ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿನ ಸಂಸ್ಕರಿತ ನೀರು ಪೂರೈಕೆಗೆ ಟ್ಯಾಂಕರ್‌ಗಳೇ ಸಿಗುತ್ತಿಲ್ಲ, ಜನರ ಸಮಸ್ಯೆ ಆಲಿಸುವವರೂ ಇಲ್ಲ; ಏನಿದು ಕಥೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿನ ಸಂಸ್ಕರಿತ ನೀರು ಪೂರೈಕೆಗೆ ಟ್ಯಾಂಕರ್‌ಗಳೇ ಸಿಗುತ್ತಿಲ್ಲ, ಜನರ ಸಮಸ್ಯೆ ಆಲಿಸುವವರೂ ಇಲ್ಲ; ಏನಿದು ಕಥೆ

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿನ ಸಂಸ್ಕರಿತ ನೀರು ಪೂರೈಕೆಗೆ ಟ್ಯಾಂಕರ್‌ಗಳೇ ಸಿಗುತ್ತಿಲ್ಲ, ಜನರ ಸಮಸ್ಯೆ ಆಲಿಸುವವರೂ ಇಲ್ಲ; ಏನಿದು ಕಥೆ

ಅನ್ಯ ಉದ್ದೇಶಗಳಿಗೆ ಬಳಸಲು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸಂಸ್ಕರಿತ ನೀರು ಲಭ್ಯವಿದೆ. ಆದರೆ ಇದನ್ನು ಪೂರೈಕೆ ಮಾಡಲು ಟ್ಯಾಂಕರ್‌ಗಳೇ ಸಿಗುತ್ತಿಲ್ಲ. ಸರ್ಕಾರ, ವಿಪಕ್ಷ ಹಾಗೂ ಬಿಬಿಎಂಪಿಗೆ ಇತ್ತ ಗಮನ ಕೊಡಲು ಪುರುಸೊತ್ತು ಇಲ್ಲ. ಹಾಗಾದ್ರೆ ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಯಾರಲ್ಲಿ ಹೇಳಿಕೊಳ್ಳಬೇಕು? (ವರದಿ: ಎಚ್.ಮಾರುತಿ)

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿನ ಸಂಸ್ಕರಿತ ನೀರು ಪೂರೈಕೆಗೆ ಟ್ಯಾಂಕರ್‌ಗಳೇ ಸಿಗುತ್ತಿಲ್ಲ, ಜನರ ಸಮಸ್ಯೆ ಆಲಿಸುವವರೂ ಇಲ್ಲ; ಏನಿದು ಕಥೆ
ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿನ ಸಂಸ್ಕರಿತ ನೀರು ಪೂರೈಕೆಗೆ ಟ್ಯಾಂಕರ್‌ಗಳೇ ಸಿಗುತ್ತಿಲ್ಲ, ಜನರ ಸಮಸ್ಯೆ ಆಲಿಸುವವರೂ ಇಲ್ಲ; ಏನಿದು ಕಥೆ

ಬೆಂಗಳೂರು: ನೀರಿನ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚುವರಿಯಾಗಿ ಉಳಿಯುವ ಸಂಸ್ಕರಿತ ನೀರನ್ನು ಮಾರಾಟ ಮಾಡಲು 15 ದಿನಗಳ ಹಿಂದೆಯೇ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಅನೇಕ ಅಪಾರ್ಟ್‌ಮೆಂಟ್‌ಗಳು ಕಾರ್ಯೋನ್ಮುಖವಾಗಿವೆ. ಪ್ರತಿ ಟ್ಯಾಂಕರ್ 100-125 ರೂ ಗಳಂತೆ ಸಂಸ್ಕರಿತ ನೀರನ್ನು ಮಾರಾಟ ಮಾಡುತ್ತಿವೆ. ಆದರೆ ಟ್ಯಾಂಕರ್‌ಗಳು ಸಿಗದೆ ಅನೇಕ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳು ಪರದಾಡುತ್ತಿವೆ.

ಬಹುತೇಕ ಎಲ್ಲ ನೀರಿನ ಟ್ಯಾಂಕರ್‌ಗಳೂ ಕುಡಿಯುವ ನೀರನ್ನು ಸರಬರಾಜು ಮಾಡಲು ಬಳಕೆಯಾಗುತ್ತಿವೆ. ಕಳೆದ ಮೂರು ತಿಂಗಳಿಂದ ಇದೊಂದು ಯಶಸ್ವಿ ಉದ್ಯಮವೂ ಹೌದು. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ಮಾರ್ಗವೂ ಆಗಿದೆ. ಮತ್ತೊಂದು ಸಮಸ್ಯೆ ಎಂದರೆ ಸಂಸ್ಕರಿತ ನೀರನ್ನು ಮಾರಾಟ ಮಾಡುವ ಟ್ಯಾಂಕರ್‌ಗಳು ಕುಡಿಯುವ ನೀರನ್ನು ಸರಬರಾಜು ಮಾಡುವಂತಿಲ್ಲ. ಏಕೆಂದರೆ ಕುಡಿಯುವ ನೀರು ಕಲುಷಿತಗೊಳ್ಳುತ್ತದೆ.

ಬನ್ನೇರುಘಟ್ಟ ರಸ್ತೆಯ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘವೊಂದರ ಪದಾಧಿಕಾರಿಯೊಬ್ಬರು ʼನಾವು ಸಂಸ್ಕರಿತ ನೀರನ್ನು ಪ್ರತಿ ಟ್ಯಾಂಕರ್‌ಗೆ 125 ರೂಗಳಂತೆ ಮಾರಾಟ ಮಾಡುತ್ತಿದ್ದೇವೆ. ಆದರೆ ಆ ನೀರನ್ನು ಸರಬರಾಜು ಮಾಡಲು ಗ್ರಾಹಕರೇ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕುʼ ಎನ್ನುತ್ತಾರೆ. ಪ್ರತಿದಿನ 9 ಲಕ್ಷ ಲೀಟರ್ ಸಂಸ್ಕರಿತ ನೀರು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 5 ಲಕ್ಷ ಲೀಟರ್ ನೀರನ್ನು ನಮ್ಮ ಆಂತರಿಕ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತಿದ್ದೇವೆ. ಆದರೆ ಟ್ಯಾಂಕರ್‌ಗಳ ಕೊರತೆ ಇದೆ ಎಂದು ಅವರು ಹೇಳುತ್ತಾರೆ. ಇದು ಇವರೊಬ್ಬರ ಅನುಭವ ಮಾತ್ರವಲ್ಲ. ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳು ಇದೇ ಅಭಿಪ್ರಾಯವನ್ನು ಅನುಮೋದಿಸುತ್ತವೆ.

ಸಂಸ್ಕರಿತ ನೀರನ್ನು ಸರಬರಾಜು ಮಾಡುವ ಟ್ಯಾಂಕರ್‌ಗಳು ಕುಡಿಯುವ ನೀರನ್ನು ಸರಬರಾಜು ಮಾಡುವಂತಿಲ್ಲ. ಎರಡನೆಯದಾಗಿ ಸಂಸ್ಕರಿತ ನೀರಿನ ಟ್ಯಾಂಕರ್‌ಗಳಿಗೆ ಪಿಂಕ್ ಬಣ್ಣವನ್ನು ಬಳಿಯಲಾಗಿರುತ್ತದೆ. ಈ ಸಮಸ್ಯೆಯನ್ನು ಬೆಂಗಳೂರು ನೀರು ಸರಬರಾಜು ಮತು ಒಳಚರಂಡಿ ಮಂಡಳಿ ಅಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದು ಹೇಳುತ್ತಾರೆ.

ಸಿಲಿಕಾನ್‌ ಸಿಟಿಯಲ್ಲಿ ಟ್ಯಾಂಕರ್‌ಗಳ ಕೊರತೆ

ಬೆಂಗಳೂರಿನಲ್ಲಿ ಟ್ಯಾಂಕರ್‌ಗಳ ಕೊರತೆ ಉಂಟಾಗಿದೆ. ಇಡೀ ಬೆಂಗಳೂರಿನಲ್ಲಿ 3,900 ಟ್ಯಾಂಕರ್‌ಗಳು ಮಾತ್ರ ಇದ್ದು, ಬಹುತೇಕ ಟ್ಯಾಂಕರ್‌ಗಳು ಕುಡಿಯುವ ನೀರಿನ ಸರಬರಾಜಿಗೆ ಆದ್ಯತೆ ನೀಡುತ್ತಿವೆ. ಬೇರೆ ಬೇರೆ ಜಿಲ್ಲೆಗಳಿಂದ ಟ್ಯಾಂಕರ್‌ಗಳನ್ನು ತರಿಸಿಕೊಂಡರೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ. ಹಾಲು ಒಕ್ಕೂಟ ಕೆಎಂಎಫ್‌ನ ಹಾಲು ಸರಬರಾಜು ಮಾಡುವ ಟ್ಯಾಂಕರ್‌ಗಳನ್ನು ಬಳಸಿಕೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ ಇದುವರೆಗೂ ಬೆಂಗಳೂರಿನಲ್ಲಿ ನೀರು ಸಾಗಿಸುತ್ತಿರುವ ಕೆಎಂಎಫ್ ಟ್ಯಾಂಕರ್‌ಗಳು ರಸ್ತೆಯಲ್ಲಿ ಸಂಚಾರ ನಡೆಸಿದ್ದನ್ನು ಯಾರೂ ಕಂಡಿಲ್ಲ.

ಬೆಂಗಳೂರಿನ ಜವಾಬ್ದಾರಿ ಹೊತ್ತಿರುವ ಉಪ ಮುಖ್ಯಮಂತ್ರಿಗಳು ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಅವರಿಗೆ ಪುರುಸೊತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಚುನಾವಣಾ ಕೆಲಸದಲ್ಲಿ ನಿರತರಾಗಿದ್ದಾರೆ.

ಬೆಂಗಳೂರು ಜಲಮಂಡಳಿ ಮಾತ್ರ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿದೆ. ಇನ್ನು ನಗರದ 28 ಶಾಸಕರು ಲೋಕಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮತ್ತು ಪ್ರತಿಪಕ್ಷದ ಅಭ್ಯರ್ಥಿಗಳಿಗೆ ನೀರು ಕುಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಪಕ್ಷಗಳು ಈ ಸಮಸ್ಯೆಯನ್ನು ಗಂಭೀರ ಎಂದು ಪರಿಗಣಿಸಿಲ್ಲ. ಸಾರ್ವಜನಿಕರು ಮಾತ್ರ ತಮ್ಮ ಸಮಸ್ಯೆಯನ್ನು ಯಾರಲ್ಲಿ ಹೇಳಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ.

Whats_app_banner