BESCOM: ಹಬ್ಬಕ್ಕೂ ಮುನ್ನ ಬೆಸ್ಕಾಂ ಗ್ರಾಹಕರಿಗೆ ಆಘಾತ; ವಿದ್ಯುತ್​ ದರ ಏರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Bescom: ಹಬ್ಬಕ್ಕೂ ಮುನ್ನ ಬೆಸ್ಕಾಂ ಗ್ರಾಹಕರಿಗೆ ಆಘಾತ; ವಿದ್ಯುತ್​ ದರ ಏರಿಕೆ

BESCOM: ಹಬ್ಬಕ್ಕೂ ಮುನ್ನ ಬೆಸ್ಕಾಂ ಗ್ರಾಹಕರಿಗೆ ಆಘಾತ; ವಿದ್ಯುತ್​ ದರ ಏರಿಕೆ

BESCOM hike electricity tariff: ಪ್ರತಿ ಯೂನಿಟ್​ ವಿದ್ಯುತ್​ಗೆ 1.15 ರೂಪಾಯಿ ಹೆಚ್ಚಳವಾಗಿದ್ದು, ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಸೆಪ್ಟೆಂಬರ್​ನಿಂದ ಈ ಬೆಲೆ ಅನ್ವಯವಾಗಲಿದೆ.

ವಿದ್ಯುತ್ ದರ ಏರಿಕೆ (ಸಾಂದರ್ಭಿಕ ಚಿತ್ರ)
ವಿದ್ಯುತ್ ದರ ಏರಿಕೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಗೌರಿ-ಗಣೇಶ ಹಬ್ಬದ ತಯಾರಿಯಲ್ಲಿರುವ ಜನರಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಆಘಾತ ನೀಡಿದೆ. ಪ್ರತಿ ಯೂನಿಟ್​ ವಿದ್ಯುತ್​ಗೆ 1.15 ರೂಪಾಯಿ ಹೆಚ್ಚಳ ಮಾಡಿದೆ. ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಸೆಪ್ಟೆಂಬರ್​ನಿಂದ ಈ ಬೆಲೆ ಅನ್ವಯವಾಗಲಿದೆ.

ಅಂದಹಾಗೆ ಗೃಹಜ್ಯೋತಿ ಫಲಾನುಭವಿಗಳಿಗೆ ಇದು ಅನ್ವಯಿಸುವುದಿಲ್ಲ. ತಿಂಗಳಿಗೆ 200 ಯೂನಿಟ್​​ ವರೆಗಿನ ಅವರ ವಿದ್ಯುತ್​ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆದರೆ 200 ಯೂನಿಟ್​ಗಿಂತ ಹೆಚ್ಚು ವಿದ್ಯುತ್​ ಬಳಸುವ ಗೃಹ ಬಳಕೆದಾರರಿಗೆ, ವಾಣಿಜ್ಯ ಮತ್ತು ಕೈಗಾರಿಕೆಗಳ ಮಾಲೀಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮೇ 12 ರಂದು ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು 70 ಪೈಸೆ ಹೆಚ್ಚಿಸಿತ್ತು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಆಯ್ಕೆಯಾದ ನಂತರ 'ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ' (ಎಫ್‌ಪಿಪಿಸಿಎ) ನೆಪದಲ್ಲಿ ಪ್ರತಿ ಯೂನಿಟ್‌ಗೆ 51 ಪೈಸೆಯ ಮತ್ತೊಂದು ಹೆಚ್ಚಳವನ್ನು ಘೋಷಿಸಿತ್ತು.

ಲೋಡ್​ ಶೆಡ್ಡಿಂಗ್​

ಮಳೆ ಇಲ್ಲದ ಕಾರಣ ವಿದ್ಯುತ್​ ಅಭಾವ ಸೃಷ್ಟಿಯಾಗಿದ್ದು, ಪ್ರತಿದಿನ ಕೋಟ್ಯಂತರ ರೂಪಾಯಿ ವ್ಯಯಿಸಿ ರಾಜ್ಯ ಇಂಧನ ಇಲಾಖೆ ಸಾವಿರಾರು ಮೆಗಾ ವ್ಯಾಟ್​ ವಿದ್ಯುತ್​ ಖರೀದಿಸುತ್ತಿದೆ. ಇತ್ತ ಮಳೆ ಕೊರತೆಯಿಂದಾಗಿ ಕೃಷಿಗಾಗಿ ಪಂಪ್​ಸೆಟ್​ ಬಳಕೆಯೂ ಹೆಚ್ಚಾಗಿದ್ದು, ವಿದ್ಯುತ್​ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅನಿವಾರ್ಯವಾಗಿ ಇಂಧನ ಇಲಾಖೆ ಅನಧಿಕೃತ ಲೋಡ್​ ಶೆಡ್ಡಿಂಗ್​ ಜಾರಿ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.

ಟೆಕ್​ ಹಬ್​ ಆಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಇದು ಹೆಚ್ಚಿನ ಪರಿಣಾಮ ಬೀರಲಿದೆ. ಈಗಾಗಲೇ ಅನೇಕ ಕಾಮಗಾರಿಗಳ ಹಿನ್ನೆಲೆ ಬೆಂಗಳೂರಿನಲ್ಲಿ ದಿನೇ ದಿನೇ ವಿದ್ಯುತ್​ ಕಡಿತಗೊಳಿಸಲಾಗುತ್ತಿದ್ದು, ಲೋಡ್​ ಶೆಡ್ಡಿಂಗ್​ ಆದರೆ ಮತ್ತಷ್ಟು ಸಮಸ್ಯೆಯಾಗಲಿದೆ.

Whats_app_banner