Bengaluru Crime: ಹಿಂಬದಿಯಿಂದ ಬಂದು ತಬ್ಬಿದ ಅಪರಿಚಿತ; ಲೈಂಗಿಕ ಕಿರುಕುಳದ ಘಟನೆ ವಿವರಿಸಿದ ಬೆಂಗಳೂರು ಮಹಿಳೆ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಹಿಂಬದಿಯಿಂದ ಬಂದು ತಬ್ಬಿದ ಅಪರಿಚಿತ; ಲೈಂಗಿಕ ಕಿರುಕುಳದ ಘಟನೆ ವಿವರಿಸಿದ ಬೆಂಗಳೂರು ಮಹಿಳೆ

Bengaluru Crime: ಹಿಂಬದಿಯಿಂದ ಬಂದು ತಬ್ಬಿದ ಅಪರಿಚಿತ; ಲೈಂಗಿಕ ಕಿರುಕುಳದ ಘಟನೆ ವಿವರಿಸಿದ ಬೆಂಗಳೂರು ಮಹಿಳೆ

ಬೆಂಗಳೂರಲ್ಲಿ ರಾತ್ರಿ ಹೊರಗಿನಿಂದ ಬಂದು ಮನೆಯ ಗೇಟ್ ತೆರೆದು ಒಳಗೆ ಪ್ರವೇಶಿಸುತ್ತಿದ್ದಾಗ ಅಪರಿಚಿತನೊಬ್ಬ ಹಿಂದಿನಿಂದ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ ಕೆಟ್ಟ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕಾನೂನು ಸಮರದ ಅಡ್ಡಿ ಆತಂಕಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. (ವರದಿ- ಪ್ರಿಯಾಂಕಾ, ಬೆಂಗಳೂರು)

ಹಿಂಬದಿಯಿಂದ ಬಂದು ತಬ್ಬಿದ ಆಗಂತುಕನ ಲೈಂಗಿಕ ಕಿರುಕುಳದ ಘಟನೆ ವಿವರಿಸಿದ ಬೆಂಗಳೂರು ಮಹಿಳೆ. (ಸಾಂಕೇತಿಕ ಚಿತ್ರ)
ಹಿಂಬದಿಯಿಂದ ಬಂದು ತಬ್ಬಿದ ಆಗಂತುಕನ ಲೈಂಗಿಕ ಕಿರುಕುಳದ ಘಟನೆ ವಿವರಿಸಿದ ಬೆಂಗಳೂರು ಮಹಿಳೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ದೌರ್ಜನ್ಯಗಳಾದಾಗ ಪೊಲೀಸ್ ದೂರು ದಾಖಲಿಸಿದರೆ ಅದರಿಂದ ಮುಂದಾಗುವ ಪರಿಣಾಮಗಳ ಭೀತಿಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ಅದರ ವಿವರಗಳನ್ನು ಶೇರ್ ಮಾಡುವವರು ಹಲವರು. ಜಾಗೃತಿಗಾಗಿ ಈ ರೀತಿ ಮಾಡುತ್ತಿರುವುದಾಗಿ ಹೇಳುತ್ತಾರೆ. ಇಂಥದ್ದೇ ಒಂದು ಎಕ್ಸ್‌ಪೋಸ್ಟ್‌ ಈಗ ಎಲ್ಲರ ಗಮನಸೆಳೆದಿದೆ. ಮಹಿಳೆಯೊಬ್ಬರು ತಮಗಾದ ಲೈಂಗಿಕ ಕಿರುಕುಳದ ವಿವರವನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಮಹಿಳೆ ಒಂದು ವಿಡಿಯೋವನ್ನು ಶೇರ್ ಮಾಡಿದ್ದು, ಅದರಲ್ಲಿ ಒಬ್ಬ ಕೈಯಲ್ಲಿ ಹೆಲ್ಮೆಟ್ ತೂಗಿಕೊಂಡು ಮುಖಮುಚ್ಚಿಕೊಂಡು ಅಂಗಾಲಾಚುವ ದೃಶ್ಯವಿದೆ. ಆತನ ಮುಖವನ್ನು ವಿಡಿಯೋಗೆ ತೋರಿಸುವ ಪ್ರಯತ್ನ ಕಂಡಿದೆ. ಆತ ತನ್ನಿಂದ ತಪ್ಪಾಗಿದೆ.. ಬಿಟ್ಟುಬಿಡಿ ಎಂದು ಬೇಡಿಕೊಳ್ಳುವ ದೃಶ್ಯವಿದೆ.

ಈ ವಿಡಿಯೋ ಜೊತೆಗೆ ನಿನ್ನೆ ಸರಣಿ ಟ್ವೀಟ್ ಮಾಡಿರುವ ಮಹಿಳೆ, ಅದರಲ್ಲಿ ಘಟನೆಯ ವಿವರ ನೀಡಿದ್ದಾರೆ. ಆ ವ್ಯಕ್ತಿಯನ್ನು ಪೊಲೀಸರು ಕರೆದೊಯ್ದು ಬಳಿಕ, ದೂರು ನೀಡದೇ ಇರುವ ಕಾರಣ ಬಿಟ್ಟುಕಳುಹಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

1) ಮೊದಲು 3 ಟ್ವೀಟ್‌ಗಳಲ್ಲಿ ಘಟನೆಯ ವಿವರ ಇದೆ

ನಮ್ಮ ಬೆಂಗಳೂರಲ್ಲಿ ಕಳೆದ ರಾತ್ರಿ ನನ್ನ ಸ್ನೇಹಿತನೊಬ್ಬ ನನ್ಮ ಮನೆಯ ಎದುರು ಬಿಟ್ಟು ಹೋದ. ನನ್ನ ಮನೆಯ ಗೇಟ್ ತೆರೆಯುತ್ತಿದ್ದಾಗ ಆ ವ್ಯಕ್ತಿ ಹಿಂಬದಿಯಿಂದ ಬಂದು ತಬ್ಬಿಕೊಂಡ. ಬಳಿಕ ಓಡಿ ಹೋದ. ಕೂಡಲೇ ನನ್ನ ಸ್ನೇಹಿತನಿಗೆ ಕರೆ ಮಾಡಿ ಘಟನೆ ವಿವರಿಸಿದೆ. ಕೂಡಲೇ ಆತ ಬಂದು ಆ ವ್ಯಕ್ತಿಯನ್ನು ಬೆನ್ನಟ್ಟಿ ಹಿಡಿದ.

ಇದರ ಜೊತೆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ ತನ್ನ ಕೆಲಸವನ್ನು ಒಪ್ಪಿಕೊಂಡಿದ್ದಾನೆ. ಸ್ನೇಹಿತ ಬಂದು ಆತನನ್ನು ಹಿಡಿಯದೇ ಇರುತ್ತಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ನಾವು ಬೆಂಗಳೂರು ಪೊಲೀಸರಿಗೆ ಕರೆ ಮಾಡಿದೆವು. ಅವರು ಆತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಹೋದರು.

ನಾನು ಎಫ್‌ಐಆರ್ ದಾಖಲಿಸಲು ಹೋಗದ ಕಾರಣ ಆ ವ್ಯಕ್ತಿಯನ್ನು ದುರದೃಷ್ಟವಶಾತ್ ಬಿಟ್ಟುಕಳುಹಿಸಿದರು. ನಮ್ಮ ಕಾನೂನುಗಳು ಅಂಥವರನ್ನು ರಕ್ಷಿಸುವಂತೆ ಇದೆ. ಒಂದೊಮ್ಮೆ ನಾವೇನಾದರೂ ಆತ್ಮರಕ್ಷಣೆ ಕಾರ್ಯಕ್ಕೆ ಮುಂದಾಗಿದ್ದರೆ ಅದರ ಶಿಕ್ಷೆ ನಾವು ಅನುಭವಿಸಬೇಕು. ಎಂಥಾ ಅವಮಾನ ಅಲ್ವೆ?

2) ಎಫ್‌ಐಆರ್‌ ಯಾಕೆ ದಾಖಲಿಸುತ್ತಿಲ್ಲ ಎಂದರೆ…

ನ್ಯಾಯಾಲಯದ ಸರಣಿ ವಿಚಾರಣೆಗಳು ಮತ್ತು ಆ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಎಲ್ಲವೂ ಮಾನಸಿಕವಾಗಿ ಕಿರುಕುಳ ನೀಡುತ್ತದೆ ಎಂದು ನನ್ನ ನೆರೆಹೊರೆಯ ಜನರು ನನಗೆ ಸಹಾಯ ಮಾಡಲು ಸ್ಥಳಕ್ಕೆ ಆಗಮಿಸಿದವರು ತಿಳಿಸಿದರು. ಹೀಗಾಗಿ, ಮುಂದೆ ಎದುರಾಗುವ ಎಲ್ಲ ತೊಂದರೆಗಳನ್ನು ಮುಂದಾಗಿಯೇ ಮನಗಂಡು ನಾನು ಎಫ್‌ಐಆರ್ ದಾಖಲಿಸಲು ಸಾಧ್ಯವಾಗುತ್ತಿಲ್ಲ.

ಆತನನ್ನು ಮುಕ್ತಗೊಳಿಸಿರುವುದು ದುರದೃಷ್ಟಕರ. ಆತ ಕುಡಿದಿರಲಿಲ್ಲ. ಮುಗ್ದನೂ ಅಲ್ಲ. ಆತನ ಕೃತ್ಯದ ಅರಿವು ಆತನಿಗೆ ಸ್ಪಷ್ಟವಾಗಿ ಇತ್ತು. ನನ್ನ ಮೇಲೆರಗುವುದಕ್ಕೆ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ. ಆ ನಪುಂಸಕ “ಪುರುಷ” ನಾಗಿ ಇರುವ ಆ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಆ ಮಹಿಳೆ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

3) ಆ ವ್ಯಕ್ತಿಯನ್ನು ಯಾಕೆ ಬಿಟ್ಟೆ, ನಮ್ಮ ಬೆಂಗಳೂರು ಮಹಿಳೆಯರಿಗೆಷ್ಟು ಸುರಕ್ಷಿತ?

ನಾನು ಆ ವ್ಯಕ್ತಿಯನ್ನು ಏಕೆ ಬಿಟ್ಟೆ ಎಂದು ಕೇಳುವ ಎಲ್ಲರಿಗೂ? ನಾನು ಹೇಳುವುದಿಷ್ಟೆ. ನಾನು ಬಿಡಲಿಲ್ಲ. ನಾನು ಆ ವ್ಯಕ್ತಿ ವಿರುದ್ಧ ದೂರು ನೀಡಿದ್ದೇನೆ. ಆ ವ್ಯಕ್ತಿ ಪೊಲೀಸರ ಎದುರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಪೋಸ್ಟ್ ಮಾಡುವುದರ ಹಿಂದಿನ ಕಾರಣವೆಂದರೆ ಜಾಗೃತಿಯನ್ನು ಹರಡುವುದು ಮತ್ತು ಸಂವಿಧಾನದಲ್ಲಿ ಲೋಪದೋಷಗಳಿವೆ. ಆ ಲೋಪ ದೋಷಗಳು ಆತನನ್ನು ಬಚಾವ್ ಮಾಡುತ್ತದೆ ಎಂದು ಆ ಮಹಿಳೆ ಹೇಳಿಕೊಂಡಿದ್ದು, ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ನಮ್ಮ ಬೆಂಗಳೂರು ಮತ್ತು ಭಾರತದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದು ಸದ್ಯದ ಪ್ರಶ್ನೆ. ಇಂತಹ ಪ್ರಕರಣಗಳಲ್ಲಿ ಮಹಿಳೆಯರ ರಕ್ಷಣೆಗೆ ಸಂವಿಧಾನದಲ್ಲಿ ಏಕೆ ತಿದ್ದುಪಡಿ ಮಾಡಿಲ್ಲ? ಆ ವ್ಯಕ್ತಿ ಬಿಡುಗಡೆಯಾದ ನಂತರ ನನ್ನ ಸುರಕ್ಷತೆಯನ್ನು ಯಾರು ಖಚಿತಪಡಿಸುತ್ತಾರೆ? ಇಂತಹವರಿಂದ ಮಹಿಳೆಯರನ್ನು ರಕ್ಷಿಸುವವರು ಯಾರು? ಎಂದು ಆ ಮಹಿಳೆ ಪ್ರಶ್ನಿಸಿದ್ದಾರೆ.

(ವರದಿ- ಪ್ರಿಯಾಂಕಾ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner