Bengaluru Crime: ಬೆಂಗಳೂರು ಆರ್ಚ್‌ಬಿಷಪ್ ಹೆಸರಿನಲ್ಲಿ ನಕಲಿ ಇ–ಮೇಲ್ ಕಳುಹಿಸಿ ಹಣ ಕೇಳಿದ ವಂಚಕರ ವಿರುದ್ಧ ದೂರು ದಾಖಲು
Bengaluru Crime News: ಬೆಂಗಳೂರು ಮಹಾಧರ್ಮಕ್ಷೇತ್ರದ ಆರ್ಚ್‌ಬಿಷಪ್ ಪೀಟರ್ ಮಚಾಡೊ ಹೆಸರಿನಲ್ಲಿ ಇಮೇಲ್ ರವಾನಿಸಿದ ವಂಚಕರು ಎಲ್ಲರಲ್ಲೂ ಹಣದ ಬೇಡಿಕೆ ಇರಿಸಿದ್ದರು. ನಕಲಿ ಇಮೇಲ್ ಐಡಿ ಎಂಬುದು ಅರಿವಾಗುತ್ತಿದ್ದಂತೆ, ವಂಚಕರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ರೌಡಿ ಗಾಳಪ್ಪನ ಹತ್ಯೆ ಆಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು ಧರ್ಮ ಪ್ರಾಂತ್ಯದ ಆರ್ಚ್‌ಬಿಷಪ್ ಪೀಟರ್ ಮಚಾಡೊ ಹೆಸರಿನಲ್ಲಿ ನಕಲಿ ಇ–ಮೇಲ್ ಸೃಷ್ಟಿಸಿರುವ ಸೈಬರ್ ವಂಚಕರು ಹಣಕ್ಕೆ ಬೇಡಿಕೆ ಇರಿಸುತ್ತಿದ್ದ ಸಂಬಂಧ ದೂರು ದಾಖಲಾಗಿದೆ. ದೂರುದಾರರು ಪೂರ್ವ ವಿಭಾಗದ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೈಬರ್ ವಂಚನೆ ಸಂಬಂಧ ಜೆ.ಎ. ಕಾಂತರಾಜ್ ಅವರು ದೂರು ನೀಡಿದ್ದರು. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರ್ಚ್ ಬಿಷಪ್ ಪೀಟರ್ ಮಚಾಡೊ ಹೆಸರು ಬಳಸಿಕೊಂಡು msgr.machado@gmail.com ನಕಲಿ ಇ–ಮೇಲ್ ಸೃಷ್ಟಿಸಲಾಗಿದೆ. ಅದೇ ಇ–ಮೇಲ್‌ನಿಂದ ಹಲವರಿಗೆ ಸಂದೇಶ ಕಳುಹಿಸಿ, ಹಣಕ್ಕೆ ಬೇಡಿಕೆ ಸಲ್ಲಿಸಲಾಗುತ್ತಿತ್ತು. ಇದು ನಕಲಿ ಎಂಬುದನ್ನು ಅರಿತ ಕೆಲವರು ದೂರುದಾರರಿಗೆ ಮಾಹಿತಿ ನೀಡಿದ್ದರು. ಅದರಂತೆ ದೂರುದಾರರು ದೂರು ನೀಡಿದ್ದರು.
ತಲಘಟ್ಟಪುರ ರೌಡಿ ಗಾಳಪ್ಪ ಮರ್ಡರ್
ಬೆಂಗಳೂರಿನ ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ರೌಡಿ ಗಾಳಪ್ಪ ಅಲಿಯಾಸ್ ಹುಚ್ಚಗಾಳ ಎಂಬಾತನನ್ನು ಲಾಂಗ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ಹಳೇ ವೈಷಮ್ಯದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ರೌಡಿ ಗಾಳಪ್ಪ ಕೆಲಸ ನಿಮಿತ್ತ ಚಿಕ್ಕೆಗೌಡನಪಾಳ್ಯಕ್ಕೆ ಬಂದಿದ್ದ. ಇದೇ ಸಂದರ್ಭದಲ್ಲಿ ದಾಳಿ ಮಾಡಿದ್ದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಗಾಳಪ್ಪ ವಿರುದ್ಧ ಕೆಂಗೇರಿ ಹಾಗೂ ತಾವರೆಕೆರೆ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದು ಬಂದಿದೆ.
ಎರಡು ಬೈಕ್ ಅಪಘಾತ, ಇಬ್ಬರ ಸಾವು
ಬೆಂಗಳೂರು ನಗರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರೂ ಬೈಕ್ ಸವಾರರು ಮೃತಪಟ್ಟಿದ್ದಾರೆ. 28 ವರ್ಷದ ಅರುಣ್‌ಕುಮಾರ್ ಹಾಗೂ 32 ವರ್ಷದ ಸುಜಿತ್ ಶಾ ಮೃತ ದುರ್ದೈವಿಗಳು. ಈ ಅಪಘಾತಗಳಿಗೆ ಸಂಬಂಧಿಸಿ ಕುಮಾರಸ್ವಾಮಿ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆ.ಪಿ. ನಗರ ಬಳಿಯ ಸಾರಕ್ಕಿ ಲೇಔಟ್ ನಿವಾಸಿ ಅರುಣ್‌ಕುಮಾರ್, ಖಾಸಗಿ ಕಂಪನಿಯೊಂದರಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ತಡರಾತ್ರಿ 11.30 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಅಂಜನಾಪುರದ 80 ಅಡಿ ರಸ್ತೆಯಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದೆ ಎಂದು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಹೇಳಿದ್ದಾರೆ.
ಅರುಣ್ ಅವರ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿತ್ತು. ಬೈಕ್ ಸಮೇತ ಉರುಳಿಬಿದ್ದಿದ್ದ ಅರುಣ್ ತಲೆಗೆ ತೀವ್ರ ಪೆಟ್ಟಾಗಿತ್ತು. ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಬಿಹಾರದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾರೆ. ಬಿಹಾರದ ಸುಜಿತ್ ಶಾ ಕೆಲಸ ಹುಡುಕಿಕೊಂಡು ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಇವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಹೇಳಿದ್ದಾರೆ.
ಸುಜಿತ್ ಶಾ ಅವರು ಬೈಕ್‌ನಲ್ಲಿ ಚಿಕ್ಕ ನಾಗಮಂಗಲ ರಸ್ತೆಯಲ್ಲಿ ಹೊರಟಿದ್ದರು. ಇದೇ ಸಂದರ್ಭದಲ್ಲಿ ಬೈಕ್‌ಗೆ ಟ್ರಕ್ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಸುಜಿತ್ ಶಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)