ಕನ್ನಡ ಸುದ್ದಿ  /  Karnataka  /  Bengaluru News Bhuvaneshwari Statue Attracting Voters By Installing Statues Congress Govt Political News In Kannada Arc

Bengaluru News: ಕಾಂಗ್ರೆಸ್‌ ಸರ್ಕಾರದಲ್ಲೂ ಮುಂದಿವರೆದ ಪ್ರತಿಮಾ ರಾಜಕಾರಣ

ಕಾಂಗ್ರೆಸ್ ಸರಕಾರದಲ್ಲೂ ಮುಂದುವರೆದ ಪ್ರತಿಮಾ ರಾಜಕಾರಣ. ರಾಜೀವ್ ಗಾಂಧಿ ಪ್ರತಿಮೆಗೆ ಭರದ ಸಿದ್ದತೆ, ಬಿಜೆಪಿ ವಿರೋಧ. ಕನ್ನಡಾಂಬೆ ಭುವನೇಶ್ವರಿ ಪ್ರತಿಮೆಗೆ ಕೂಡಿ ಬಂದ ಕಾಲ. ಪ್ರತಿಮೆಗಳ ಮೂಲಕ ಮತದಾರರನ್ನು ಸೆಳೆಯುವ ಪರಿಪಾಠ ರಾಜ್ಯದಲ್ಲೂ ಆರಂಭ.

ಕಾಂಗ್ರೆಸ್‌ ಸರ್ಕಾರದಲ್ಲೂ ಮುಂದಿವರೆದ ಪ್ರತಿಮಾ ರಾಜಕಾರಣ (ಸಾಂದರ್ಭಿಕ ಚಿತ್ರ)
ಕಾಂಗ್ರೆಸ್‌ ಸರ್ಕಾರದಲ್ಲೂ ಮುಂದಿವರೆದ ಪ್ರತಿಮಾ ರಾಜಕಾರಣ (ಸಾಂದರ್ಭಿಕ ಚಿತ್ರ)

ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಮತದಾರರನ್ನು ಸೆಳೆಯುವುದು ಇತ್ತೀಚಿನ ಹೊಸ ತಂತ್ರಗಳೊಲ್ಲೊಂದು. ಇದು ಅವರ ಮೇಲಿನ ಗೌರವ ಎನ್ನುವುದಕ್ಕಿಂತ ಪ್ರತಿಮೆಗಳಾಗಿ ನಿಲ್ಲುವ ಮುಖಂಡರ ಜಾತಿಗಳ ಮತ್ತು ಮತದಾರರ ಓಲೈಕೆ ಬಿಟ್ಟರೆ ಮತ್ತೇನೂ ಇರುವುದಿಲ್ಲ. ಈ ಪ್ರತಿಮೆಗಳು ಇತಿಹಾಸವನ್ನು ಸಾರುವುದಕ್ಕಿಂತ ಹೆಚ್ಚಾಗಿ ರಾಜಕಾರಣವನ್ನೇ ಬಿಂಬಿಸುತ್ತವೆ. ಇದೀಗ ರಾಜ್ಯದಲ್ಲಿ ಮತ್ತೆ ಪ್ರತಿಮೆಗಳ ರಾಜಕಾರಣ ಮುನ್ನೆಲೆಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡು ಪ್ರತಿಮೆಗಳನ್ನು ಸ್ಥಾಪಿಸಲು ಮುಂದಾಗುವ ಮೂಲಕ ಪ್ರತಿಮಾ ರಾಜಕಾರಣಕ್ಕೆ ಒತ್ತು ನೀಡಿದೆ. ಇದರ ಹಿಂದೆ ಮುಂಬರುವ ಲೋಕಸಭಾ ಚುನಾವಣೆ ಹೊರತುಪಡಿಸಿ ಮತ್ತೇನೂ ಇಲ್ಲ ಎನ್ನುವುದು ನಿರ್ವಿವಾದ. ನೂತನ ಕಾಂಗ್ರೆಸ್ ಸರಕಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಭುವನೇಶ್ವರಿ ಮತ್ತು ಶೇಷಾದ್ರಿಪುರಂ ವೃತ್ತದಲ್ಲಿ ಮಾಜಿ ಪ್ರದಾನಿ ರಾಜೀವ್ ಗಾಂಧಿ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಮುಂದಾಗಿದೆ.

ಭುವನೇಶ್ವರಿ ಪ್ರತಿಮೆ ಸ್ಥಾಪನೆ ಹೊಸ ನಿರ್ಧಾರ ಅಲ್ಲ. 2011ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 77ನೇ ಸಾಹಿತ್ಯ ಸಮ್ಮೇಳನದಲ್ಲಿ 25 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ 10 ಎಕರೆ ಜಮೀನು ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಕೈಬಿಡಲಾಗಿತ್ತು. ಸ್ವಾತಂತ್ರ್ಯ ಉದ್ಯಾನವನ, ರೇಸ್ ಕೋರ್ಸ್ ರಸ್ತೆ, ಹೆಬ್ಬಾಳ ಕೆರೆ ಹೀಗೆ ವಿವಿಧ ಸ್ಥಳಗಳ ಹೆಸರು ಪ್ರಸ್ತಾಪಿಸಲಾಯಿತಾದರೂ ಯಾವುದೂ ಅಂತಿಮಗೊಳ್ಳಲಿಲ್ಲ. ಈ ಯೋಜನೆ ಘೋಷಣೆಯಾದ ಒಂದು ದಶಕದ ನಂತರ 2022ರಲ್ಲಿ ಬಿಜೆಪಿ ಸರಕಾರ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರ ಮಾಡಿ 2023 ರ ಜನವರಿಯೊಳಗೆ ಭುವನೇಶ್ವರಿ ಪ್ರತಿಮೆಯಲ್ಲಿ ಅನಾವರಣಗೊಳಿಸುವ ಭರವಸೆ ನೀಡಿತ್ತು. ಆದರೆ ಸಾಧ್ಯವಾಗಿರಲಿಲ್ಲ.

ರಾಜೀವ್ ಗಾಂಧಿ ಪ್ರತಿಮೆ ಸ್ಥಾಪನೆಗೆ ಭರದ ಸಿದ್ದತೆ

ಈ ಮಧ್ಯೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೇಷಾದ್ರಿಪುರಂ ವೃತ್ತದಲ್ಲಿ ರಾಜೀವ್ ಗಾಂಧಿ ಪ್ರತಿಮೆ ಸ್ಥಾಪನೆಗೆ ಟೆಂಡರ್ ಆಹ್ವಾನಿಸಿದೆ. ಈ ಪ್ರತಿಮೆಯ ವೆಚ್ಚ 1.05 ಕೋಟಿ ರೂಪಾಯಿಗಳು. ಈಗಾಗಲೇ ಸಿಮೆಂಟ್‍ನಲ್ಲಿ ಮಾಡಿರುವ ರಾಜೀವ್ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಆದರೂ ಹಳೆಯ ಪ್ರತಿಮೆಯನ್ನು ತೆಗೆದು ಹೊಸ ಪ್ರತಿಮೆ ಸ್ಥಾಪಿಸುವ ತವಕ ರಾಜ್ಯ ಸರ್ಕಾರದ್ದು ಎನ್ನಲಾಗಿದೆ. ಪ್ರತಿಮೆ ನಿರ್ಮಾಣ ನಡೆಯುತ್ತಿರುವ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಈಗಾಗಲೇ ರಾಜೀವ್ ಅವರ ಪ್ರತಿಮೆ ಇದ್ದರೂ ಅದನ್ನು ಬದಲಾಯಿಸುವ ಅವಶ್ಯಕತೆ ಏನು ಎನ್ನುವುದು ಬಿಜೆಪಿ ಪ್ರಶ್ನೆ. ಮತ್ತೊಂದು ಕಡೆ ಭುವನೇಶ್ವರಿ ಪ್ರತಿಮೆಗೆ ಒತ್ತು ನೀಡದ ಸರ್ಕಾರ ಕನ್ನಡಿಗರ ಭಾವನೆಗಳ ಜತೆಯಲ್ಲಿ ಆಟವಾಡುತ್ತಿದೆ ಎಂದೂ ಲೇವಡಿ ಮಾಡಿದೆ. ಈ ಆರೋಪಕ್ಕೆ ಉತ್ತರ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವಾನಂದ ತಂಗಡಗಿ ಈ ಯೋಜನೆಯನ್ನು ಕೈ ಬಿಟ್ಟಿಲ್ಲ. ಅಂತಿಮ ರೂಪ ನೀಡಲಾಗುತ್ತಿದೆ. ಅಧಿಕಾರದಲ್ಲಿ ಇದ್ದಾಗ ಭುವನೇಶ್ವರಿ ಪ್ರತಿಮೆಯನ್ನು ಏಕೆ ಸ್ಥಾಪಿಸಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.

ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 15ಕ್ಕೂ ಹೆಚ್ಚು ಪ್ರತಿಮೆಗಳನ್ನು ಸ್ಥಾಪಿಸಿ ಗಮನ ಸೆಳೆದಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ, ಬೆಳಗಾವಿಯಲ್ಲಿ ಶಿವಾಜಿ, ಕಾರ್ಕಳದಲ್ಲಿ ಪರುಶರಾಮ, ಮಲೆ ಮಹದೇಶ್ವರ, ಉಡುತಡಿಯಲ್ಲಿ ಅಕ್ಕಮಹಾದೇವಿ, ವಿಧಾನಸೌಧದ ಆವರಣದಲ್ಲಿ ಬಸವಣ್ಣ ಮತ್ತು ಕೆಂಪೇಗೌಡ, ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಹೀಗೆ ಪಟ್ಟಿ ಬೆಳೆಯುತ್ತದೆ. ಇತ್ತೀಚೆಗೆ ಪ್ರತಿಮಾ ರಾಜಕಾರಣ ಕರ್ನಾಟಕದಲ್ಲೂ ಆರಂಭವಾಗಿರುವುದು ಉತ್ತಮ ಬೆಳವಣ ಗೆ ಅಲ್ಲ ಎಂಬ ಆತಂಕವೂ ವ್ಯಕ್ತವಾಗಿದೆ. ಪ್ರತಿಮೆಗಳನ್ನು ನಿಲ್ಲಿಸುವ ಬದಲು ಅವರ ಹೆಸರಿನಲ್ಲಿ ಶಾಲೆ, ಆಸ್ಪತ್ರೆಗಳನ್ನು ಕಟ್ಟಿಸಬಹುದು. ಮೇಲಾಗಿ ಎಲ್ಲ ಗಣ್ಯಮಾನ್ಯರ ಸಿದ್ಧಾಂತಗಳನ್ನು ಗಾಳಿಗೆ ತೂರಿರುವಾಗ ಅವರ ಪ್ರತಿಮೆಗಳನ್ನು ಸ್ಥಾಪಿಸುವುದರಿಂದಾಗುವ ಪ್ರಯೋಜನವಾದರೂ ಏನು ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

(ವರದಿ: ಎಚ್.ಮಾರುತಿ)