Bengaluru Auto Fares: ಆಟೋ ದರ ಪರಿಷ್ಕರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬೆಂಗಳೂರು ಆಟೋ ಚಾಲಕರು
ಬೆಂಗಳೂರು ಆಟೋ ಚಾಲಕರು, ಆಟೋ ಪ್ರಯಾಣ ದರ ಹೆಚ್ಚಿಸುವಂತೆ ಕರ್ನಾಟಕ ಸಾರಿಗೆ ಇಲಾಖಗೆ ಮನವಿ ಸಲ್ಲಿಸಿದ್ದಾರೆ. ಆಟೋ ಪ್ರಯಾಣ ದರವನ್ನು ಕಳೆದ 10 ವರ್ಷಗಳ ಅವಧಿಯಲ್ಲಿ 2 ಸಲ ಮಾತ್ರ ಹೆಚ್ಚಿಸಲಾಗಿದೆ. ಹಣದುಬ್ಬರ, ಜೀವನಾವಶ್ಯಕ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದ್ದು, ಇದಕ್ಕೆ ತಕ್ಕಂತೆ ಆಟೋ ಪ್ರಯಾಣದ ದರವನ್ನೂ ಹೆಚ್ಚಿಸಬೇಕು ಎಂಬ ಬೇಡಿಕೆ ಆಟೋ ಚಾಲಕರದ್ದು.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರವನ್ನು ಪರಿಷ್ಕರಿಸಬೇಕು ಎಂದು ಬೆಂಗಳೂರು ಆಟೋ ಚಾಲಕರು (Bengaluru auto drivers) ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ದರ ಪರಿಷ್ಕರಣೆ ಮಾಡಿದರೆ ಬೆಂಗಳೂರಲ್ಲಿ ಚಾಲ್ತಿಯಲ್ಲಿರುವ ರೈಡ್ ರದ್ದು ಮಾಡುವ ಮತ್ತು ರೈಡ್ ನಿರಾಕರಿಸುವ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಆಟೋ ಚಾಲಕರ ಸಂಘ ಹೇಳಿದೆ.
ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಬರೆದ ಪತ್ರದಲ್ಲಿ, ‘ಕಳೆದ 10 ವರ್ಷದ ಅವಧಿಯಲ್ಲಿ ಆಟೊ ಪ್ರಯಾಣ ದರವನ್ನು ಕೇವಲ 2 ಬಾರಿ ಹೆಚ್ಚಿಸಲಾಗಿದೆ. ಇದರಿಂದಾಗಿ, ಅನೇಕ ಚಾಲಕರು ಪ್ರಯಾಣಿಕರಿಂದ ಹೆಚ್ಚುವರಿ ಮೊತ್ತವನ್ನು ಕೇಳುತ್ತಿದ್ದಾರೆ. ಜೀವನಾವಶ್ಯಕ ವೆಚ್ಚ ಕ್ಷಿಪ್ರವಾಗಿ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಆದಾಯ ಹೆಚ್ಚಳವಾಗಬೇಕಾಗಿದೆ. ಆಟೊ ಚಾಲಕರ ಮನವಿಯನ್ನು ಪರಿಗಣಿಸಬೇಕಾಗಿರುವುದರಿಂದ ಸರಕಾರ ಈ ಹಿಂದೆ ನಿಗದಿಪಡಿಸಿರುವ ಪ್ರಯಾಣ ದರಗಳನ್ನು ಪರಿಷ್ಕರಿಸಬೇಕು’ ಎಂದು ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘ ಆಗ್ರಹಿಸಿದೆ.
ರಾಪಿಡೋ ವಿರುದ್ಧ ಅಸಮಾಧಾನ
ಈ ಹಿಂದೆಯೂ ಬೆಂಗಳೂರಿನಲ್ಲಿ ಆಟೋ ಸಂಘಟನೆಗಳು ಸರ್ಕಾರಕ್ಕೆ ಬೇಡಿಕೆಗಳ ಪಟ್ಟಿಯೊಂದಿಗೆ ಪ್ರತಿಭಟನೆ ನಡೆಸಿದ್ದವು. ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆಗಳು ಪ್ರಯಾಣಿಕರಿಗೆ ಅಸುರಕ್ಷಿತ ಎಂದು ಪ್ರತಿಪಾದಿಸುತ್ತಿರುವ ಆಟೋ ಚಾಲಕರ ಸಂಘ, ಅದನ್ನು ನಿಷೇಧಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿವೆ. ರಾಜ್ಯದ ಸಾರಿಗೆ ಇಲಾಖೆಗೂ ಬೇಡಿಕೆಗಳ ಪಟ್ಟಿಯನ್ನು ಸಂಘ ಸಲ್ಲಿಸಿದೆ.
ಅಗ್ರಿಗೇಟರ್‌ಗಳ ವಿರುದ್ಧ ಚಾಲಕರ ಆಕ್ರೋಶ
ಈ ಹಿಂದೆ, ಓಲಾ, ಉಬರ್ ಮತ್ತು ರಾಪಿಡೋನಂತಹ ಅಗ್ರಿಗೇಟರ್ ಅಪ್ಲಿಕೇಶನ್‌ಗಳು ಪ್ರತಿ ಟ್ರಿಪ್‌ಗೆ 100 ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸುವುದಕ್ಕಾಗಿ ಸರ್ಕಾರಿ ಸ್ಕ್ಯಾನರ್‌ನ ಅಡಿಯಲ್ಲಿ ಬಂದವು. ಸರ್ಕಾರ ನಿಗದಿಪಡಿಸಿದ ಬೆಲೆಗಳನ್ನು ಅನುಸರಿಸಲು ಮತ್ತು ಗ್ರಾಹಕರಿಂದ ಹೆಚ್ಚು ಶುಲ್ಕ ವಿಧಿಸದಂತೆ ಅವರಿಗೆ ನಿರ್ದೇಶನ ನೀಡಲಾಗಿದೆ.
ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಎಷ್ಟಿದೆ
ಕರ್ನಾಟಕ ಸರ್ಕಾರ 2021ರ ನವೆಂಬರ್ ತಿಂಗಳಲ್ಲಿ ಆಟೋ ಪ್ರಯಾಣದ ದರವನ್ನು ವಿಶೇಷವಾಗಿ ಮೀಟರ್ ದರವನ್ನು ಪರಿಷ್ಕರಿಸಿತ್ತು. ಈ ಪರಿಷ್ಕರಣೆ ಪ್ರಕಾರ, ಆರಂಭಿಕ ಪ್ರಯಾಣದ ದರ 25 ರೂಪಾಯಿಯಿಂದ 30 ರೂಪಾಯಿಗೆ ಏರಿಸಲಾಗಿತ್ತು. ಅದಾಗಿ ಪ್ರತಿ ಕಿಲೋ ಮೀಟರ್‌ಗೆ 13 ರೂಪಾಯಿ ಇದ್ದ ದರವನ್ನು 15 ರೂಪಾಯಿಗೆ ಏರಿಸಲಾಗಿತ್ತು.