ಕನ್ನಡ ಸುದ್ದಿ  /  Karnataka  /  Bengaluru News Bengaluru Doctor Criticizes Hdfc Bank For Constant Spam Calls Company Reacts Viral News Uks

Viral News: ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲದ ಕರೆಗಳ ಕಾಟ; ವೈರಲ್ ಆಯಿತು ಬೆಂಗಳೂರು ಡಾಕ್ಟರ್ ಮಾಡಿದ ಟ್ವೀಟ್‌

ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲದ ಕರೆಗಳ ಕಾಟದಿಂದ ಬೇಸತ್ತ ಬೆಂಗಳೂರಿನ ಡಾಕ್ಟರ್ ಒಬ್ಬರು ಅದರ ವಿವರವನ್ನು ಟ್ವೀಟ್ ಮಾಡಿದರು. ಇಂತಹದ್ದೇ ಕರೆಗಳಿಂದ ಬೇಸತ್ತಿದ್ದ ನೂರಾರು ಜನ ಅದಕ್ಕೆ ಸ್ಪಂದಿಸಿದರು, ಅವರ ಸಮಸ್ಯೆಗಳನ್ನೂ ಅಲ್ಲಿ ಹೇಳಿಕೊಂಡರು. ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡ ಟ್ವೀಟ್‌ಗೆ ಸ್ಪಂದಿಸಿ ವಿಷಾದ ವ್ಯಕ್ತಪಡಿಸಿದ್ದು ಹೀಗೆ.

ಎಚ್‌ಡಿಎಫ್‌ಸಿ ಬ್ಯಾಂಕ್ (ಸಾಂದರ್ಭಿಕ ಚಿತ್ರ)
ಎಚ್‌ಡಿಎಫ್‌ಸಿ ಬ್ಯಾಂಕ್ (ಸಾಂದರ್ಭಿಕ ಚಿತ್ರ) (Shailesh Andrade / REUTERS)

ಬೆಂಗಳೂರು: ಎಚ್‌ಡಿಎಫ್‌ಸಿ ಬ್ಯಾಂಕ್ ಹೆಸರಲ್ಲಿ ನಿರಂತರ ಸಾಲ ನೀಡಿಕೆ ಸಂಬಂಧ ಫೋನ್‌ಕರೆಗಳು ಬರುತ್ತಿರುವುದು ಬಹುತೇಕರಿಗೆ ಹೊಸದಲ್ಲ. ಆದರೆ ಬೆಂಗಳೂರಿನ ಡಾಕ್ಟರ್ ಸುಂದರ್ ಶಂಕರನ್ ಅವರು ಮೈಕ್ರೋಬ್ಲಾಗಿಂಗ್ ಸೈಟ್‌ ಎಕ್ಸ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಹೆಸರಲ್ಲಿ ಬಂದ ಮಾರ್ಕೆಟಿಂಗ್ ಕರೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಫೋನ್‌ ನಂಬರ್‌ಗಳನ್ನೂ ಉಲ್ಲೇಖಿಸಿದರು. ಅವರ ಈ ಟ್ವೀಟ್‌ ಬಹುಬೇಗ ವೈರಲ್ ಆಯಿತಲ್ಲದೆ, ಅನೇಕರು ತಮ್ಮ ಅನುಭವಗಳನ್ನೂ ಹಂಚಿಕೊಂಡರು.

ಇಷ್ಟಾಗುತ್ತಿದ್ದಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಎಕ್ಸ್‌ ಖಾತೆ ಸ್ಪಂದಿಸಿದ್ದು, ನೇರ ಸಂದೇಶ (ಡಿಎಂ) ಕಳುಹಿಸುವಂತೆ ಕೇಳಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಡಾ. ಸುಂದರ್ ಶಂಕರನ್, ಈ ಹಿಂದೆ ನೇರ ಸಂದೇಶ ಕಳುಹಿಸಿದ್ದಾಗಿದೆ. ಅದಕ್ಕೆ ಯಾವುದೇ ಕ್ರಮ ಎಚ್‌ಡಿಎಫ್‌ಸಿ ಕಡೆಯಿಂದ ಜರುಗಿಲ್ಲ. ಅದು ಯಾವುದನ್ನೂ ಗಣನೆಗೆ ತಗೊಳ್ಳುವುದಿಲ್ಲ ಎಂಬುದು ಮನವರಿಕೆಯಾಗಿದೆ. ಟ್ವೀಟ್‌ನಲ್ಲಿ ಎಲ್ಲವೂ ಇದೆ. ಕ್ರಮ ಜರುಗಿಸಿ ಎಂದು ಹೇಳಿದ್ದರು.

ಹಲೋ ನಿಮಗೆ ಪರ್ಸನಲ್ ಲೋನ್ ಬೇಕಿತ್ತಾ…

ಡಾ. ಸುಂದರ್ ಶಂಕರನ್ ಅವರು ಹಂಚಿಕೊಂಡಿರುವ ಟ್ವೀಟ್‌ನಲ್ಲಿ ಎಚ್‌ಡಿಎಫ್‌ಸಿ ಹೆಸರಿನಲ್ಲಿ ಬರುವ ಸಾಲದ ಅವಶ್ಯಕತೆಯ ಕರೆಗಳ ವಿವರ ಹಲವರನ್ನು ತನ್ನೆಡೆಗೆ ಸೆಳೆದಿದೆ. ಬಹುತೇಕರು ಇಂತಹ ಅನುಭವಗಳಿಂದ ರೋಸಿ ಹೋಗಿರುವ ಕಾರಣ, ಸುಂದರ್ ಶಂಕರನ್ ಅವರ ಟ್ವೀಟ್‌ ಬಹುಬೇಗ ವೈರಲ್ ಆಯಿತು.

“ಎಚ್‌ಡಿಎಫ್‌ಸಿ ಸಾಲದ ಅವಶ್ಯಕತೆಯ ಕರೆಗಳು ಒಂದು ಉಪದ್ರವವಾಗಿ ಮಾರ್ಪಟ್ಟಿವೆ. ನೀವು ಅವರ ಮೇಲೆ ಕೋಪಗೊಂಡರೆ, ನಿರ್ಬಂಧಿಸಿದರೂ ಕೂಡ ಇನ್ನೂ ಹೆಚ್ಚಿನ ಕರೆಗಳನ್ನು ಅವರು ಮಾಡುತ್ತಾರೆ. ಹಾಗೆ ಪೀಡನೆಗೆ ಒಳಗಾಗುತ್ತೀರಿ. ಇಂದು, ಕರೆ ಮಾಡಿದ ಒಬ್ಬ ವ್ಯಕ್ತಿಯ ಮೇಲೆ ನಾನು ರೇಗಾಡಿದ ಬಳಿಕ, ಎಚ್‌ಡಿಎಫ್‌ಸಿಯ ಮ್ಯಾನೇಜರ್ ಎಂದು ಹೇಳಿಕೊಂಡು ಮತ್ತೊಬ್ಬ ಕರೆ ಮಾಡಿದ. ನಾನು ರೇಗಾಡಿದ್ದು ಯಾಕೆ ಎಂದು ಕೇಳಲು ಬಯಸಿದ. ಇವೆಲ್ಲವೂ ಸ್ಪ್ಯಾಮ್ ಕರೆಗಳಂತೆ ಭಾಸವಾಗುತ್ತಿವೆ. ಎಚ್‌ಡಿಎಫ್‌ಸಿ ಈ ಬಗ್ಗೆ ಕ್ರಮ ಜರುಗಿಸಬೇಕು, ತನಿಖೆ ನಡೆಸಬೇಕು” ಎಂದು ಅವರು ಕರೆ ಸ್ವೀಕರಿಸಿದ ಕೆಲವು ಫೋನ್‌ ನಂಬರ್‌ಗಳನ್ನೂ ಸುಂದರ್ ಶಂಕರನ್ ಅಲ್ಲಿ ನಮೂದಿಸಿದ್ದಾರೆ.

ಡಾ. ಸುಂದರ್ ಶಂಕರನ್ ಅವರ ಟ್ವೀಟ್ ಹೀಗಿದೆ

ಸುಂದರ್ ಶಂಕರನ್ ಅವರು ಮಾರ್ಚ್ 30ರಂದು ಈ ಪೋಸ್ಟ್ ಮಾಡಿದ್ದು, 19 ಸಾವಿರಕ್ಕೂ ಹೆಚ್ಚು ವೀಕ್ಷಣೆ ಆಗಿದೆ. 220ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. 220ಕ್ಕೂ ಹೆಚ್ಚು ಜನ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಈ ಟ್ವೀಟ್‌ಗೆ ಎಚ್‌ಡಿಎಫ್‌ಸಿ ಕೂಡ ಪ್ರತಿಕ್ರಿಯೆ ನೀಡಿದ್ದು, “ಹಾಯ್ ಸುಂದರ್, ನಿಮ್ಮ ಅನುಭವದ ಬಗ್ಗೆ ಕೇಳಲು ವಿಷಾದಿಸುತ್ತೇವೆ. ಸಹಾಯಕ್ಕಾಗಿ ಕರೆ ಮಾಡಿದ ವಿವರಗಳು ಮತ್ತು ಕರೆ ಸ್ವೀಕರಿಸಿದ ನಿಮ್ಮ ಸಂಪರ್ಕ ಸಂಖ್ಯೆಯನ್ನು ದಯವಿಟ್ಟು ನಮಗೆ ಡಿಎಂ ಮಾಡಿ” ಎಂದು ಕೋರಿದೆ.

ಟ್ವೀಟ್‌ಗೆ ಸಿಕ್ಕ ಪ್ರತಿಕ್ರಿಯೆ ಹೀಗಿತ್ತು

" ಮೊಬೈಲ್‌ ಸಂಖ್ಯೆಗಳನ್ನು ನಿರ್ಬಂಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರು ಮತ್ತೆ ತಮ್ಮ ಆಪರೇಟರ್‌ನಿಂದ ಹೊಸ ಸಂಖ್ಯೆಗಳನ್ನು ಪಡೆಯುತ್ತಾರೆ. ಟಾರ್ಗೆಟ್‌ ನಂಬರ್‌ ಬಗ್ಗೆ ಅವರು ತುಂಬಾ ಒತ್ತಡದಲ್ಲಿರುತ್ತಾರೆ. ಸಾಲದ ವಿಭಾಗ ಆಗಾಗ್ಗೆ ಗ್ರಾಹಕರ ಡೇಟಾವನ್ನು ಬ್ಯಾಂಕಿನ ಪರವಾಗಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ಏಜೆಂಟರಿಗೆ ನೀಡುತ್ತದೆ. ಅವರಿಗೆ ಅವರ ಉದ್ಯೋಗಿ ಐಡಿಗಳು ತಿಳಿದಿರುವುದಿಲ್ಲ" ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

“ಅವರು ಸ್ಪ್ಯಾಮ್ ಕರೆಗಳನ್ನು ತಪ್ಪಿಸುವ ಬಗ್ಗೆ ಮಾತನಾಡುತ್ತಾರೆ ಎಂದು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅವರು ಸ್ವತಃ ಅನೇಕ ಬಾರಿ ಕರೆ ಮಾಡುತ್ತಾರೆ ಮತ್ತು ಸ್ಪ್ಯಾಮರ್ ಪಟ್ಟಿಗೆ ಪ್ರವೇಶಿಸುತ್ತಾರೆ. ನಮಗೆ ಸಾಲದ ಅಗತ್ಯವಿದ್ದರೆ. ನಾವು ಅವರನ್ನು ಕರೆಯುತ್ತೇವೆ. ಅವರು ಪದೇಪದೆ ಕರೆ ಮಾಡಿ ನಮಗೆ ತೊಂದರೆ ನೀಡುವ ಅಗತ್ಯವಿಲ್ಲ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಅವುಗಳನ್ನು ಡಿಎನ್‌ಡಿ ಅಪ್ಲಿಕೇಶನ್ ಮೂಲಕ ವರದಿ ಮಾಡುವುದು ಉತ್ತಮ. ಪ್ರತಿ ದೂರಿಗೆ, ಪ್ರಾಧಿಕಾರವು ಕೈಗೊಂಡ ಕ್ರಮಗಳ ಬಗ್ಗೆ ನವೀಕರಣವಿದೆ. ಸ್ಪ್ಯಾಮ್ ಕರೆ ಆವರ್ತನವೂ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ, ಇನ್ನು ಮುಂದೆ ಕರೆ ಮಾಡದಂತೆ ಕರೆ ಮಾಡಿದವರನ್ನು ವಿನಯದಿಂದ ವಿನಂತಿಸುವುದು ಸಹ ಕೆಲಸ ಮಾಡುತ್ತದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಎಲ್ಲಾ ಕರೆಗಳು ಒಂದೇ ಕಾಲ್ ಸೆಂಟರ್‌ನಿಂದ ಬರುತ್ತವೆ ಎಂಬುದನ್ನು ಫೋನ್ ಸಂಖ್ಯೆಗಳೇ ತೋರಿಸುತ್ತವೆ. ಆದ್ದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು. ನನ್ನ ಅನುಭವದ ಪ್ರಕಾರ, ಸ್ಟಾಂಡರ್ಡ್‌ ಚಾರ್ಟರ್ಡ್ ಬ್ಯಾಂಕ್ ಇಂಡಿಯಾ ಇಂತಹ ಕರೆಗಳನ್ನು ಮಾಡಿಸುವುದರಲ್ಲಿ ನಿಸ್ಸೀಮ” ಎಂದು ಬೇರೊಬ್ಬರು ಕಾಮೆಂಟ್ ಮಾಡಿದ್ದಾರೆ.