Bengaluru Karaga: ಬೆಂಗಳೂರು ಕರಗಕ್ಕೆ ದಿನಾಂಕ ನಿಗದಿ: ಕರಗ ಆಚರಣೆ, ದ್ರೌಪದಿಗೂ ಕರಗಕ್ಕೂ ಇರುವ ಸಂಬಂಧದ ಕುರಿತು ಇಲ್ಲಿದೆ ಮಾಹಿತಿ
Bengaluru Karaga 2024: ಬೆಂಗಳೂರು ಕರಗಕ್ಕೆ ದಿನಾಂಕ ನಿಗದಿ.. ಹನ್ನೊಂದು ದಿನಗಳ ಹಬ್ಬಕ್ಕೆ ಸಡಗರ ಸಂಭ್ರಮದಿಂದ ಆಚರಣೆಗೆ ಸಜ್ಜು.. ಕರಗ ಆಚರಣೆ ಏಕೆ ಮತ್ತು ಹೇಗೆ ನಡೆಯುತ್ತದೆ ಇಲ್ಲಿದೆ ವಿವರ. (ವರದಿ: ಎಚ್. ಮಾರುತಿ)
ಬೆಂಗಳೂರು: ಜಗತ್ಪ್ರಸಿದ್ದ ಕರಗಕ್ಕೆ ಬೆಂಗಳೂರು ಸಜ್ಜಾಗುತ್ತಿದೆ. ಚೈತ್ರ್ರ ಪೂರ್ಣಿಮೆಯಂದು ನಡೆಯುವ ಕರಗಕ್ಕೆ ದಿನಾಂಕ ನಿಗದಿಯಾಗಿದೆ. ಸಮಿತಿಯ ತೀರ್ಮಾನದ ಪ್ರಕಾರ ಇದೇ ಏಪ್ರಿಲ್ 15ರಿಂದ 23ರ ವರೆಗೆ ಬೆಂಗಳೂರು ಕರಗ ನಡೆಯಲಿದೆ. ಧರ್ಮರಾಯಸ್ವಾಮಿ ದೇವಸ್ಥಾನದ ಟ್ರಸ್ಟಿಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಸಭೆ ನಡೆಸಿದ್ದು ದಿನಾಂಕವನ್ನು ನಿಗದಿಪಡಿಸಿದೆ.
ಈ ವರ್ಷವೂ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಇವರು 14ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ. ಬೆಂಗಳೂರು ಕರಗಕ್ಕೆ 300 ವರ್ಷಗಳ ಇತಿಹಾಸವಿದೆ. ದ್ರೌಪದಿ ಆದಿ ಶಕ್ತಿ ಸ್ವರೂಪಿಣಿಯಾಗಿ ಹಿಂತಿರುಗಿ ಬಂದಿದ್ದನ್ನು ಸ್ಮರಿಸಲು ಕರಗ ಆಚರಿಸಲಾಗುತ್ತದೆ.
ಕರಗ, ವಹ್ನಿಕುಲ ಕ್ಷತ್ರಿಯ ಜನಾಂಗದವರು ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರ ಹರಕೆ ಒಪ್ಪಿಸುವ ಆಚರಣೆ. ವಹ್ನಿಕುಲಸ್ಥರು ದ್ರೌಪದಿಯನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ದ್ರೌಪದಿ ಅವರಿಗೆ ಆದಿಶಕ್ತಿ. ಆಕೆಯ ಹೆಸರಿನಲ್ಲಿಯೇ ಕರಗ ನಡೆಯುತ್ತದೆ. ಬೆಂಗಳೂರಿನ ತಿಗಳರ ಪೇಟೆ (ನಗರ್ತ ಪೇಟೆ)ಯಲ್ಲಿ ದ್ರೌಪದಿ ಹಾಗೂ ಧರ್ಮರಾಯ ಸ್ವಾಮಿ ದೇಗುಲಗಳಿವೆ. ಸಾಮಾನ್ಯವಾಗಿ ವಹ್ನಿ ಕುಲ ಕ್ಷತ್ರಿಯರು ವಾಸ ಮಾಡುವ ಸ್ಥಳಗಳಲ್ಲಿ ಈ ಎರಡೂ ದೇವಾಲಯಗಳನ್ನು ಕಾಣಬಹುದು. ಕರಗ ಹಬ್ಬದ ಆಚರಣೆ ಹಿಂದೂ ಕ್ಯಾಲೆಂಡರ್ ಮೊದಲ ತಿಂಗಳ ಸಪ್ತಮಿಯಿಂದ ಆರಂಭವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತದೆ. ಆ 11 ದಿನಗಳಲ್ಲಿ, 3 ದಿನ ದ್ರೌಪದಿ ತಮ್ಮೊಡನೆ ಇರುತ್ತಾಳೆ ಎನ್ನುವುದು ತಿಗಳರ ನಂಬಿಕೆ.
ಕರಗ ಹಿನ್ನೆಲೆ ಏನು?
ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಚೆ ಬೀಳುತ್ತಾಳೆ. ಇದು ತಿಳಿಯದೆ ಪಾಂಡವರು ಮುಂದೆ ಸಾಗುತ್ತಾರೆ. ಎಚ್ಚರಗೊಂಡಾಗ ತಿಮಿರಾಸುರ ಎಂಬ ರಾಕ್ಷಸ ಎದುರಿಗೆ ನಿಂತಿರುತ್ತಾನೆ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ಯಜಮಾನರನ್ನು, ಹಣೆಯಿಂದ ಗಣಾಚಾರಿಗಳನ್ನು, ಕಿವಿಗಳಿಂದ ಗೌಡರನ್ನು, ಬಾಯಿಯಿಂದ ಗಂಟೆಪೂಜಾರಿಗಳನ್ನು ಮತ್ತು ಹೆಗಲಿನಿಂದ ವೀರಕುಮಾರರನ್ನು ಸೃಷ್ಟಿಸುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ತಿಮಿರಾಸುರನ ವಿರುದ್ದ ಹೋರಾಡಿ ಗೆಲ್ಲುತ್ತಾರೆ. ಈ ರೀತಿ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ, ಮತ್ತೆ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗುವುದು ಮಕ್ಕಳಿಗೆ ಆತಂಕ ಉಂಟು ಮಾಡುತ್ತದೆ. ಅವಳು ಹೋಗದಂತೆ ತಡೆಯಲು ಕೃಷ್ಣನ ಮೊರೆ ಹೋಗುತ್ತಾರೆ.
ಅದರಂತೆ ಮಕ್ಕಳು ತಾಯಿ ದ್ರೌಪದಿ ಬಳಿ ತೆರಳಿ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ಅಲಗುಸೇವೆ ಎನ್ನುತ್ತಾರೆ) ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗಬೇಡ ಎಂದು ಪ್ರಾರ್ಥಿಸಿದಾಗ ದ್ರೌಪದಿ ಪ್ರತಿ ವರ್ಷ ಮೂರು ದಿನ ಭೂಮಿಗೆ ಬಂದು ನಿಮ್ಮೊಂದಿಗೆ ಇರುವುದಾಗಿ ಮಾತು ಕೊಡುತ್ತಾಳೆ. ಆ ಮೂರು ದಿನಗಳಲ್ಲಿ ಕರಗ ಆಚರಣೆ ನಡೆಯುತ್ತದೆ.
ಮತ್ತೊಂದು ಐತಿಹ್ಯದ ಪ್ರಕಾರ ದ್ವಾಪರ ಯುಗದಲ್ಲಿ, ಸ್ವಯಂವರದಲ್ಲಿ ಅರ್ಜುನ ದ್ರೌಪದಿಯನ್ನು ಗೆಲ್ಲುತ್ತಾನೆ. ಕುಂತಿಯ ಅಭಿಲಾಷೆಯಂತೆ ಅರ್ಜುನ ಸೇರಿ ನಾಲ್ವರು ಪಾಂಡವರೂ ವಿವಾಹವಾಗುತ್ತಾರೆ. ಆಗ ದ್ರೌಪದಿ ಸಂತೋಷದಿಂದ ಕೈಯಲಿದ್ದ ಕಲಶವನ್ನು ಶಿರದಲ್ಲಿ ಧರಿಸುತ್ತಾಳೆ. ಅದೇ ಕರಗವಾಯಿತು ಎಂಬ ನಂಬಿಕೆಯೂ ಇದೆ.
ಕರಗ ಆಚರಣೆ ಹೇಗೆ?
ಕರಗವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸ್ತ್ರೀ ವೇಷವನ್ನು ಧರಿಸಿದ ಪುರುಷ ಪೂಜಾರಿ ಹೂಗಳಿಂದ ಅಲಂಕರಿಸಿದ ಪಿರಮಿಡ್ ಮಾದರಿಯ ಕಳಸವನ್ನು ತಲೆಯ ಮೇಲೆ ಹೊರುತ್ತಾರೆ. ಯಾವುದೇ ಕಾರಣಕ್ಕೂ ಕೈಗಳಿಂದ ಮುಟ್ಟುವುದಿಲ್ಲ. ಹೀಗೆ ರಾತ್ರಿಯಿಡೀ ಮೆರವಣಿಗೆ ನಡೆಸುವುದು ಕರಗದ ಅವಿಭಾಜ್ಯ ಅಂಗ. ಧರ್ಮರಾಯ ಸ್ವಾಮಿ ದೇವಸ್ಥಾನ ದಿಂದ ನಗರ್ತ ಪೇಟೆ, ಕಬ್ಬನ್ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಅರಳೆ ಪೇಟೆ, ಬಳೆಪೇಟೆ, ಕುಂಬಾರ ಪೇಟೆ, ಹಲಸೂರು ಮತ್ತು ಗೂಳರ ಪೇಟೆಯ ಮೂಲಕ ಮೆರವಣಿಗೆ ನಡೆಯುತ್ತದೆ.
ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕರಗದ ಪೂಜಾರಿ ಎ. ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿ ಕರಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು, ಆದರೂ ಕರಗದ ಪೂಜಾರಿ ಎ.ಜ್ಞಾನೇಂದ್ರ ಅವರು ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿ ಉತ್ಸವ ಮುಗಿಸಿ ಧರ್ಮರಾಯ ಸ್ವಾಮಿ ದೇವಾಲಯ ತಲುಪಿಸಿದ್ದರು. ಲಕ್ಷಾಂತರ ಜನರು ಕರಗದಲ್ಲಿ ಭಾಗವಹಿಸುತ್ತಾರೆ. ಜಾತಿ ಮತ ಧರ್ಮಗಳ ಹಂಗಿಲ್ಲದೆ ಸರ್ವ ಧರ್ಮಿಯರು ಉತ್ಸಾಹದಿಂದ ಭಾಗವಹಿಸುವುದು ಮತ್ತೊಂದು ವಿಶೇಷ.
(ವರದಿ: ಎಚ್. ಮಾರುತಿ)