Bengaluru Crime: ಆಯುಧಗಳಿಂದ ಇರಿದು ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ; ಬೆಂಗಳೂರಿನ ಬಾಗಲೂರು ವೃತ್ತದಲ್ಲಿ ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಆಯುಧಗಳಿಂದ ಇರಿದು ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ; ಬೆಂಗಳೂರಿನ ಬಾಗಲೂರು ವೃತ್ತದಲ್ಲಿ ಘಟನೆ

Bengaluru Crime: ಆಯುಧಗಳಿಂದ ಇರಿದು ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ; ಬೆಂಗಳೂರಿನ ಬಾಗಲೂರು ವೃತ್ತದಲ್ಲಿ ಘಟನೆ

ಬೆಂಗಳೂರಿನ ಯಲಹಂಕ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇವರನ್ನು ಹತ್ಯೆ ಮಾಡಿ ಕಾರಿನಲ್ಲಿ ಮೃತದೇಹವಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಅನುಮಾನಸ್ಪದವಾಗಿ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ, ವ್ಯಕ್ತಿಯ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. (ವರದಿ: ಎಚ್‌. ಮಾರುತಿ)

ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಭೀಕರ ಹತ್ಯೆ, ಕೃಷ್ಣ ಯಾದವ್ (ಬಲಚಿತ್ರ)
ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಭೀಕರ ಹತ್ಯೆ, ಕೃಷ್ಣ ಯಾದವ್ (ಬಲಚಿತ್ರ)

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮದ ಕರಾಳ ದಂಧೆಗೆ ಬೆಂಗಳೂರಿನಲ್ಲಿ ಮತ್ತೊಂದು ಹೆಣ ಉರುಳಿದೆ. ಯಲಹಂಕ ನಿವಾಸಿ 55 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇವರನ್ನು ಹತ್ಯೆ ಮಾಡಿ ಕಾರಿನಲ್ಲಿ ಮೃತದೇಹವಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶ ಮೂಲದ ಕೃಷ್ಣ ಯಾದವ್ ಕಳೆದ 20 ವರ್ಷಗಳಿಂದ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದಲ್ಲಿ ನೆಲೆಸಿದ್ದರು.

ಬಾಗಲೂರು ವೃತ್ತದ ಸಮೀಪ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅವರ ಪುತ್ರ ನೀಡಿರುವ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೃಷ್ಣ ಅವರು ಸೋಮವಾರ ಸಂಜೆ 6.30 ರ ವೇಳೆಗೆ ಕೆಲಸದ ಮೇಲೆ ತಮ್ಮ ಸ್ವಿಫ್ಟ್ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಅವರು ರಾತ್ರಿ ಊಟಕ್ಕೆ ಬರುವುದಾಗಿ ತಿಳಿಸಿದ್ದರು. ಆದರೆ ರಾತ್ರಿ ಮನೆಗೆ ಮರಳಿರಲಿಲ್ಲ. ಬೆಳಗ್ಗೆ ಬರಬಹುದು ಎಂದು ಅವರ ಮನೆಯವರು ಸುಮ್ಮನಾಗಿದ್ದರು. ಆದರೆ ಅವರದ್ದೇ ಕಾರಿನಲ್ಲಿ ಮಂಗಳವಾರ (ಮಾರ್ಚ್‌ 12) ಹೆಣವಾಗಿ ಪತ್ತೆಯಾಗಿದ್ದಾರೆ.

ಕೃಷ್ಣ ಅವರು ತಮ್ಮ ಕಾರಿನಲ್ಲಿ ಇಬ್ಬರು ವ್ಯಕ್ತಿಗಳ ಜೊತೆ ಹೊರಟಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರ ಜೊತೆಗಿದ್ದ ಈ ಇಬ್ಬರು ವ್ಯಕ್ತಿಗಳೇ ಅವರನ್ನು ಹರಿತವಾದ ಆಯುಧದಿಂದ ಇರಿದು ಕೊಂದಿದ್ದಾರೆ. ನಂತರ, ಮೃತದೇಹ ಸಮೇತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಬಾಗಲೂರು ವೃತ್ತದ ಬಳಿ ಕಾರನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಮಾನಸ್ಪದವಾಗಿ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ, ವ್ಯಕ್ತಿಯ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ದುಷ್ಕರ್ಮಿಗಳು ಕೃಷ್ಣ ಅವರ ಕುತ್ತಿಗೆ, ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಮೃತದೇಹ ಪರಿಶೀಲನೆ ವೇಳೆ ಕಂಡುಬಂದಿದೆ. ವೃತ್ತಿ ವೈಷಮ್ಯ ಅಥವಾ ಹಣಕಾಸಿನ ವಿಚಾರವಾಗಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದ ಕೃಷ್ಣ, ಹಲವು ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿದ್ದರು. ಉದ್ಯಮದ ಹೆಸರಿನಲ್ಲಿ ಕೆಲವರ ಜೊತೆ ದ್ವೇಷ ಹೊಂದಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಉದ್ಯಮಿಯ ಮೃತದೇಹವನ್ನು ಶವ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದರು. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಹಂತಕರಿಗಾಗಿ ಹುಡಕಾಟ ನಡೆಸುತ್ತಿದ್ದಾರೆ. ಕೊಲೆಯಾದ ವಿಷಯ ತಿಳಿಯುತ್ತಿದ್ದಂತೆ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಕೆಲ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Whats_app_banner