿ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಓರ್ವ ರೌಡಿ ಶೀಟರ್, ಪ್ರಕರಣವೊಂದರಲ್ಲಿ ಅರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 6 ತಿಂಗಳಿನಿಂದ ತಲೆಮರೆಸಿಕೊಂಡಿರುತ್ತಾನೆ. ಈ ಬಗ್ಗೆ ನ್ಯಾಯಾಲಯವು ವಾರೆಂಟ್ ಹೊರಡಿಸಿರುತ್ತದೆ. ಗಿರಿನಗರ ಪೊಲೀಸರು ಈ ರೌಡಿಯನ್ನು ಕನಕಪುರ ತಾಲೂಕು, ದೊಡ್ಡ ಆಲನಹಳ್ಳಿ ಗ್ರಾಮದಲ್ಲಿ ಅಡಗಿ ಕೊಂಡಿರುವ ಮಾಹಿತಿ ಲಭ್ಯವಾಗಿರುತ್ತದೆ. ಇದೇ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆದು ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

9 ವರ್ಷದಿಂದ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಕಿಡ್ನಾಪ್ ಮತ್ತು ಅತ್ಯಾಚಾರ ಪ್ರಕರಣವೊಂದರಲ್ಲಿ ಅರೋಪಿಯಾಗಿದ್ದ ಈತ ಸುಮಾರು 9 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.

ಈ ಕುರಿತು ಅರೋಪಿಯ ಪತ್ತೆಗಾಗಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಈತನ ಚಲನ ವಲನಗಳ ಮಾಹಿತಿ ಸಂಗ್ರಹಿಸಿ ಕೆ.ಆರ್.ಪುರಂ ಹತ್ತಿರವಿರುವ ಅವಲಹಳ್ಳಿಯಲ್ಲಿ ವಶಕ್ಕೆ ಪಡೆದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

(ವರದಿ- ಎಚ್ ಮಾರುತಿ, ಬೆಂಗಳೂರು)

Whats_app_banner