ಕನ್ನಡ ಸುದ್ದಿ  /  Karnataka  /  Bengaluru News Bengaluru Water Crisis Water Tanker Prices Surge Nearly <Span Class='webrupee'>₹</span>3000 Scarcity Worsens In Karnataka Capital Uks

ಬೆಂಗಳೂರು ನೀರು ಸಮಸ್ಯೆ; ರಾಜಧಾನಿ ಜಲ ಬವಣೆ, 3000 ರೂಪಾಯಿ ಆಸುಪಾಸಲ್ಲಿದೆ ಟ್ಯಾಂಕರ್ ನೀರು ದರ

ಬೆಂಗಳೂರು ನೀರು ಸಮಸ್ಯೆ: ಕರ್ನಾಟಕದ ರಾಜಧಾನಿ ಜಲ ಬವಣೆ ತೀವ್ರಗೊಂಡಿದ್ದು, ಟ್ಯಾಂಕರ್ ನೀರು ದರ 3000 ರೂಪಾಯಿ ಆಸುಪಾಸಲ್ಲಿದೆ. ಇತ್ತೀಚಿನ ಸಮೀಕ್ಷೆಯ ಪ್ರಾಥಮಿಕ ಫಲಿತಾಂಶಗಳ ಪ್ರಕಾರ, ಹೊರ ವರ್ತುಲ ರಸ್ತೆಯ ಆಚೆಗಿನ ಪ್ರದೇಶಗಳಲ್ಲಿ ನೀರಿನ ಕೊರತೆ ಹೆಚ್ಚಿದೆ. ಅದೇ ರೀತಿ 2007ರಲ್ಲಿ ಸೇರ್ಪಡೆಯಾದ 110 ಗ್ರಾಮಗಳ ಪರಿಸ್ಥಿತಿ ಏನು ಇಲ್ಲಿದೆ ಒಂದು ನೋಟ.

ಬಿಬಿಎಂಪಿ (ಎಡಚಿತ್ರ), ನೀರಿನ ಟ್ಯಾಂಕರ್‌ಗಳು (ಬಲಚಿತ್ರ). ಬೆಂಗಳೂರು ನೀರು ಸಮಸ್ಯೆ ತೀವ್ರಗೊಂಡಿದ್ದು, ಕರ್ನಾಟಕದ ರಾಜಧಾನಿ ಜಲ ಬವಣೆ ಹೆಚ್ಚಾಗಿದೆ. ಟ್ಯಾಂಕರ್ ನೀರು ದರ ಏರಿಕೆಯಾಗಿತ್ತಿರುವುದು ಜನರ ಕಳವಳವನ್ನು ಹೆಚ್ಚಿಸಿದೆ.
ಬಿಬಿಎಂಪಿ (ಎಡಚಿತ್ರ), ನೀರಿನ ಟ್ಯಾಂಕರ್‌ಗಳು (ಬಲಚಿತ್ರ). ಬೆಂಗಳೂರು ನೀರು ಸಮಸ್ಯೆ ತೀವ್ರಗೊಂಡಿದ್ದು, ಕರ್ನಾಟಕದ ರಾಜಧಾನಿ ಜಲ ಬವಣೆ ಹೆಚ್ಚಾಗಿದೆ. ಟ್ಯಾಂಕರ್ ನೀರು ದರ ಏರಿಕೆಯಾಗಿತ್ತಿರುವುದು ಜನರ ಕಳವಳವನ್ನು ಹೆಚ್ಚಿಸಿದೆ.

ಬೆಂಗಳೂರು: ಕರ್ನಾಟಕದ ರಾಜಧಾನಿಯ ನೀರು ಬಿಕ್ಕಟ್ಟು (ಬೆಂಗಳೂರು ಜಲ ಬಿಕ್ಕಟ್ಟು) ದಿನೇದಿನೆ ಹೆಚ್ಚಾಗುತ್ತಿದ್ದು, ಕಳೆದ ಕೆಲವು ವಾರಗಳಿಂದ ಏರುತ್ತಿದ್ದ ಟ್ಯಾಂಕರ್ ನೀರು ದರ ಈಗ 3,000 ರೂಪಾಯಿ ಆಸುಪಾಸಿಗೆ ತಲುಪಿದೆ. ಈಗಿನ್ನೂ ಫೆಬ್ರವರಿ ತಿಂಗಳು ಮುಗಿದಿಲ್ಲವಾದ್ದರಿಂದ ಇದು ಟ್ಯಾಂಕರ್ ನೀರು ದರ ಹೊಸ ಎತ್ತರಕ್ಕೆ ಏರಬಹುದೇನೋ ಎಂಬುದು ಬೆಂಗಳೂರಿಗರ ಕಳವಳ.

ಬೆಂಗಳೂರು ಅಪಾರ್ಟ್‌ಮೆಂಟ್ಸ್‌ ಫೆಡರೇಷನ್‌ ನಡೆಸಿದ ಸಮೀಕ್ಷೆ ಪ್ರಕಾರ, ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಅಂತರ್ಜಲ ಮಟ್ಟ ಕುಸಿದಿದೆಯೋ ಅಲ್ಲಿ, 1,000 ಲೀಟರ್ ನೀರಿನ ದರ ಈಗಾಗಲೇ 238 ರೂಪಾಯಿ ದಾಟಿದೆ. ಇದರ ಅರ್ಥ ಇಷ್ಟೆ- 12,000 ಲೀಟರ್ ಸಾಮರ್ಥ್ಯದ ಟ್ಯಾಂಕರ್‌ನ ದರ ಈ ಹಿಂದೆ 1,500 ರೂಪಾಯಿ ಇದ್ದುದು ಈಗ ಹೆಚ್ಚು ಕಡಿಮೆ 2,850 ರೂಪಾಯಿ ತಲುಪಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಟ್ಯಾಂಕರ್ ನೀರು ಅವಲಂಬಿಸಿವೆ ಹೊರ ವರ್ತುಲ ರಸ್ತೆಗೆ ಹೊಂದಿಕೊಂಡ ಪ್ರದೇಶ, 110 ಗ್ರಾಮಗಳು

ಸಿಟಿ ಡೇಟಾ ಮತ್ತು ಸಿಟಿಜನ್ ಮ್ಯಾಟರ್ಸ್‌ಗಾಗಿ ಸಿವಿಕ್ ಟೆಕ್ ಪ್ಲಾಟ್‌ಫಾರ್ಮ್ ಓಪೆನ್ ಸಿಟಿ ಡಾಟ್‌ ಇನ್ (opencity.in) ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯ ಪ್ರಾಥಮಿಕ ಫಲಿತಾಂಶಗಳ ಪ್ರಕಾರ, ಹೊರ ವರ್ತುಲ ರಸ್ತೆಯ ಆಚೆಗಿನ ಪ್ರದೇಶಗಳಲ್ಲಿ ನೀರಿನ ಕೊರತೆ ಹೆಚ್ಚು ಪರಿಣಾಮ ಬೀರಿವೆ. 2007ರಲ್ಲಿ ನಗರಕ್ಕೆ ಸೇರ್ಪಡೆಗೊಂಡ 110 ಗ್ರಾಮಗಳ ಬಹುತೇಕ ಮನೆಗಳಿಗೆ ಇನ್ನೂ ಕಾವೇರಿ ನೀರಿನ ಸಂಪರ್ಕ ಸಿಕ್ಕಿಲ್ಲ. ಹೀಗಾಗಿ ಇಲ್ಲಿ ನೀರಿನ ಟ್ಯಾಂಕರ್‌ಗಳನ್ನೇ ಎಲ್ಲರೂ ನಂಬಿದ್ದಾರೆ.

ಸಮೀಕ್ಷೆಯ ಫಲಿತಾಂಶದ ಪ್ರಕಾರ, ನಗರದಾದ್ಯಂತ ಟ್ಯಾಂಕರ್ ನೀರು ದರ ಸರಾಸರಿ 1000 ಲೀಟರ್‌ 131 ರೂಪಾಯಿ. ಇನ್ನು ಕನಿಷ್ಠ ದರ ಗಮನಿಸಿದರೆ, ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ 1000 ಲೀಟರ್‌ಗೆ 100 ರೂಪಾಯಿ. ಆರ್‌ಆರ್ ನಗರ ಮತ್ತು ಪಕ್ಕದ ಪ್ರದೇಶಗಳಲ್ಲಿ 1000 ಲೀಟರ್‌ಗೆ 238 ರೂಪಾಯಿ ಇದೆ.

ಹೆಚ್ಚುತ್ತಿರುವ ವೆಚ್ಚಗಳು ಜನರ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿವೆ. ಬೋರ್‌ವೆಲ್ ಬತ್ತಿರುವ ಕಾರಣ, ಟ್ಯಾಂಕರ್ ನೀರು ಅವಲಂಬಿಸಿಕೊಂಡು ತಿಂಗಳಿಗೆ ಕನಿಷ್ಠ 5,000 ರೂಪಾಯಿ ನೀರಿಗೆ ಖರ್ಚು ಮಾಡುವಂತೆ ಆಗಿದೆ ಎಂದು ನಿವಾಸಿಗಳು ಹೇಳಿದ್ದಾಗಿ ವರದಿ ವಿವರಿಸಿದೆ.

ವಸತಿ ಸಂಕೀರ್ಣಗಳಿಗೆ ಟ್ಯಾಂಕರ್ ನೀರು ಮಾತ್ರವೇ ಆಧಾರ

ನೀರಿನ ಟ್ಯಾಂಕರ್‌ಗಳ ಮೇಲೆ ಹೆಚ್ಚಿನ ಅವಲಂಬನೆಯಿಂದಾಗಿ ಅಪಾರ್ಟ್‌ಮೆಂಟ್ ಸಂಕೀರ್ಣಗಳು ಹೆಚ್ಚು ನಷ್ಟಕ್ಕೆ ಒಳಗಾಗಿವೆ. ಅನೇಕ ಅಪಾರ್ಟ್‌ಮೆಂಟ್ ಸಂಕೀರ್ಣಗಳು ತಮ್ಮ ನೀರಿನ ಅಗತ್ಯವನ್ನು ಭಾಗಶಃ ಬಿಡಬ್ಲ್ಯುಎಸ್‌ಎಸ್‌ಬಿ ಒದಗಿಸುವ ಕಾವೇರಿ ನೀರು ಸರಬರಾಜಿನಿಂದ ಮತ್ತು ಭಾಗಶಃ ಬೋರ್‌ವೆಲ್‌ಗಳಿಂದ ನಿರ್ವಹಿಸುತ್ತವೆ. ಆದರೆ, ಹೊರವಲಯದ ವಸತಿ ಸಂಕೀರ್ಣಗಳವರು ಸಂಪೂರ್ಣವಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದಾರೆ. ಅವು ವಿಫಲವಾದಾಗ ಟ್ಯಾಂಕರ್‌ಗಳನ್ನು ಅವಲಂಬಿಸುತ್ತಾರೆ. ನೀರಿನ ಟ್ಯಾಂಕರ್‌ಗಳ ಲಭ್ಯತೆಯೇ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಹೆಚ್ಚಿನ ಚಿಂತೆ ಉಂಟುಮಾಡುವಂಥದ್ದು ಎಂದು ವರದಿ ಹೇಳಿದೆ.

ಪ್ರಸ್ತುತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸುಮಾರು 60 ಸರ್ಕಾರಿ ಟ್ಯಾಂಕರ್‌ಗಳನ್ನು ಹೊಂದಿದ್ದು, 60 ಬಾಡಿಗೆ ಟ್ಯಾಂಕರ್‌ಗಳ ಮೂಲಕ ನೀರಿನ ಕೊರತೆಯಿರುವ ಪ್ರದೇಶಗಳಿಗೆ ನೀರು ಸರಬರಾಜು ಮಾಡುತ್ತಿದೆ. ನೀರಿನ ಕೊರತೆ ಇದ್ದಾಗ, ಆ ಪ್ರದೇಶಗಳ ಜನರು ಬಿಡಬ್ಲ್ಯುಎಸ್‌ಎಸ್‌ಬಿಯ ಸಹಾಯವಾಣಿ 1916ಕ್ಕೆ ಕರೆ ಮಾಡಬಹುದು ಎಂದು ಮಂಡಳಿ ಮೂಲಗಳು ತಿಳಿಸಿವೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point