ಬೆಂಗಳೂರು ಅಪರಾಧ ಸುದ್ದಿ; ಸ್ನೇಹಿತನ ಪತ್ನಿಯ ಬ್ರೆಸ್ಟ್‌ ಕ್ಯಾನ್ಸರ್‌ ಚಿಕಿತ್ಸೆಗೆ ಹಣ ಬೇಕಾಗಿತ್ತು, ಕಳ್ಳತನಕ್ಕಿಳಿದ ಗೆಳೆಯ, ಮನಕಲಕುವ ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಸ್ನೇಹಿತನ ಪತ್ನಿಯ ಬ್ರೆಸ್ಟ್‌ ಕ್ಯಾನ್ಸರ್‌ ಚಿಕಿತ್ಸೆಗೆ ಹಣ ಬೇಕಾಗಿತ್ತು, ಕಳ್ಳತನಕ್ಕಿಳಿದ ಗೆಳೆಯ, ಮನಕಲಕುವ ಘಟನೆ

ಬೆಂಗಳೂರು ಅಪರಾಧ ಸುದ್ದಿ; ಸ್ನೇಹಿತನ ಪತ್ನಿಯ ಬ್ರೆಸ್ಟ್‌ ಕ್ಯಾನ್ಸರ್‌ ಚಿಕಿತ್ಸೆಗೆ ಹಣ ಬೇಕಾಗಿತ್ತು, ಕಳ್ಳತನಕ್ಕಿಳಿದ ಗೆಳೆಯ, ಮನಕಲಕುವ ಘಟನೆ

ಬೆಂಗಳೂರು ಅಪರಾಧ ಸುದ್ದಿ; ಸ್ನೇಹಿತನ ಪತ್ನಿಯ ಚಿಕಿತ್ಸೆಗಾಗಿ ಕಳ್ಳತನಕ್ಕಿಳಿದ ಗೆಳೆಯ, ಮನಕಲಕುವ ಘಟನೆ ವರದಿಯಾಗಿದೆ. ಅಶೋಕ ನಗರದ ಆರ್ಬರ್‌ ಬ್ರೀವಿಂಗ್‌ ಪಬ್‌ ನಲ್ಲಿ ಗ್ರಾಹಕರ ಮೇಲೆ ಹಲ್ಲೆ ನಡೆಸಿದ ಬೌನ್ಸರ್‌ಗಳನ್ನು ಪೊಲೀಸರು ಕೊನೆಗೂ ಬಂಧಿಸಿದರು. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ಸ್ನೇಹಿತನ ಪತ್ನಿಯ ಚಿಕಿತ್ಸೆಗಾಗಿ ಹಣ ಬೇಕಾಗಿತ್ತು, ಕಳ್ಳತನಕ್ಕಿಳಿದ ಗೆಳೆಯ, ಮನಕಲಕುವ ಘಟನೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; ಸ್ನೇಹಿತನ ಪತ್ನಿಯ ಚಿಕಿತ್ಸೆಗಾಗಿ ಹಣ ಬೇಕಾಗಿತ್ತು, ಕಳ್ಳತನಕ್ಕಿಳಿದ ಗೆಳೆಯ, ಮನಕಲಕುವ ಘಟನೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಸ್ನೇಹಿತರಿಗಾಗಿ ಅವರ ಕುಟುಂಬಕ್ಕಾಗಿ ಶಕ್ತಿ ಮೀರಿ ಸಹಾಯ ಮಾಡುವುದು ಹೊಸದೇನಲ್ಲ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸ್ನೇಹಕ್ಕೆ ಅಂತಹ ಗಟ್ಟಿ ಬಾಂಧವ್ಯವಿರುತ್ತದೆ. ಒಂದೆರಡು ವರ್ಷಗಳ ಹಿಂದೆ ರಾಜ್ಯದ ಉತ್ತರ ಕರ್ನಾಟಕದಲ್ಲಿ ತನ್ನ ಸ್ನೇಹಿತನ ಶಸ್ತ್ರ ಚಿಕಿತ್ಸೆಗಾಗಿ ಜಮೀನನ್ನು ಮಾರಿದ ಸ್ನೇಹಿತರೊಬ್ಬರ ಸುದ್ದಿಯನ್ನು ಓದಿದ್ದು ಹಚ್ಚ ಹಸಿರಾಗಿದೆ. ಆದರೆ ಇಲ್ಲೊಂದು ವಿಲಕ್ಷಣ ಘಟನೆ ನಡೆದಿದೆ.

ಸ್ನೇಹಿತನ ಪತ್ನಿಯ ಬ್ರೆಸ್ಟ್‌ ಕ್ಯಾನ್ಸರ್‌ ಚಿಕಿತ್ಸೆಗಾಗಿ ಕಳ್ಳತನ ಮಾಡಿರುವ ಮತ್ತೊಬ್ಬ ಸ್ನೇಹಿತನ ಕತೆ ಇದು. ದ್ವಿಚಕ್ರ ವಾಹನಗಳ ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಬೆಂಗಳೂರಿನ ಗಿರಿನಗರದ ಪೊಲೀಸರಿಗೆ ಕಳ್ಳತನದ ಹಿಂದಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತನ್ನ ಸ್ನೇಹಿತನ ಪತ್ನಿಯ ಚಿಕಿತ್ಸೆಗಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಸರಘಟ್ಟದ ನಿವಾಸಿ 30 ವರ್ಷದ ಅಶೋಕ್‌ ಮತ್ತು ಆತನ ಸಹಚರ ಸತೀಶ್‌ ಆಲಿಯಾಸ್ ಸತ್ಯ ಎಂಬುವರನ್ನು ಪೊಲೀಸರು ಬಂಧಿಸಿ ಅವರಿಂದ 11 ಲಕ್ಷ ರೂ. ಬೆಲೆ ಬಾಳುವ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಗಿರಿನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾಫ್ಟ್‌ ವೇರ್‌ ಇಂಜಿನಿಯರ್‌ ವೊಬ್ಬರು ತಮ್ಮ ಮನೆ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿದೆ ಎಂದು ದೂರು ನೀಡಿದ್ದರು. ಅವರ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ಅಶೋಕ್‌ ಪತ್ನಿಯಿಂದ ದೂರವಾಗಿದ್ದು, ತನ್ನ ಸ್ನೇಹಿತನ ಮನೆಯಲ್ಲೇ ವಾಸವಾಗಿದ್ದ. ಆಗ ಸ್ನೇಹಿತನ ಪತ್ನಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಆದರೆ ಪತ್ನಿಗೆ ಚಿಕಿತ್ಸೆ ಕೊಡಿಸುವ ಸಾಮರ್ಥ್ಯ ಸ್ನೇಹಿತನಿಗೆ ಇರಲಿಲ್ಲ. ಹಣಕ್ಕಾಗಿ ಅಶೋಕ್‌ ಹಲವು ಕಡೆ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಶೋಕ್ ತನ್ನ ಸ್ನೇಹಿತನ ಜತೆ ಸೇರಿ ಬೈಕ್‌ ಗಳ ಹ್ಯಾಂಡಲ್‌ಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದರು. ನಂತರ ಆ ವಾಹನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆ ಮೂಲಕ ಗಳಿಸಿದ ಹಣವನ್ನು ಪತ್ನಿಯ ಚಿಕಿತ್ಸೆಗೆ ಸ್ನೇಹಿತನಿಗೆ ಕೊಡಲು ನಿರ್ಧರಿಸಿದ್ದರು. ಈ ಆರೋಪಿಗಳ ಬಂಧನದಿಂದ ಇನ್ನೂ 8 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಹಕರ ಮೇಲೆ ಹಲ್ಲೆ ನಡೆಸಿದ ಬೌನ್ಸರ್‌ಗಳು

ಅಶೋಕ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಆರ್ಬರ್‌ ಬ್ರೀವಿಂಗ್‌ ಪಬ್‌ ನಲ್ಲಿ ತಡರಾತ್ರಿ ನಡದ ಗಲಾಟೆಯಲ್ಲಿ ಗ್ರಾಹಕರ ಮೇಲೆ ಹಲ್ಲೆ ನಡೆಸಿದ ನಾಲ್ವರು ಬೌನ್ಸರ್‌ಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೌನ್ಸರ್ ಗಳಾದ ಕೆ.ಶ್ರೀನಿವಾಸ್‌, ಅಲೆಕ್ಸಾಂಡರ್‌ ವಾಹನ ಚಾಲಕ ರಘು ಮತ್ತು ಭದ್ರತಾ ಸಿಬ್ಬಂದಿ ಸಂತೋಷ್‌ ಎಂಬುವರನ್ನು ಬಂಧಿಸಲಾಗಿದೆ. ಇವರಿಂದ ಹಲ್ಲೆಗೊಳಗಾದ ದೆಹಲಿಯ ಖಾಸಿಸ್‌ ರಸ್ತೋಗಿ ಮತ್ತು ಇಮಾಂಶು ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರೂ ಸ್ನೇಹಿತರು ಆರ್ಬರ್‌ ಪಬ್‌ ಗೆ ಹೋಗಿದ್ದರು. ತಡರಾತ್ರಿ ಮನೆಗೆ ಹೊರಡಲು ಪಾರ್ಕಿಂಗ್‌ ಸ್ಥಳದಲ್ಲಿ ಮಾತನಾಡುತ್ತಾ ನಿಂತಿದ್ದರು. ಅಲ್ಲಿಗೆ ಆಗಮಿಸಿದ ಬೌನ್ಸರ್‌ ಗಳು ಇವರೊಂದಿಗೆ ಜಗಳ ತೆಗೆದಿದ್ದಾರೆ. ಆಗ ಬೌನ್ಸರ್‌ ಗಳು ಕಬ್ಬಿಣದ ರಾಡ್‌ ಮತ್ತು ಹೆಲ್ಮೆಟ್‌ ನಿಂದ ಹೊಡೆದಿದ್ದಾರೆ. ಈ ಘಟನೆಯನ್ನು ಚಿತ್ರೀಕರಿಸಿಕೊಂಡ ವೈದ್ಯೆಯೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ವಿಡಿಯೋವನ್ನು ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಿದ್ದರಿಂದ ಅವರ ಸೂಚನೆಯಂತೆ ಆಸ್ಪತ್ರೆಗೆ ತೆರಳಿ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner