Cab Fare Hike; ದುಬಾರಿಯಾಗಲಿದೆ ಬೆಂಗಳೂರು ಏರ್ ಪೋರ್ಟ್ ಬಸ್‌ಸೇವೆ, ಟ್ಯಾಕ್ಸಿ ಪ್ರಯಾಣ ದರ ಶೇ 40 ರಷ್ಟು ಹೆಚ್ಚಳ
Bengaluru Airport Cab Fare; ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಕಂಪನಿ ತನ್ನ ನಿಲ್ದಾಣದ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಸೇವಾ ಶುಲ್ಕ, ಪಿಕ್ಆಪ್ ಶುಲ್ಕ ಸೇರಿ ಇತರೆ ಶುಲ್ಕಗಳನ್ನು ಹೆಚ್ಚಳ ಮಾಡುತ್ತಿರುವ ಕಾರಣ ಬೆಂಗಳೂರು ಏರ್ ಪೋರ್ಟ್ ಟ್ಯಾಕ್ಸಿ ಸೇವೆ ದುಬಾರಿಯಾಗಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಪಿಕ್ಆಪ್ ಶುಲ್ಕ ಸೇರಿ ಇತರೆ ಶುಲ್ಕ ಹೆಚ್ಚಳವಾಗುತ್ತಿರುವ ಕಾರಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಪ್ರಯಾಣ ಶುಲ್ಕ ಸ್ವಲ್ಪ ದುಬಾರಿಯಾಗಲಿದೆ. ಶೇಕಡಾ 20ರಿಂದ 40 ರಷ್ಟು ಹೆಚ್ಚಳ ಕಾಣಲಿದ್ದು ಅಂದಾಜು 43 ರೂಪಾಯಿಯಿಂದ 76 ರೂಪಾಯಿವರೆಗೆ ಹೆಚ್ಚು ಪಾವತಿಸಬೇಕಾಗುತ್ತದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಕಂಪನಿ ತನ್ನ ನಿಲ್ದಾಣದ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಸೇವಾ ಶುಲ್ಕ, ಪಿಕ್ಆಪ್ ಶುಲ್ಕ ಸೇರಿ ಇತರೆ ಶುಲ್ಕಗಳನ್ನು ಹೆಚ್ಚಳ ಮಾಡುತ್ತಿರುವ ಕಾರಣ ವಿಮಾನ ನಿಲ್ದಾಣಕ್ಕೆ ಸಂಚಾರ ಸೇವೆ ಒದಗಿಸುವ ಓಲಾ, ಉಬರ್, ಕೆಎಸ್‌ಟಿಡಿಸಿ ಸೇರಿ ಎಲ್ಲ ಕ್ಯಾಬ್ ಸೇವೆಯೂ ದುಬಾರಿ ಆಗಲಿದೆ ಎಂದು ತಿಳಿದು ಬಂದಿದೆ. ಹೆಚ್ಚಳ ಮಾಡುವ ಎಲ್ಲ ರೀತಿಯ ಶುಲ್ಕಗಳನ್ನು ಕ್ಯಾಬ್ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುತ್ತವೆ.
ಅಕ್ಟೋಬರ್ 1ರಿಂದ ಹೊಸ ದರ ಜಾರಿಗೊಳ್ಳುವ ಸಾಧ್ಯತೆ
ವಿವಿಧ ಖಾಸಗಿ ಕ್ಯಾಬ್ ಕಂಪನಿಗಳು ಹೊಂದಿರುವ ಒಪ್ಪಂದದ ಕರಾರು ಸೆಪ್ಟೆಂಬರ್ 31ರೊಳಗೆ ನವೀಕರಣಗೊಳ್ಳಲಿದೆ. ಆ ನಂತರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಗ್ರಾಹಕರು ಪ್ರಯಾಣ ಶುಲ್ಕದೊಂದಿಗೆ ಟ್ಯಾಕ್ಸ್, ಕಮಿಷನ್, ವಿಮಾನ ನಿಲ್ದಾಣ ವಿಧಿಸುವ ಶುಲ್ಕ ವನ್ನೂ ಸೇರಿಸಿ ಒಟ್ಟು ಬಿಲ್ ಪಾವತಿಸಬೇಕಾಗಿದೆ.
ಈಗಾಗಲೇ ಉಬರ್ ಸೇರಿದಂತೆ ಹಲವು ಕಂಪನಿಗಳು ಗ್ರಾಹಕರಿಗೆ ಈ ಮಾಹಿತಿ ಒದಗಿಸುತ್ತಿವೆ. ಕೆಎಸ್‌ಟಿಡಿಸಿ, ಓಲಾ, ರಫೆಕ್ಸ್ ಮೊಬಲಿಟಿ, ಡಬ್ಲ್ಯೂಟಿಐ, ಸಿಒಆರ್ ಸೇರಿದಂತೆ ಇತರ ಕಂಪನಿಗಳು ವಿಮಾನ ನಿಲ್ದಾಣದೊಂದಿಗೆ ಒಪ್ಪಂದವನ್ನು ನವೀಕರಿಸಕೊಳ್ಳಲಿವೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ಹಾಗೂ ಟರ್ಮಿನಲ್- 2ರಲ್ಲಿ ವಿವಿಧ ಟ್ಯಾಕ್ಸಿ ಅಗ್ರಿಗೇಟರ್ಕಂಪನಿಗಳು ಟೆಂಡರ್ ಮೂಲಕ ತಮ್ಮ ತಮ್ಮ ಟ್ಯಾಕ್ಸಿ ನಿಲ್ದಾಣದ ಜಾಗ ಪಡೆದುಕೊಳ್ಳಲಿವೆ. ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಟ್ಯಾಕ್ಸಿ ಕಂಪನಿಗಳು ಮಾಡಿಕೊಂಡಿರುವ ಒಪ್ಪಂದದಂತೆ ಅವರ ಸೇವೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಬಿಐಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಕ್ಸಿ, ಬಸ್ ಪ್ರಯಾಣ ದರ ಎಷ್ಟು ಹೆಚ್ಚಾಗಬಹುದು
ಬಲ್ಲ ಮೂಲಗಳ ಪ್ರಕಾರ ಓಲಾ 172 ರೂಪಾಯಿಯಿಂದ 215 ರೂಪಾಯಿ ಮತ್ತು ಉಬರ್ 230 ರೂಪಾಯಿಯಿಂದ 260 ರೂಪಾಯಿಗೆ ಹೆಚ್ಚಿಸಲಿವೆ. ಈ ಹೊಸ ದರ ಮುಂದಿನ ಮೂರು ವರ್ಷಗಳವರೆಗೆ ಜಾರಿಯಲ್ಲಿರಲಿದೆ. ಜುಲೈನಲ್ಲಿ 685 ರೂಪಾಯಿ ಪಾವತಿಸುತ್ತಿದ್ದವರು ಆಗಸ್ಟ್ ನಲ್ಲಿ 750 ರೂಪಾಯಿ ಕೊಟ್ಟಿರುವುದಾಗಿ ಅನೇಕ ಪ್ರಯಾಣಿಕರು ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಬಿಎಂಟಿಸಿ ಸೇವೆಯಾದ ವಾಯುವಜ್ರ ಬಸ್‌ನಲ್ಲಿ ಎಂಜಿ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ 252 ರೂಪಾಯಿ ದರವಿದ್ದು ಹೆಚ್ಚಳವಾಗಲಿದೆ.
ಉಬರ್: ಇಂದಿರಾನಗರದಿಂದ ಟರ್ಮಿನಲ್ 1ಕ್ಕೆ 1512 ರೂಪಾಯಿ, ಟರ್ಮಿನಲ್ 2 ಕ್ಕೆ 1512 ರೂಪಾಯಿ
ಓಲಾ: ಇಂದಿರಾನಗರದಿಂದ ಟರ್ಮಿನಲ್ 1ಕ್ಕೆ 1068 ರೂಪಾಯಿ, ಟರ್ಮಿನಲ್ 2 ಕ್ಕೆ 1010 ರೂಪಾಯಿ
ದರ ಹೆಚ್ಚಳವಾದ ಮಾತ್ರಕ್ಕೆ ಪ್ರಯಾಣಿಕರಿಗೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಪಾರ್ಕಿಂಗ್, ಕ್ಯಾಶ್ ಲೆಸ್ ವ್ಯವಹಾರ, ನಿಗದಿತ ಸ್ಥಳ, ಎಲ್ಲವೂ ಮೊದಲಿನಂತೆಯೇ ಇರಲಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)