ಕನ್ನಡ ಸುದ್ದಿ  /  Karnataka  /  Bengaluru News Bengaluru Dharmapuri Hosur Railway Line Worth <Span Class='webrupee'>₹</span>2,500 Cr To Be Laid Soon Indian Railways Update Prk

ಬೆಂಗಳೂರು ಹೊಸೂರು ಧರ್ಮಪುರಿ ನಡುವೆ ಹೊಸ ರೈಲ್ವೆ ಮಾರ್ಗ; 2500 ಕೋಟಿ ರೂ ಯೋಜನೆಗೆ ಶೀಘ್ರ ಚಾಲನೆ

ಧರ್ಮಪುರಿ-ಹೊಸೂರು-ಬೆಂಗಳೂರು ವಿಭಾಗದಲ್ಲಿ 2,500 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ಪರಿಶೀಲಿಸಿದ್ದು, ಈ ಯೋಜನೆ ಶೀಘ್ರವೇ ಚಾಲನೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು ಧರ್ಮಪುರಿ ಹೊಸೂರು ನಡುವೆ ಹೊಸ ರೈಲ್ವೆ ಮಾರ್ಗ (ಸಾಂಕೇತಿಕ ಚಿತ್ರ)
ಬೆಂಗಳೂರು ಧರ್ಮಪುರಿ ಹೊಸೂರು ನಡುವೆ ಹೊಸ ರೈಲ್ವೆ ಮಾರ್ಗ (ಸಾಂಕೇತಿಕ ಚಿತ್ರ)

ಬೆಂಗಳೂರು/ ಚೆನ್ನೈ: ಮೈಸೂರು-ಚೆನ್ನೈ ನಡುವಿನ ಎರಡನೇ ವಂದೇ ಭಾರತ್ ರೈಲಿಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಮಾರ್ಚ್ 14 ರಿಂದ ದಿನನಿತ್ಯದ ಸಂಚಾರ ಆರಂಭಿಸಲಿದೆ. ಈ ನಡುವೆ ಇದೀಗ 2,500 ಕೋಟಿ ರೂ. ವೆಚ್ಚದಲ್ಲಿ ನೂತನ ಧರ್ಮಪುರಿ-ಹೊಸೂರು-ಬೆಂಗಳೂರು ರೈಲು ಮಾರ್ಗ ನಿರ್ಮಿಸಲು ಯೋಜಿಸಲಾಗಿದೆ.

ಹೌದು, ಕೇಂದ್ರ ಸರ್ಕಾರ ದೇಶದಲ್ಲಿ ರೈಲು ಸಂಪರ್ಕವನ್ನು ಮತ್ತಷ್ಟು ವಿಸ್ತರಿಸಲು ಕ್ರಮ ಕೈಗೊಳ್ಳುತ್ತಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ರೈಲ್ವೇ ಇಲಾಖೆ ಕೂಡ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಕಾಮಗಾರಿಗಳನ್ನು ನಡೆಸುತ್ತಲೇ ಇದೆ. ನಿತ್ಯ ರೈಲು ಪ್ರಯಾಣಿಕರ ಸಂಖ್ಯೆ ವೃದ್ಧಿಸುತ್ತಿರುವುದರಿಂದ ಸರ್ಕಾರ, ಹೊಸ-ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ.

ಇದೀಗ ಧರ್ಮಪುರಿ-ಹೊಸೂರು-ಬೆಂಗಳೂರು ವಿಭಾಗದಲ್ಲಿ 2,500 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ರೈಲು ಮಾರ್ಗವನ್ನು ನಿರ್ಮಿಸಲಾಗುವುದು. ಈ ಬಗ್ಗೆ ವಿವರವಾದ ಯೋಜನೆಯನ್ನು ರೈಲ್ವೆ ಮಂಡಳಿಗೆ ರವಾನಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್.ಎನ್. ಸಿಂಗ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ಮೈಸೂರು-ಚೆನ್ನೈಗೆ 2ನೇ ವಂದೇ ಭಾರತ್‌ಗೆ ಚಾಲನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರದಂದು ಚೆನ್ನೈನಿಂದ ಮೈಸೂರಿಗೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಏಪ್ರಿಲ್ 4 ರವರೆಗೆ ಚೆನ್ನೈ-ಬೆಂಗಳೂರು ಮಾರ್ಗದಲ್ಲಿ ರೈಲು ಸಂಚರಿಸಲಿದ್ದು, ನಂತರ ಅದನ್ನು ಮೈಸೂರಿಗೆ ವಿಸ್ತರಿಸಲಾಗುವುದು. ಹೆಚ್ಚುವರಿಯಾಗಿ, ವಾರದಲ್ಲಿ ಒಂದು ದಿನ ತಿರುಪತಿ-ಕೊಲ್ಲಂ ನಡುವೆ ಮತ್ತು ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮಂಗಳೂರಿಗೆ ವಿಸ್ತರಿಸಲು ಪ್ರಧಾನಿ ಹಸಿರು ನಿಶಾನೆ ತೋರಿದರು.

ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಕಲಬುರಗಿ, ಮೈಸೂರು-ಚೆನ್ನೈ ಸೇರಿದಂತೆ 10 ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದರು. ರಾಷ್ಟ್ರವ್ಯಾಪಿ 45 ಮಾರ್ಗಗಳನ್ನು ಒಳಗೊಂಡಿದ್ದು, ಪ್ರಸ್ತುತ, ಭಾರತೀಯ ರೈಲ್ವೇಯು 41 ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ನಿರ್ವಹಿಸುತ್ತದೆ. ಬ್ರಾಡ್ ಗೇಜ್ ವಿದ್ಯುದ್ದೀಕರಿಸಿದ ನೆಟ್‌ವರ್ಕ್‌ಗಳೊಂದಿಗೆ ಇವು 24 ರಾಜ್ಯಗಳು ಮತ್ತು 256 ಜಿಲ್ಲೆಗಳವರೆಗೆ ವಿಸ್ತರಿಸಿದೆ.

ಡಿಸೆಂಬರ್ 2023 ರಲ್ಲಿ, ಪ್ರಧಾನಿ ಆರು ಹೆಚ್ಚುವರಿ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಿದರು. ಇವುಗಳು ಕತ್ರಾದಿಂದ ನವದೆಹಲಿಗೆ, ಅಮೃತಸರದಿಂದ ದೆಹಲಿ, ಕೊಯಮತ್ತೂರಿನಿಂದ ಬೆಂಗಳೂರು, ಮಂಗಳೂರಿನಿಂದ ಮಡಗಾಂವ್, ಜಲ್ನಾದಿಂದ ಮುಂಬೈ, ಮತ್ತು ಅಯೋಧ್ಯೆಯಿಂದ ದೆಹಲಿಗೆ ಇತರೆ ಮಾರ್ಗಗಳು ಸೇರಿವೆ. ದೆಹಲಿ ಮತ್ತು ವಾರಣಸಿ ನಡುವಿನ ಎರಡನೇ ರೈಲನ್ನು ಡಿಸೆಂಬರ್ 2023ರಲ್ಲಿ ಉದ್ಘಾಟಿಸಲಾಯಿತು.

ಕಲಬುರಗಿ ಜನತೆಯ ಬಹುದಿನಗಳ ಕನಸು ನನಸು

ಇನ್ನು ಕಲಬುರಗಿ ಜನತೆಯ ಬಹುದಿನಗಳ ಬೇಡಿಕೆ ಈಡೇರಿದ್ದು, ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಹಸಿರು ನಿಶಾನೆ ತೋರಿದರು. ಮೈಸೂರು-ಚೆನ್ನೈ ನಡುವಿನ ಎರಡನೇ ರೈಲು ಸಂಚಾರವು ಏಪ್ರಿಲ್ 5ರಿಂದ ಆರಂಭಿಸಲಿದೆ. ವಿದ್ಯುತ್ ಮಾರ್ಗದ ಕಾಮಗಾರಿ ನಿಮಿತ್ತ ಸದ್ಯ, ಬೆಂಗಳೂರು-ಚೆನ್ನೈ ನಡುವೆ ಈ ರೈಲು ಸಂಚರಿಸಲಿದೆ.

ಈ ನಡುವೆ, ದೆಹಲಿಯು ದೇಶದ ನಗರಗಳ ಪೈಕಿ ಅತಿ ಹೆಚ್ಚು ವಂದೇ ಭಾರತ್ ರೈಲುಗಳನ್ನು ಹೊಂದಿದೆ. ದೇಶದ ರಾಜಧಾನಿಯಲ್ಲಿ 10 ರೈಲುಗಳು ಕೊನೆಗೊಳ್ಳುತ್ತವೆ. ಈ ರೈಲುಗಳು ದೆಹಲಿಯಿಂದ ಡೆಹ್ರಾಡೂನ್, ಅಂಬ್ ಅಂಡೌರಾ, ಭೋಪಾಲ್, ಅಯೋಧ್ಯೆ, ಅಮೃತಸರ ಮತ್ತು ಖಜುರಾಹೊದಂತಹ ವಿವಿಧ ಸ್ಥಳಗಳಿಗೆ ಸಂಪರ್ಕಿಸುತ್ತವೆ.

ಇನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳವಾರದಂದು ರೈಲು ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಅವರು ಒಟ್ಟು 85,000 ಕೋಟಿ ರೂ. ಮೌಲ್ಯದ ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಿದರು.

(ವರದಿ - ಪ್ರಿಯಾಂಕಾ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point