Bengaluru Crime: ಬೆಂಗಳೂರಿನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಬೆಳಗಾವಿ ದಂಪತಿ ಮೇಲೆ ಗಂಭೀರ ಹಲ್ಲೆ, ವಿಡಿಯೋ ವೈರಲ್
Bengaluru News: ಬೆಂಗಳೂರಿನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಬೆಳಗಾವಿ ದಂಪತಿ ಮೇಲೆ ಗಂಭೀರ ಹಲ್ಲೆ ಭಾನುವಾರ ರಾತ್ರಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ.
ಬೆಂಗಳೂರು: ಬೆಳಗಾವಿಯಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ದಂಪತಿಯನ್ನು ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿ ಜನರ ಗುಂಪು ಕ್ರೂರವಾಗಿ ಥಳಿಸಿದ್ದಲ್ಲದೆ, ವಾಪಸ್ ಊರಿಗೆ ಹೋಗುವಂತೆ ಬೆದರಿಸಿದೆ. ಈ ಹಲ್ಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೂರ್ವ ಬೆಂಗಳೂರಿನ ದೊಡ್ಡನಕ್ಕುಂದಿಯ ವಸತಿ ಪ್ರದೇಶದ ಬೀದಿಯಲ್ಲಿ ರಾತ್ರಿವೇಳೆ ದಂಪತಿ ಮೇಲೆ ಹೇಗೆ ಹಲ್ಲೆ ನಡೆಸಲಾಗಿದೆ ಎಂಬುದರ ಎರಡು ವಿಡಿಯೋ ತುಣಕುಗಳು ವೈರಲ್ ಆಗಿವೆ. ವಾಹನ ನಿಲ್ಲಿಸಲು ಗೊತ್ತುಪಡಿಸಿದ ಜಾಗದಲ್ಲಿ ದಂಪತಿ ಕಾರು ನಿಲ್ಲಿಸಿದ ನಂತರ ಜಗಳ ಶುರುವಾಗಿದೆ ಎಂದು ಪತ್ರಕರ್ತೆ ಅನಘಾ ದೇಶಪಾಂಡೆ ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸಬಾ ಖಾನ್ ಎಂಬ ಇನ್ನೊಬ್ಬರು ಮಹಿಳೆ ಎರಡು ವಿಡಿಯೋಗಳನ್ನು ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಅವರು ನೀಡಿದ ವಿವರ ಹೀಗಿದೆ- ಭಾನುವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಳಗಾವಿ ಮೂಲದ ರೋಹಿಣಿ ಮತ್ತು ಸಹಿಷ್ಣು ಎಂಬ ದಂಪತಿ ಮೇಲೆ ಪಾರ್ಕಿಂಗ್ ವಿಚಾರವಾಗಿ ಹಲ್ಲೆ ಆಗಿದೆ. ಕಾರು ಪಾರ್ಕ್ ಮಾಡಿದ ಜಾಗ ವಿವಾದದಲ್ಲಿದೆ ಎಂಬುದರ ಅರಿವು ಇಲ್ಲದೇ ದಂಪತಿ ಕಾರು ಪಾರ್ಕ್ ಮಾಡಿದ್ದು ಜಗಳಕ್ಕೆ ಕಾರಣ ಎಂದು ಹೇಳಲಾಗಿದೆ.
ಬೆಳಗಾವಿ ದಂಪತಿಯ ಮೇಲಿನ ಹಲ್ಲೆಯ ವಿಡಿಯೋಗಳು
ಒಂದು ವೀಡಿಯೊದಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಮನೆಯಿಂದ ಹೊರಬಂದು ದಂಪತಿ ಕಡೆಗೆ ನಡೆಯುತ್ತಿರುವುದನ್ನು ತೋರಿಸುತ್ತದೆ. ಇಬ್ಬರು ವೃದ್ಧರು ಕೋಪದಿಂದ ಅವರ ಮೇಲೆ ಕೂಗಾಡುತ್ತ ಹೋಗುತ್ತಿದ್ದರು. ಆಗ ಯುವತಿ ತನ್ನ ಫೋನ್‌ನಲ್ಲಿ ಆ ಕ್ಷಣಗಳನ್ನು ಸೆರೆಹಿಡಿಯುವುದು ಕಾಣುತ್ತಿದೆ. ನಂತರ ಪುರುಷರಲ್ಲಿ ಒಬ್ಬ ಆ ಯುವಕನಿಗೆ ಹಲವಾರು ಬಾರಿ ಕಪಾಳಕ್ಕೆ ಹೊಡೆದರು. ಆತ ನೆಲದ ಮೇಲೆ ಬೀಳುತ್ತಾನೆ. ಆಘಾತಕ್ಕೊಳಗಾದ ಮಹಿಳೆ ಆತನನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಆಗ ಒಬ್ಬ ಮಹಿಳೆ ಆಕೆಯನ್ನು ದೂರ ತಳ್ಳುತ್ತಾಳೆ. "ಓಯ್ ಅಂಕಲ್, ಛೋಡೋ ಉಸ್ಕೊ (ಅಂಕಲ್, ಅವನನ್ನು ಬಿಟ್ಟುಬಿಡಿ)" ಎಂಬ ಧ್ವನಿಯೂ ವಿಡಿಯೋದಲ್ಲಿ ಕೇಳುತ್ತಿದೆ.
ದಾಳಿ ಮುಂದುವರಿಯುತ್ತಿದ್ದಂತೆ ಮಹಿಳೆ ಭಯಭೀತಳಾಗಿ ಕಿರುಚುತ್ತಿರುವುದು ಕೇಳಿಸುತ್ತದೆ. "ಆಕೆ ನನಗೂ ಹೊಡೆಯುತ್ತಿದ್ದಾಳೆ. ನನ್ನನ್ನು ಹೊಡೆಯುವ ಹಕ್ಕು ನಿಮಗಿಲ್ಲ. ನಾವು ಪೊಲೀಸ್ ಠಾಣೆಗೆ ಹೋಗುತ್ತಿದ್ದೇವೆ" ಎಂದು ಹೇಳುವುದು ಕೇಳಿಸುತ್ತದೆ. ವಿಡಿಯೋವನ್ನು ವೀಕ್ಷಿಸಿದ ಹಲವಾರು ಬಳಕೆದಾರರು ದಂಪತಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
"ಅದೇ ಮನೆಯ ಇನ್ನೊಬ್ಬ ಮಹಿಳೆ ಹುಡುಗಿಯ ಟೀ ಶರ್ಟ್ ಬಿಚ್ಚಿ ಹೊಡೆಯಲು ಪ್ರಯತ್ನಿಸಿದಳು. ಬೆಂಗಳೂರಿನಿಂದ ಹೊರಹೋಗುವಂತೆ ಹೇಳಿದಳು. ಇದು ಅವರ ನಗರ ಎಂದು ಬೆದರಿಕೆ ಹಾಕಿರುವುದಾಗಿ ದೇಶಪಾಂಡೆ ಎಕ್ಸ್ ನಲ್ಲಿ ಬರೆದಿದ್ದಾರೆ.
ಹಲ್ಲೆ ಪ್ರಕರಣ ಸಂಬಂಧ ಮೂವರ ವಿರುದ್ಧ ಕೇಸ್
ಬೆಳಗಾವಿ ಮೂಲದ ದಂಪತಿ ಮೇಲಿನ ಹಲ್ಲೆ ಕುರಿತು ಅನಘಾ ದೇಶಪಾಂಡೆ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ದೂರನ್ನು ಎಚ್ಎಎಲ್ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಸಬಾ ಖಾನ್ ಶೇರ್ ಮಾಡಿದ ಮಾಹಿತಿ ಪ್ರಕಾರ, ರೋಹಿಣಿ ಮತ್ತು ಸಹಿಷ್ಣು ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಅನಂತ ಮೂರ್ತಿ, ಪ್ರಶಾಂತ್ ಮತ್ತು ಭಾಗ್ಯಲಕ್ಷ್ಮಿ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ.
ಬೆಳಗಾವಿ ದಂಪತಿ ಅವರು ತಮ್ಮ ಕಾರನ್ನು ಅರಿವಿಲ್ಲದೆ ವಿವಾದಿತ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದರು. ಇದು ಅನಂತಮೂರ್ತಿ ಮನೆಯ ಎದುರಿಗೇ ಇದ್ದು, ಅವರು ಈ ಹಲ್ಲೆ ನಡೆಸಿದ್ದರು.
(This copy first appeared in Hindustan Times Kannada website. To read more like this please logon to kannada.hindustantimes.com)