ಕನ್ನಡ ಸುದ್ದಿ  /  ಕರ್ನಾಟಕ  /  ಸಿಎಸ್‌ಆರ್ ಫಂಡ್‌ ವಂಚನೆ; 31 ಕೋಟಿ ರೂ ನಕಲಿ ನೋಟುಗಳು ಬೆಂಗಳೂರು ಪೊಲೀಸ್ ವಶಕ್ಕೆ, 5 ಆರೋಪಿಗಳ ಬಂಧನ

ಸಿಎಸ್‌ಆರ್ ಫಂಡ್‌ ವಂಚನೆ; 31 ಕೋಟಿ ರೂ ನಕಲಿ ನೋಟುಗಳು ಬೆಂಗಳೂರು ಪೊಲೀಸ್ ವಶಕ್ಕೆ, 5 ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ಸಿಎಸ್‌ಆರ್‌ ಫಂಡ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ 31 ಕೋಟಿ ರೂ ನಕಲಿ ನೋಟುಗಳು ಬೆಂಗಳೂರು ಪೊಲೀಸ್ ವಶಕ್ಕೆ ಬಂದಿದ್ದು, 5 ಆರೋಪಿಗಳ ಬಂಧನವಾಗಿದೆ. ಸಿಎಸ್‌ಆರ್ ಫಂಡ್‌ ಹೆಸರಲ್ಲಿ ನಡೆಸುತ್ತಿದ್ದ ವಂಚನೆಯ ಮಾದರಿ ಬೆಳಕಿಗೆ ಬಂದಿದ್ದು, ಇದರ ವಿವರ ಇಲ್ಲಿದೆ.(ವರದಿ - ಎಚ್. ಮಾರುತಿ, ಬೆಂಗಳೂರು)

ಸಿಎಸ್‌ಆರ್ ಫಂಡ್‌ ವಂಚನೆ; ಬೆಂಗಳೂರು ಪೊಲೀಸರು 31 ಕೋಟಿ ರೂ ನಕಲಿ ನೋಟುಗಳನ್ನು ವಶಕ್ಕೆ ತೆಗೆದುಕೊಂಡಿದ್ದು, 5 ಆರೋಪಿಗಳ ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)
ಸಿಎಸ್‌ಆರ್ ಫಂಡ್‌ ವಂಚನೆ; ಬೆಂಗಳೂರು ಪೊಲೀಸರು 31 ಕೋಟಿ ರೂ ನಕಲಿ ನೋಟುಗಳನ್ನು ವಶಕ್ಕೆ ತೆಗೆದುಕೊಂಡಿದ್ದು, 5 ಆರೋಪಿಗಳ ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ತಮ್ಮ ಬಳಿ 100 ಕೋಟಿ ಕಪ್ಪು ಹಣ ಇದೆ ಎಂದು ನಂಬಿಸಿ, ನಕಲಿ ನೋಟುಗಳನ್ನು ತೋರಿಸಿ ವಂಚನೆ ಎಸಗುತ್ತಿದ್ದ ಐದು ಮಂದಿ ವಂಚಕರ ತಂಡವನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿ ಅವರಿಂದ 30.91 ಕೋಟಿ ರೂ.ಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಕೋಟಿ ರೂಪಾಯಿ ಸಿಎಸ್ಆರ್ ಫಂಡ್‌ಗೆ 40 ಲಕ್ಷ ರೂಪಾಯಿ ನಗದು ಹಣ ಕೊಡಬೇಕು ಎಂದು ಇವರು ವಿವಿಧ ಟ್ರಸ್ಟ್ ಗಳನ್ನು ನಂಬಿಸುತ್ತಿದ್ದರು. ಬಂಧಿತ ಆರೋಪಿಗಳನ್ನು ಬಸವನಗುಡಿಯ ಸುಧೀರ್, ದಾಸರಹಳ್ಳಿಯ ಕಿಶೋರ್, ಆಂಧ್ರಪ್ರದೇಶ ಮೂಲದ ಚಂದ್ರಶೇಖರ್, ತೀರ್ಥ ರಿಷಿ ಅಲಿಯಾಸ್ ಗಿರೀಶ ಮತ್ತು ವಿಜಯನಗರದ ವಿನಯ್ ಎಂದು ಗುರುತಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಸಿಎಸ್‌ಆರ್ ಫಂಡ್‌ ವಂಚನೆ; ವಂಚನೆಯ ಮಾದರಿ ಹೀಗಿದೆ -

ಈ ವಂಚಕರು ದೊಡ್ಡ ದೊಡ್ಡ ಕಂಪನಿಗಳಿಂದ ಸಿಎಸ್ಆರ್ ಫಂಡ್ ಕೊಡಿಸುವುದಾಗಿ ಖಾಸಗಿ ಟ್ರಸ್ಟ್ ಗಳನ್ನು ಓಲೈಸುತ್ತಿದ್ದರು. ಐದು ಮಂದಿಯಲ್ಲಿ ಒಬ್ಬಾತ ಖಾಸಗಿ ಟ್ರಸ್ಟ್ ನ ಮುಖಂಡರನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸಗಳಿಸುತ್ತಾನೆ. ಅದಾಗಿ ಅವರನ್ನು ಭೇಟಿ ಮಾಡಿ, ಪರಿಚಿತ ಕಂಪನಿಯ ಮಾಲೀಕರ ಬಳಿ ಕಾನೂನು ಬದ್ದ ಹಣವಿದೆ. ಆ ಕಂಪನಿಯವರು ಅಧಿಕೃತವಾಗಿ ಟ್ರಸ್ಟ್, ಇನ್ನಿತರ ಸಂಸ್ಥೆಗಳಿಗೆ ಯಾವುದೇ ಲಾಭ ಬಯಸದೇ ಹಣವನ್ನು ವರ್ಗಾಯಿಸಲು ಸಿದ್ದವಿರುವುದಾಗಿ ಹೇಳುತ್ತಾರೆ. ಆದರೆ, ಪ್ರತಿಯಾಗಿ ಆ ಟ್ರಸ್ಟ್ ಅಥವಾ ಸಂಸ್ಥೆ ಹಣ ನೀಡಿದ ಕಂಪನಿಯ ಮಾಲೀಕರಿಗೆ ಶೇಕಡ 40 ಹಣ ನಗದು ರೂಪದಲ್ಲಿ ನೀಡಬೇಕು ಎಂದು ಹೇಳಿ ನಂಬಿಸುತ್ತಾರೆ. ಕಂಪನಿಯ ಮಾಲೀಕರನ್ನು ಭೇಟಿ ಮಾಡಿಸಬೇಕು ಎಂದಾದರೆ, ಶೇಕಡ 10 ಕಮಿಷನ್ ಹಣ ತಮಗೆ ನೀಡಬೇಕು ಎಂದು ಷರತ್ತು ವಿಧಿಸುತ್ತಾರೆ. ಕಂಪನಿಯ ಮುಖ್ಯಸ್ಥನ ಬಳಿ ಲಭ್ಯವಿರುವ ಕಪ್ಪು ಹಣವನ್ನು ವಿಡಿಯೋ ಕಾಲ್ ಮುಖಾಂತರ ತೋರಿಸಲು 25 ಲಕ್ಷ ಹಣವನ್ನು ಮುಂಗಡವಾಗಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.

ಅದರಂತೆ ಟ್ರಸ್ಟ್ ವೊಂದರ ಮುಖ್ಯಸ್ಥರೊಬ್ಬರನ್ನು ನಿಗದಿತ ಸ್ಥಳಕ್ಕೆ ಕರೆಯಿಸಿಕೊಂಡು ವಿಡಿಯೋ ಕಾಲ್ ಮುಖಾಂತರ ತಮ್ಮ ಬಳಿ ಇರುವ ಹಣದ ರಾಶಿಯನ್ನು ತೋರಿಸಿದ್ದಾನೆ. ವಿಡಿಯೋ ಕಾಲ್ ಮಾಡಿದ ವ್ಯಕ್ತಿಯ ಬಗ್ಗೆ ಸಂದೇಹ ಪಟ್ಟು ಈ ಗ್ಯಾಂಗ್ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಈ ಜಾಲದ ಹಿಂದೆ ಐದು ಮಂದಿ ಇರುವುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪೊಲೀಸರು ತೋಡಿದ ಖೆಡ್ಡಾಗೆ 5 ಮಂದಿ ಬಿದ್ದಿದ್ದಾರೆ.

31 ಕೋಟಿ ರೂ ನಕಲಿ ನೋಟುಗಳು ಪೊಲೀಸ್ ವಶಕ್ಕೆ

ನಂತರ ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಿ ಅವರ ವಶದಲ್ಲಿದ್ದ ಒಟ್ಟು 30,91,60,000 ರೂ.ಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 500 ರೂಪಾಯಿ ಮುಖಬೆಲೆಯ 1900 ಬಂಡಲ್‌ಗಳು, 200 ಮುಖಬೆಲೆಯ 1070 ಬಂಡಲ್‌ಗಳು ಹಾಗೂ 2000 ರೂಪಾಯಿ ಮುಖಬೆಲೆಯ 80 ನೋಟುಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದರು. ಅವರ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಸಿದರು. ಆಗ ಒಬ್ಬ ಆರೋಪಿಯ ಮನೆ ಮತ್ತು ಕಚೇರಿಯಲ್ಲಿ ಒಟ್ಟು 23,49,800 ರೂಪಾಯಿ ಅಸಲಿ ನೋಟುಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸಿದಾಗ, ಅಸಲಿ ನೋಟುಗಳು ಸಾರ್ವಜನಿಕರಿಂದ ಮೋಸ ಮಾಡಿ ಸಂಗ್ರಹಿಸಿರುವುದು ಎಂದು ತಿಳಿದುಬಂದಿದೆ.

ಈ ಆರೋಪಿಗಳು ಇದೇ ರೀತಿ ಸಾರ್ವಜನಿಕರಿಗೆ ಮೋಸ ಮಾಡಿರುವುದು ಖಚಿತವಾಗಿದ್ದು, ಈ ಕುರಿತು ಮಾಹಿತಿ ಲಭ್ಯವಾಗಿದೆ. ಮೋಸ ಹೋಗಿರುವ ಸಾರ್ವಜನಿಕರು ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಪೊಲೀಸರು ಕೋರಿದ್ದಾರೆ. ಈ ಗ್ಯಾಂಗ್ ಈ ಹಿಂದೆ ಗ್ಯಾಂಬ್ಲಿಂಗ್, ಹವಾಲಾ, ರೈಸ್ ಪುಲ್ಲಿಂಗ್ ಮುಂತಾದ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ - ಎಚ್. ಮಾರುತಿ, ಬೆಂಗಳೂರು)

IPL_Entry_Point