ಬೆಂಗಳೂರು ಕೆಫೆ ಸ್ಫೋಟ: ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಎನ್ಐಎ
ಬೆಂಗಳೂರು ಕೆಫೆ ಸ್ಫೋಟ: ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಎನ್ಐಎ ಘೋಷಿಸಿದೆ. ಅಲ್ಲದೆ, ಆರೋಪಿ ಪತ್ತೆಗಾಗಿ ಶೋಧ ಮತ್ತು ತನಿಖೆಯನ್ನು ಚುರುಕುಗೊಳಿಸಿದೆ.
ಬೆಂಗಳೂರು: ಕುಂದಲಹಳ್ಳಿ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಬಾಂಬರ್ ಬಗ್ಗೆ ಮಾಹಿತಿ ನೀಡುವವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದೂ ಎನ್ಐಎ ಹೇಳಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಸ್ಫೋಟಕ್ಕೆ ಆರಂಭದಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆ ಕಾರಣ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಪರಿಶೀಲಿಸಿ, ವಿಶ್ಲೇಷಣೆ ನಡೆಸಿದ ಪರಿಣತರ ತಂಡ ಅದು ಬಾಂಬ್ ಸ್ಪೋಟ ಎಂಬುದನ್ನು ಖಚಿತಪಡಿಸಿತ್ತು.
ಐಇಡಿಯನ್ನು ಬಳಸಿ ಸ್ಫೋಟ ಯೋಜಿಸಲಾಗಿತ್ತು. ಲಘು ಬಾಂಬ್ ಆಗಿತ್ತು ಎಂಬುದನ್ನು ಎಫ್‌ಎಸ್‌ಎಲ್ ತಂಡವೂ ಖಚಿತಪಡಿಸಿತ್ತು. ಹೀಗಾಗಿ ಪೊಲೀಸರು ಆರಂಭಿಕ ತನಿಖೆಯನ್ನು ನಡೆಸಿ ಬಳಿಕ ಸೋಮವಾರ (ಮಾರ್ಚ್ 4) ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ್ದರು.
ಈ ರಾಮೇಶ್ವರಂ ಕೆಫೆಯು ಬ್ರೂಕ್‌ಫೀಲ್ಡ್‌ನಲ್ಲಿದ್ದು, ಸುತ್ತಮುತ್ತ ಟೆಕ್ ಕಂಪನಿಗಳು ಇರುವ ಕಾರಣ, ಅಲ್ಲಿನ ಉದ್ಯೋಗಿಗಳೇ ಇದರ ಗ್ರಾಹಕರಾಗಿದ್ದರು.
ಉಗ್ರ ಕೃತ್ಯವಾದ ಕಾರಣ ಸ್ಥಳಕ್ಕಾಗಮಿಸಿದ ಕೇಂದ್ರ ತನಿಖಾ ತಂಡ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಗುಪ್ತಚರ ಬ್ಯೂರೋ (ಐಬಿ) ಸ್ಥಳೀಯ ಘಟಕದ ಅಧಿಕಾರಿಗಳು ಸ್ಫೋಟದ ಸ್ಥಳವನ್ನು ಪರಿಶೀಲಿಸಿದರು. ಸ್ಫೋಟದಲ್ಲಿ ಗಾಯಗೊಂಡ ಒಂಬತ್ತು ಜನರಲ್ಲಿ ಏಳು ಗ್ರಾಹಕರು. ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಾಗ ಅದರ ಪಕ್ಕದಲ್ಲೇ ಇದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮೇಶ್ವರಂ ಕೆಫೆ ಮಾಲೀಕರ ಪ್ರಕಾರ, ಗ್ರಾಹಕರೊಬ್ಬರು ಇಟ್ಟಿದ್ದ ಚೀಲದಿಂದ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ್ದು, ಹೊಗೆ ಮತ್ತು ಭಯಭೀತರಾದ ಗ್ರಾಹಕರು ಮತ್ತು ಇತರರು ಸ್ಥಳದಿಂದ ಓಡಿ ಹೋಗುತ್ತಿರುವ ದೃಶ್ಯ ಘಟನೆಯ ಸಿಸಿಟಿವಿ ವೀಡಿಯೊದಲ್ಲಿ ದಾಖಲಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ಕಾರಣ ಮತ್ತು ಸ್ವರೂಪವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಇದು ಐಇಡಿಯಿಂದ ಉಂಟಾಗಿರಬಹುದು.ಮಾಸ್ಕ್ ಮತ್ತು ಟೋಪಿ ಧರಿಸಿದ ವ್ಯಕ್ತಿ ಬಸ್‌ನಲ್ಲಿ ಬಂದಿದ್ದ. ಆತ ಹೋದ ಒಂದು ಗಂಟೆಯ ಬಳಿಕ ಈ ಸ್ಫೋಟ ಸಂಭವಿಸಿದೆ ಹೀಗಾಗಿ, ಆತನ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಫೋಟದ ನಂತರ ಹೇಳಿದ್ದರು.
ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟದ ತನಿಖೆ ತೀವ್ರಗೊಂಡಿದೆ. ಅದು ಲಘು ಪ್ರಮಾಣದ ಐಇಡಿ ಸ್ಫೋಟ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ದುರಂತದಲ್ಲಿ 8 ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಂಜೆ ಮೈಸೂರಿನಲ್ಲಿ ತಿಳಿಸಿದ್ದರು.
ಬೆಂಗಳೂರಿನ ಕುಂದಲಹಳ್ಳಿ ಸಮೀಪದ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆ ನಾಳೆ (ಮಾರ್ಚ್ 8) ಮತ್ತೆ ಗ್ರಾಹಕ ಸೇವೆಗೆ ಸಜ್ಜಾಗಿದೆ. ಅಗತ್ಯ ನವೀಕರಣಗಳ ಬಳಿಕ ರಾಮೇಶ್ವರಂ ಕೆಫೆ ನಾಳೆಯಿಂದ ಮತ್ತೆ ಗ್ರಾಹಕರಿಗೆ ಸೇವೆ ಒದಗಿಸಲಿದೆ ಎಂದು ಕೆಫೆಯ ಮಾಲೀಕರು ಮಾರ್ಚ್ 2ರಂದೇ ತಿಳಿಸಿದ್ದರು.
(This copy first appeared in Hindustan Times Kannada website. To read more like this please logon to kannada.hindustantimes.com)