ಕನ್ನಡ ಸುದ್ದಿ  /  Karnataka  /  Bengaluru News Bengaluru Water Crisis Bwssb Released 4 App To Control Water Crisis In Bengaluru Details

ಬೆಂಗಳೂರಿಗರಿಗೆ ಗುಡ್‌ನ್ಯೂಸ್‌, ನೀರಿನ ಬಿಕ್ಕಟ್ಟು ಪರಿಹರಿಸಲು 4 ಆ್ಯಪ್‌ ಬಿಡುಗಡೆ ಮಾಡಿದ ನಿಗಮ; ಇದರ ಕಾರ್ಯವೈಖರಿ ಹೀಗಿದೆ

ಬೆಂಗಳೂರು ನಿವಾಸಿಗಳ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಬಿಡಬ್ಲ್ಯೂಎಸ್ಎಸ್‌ಬಿ ಈ ನಾಲ್ಕು ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. ಜಲಮಿತ್ರ, ಜಲಸ್ನೇಹಿ, ಅಂತರ್ಜಲ ಮತ್ತು ಜಲ ಸಂರಕ್ಷಕ ಎಂಬ ಆ್ಯಪ್‌ಗಳು ಬಿಡುಗಡೆಯಾಗಿದ್ದು, ಇದರ ಕಾರ್ಯವೈಖರಿ ತಿಳಿಯಿರಿ. (ವರದಿ: ಪ್ರಿಯಾಂಕ ಗೌಡ)

ಬೆಂಗಳೂರಿಗರಿಗೆ ಗುಡ್‌ನ್ಯೂಸ್‌, ನೀರಿನ ಬಿಕ್ಕಟ್ಟು ಪರಿಹರಿಸಲು 4 ಆ್ಯಪ್‌ ಬಿಡುಗಡೆ ಮಾಡಿದ ನಿಗಮ
ಬೆಂಗಳೂರಿಗರಿಗೆ ಗುಡ್‌ನ್ಯೂಸ್‌, ನೀರಿನ ಬಿಕ್ಕಟ್ಟು ಪರಿಹರಿಸಲು 4 ಆ್ಯಪ್‌ ಬಿಡುಗಡೆ ಮಾಡಿದ ನಿಗಮ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಜನತೆ ಅಕ್ಷರಶಃ ತತ್ತರಿಸಿದ್ದಾರೆ. ಹೀಗಾಗಿ ನಗರದಲ್ಲಿ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ)ಯು ನಾಲ್ಕು ಆ್ಯಪ್‌ಗಳನ್ನು ಬಿಡುಗಡೆ ಮಾಡಿವೆ. ಜಲಮಿತ್ರ, ಜಲಸ್ನೇಹಿ, ಅಂತರ್ಜಲ ಮತ್ತು ಜಲ ಸಂರಕ್ಷಕ ಎಂಬ ಹೆಸರಿನ ಆ್ಯಪ್‌ಗಳು ಬಿಡುಗಡೆ ಆಗಿವೆ.

ಬೆಂಗಳೂರು ನಿವಾಸಿಗಳ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಬಿಡಬ್ಲ್ಯೂಎಸ್ಎಸ್‌ಬಿ ಈ ನಾಲ್ಕು ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. ಜಲಮಿತ್ರ ಆ್ಯಪ್‌ ಅಡಿಯಲ್ಲಿ, ನೀರಿನ ಸೋರಿಕೆ ತಡೆಗಟ್ಟುವುದು ಮತ್ತು ನೀರಿನ ಸಂರಕ್ಷಣೆಗೆ ಸ್ವಯಂಸೇವಕರಾಗಲು ಸಿದ್ಧರಿರುವ ನಾಗರಿಕರು, ನಿವೃತ್ತ ತಾಂತ್ರಿಕ ಸಿಬ್ಬಂದಿ ಮತ್ತು ಎನ್‌ಜಿಒಗಳು ಇದರಡಿಯಲ್ಲಿ ಸೇವೆ ಮಾಡಬಹುದು ಎಂದು ಮನಿ ಕಂಟ್ರೋಲ್ ವರದಿ ತಿಳಿಸಿದೆ. ಇದರ ಪ್ರಯೋಜನಗಳು ಏನೇನು? ಇಲ್ಲಿದೆ ಮಾಹಿತಿ..

ಆಪ್‌ಗಳ ಕಾರ್ಯವೈಖರಿ ಹೀಗಿದೆ

ಜಲಮಿತ್ರವು ಸರ್ಕಾರಿ, ಅರೆ-ಸರ್ಕಾರಿ ಅಥವಾ ಖಾಸಗಿ ವಲಯದ ವ್ಯಕ್ತಿಗಳಿಗೆ ತೆರೆದಿರುವ ಸ್ವಯಂಪ್ರೇರಿತ ಸೇವೆಯಾಗಿದೆ. ನೀರಿನ ಸೋರಿಕೆ ಮತ್ತು ನೀರು ಸಂರಕ್ಷಣೆಗೆ ಮುಂದಾಗುವವರು ತಿಂಗಳಿಗೆ ನಾಲ್ಕು ದಿನಗಳನ್ನು ಈ ಸೇವೆಗೆ ಮೀಸಲಿಡಬೇಕಾಗುತ್ತದೆ. ಆಸಕ್ತ ಅರ್ಜಿದಾರರು ಬಿಡಬ್ಲ್ಯೂಎಸ್ಎಸ್‌ಬಿ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಲಸ್ನೇಹಿ ಅಡಿಯಲ್ಲಿ ನಾಗರಿಕರು ಮನೆ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಗಳನ್ನು ಒಳಗೊಂಡಂತೆ ಕುಡಿಯದ ಉದ್ದೇಶಗಳಿಗಾಗಿ ಆನ್‌ಲೈನ್‌ನಲ್ಲಿ ಸಂಸ್ಕರಿಸಿದ ನೀರನ್ನು ಬುಕ್ ಮಾಡಬಹುದು.

ಬೋರ್‌ವೆಲ್ ಅನುಮತಿಗಾಗಿ ಅರ್ಜಿ ಸಲ್ಲಿಸಲು ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯಲು ಅಂತರ್ಜಲ ಆ್ಯಪ್‌ ನಾಗರಿಕರಿಗೆ ಅವಕಾಶ ನೀಡುತ್ತದೆ. ನೀರು ಬಿಕ್ಕಟ್ಟಿನ ಬಳಿಕ ನಗರದಲ್ಲಿ ಬೋರ್‌ವೆಲ್‌ ಕೊರೆಸಲು ಅನುಮತಿ ಪಡೆಯಬೇಕು ಎಂದು ಬಿಡಬ್ಲ್ಯೂಎಸ್ಎಸ್‌ಬಿ ಆದೇಶಿಸಿತ್ತು. ಹೀಗಾಗಿ ಅಂತರ್ಜಲ ಆ್ಯಪ್‌ ಅನ್ನು ಪ್ರಾರಂಭಿಸಲಾಗಿದೆ. ನಾಗರಿಕರು ಕುಡಿಯುವ ಅಥವಾ ಗೃಹಬಳಕೆ ಉದ್ದೇಶಗಳಿಗಾಗಿ ಬಾವಿಗಳು ಅಥವಾ ಬೋರ್‌ವೆಲ್‌ಗಳನ್ನು ಕೊರೆಯಲು ಅರ್ಜಿಗಳನ್ನು ಸಲ್ಲಿಸಬಹುದು. ತಾಂತ್ರಿಕ ಸಮಿತಿಯು ಅರ್ಜಿಯನ್ನು ಪರಿಶೀಲಿಸುತ್ತದೆ ಎಂದು ತಿಳಿಸಲಾಗಿದೆ.

ಜಲ ಸಂರಕ್ಷಕ ಆ್ಯಪ್‌ ಬಳಸಿ, ಕುಡಿಯುವ ನೀರನ್ನು ಅನಿವಾರ್ಯವಲ್ಲದ ಉದ್ದೇಶಗಳಿಗೆ ಬಳಸುವ ಮೂಲಕ ನೀರನ್ನು ದುರ್ಬಳಕೆ ಮಾಡುವವರಿಗೆ ದಂಡ ವಿಧಿಸಲಾಗುವುದು. ಈ ಮೂಲಕ ತಪ್ಪಿತಸ್ಥರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ ಎಂದು ಬಿಡಬ್ಲ್ಯೂಎಸ್ಎಸ್ ಬಿ ಅಧ್ಯಕ್ಷ ಡಾ.ವಿ. ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ.

ಅಂದಹಾಗೆ, ನಗರದಲ್ಲಿ ತೀವ್ರ ನೀರಿನ ಕೊರತೆ ಉಂಟಾಗಿರುವುದರಿಂದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಅಗತ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿದೆ. ಮಾರ್ಚ್ 7ರ ಬಿಡಬ್ಲ್ಯೂಎಸ್ಎಸ್‌ಬಿ ಆದೇಶದ ಪ್ರಕಾರ, ವಾಹನಗಳನ್ನು ಸ್ವಚ್ಛಗೊಳಿಸುವುದು, ತೋಟಗಾರಿಕೆ, ಕಾರಂಜಿ, ಕಟ್ಟಡ ಮತ್ತು ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಂತಹ ಚಟುವಟಿಕೆಗಳು ಕುಡಿಯುವ ನೀರನ್ನು ಬಳಸಬಾರದು ಎಂದು ಸೂಚಿಸಿದೆ.

ಮಾಲ್‌ಗಳು ಮತ್ತು ಚಿತ್ರಮಂದಿರಗಳು ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಅನುಮತಿಸಲಾಗಿದೆ. ಒಂದು ವೇಳೆ ಬಿಡಬ್ಲ್ಯೂಎಸ್ಎಸ್‌ಬಿ ಮಾಡಿರುವ ಈ ಆದೇಶವನ್ನು ಉಲ್ಲಂಘಿಸಿದರೆ, ಅಂಥವರಿಗೆ 5,000 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಮತ್ತೆ ಆದೇಶ ಉಲ್ಲಂಘಿಸಿದರೆ, 500 ರೂ. ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ, ಜನರು ಸಹಾಯವಾಣಿ ಸಂಖ್ಯೆ 1916 ಅನ್ನು ಸಂಪರ್ಕಿಸಬಹುದು.

ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಚ್ 14ರಂದು ವಿಧಾನಸೌಧದಲ್ಲಿ ‘ನೀರು ಉಳಿಸಿ ಬೆಂಗಳೂರು ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿದರು. ಇದು ನೀರಿನ ಸಂರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಾದ್ಯಂತ ಎಂಟು ಸರಳ ಮಾರ್ಗಗಳನ್ನು ಜಲಮಂಡಳಿ ಪಟ್ಟಿ ಮಾಡಿದೆ. ಅಲ್ಲದೆ, ನಗರದಾದ್ಯಂತ ನೀರಿನ ಸಂರಕ್ಷಣೆ ಸಂದೇಶ ಹೊತ್ತು ಇ-ರಿಕ್ಷಾ ವಾಹನಗಳು ಚಲಿಸಲಿವೆ.

ಬೆಂಗಳೂರು ಈ ವರ್ಷ ಮಳೆ ಕೊರತೆ ಎದುರಿಸುತ್ತಿದ್ದು, 13,900 ಕೊಳವೆಬಾವಿಗಳಲ್ಲಿ 6,900 ಬತ್ತಿ ಹೋಗಿವೆ. ಆದ್ದರಿಂದ ನೀರಿನ ವಿವೇಕಯುತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.