ಬೆಂಗಳೂರಿನಿಂದ ಪಾಟ್ನಾಗೆ ಹೊರಟ ವಿಮಾನ, ದಾರಿ ಮಧ್ಯೆ ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು, ಕಾರಣ ಇದು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಿಂದ ಪಾಟ್ನಾಗೆ ಹೊರಟ ವಿಮಾನ, ದಾರಿ ಮಧ್ಯೆ ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು, ಕಾರಣ ಇದು

ಬೆಂಗಳೂರಿನಿಂದ ಪಾಟ್ನಾಗೆ ಹೊರಟ ವಿಮಾನ, ದಾರಿ ಮಧ್ಯೆ ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು, ಕಾರಣ ಇದು

Emergency Landing; ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಟ್ನಾಗೆ ಹೊರಟ ಇಂಡಿಗೋ ವಿಮಾನ ನಿನ್ನೆ (ಆಗಸ್ಟ್ 23) ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಅದಕ್ಕೆ ಕಾರಣ ಇದುವೇ ನೋಡಿ.

ಬೆಂಗಳೂರು- ಪಾಟ್ನಾ ಇಂಡಿಗೋ ವಿಮಾನ ಮಹಾರಾಷ್ಟ್ರದ ನಾಗಪುರದಲ್ಲಿ ನಿನ್ನೆ (ಆಗಸ್ಟ್ 23) ತುರ್ತುಭೂಸ್ಪರ್ಶ ಮಾಡಿತು.
ಬೆಂಗಳೂರು- ಪಾಟ್ನಾ ಇಂಡಿಗೋ ವಿಮಾನ ಮಹಾರಾಷ್ಟ್ರದ ನಾಗಪುರದಲ್ಲಿ ನಿನ್ನೆ (ಆಗಸ್ಟ್ 23) ತುರ್ತುಭೂಸ್ಪರ್ಶ ಮಾಡಿತು. (AFP File Photo)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಬಿಹಾರದ ಪಾಟ್ನಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ನಾಗಪುರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ಹಾರಾಟದ ವೇಳೆ ಪ್ರಯಾಣಿಕರೊಬ್ಬರಿಗೆ ತೀವ್ರ ಅನಾರೋಗ್ಯ ಕಾಡಿದ ಕಾರಣ ವಿಮಾನವನ್ನು ನಾಗಪುರದ ಕಡೆಗೆ ತಿರುಗಿಸಬೇಕಾಯಿತು ಎಂದು ಪಿಟಿಐ ವರದಿ ಮಾಡಿದೆ.

ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತೀವ್ರ ನಡುಕ ಅನುಭವಿಸಿದ್ದಲ್ಲದೆ, ಪ್ರಜ್ಞಾಹೀನರಾಗಿ, ಶರೀರ ಬಿಗಿಯಾದಂತೆ ತೋರಿದ್ದರು. ಇದರಿಂದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿ ಅನಾರೋಗ್ಯ ಎದುರಿಸಿದ ಪ್ರಯಾಣಿಕರನ್ನು ಕೂಡಲೇ ತುರ್ತು ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ವರದಿ ವಿವರಿಸಿದೆ.

ನಾಗಪುರದಲ್ಲಿ ಏನಾಯಿತು

ಬೆಂಗಳೂರಿನಿಂದ ಪಾಟ್ನಾಕ್ಕೆ ಹೊರಟ ಇಂಡಿಗೋ ವಿಮಾನ ಮಹಾರಾಷ್ಟ್ರದಲ್ಲಿರುವ ನಾಗಪುರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಕೂಡಲೇ, ಅನಾರೋಗ್ಯಕ್ಕೆ ಒಳಗಾದ ಪ್ರಯಾಣಿಕನನ್ನು ಅಲ್ಲಿನ ಕಿಮ್ಸ್ ಕಿಂಗ್ಸ್‌ ವೇ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಕಿಮ್ಸ್ ಕಿಂಗ್ಸ್ ವೇ ಆಸ್ಪತ್ರೆಯ ಪ್ರತಿನಿಧಿ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ವೈದ್ಯಕೀಯ ತಪಾಸಣೆಯಲ್ಲಿ ಅವರು ಅಸ್ವಸ್ಥರಾಗಿರುವುದು ಕಂಡುಬಂದಿದೆ. ನಿಖರ ತಪಾಸಣೆ ಮಾಡಿ ಬಳಿಕ ಅವರ ಆರೋಗ್ಯ ಪರಿಸ್ಥಿತಿಯನ್ನು ವಿವರಿಸಬಹುದು ಎಂದು ಹೇಳಿದ್ದಾಗಿ ಪಿಟಿಐ ವರದಿ ಹೇಳಿದೆ.

ಅಧಿಕೃತ ಹೇಳಿಕೆ ನೀಡಿಲ್ಲ ಇಂಡಿಗೋ

ವೈದ್ಯಕೀಯ ತುರ್ತುಸ್ಥಿತಿ ಎದುರಾದ ಕೂಡಲೇ ಇಂಡಿಗೋ ವಿಮಾನ ಸಿಬ್ಬಂದಿ ತುರ್ತು ನಿರ್ಧಾರ ತೆಗೆದುಕೊಂಡು ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದರಲ್ಲದೆ, ಪ್ರಯಾಣಿಕನಿಗೆ ತುರ್ತು ಆರೈಕೆಯನ್ನು ಖಚಿತಪಡಿಸಿಕೊಂಡರು.

ಈ ಘಟನೆ ಕುರಿತು ಮತ್ತು ಚಿಕಿತ್ಸೆ ಪಡೆದ ಪ್ರಯಾಣಿಕನ ಕುರಿತಾದ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇಂಡಿಗೋ ವಿಮಾನ ಯಾನ ಕಂಪನಿ ಈ ಕುರಿತು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ನಾಗಪುರದಲ್ಲಿ ಪ್ರಯಾಣಿಕರನ್ನು ತುರ್ತು ಚಿಕಿತ್ಸೆಗಾಗಿ ಇಳಿಸಿ, ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ ಬಳಿಕ ಇಂಡಿಗೋ ವಿಮಾನ ಬಿಹಾರದ ಪಾಟ್ನಾಗೆ ಪ್ರಯಾಣ ಮುಂದಿವರಿಸಿತು ಎಂದು ವರದಿ ವಿವರಿಸಿದೆ.

Whats_app_banner