ರೂಫ್‌ಟಾಪ್‌ ರೆಸ್ಟೋರೆಂಟ್‌ ಇಷ್ಟಪಡುವವರು ಗಮನಿಸಿ; ಬೆಂಗಳೂರಿನ ಶೇ 90ರಷ್ಟು ರೆಸ್ಟೋರೆಂಟ್‌ಗಳಲ್ಲಿ ಫೈರ್‌ ಸೇಫ್ಟಿ ರೂಲ್ಸ್‌ ಉಲ್ಲಂಘನೆ
ಕನ್ನಡ ಸುದ್ದಿ  /  ಕರ್ನಾಟಕ  /  ರೂಫ್‌ಟಾಪ್‌ ರೆಸ್ಟೋರೆಂಟ್‌ ಇಷ್ಟಪಡುವವರು ಗಮನಿಸಿ; ಬೆಂಗಳೂರಿನ ಶೇ 90ರಷ್ಟು ರೆಸ್ಟೋರೆಂಟ್‌ಗಳಲ್ಲಿ ಫೈರ್‌ ಸೇಫ್ಟಿ ರೂಲ್ಸ್‌ ಉಲ್ಲಂಘನೆ

ರೂಫ್‌ಟಾಪ್‌ ರೆಸ್ಟೋರೆಂಟ್‌ ಇಷ್ಟಪಡುವವರು ಗಮನಿಸಿ; ಬೆಂಗಳೂರಿನ ಶೇ 90ರಷ್ಟು ರೆಸ್ಟೋರೆಂಟ್‌ಗಳಲ್ಲಿ ಫೈರ್‌ ಸೇಫ್ಟಿ ರೂಲ್ಸ್‌ ಉಲ್ಲಂಘನೆ

ಗಗನಚುಂಬಿ ಕಟ್ಟಡದ ಟಾಪ್‌ನಲ್ಲಿ ಇರುವ ರೆಸ್ಟೋರೆಂಟ್‌ನಲ್ಲಿ ಸಮಯ ಕಳೆಯುವುದು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಸಾಕಷ್ಟು ರೂಫ್‌ಟಾಪ್‌ ರೆಸ್ಟೋರೆಂಟ್‌ಗಳು ಜನ್ಮತಾಳಿವೆ. ಆದರೆ ಎಲ್ಲರೂ ಮೆಚ್ಚುವ ಈ ರೆಸ್ಟೋರೆಂಟ್‌ಗಳು ಫೈರ್‌ ಸೇಫ್ಟಿ ನಿಯಮಗಳನ್ನು ಪಾಲಿಸುತ್ತಿಲ್ಲ, ಬೆಂಗಳೂರು ಶೇ 90ರಷ್ಟು ರೂಫ್‌ಟಾಪ್‌ ರೆಸ್ಟೊರೆಂಟ್‌ಗಳು ಸೇಫಲ್ಲ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಬೆಂಗಳೂರು ಐಟಿ ಕಂಪನಿಗಳಿಂದ ಮಾತ್ರವಲ್ಲ, ಹೋಟೆಲ್‌, ಪಬ್‌ಗಳಿಂದಲೂ ಫೇಮಸ್‌. ಇಲ್ಲಿ ಹಲವಾರು ವೈವಿಧ್ಯಮಯ ಹೋಟೆಲ್‌, ಪಬ್‌-ಬಾರ್‌ಗಳಿವೆ. ಅದೇನೇ ಇರಲಿ, ಆದರೆ ಈ ಹೋಟೆಲ್‌ಗಳಲ್ಲಿ ಸುರಕ್ಷತೆಯ ಕ್ರಮವನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ ಎಂಬುದು ಮಾತ್ರ ಪ್ರಶ್ನೆಯಾಗಿದೆ ಉಳಿದಿದೆ.

ಅಕ್ಟೋಬರ್‌ 19 ರಿಂದ ನವೆಂಬರ್‌ 27ರ ನಡುವೆ ಫೈರ್‌ ಡಿಪಾರ್ಟ್‌ಮೆಂಟ್‌ ಬೆಂಗಳೂರಿನ 787 ರೂಫ್‌ಟಾಪ್‌ ರೆಸ್ಟೋರೆಂಟ್‌, ರೆಸ್ಟೋ ಬಾರ್‌ಗಳು ಹಾಗೂ ಪಬ್‌ಗಳಿಗೆ ಭೇಟಿ ನೀಡಿದೆ. ಈ ಭೇಟಿ ವೇಳೆ ಅಧಿಕಾರಿಗಳು ಗಮನಿಸಿದಂತೆ ಬಹುತೇಕ ರೂಫ್‌ಟಾಪ್‌ ರೆಸ್ಟೋರೆಂಟ್‌ಗಳು ಫೈರ್‌ ಸೇಫ್ಟಿ ನಿಯಮಗಳನ್ನು ಪಾಲಿಸುತ್ತಿಲ್ಲ.

ʼಸಾಕಷ್ಟು ಅಗ್ನಿಶಾಮಕ ಉಪಕರಣಗಳು ಈ ರೆಸ್ಟೋರೆಂಟ್‌ಗಳಲ್ಲಿಲ್ಲ. ಅಲ್ಲದೆ ಸರಿಯಾದ ಎಕ್ಸಿಟ್‌ ಪಾಯಿಂಟ್‌ ಕೂಡ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಇನ್ನೂ ಕೆಲವೆಡೆ ಪರವಾನಿಗೆಯನ್ನು ಹೊಂದಿಲ್ಲದೆ ರೆಸ್ಟೋರೆಂಟ್‌ ನಡೆಸಲಾಗುತ್ತಿದೆʼ ಎಂದು ಅಗ್ನಿಶಾಮಕ ಇಲಾಖೆಯ ಉಪ ನಿರ್ದೇಶಕ ಡಾ. ಯೂನಸ್‌ ಅಲಿ ಕೌಸರ್‌ ಹೇಳಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನ ತಾವರೆಕೆರೆ ಬಳಿ ಮಡ್‌ಪೈಪ್‌ ಕೆಫೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ತಪಾಸಣೆ ನಡೆಸಿದೆ.

ʼಫೈರ್‌ ಸೇಫ್ಟಿ ಉಲ್ಲಂಘನೆ ಮಾಡಿದ ಹೋಟೆಲ್‌ಗಳನ್ನು ಪರಿಶೀಲನೆ ಮಾಡುತ್ತೇವೆʼ ಎಂದು ಪೊಲೀಸ್‌ ಮಹಾನಿರ್ದೇಶಕ ಕಮಲ್‌ ಪಂತ್‌ ಡೆಕ್ಕನ್‌ ಹೆರಾಲ್ಡ್‌ಗೆ ಹೇಳಿದ್ದಾರೆ.

ಅಗ್ನಿಶಾಮಕ ಇಲಾಖೆಯು ಈ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದ್ದು, ಅಗ್ನಿಶಾಮಕ ಇಲಾಖೆಯು ಟ್ರೇಡ್ ಲೈಸೆನ್ಸ್‌ಗಳನ್ನು ಅಗ್ನಿಶಾಮಕ ಇಲಾಖೆಯ ನಿರಪೇಕ್ಷಣಾ ಪ್ರಮಾಣಪತ್ರ (ಎನ್‌ಒಸಿ) ಯೊಂದಿಗೆ ಜೋಡಿಸಲು ಪರಿಗಣಿಸುತ್ತಿದೆ.

ಅಗ್ನಿಶಾಮಕ ಇಲಾಖೆಯ ಎನ್‌ಒಸಿ ಪಡೆಯದೇ ರೂಫ್‌ಟಾಪ್‌ ರೆಸ್ಟೋರೆಂಟ್‌ಗಳಿಗೆ ವ್ಯಾಪಾರ ಪರವಾನಿಗೆಗಳನ್ನು ನೀಡಲಾಗುವುದಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಈ ಕುರಿತು ಬಿಬಿಎಂಪಿ ಹಾಗೂ ಅಗ್ನಿಶಾಮಕ ದರ ಹಲವು ಸಭೆಗಳನ್ನು ನಡೆಸಿದೆ. ಆದರೆ ಈ ನಿಯಮ ಯಾವಾಗ ಜಾರಿಗೆ ಬರುತ್ತದೆ ಎಂಬುದು ಸ್ವಷ್ಟವಾಗಿಲ್ಲ.

ಕರ್ನಾಟಕ ಅಗ್ನಿಶಾಮಕ ದಳ ಕಾಯ್ದೆಯ ಪ್ರಕಾರ ಬಹುಮಹಡಿ ಅಂದರೆ 21 ಮೀಟರ್‌ ಹಾಗೂ ಅದಕ್ಕೂ ಹೆಚ್ಚಿರುವ ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಕಡ್ಡಾಯ. ಈ ಹಿಂದೆ ಇದು 50 ಮೀಟರ್‌ ಹಾಗೂ ಅದಕ್ಕಿಂತ ಹೆಚ್ಚಿನ ಕಟ್ಟಡಗಳಿಗೆ ಮಾತ್ರ ಅನ್ವಯವಾಗಿತ್ತು.

21 ಮೀಟರ್‌ಗಿಂತ ಎತ್ತರದ ಕಟ್ಟಡಗಳಿಗೆ ಅಗ್ನಿಶಾಮಕ ಎನ್‌ಒಸಿ ಕಡ್ಡಾಯ. ಈ ಕಟ್ಟಡಗಳಲ್ಲಿರುವ ರೂಫ್‌ ಟಾಪ್‌ ರೆಸ್ಟೋರೆಂಟ್‌ಗಳು ಪ್ರತ್ಯೇಕವಾಗಿ ಎನ್‌ಒಸಿ ಪಡೆಯುವ ಪಡೆಯುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಡಿಎಚ್‌ ವರದಿ ತಿಳಿಸಿದೆ.

ಅಗ್ನಿಶಾಮಕ ಇಲಾಖೆಯ ಪ್ರಕಾರ ʼಸಾಮಾನ್ಯ ನಿರ್ಲಕ್ಷ್ಯ, ಅರಿವಿನ ಕೊರತೆ, ಹೆಚ್ಚಿದ ರಿಯಲ್‌ ಎಸ್ಟೇಟ್‌ ಬೆಳವಣಿಗೆ, ಜೀವನ ವೆಚ್ಚದ ಹೆಚ್ಚಿರುವುದು, ಜೀವನಶೈಲಿ ಬದಲಾವಣೆಗಳಿಂದಾಗಿ ಅಗ್ನಿಶಾಮಕ ಸುರಕ್ಷತಾ ಉಲ್ಲಂಘನೆಗಳು ಅತಿರೇಕವಾಗಿವೆ.

ಕೆಲವು ಹೆಸರಾಂತ ಕಂಪನಿಗಳು ಅಥವಾ ಬ್ರ್ಯಾಂಡ್‌ ಆಧಾರಿತವಾದವು ನಿಯಮಗಳನ್ನು ಪಾಲಿಸುತ್ತೀವೆ. ಯಾಕೆಂದರೆ ಅವರು ನಿರ್ದಿಷ್ಟ ಗ್ರಾಹಕರನ್ನು ಕೇಂದ್ರವಾಗಿ ಇಟ್ಟುಕೊಂಡು ಸ್ಥಾಪಿಸಿರುತ್ತಾರೆ. ಆದರೆ ಕೆಲವರು ಮಧ್ಯಮ ವರ್ಗಕ್ಕೆ ಹೊಂದುವಂತೆ ಪಬ್‌, ಬಾರ್‌, ರೂಫ್‌ಟಾಪ್‌ ರೆಸ್ಟೋರೆಂಟ್‌ಗಳನ್ನು ಹೊಂದಿರುತ್ತಾರೆ. ಇವರು ಹೆಚ್ಚಾಗಿ ರೂಲ್ಸ್‌ ಬ್ರೇಕ್‌ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೈರ್‌ ಸೇಫ್ಟಿ ನಿಯಮಗಳು ಸಾಕಷ್ಟು ಕಟ್ಟುನಿಟ್ಟಾಗಿರುವ ಕಾರಣ ಅದನ್ನು ಅನುಸರಿಸುವುದು ಕಷ್ಟವಾಗುತ್ತದೆ.

ʼನಗರವು ಬೆಳೆದಿರುವ ರೀತಿಯಲ್ಲಿ ಪ್ರಸ್ತುತವಿರುವ ಅಗ್ನಿ ಸುರಕ್ಷತಾ ಮಾನದಂಡಗಳು ಅಪ್ರಾಯೋಗಿಕರವಾಗಿದೆ. ಅಗ್ನಿಶಾಮಕ ಎನ್‌ಒಸಿಯನ್ನು ಕಡ್ಡಾಯಗೊಳಿಸಿದರೆ ನಿಯಮಗಳನ್ನು ಪಾಲಿಸುವುದು ಅಸಾಧ್ಯವಾದ ಕಾರಣ ಹಲವರು ಅಕ್ರಮವಾಗಿ ನಡೆಸುತ್ತಿದ್ದಾರೆʼ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವು ಸಂಸ್ಥೆಗಳು NOC ತೆಗೆದುಕೊಂಡರೂ ಸಹ, ಅವರು ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ, ಇದು ಅಗ್ನಿ ಸುರಕ್ಷತೆಯ ಉಲ್ಲಂಘನೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಅಗ್ನಿಶಾಮಕ ಇಲಾಖೆಗೆ ಅಧಿಕಾರ ನೀಡಿದ್ದರೂ ಕೂಡ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳನ್ನು ಮುಚ್ಚುವ ಅಧಿಕಾರವಿಲ್ಲ ಎಂದು ಕಮಲ್‌ ಪಂತ್‌ ಹೇಳಿದ್ದಾರೆ.

Whats_app_banner