ಬೆಂಗಳೂರಲ್ಲಿ ಬಿಸಿಲ ಧಗೆ, ಕರ್ತವ್ಯ ನಿರತ ಸಂಚಾರ ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಹಿರಿ ಜೀವ, ವಿಡಿಯೋ ವೈರಲ್
ಬೆಂಗಳೂರಲ್ಲಿ ಬಿಸಿಲ ಧಗೆಯ ನಡುವೆ ಕರ್ತವ್ಯ ನಿರತರಾಗಿರುವ ಸಂಚಾರ ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಹಿರಿ ಜೀವದ ವಿಡಿಯೋ ವೈರಲ್ ಆಗಿದೆ. ಸಂಚಾರ ಪೊಲೀಸರೊಬ್ಬರು ಅವರ ವಿಡಿಯೋ ಶೇರ್ ಮಾಡಿ, ಅವರ ಕಾರ್ಯಕ್ಕೆ ಸಲಾಂ ಎಂದು ಹೇಳಿದ್ದಾರೆ.
ಬೆಂಗಳೂರು: ವಯೋವೃದ್ಧರೊಬ್ಬರು ಟ್ರಾಫಿಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ನೀರು ವಿತರಿಸುವ ವಿಡಿಯೋ ಎಕ್ಸ್‌ನಲ್ಲಿ ಜನಮನ ಗೆದ್ದಿದೆ. ಸಂಚಾರ ಪೊಲೀಸರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅನೇಕರಿಂದ ಭಾವುಕ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಂಡಿದೆ.
ಹೃದ್ಯ ವಿಡಿಯೋ ಇದಾಗಿದ್ದು, ಸಂಚಾರ ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸಿದ ಅವರ ಗುಣ ಈ ವಿಡಿಯೋದಿಂದಾಗಿ ಅನೇಕರನ್ನು ಭಾವುಕರನ್ನಾಗಿಸಿದೆ. ಹಲವರು ಅದರಿಂದ ಪ್ರಭಾವಿತರಾದರು ಕೂಡ. ಈ ವಿಡಿಯೋವನ್ನು ಪೊಲೀಸ್ ಟ್ರಾಫಿಕ್ ವಾರ್ಡನ್ ಶ್ರೀರಾಮ್ ಬಿಷ್ಣೋಯ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಈ ಆಕ್ಟಿವಾ ಓಡಿಸುವ ಅಂಕಲ್ ಹೆಸರು ನನಗೆ ಗೊತ್ತಿಲ್ಲ. ಆದರೆ ಅವರ ಕೆಲಸ ನನಗೆ ಗೊತ್ತಾಗಿದೆ. ಕರ್ತವ್ಯದಲ್ಲಿರುವ ಸಂಚಾರ ಪೊಲೀಸ್ ಸಿಬ್ಬಂದಿಗೆ ಕುಡಿಯುವ ನೀರು ಒದಗಿಸುತ್ತ ಹೋಗುವುದು ಅವರ ದೈನಂದಿನ ಕರ್ತವ್ಯವಾಗಿದೆ. ನಾನು ಅವರಿಗೆ ನಿಜವಾಗಿಯೂ ನಮಸ್ಕರಿಸುತ್ತೇನೆ." ಎಂದು ಶ್ರೀರಾಮ್ ಬಿಷ್ಣೋಯ್ ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.
ಶ್ರೀರಾಮ್ ಬಿಷ್ಣೋಯ್ ಅವರ ಟ್ವೀಟ್ ಇಲ್ಲಿದೆ ನೋಡಿ
ವಿಡಿಯೋದಲ್ಲಿರುವ ದೃಶ್ಯದಲ್ಲಿ, ಆ ವಯೋವೃದ್ಧರು ತನ್ನ ಸ್ಕೂಟರ್ ಅನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚೀಲದಿಂದ ನೀರಿನ ಬಾಟಲಿಗಳನ್ನು ಹೊರತೆಗೆಯುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ನಂತರ ಅವರು ಈ ಬಾಟಲಿಗಳನ್ನು ಬೇಸಿಗೆಯ ಬಿಸಿಲಿನಲ್ಲಿ ಕೆಲಸ ಮಾಡುವ ಸಂಚಾರ ಪೊಲೀಸ್ ಕಾನ್ಸ್ಟೇಬಲ್‌ಗಳಿಗೆ ಹಸ್ತಾಂತರಿಸುತ್ತಾರೆ. ಕೇವಲ 14 ಸೆಕೆಂಡ್ ವಿಡಿಯೋ ಇದು.
ಈ ಪೋಸ್ಟ್ ಅನ್ನು ಶ್ರೀರಾಮ್ ಬಿಷ್ಣೋಯ್ ಮಾರ್ಚ್ 31 ರಂದು ಶೇರ್ ಮಾಡಿದ್ದಾರೆ. ಅಂದಿನಿಂದ ಇದು ಒಂದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ಪೋಸ್ಟ್ ಸುಮಾರು 1,500ಕ್ಕೂ ಹೆಚ್ಚು ಲೈಕ್ಸ್ ಹೊಂದಿದೆ. 240ಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಇದಕ್ಕೆ 200ಕ್ಕೂ ಹೆಚ್ಚು ಕಾಮೆಂಟ್‌ಗಳು ವ್ಯಕ್ತವಾಗಿದೆ.
ಜನರ ಪ್ರತಿಕ್ರಿಯೆ ಹೀಗಿತ್ತು
"ವಾವ್. ಅಂತಹ ಒಳ್ಳೆಯ ಜನರ ಕಾರಣದಿಂದಾಗಿ ಜಗತ್ತು ಇನ್ನೂ ಅಸ್ಥಿತ್ವದಲ್ಲಿದೆ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
“ವಾವ್. ಅಂತಹ ಉದಾತ್ತ ಕಾರ್ಯ. ವಾಸ್ತವವಾಗಿ, ಅಂತಹ ಸಣ್ಣ ವಿಷಯಗಳು ಬಹಳ ದೂರ ಹೋಗುತ್ತವೆ. ಸಾಧ್ಯವಾದಾಗಲೆಲ್ಲಾ ನಾನು ಅದನ್ನು ಮಾಡುತ್ತೇನೆ ಮತ್ತು ಇತರರನ್ನು ಸಹ ಅದನ್ನು ಮಾಡಲು ಪ್ರೋತ್ಸಾಹಿಸುತ್ತೇನೆ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ಸಣ್ಣ ಕೆಲಸಗಳನ್ನು ಸಹ ಮಾಡಲು ನಮಗೆ ಸಾಧ್ಯವಾಗದಿದ್ದರೆ ಮನುಷ್ಯರಾಗಿ ಜನಿಸುವುದರಿಂದ ಏನು ಪ್ರಯೋಜನ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
"ಇವರು ಮಾನವೀಯತೆಯ ರಕ್ಷಕರು, ಸಹಾನುಭೂತಿ, ಪ್ರೀತಿ ಮತ್ತು ಧೈರ್ಯವನ್ನು ಹೊಂದಿರುವ ನಿಜವಾದ ಭಾರತೀಯರು, ಮತ್ತು ಯಾವುದೇ ದುಷ್ಟರು ಅವರನ್ನು ತಡೆಯಲು ಸಾಧ್ಯವಿಲ್ಲ. ಜೈ ಹಿಂದ್!" ಎಂದು ಮಗದೊಬ್ಬರು ಪೋಸ್ಟ್ ಮಾಡಿದ್ದಾರೆ.
"ಇಂತಹ ಕೃತ್ಯಗಳು ಮಾನವೀಯತೆ ಇನ್ನೂ ಪ್ರಚಲಿತದಲ್ಲಿದೆ ಎಂಬುದನ್ನು ತೋರಿಸುತ್ತದೆ" ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
-=-----------------
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್‌ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಲೈಫ್‌ಸ್ಟೈಲ್ ವಿಭಾಗ ನೋಡಿ.