Bengaluru Crime: ಮರದ ಕೊಂಬೆ ಬಿದ್ದು ಬೆನ್ನುಮೂಳೆ ಮುರಿತ, ಬಿಬಿಎಂಪಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರಿನ ಅಶೋಕನಗರ ವ್ಯಾಪ್ತಿಯಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರ ಬೆನ್ನುಮೂಳೆ ಮುರಿತ ಉಂಟಾಗಿದೆ. ಇದಕ್ಕೆ ಸಂಬಂಧಿಸಿ ಬಿಬಿಎಂಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಪೆಟ್ರೋಲ್ ತುಂಬಿಸುವಲ್ಲಿ ವಂಚನೆ ಎಸಗಿದ ಮ್ಯಾನೇಜರ್ ಬಂಧನವಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
![ಬೆಂಗಳೂರು ಅಪರಾಧ ಸುದ್ದಿ ಬೆಂಗಳೂರು ಅಪರಾಧ ಸುದ್ದಿ](https://images.hindustantimes.com/kannada/img/2024/03/23/550x309/Bengaluru_Crime_1698225102623_1711173122710.jpg)
ಬೆಂಗಳೂರು: ಮರದ ಕೊಂಬೆಯೊಂದು ಬಿದ್ದು ದ್ವಿಚಕ್ರ ವಾಹನ ಸವಾರರೊಬ್ಬರ ಬೆನ್ನುಮೂಳೆ ಮುರಿದಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ಬಿಬಿಎಂಪಿ ಮತ್ತು ಅಲ್ಲಿನ ಕಾಲೇಜು ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದೆ.
ಅಶೋಕ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಚಂದನ್ ಎಂಬುವರು ತಮ್ಮ ಕಚೇರಿಗೆ ತೆರಳುತ್ತಿದ್ದರು. ಆಗ ಕಾಲೇಜೊಂದರ ಆವರಣದಲ್ಲಿರುವ ಮರದ ಕೊಂಬೆಯೊಂದು ರಸ್ತೆಗೆ ಚಾಚಿಕೊಂಡಿತ್ತು. ಈ ಕೊಂಬೆ ಬಿದ್ದು, ಚಂದನ್ ಅವರ ಮೇಲೆ ಬಿದ್ದಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದರು.
ಗಾಯಾಳು ಚಂದನ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಆ ಕಾಲೇಜಿನ ವಿರುದ್ಧ ದೂರು ನೀಡಿದ್ದರು. ಅಶೋಕ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೊಂಬೆಯನ್ನು ತೆರವುಗೊಳಿಸುವಲ್ಲಿ ಬಿಬಿಎಂಪಿ ಮತ್ತು ಕಾಲೇಜು ನಿರ್ಲಕ್ಷ್ಯ ತೋರಿದೆ. ಇವರ ಉದಾಸೀನದಿಂದ ನನ್ನ ಬೆನ್ನು ಮೂಳೆ ಮುರಿದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೆಟ್ರೋಲ್ ತುಂಬಿಸುವಲ್ಲಿ ವಂಚನೆ, ಮ್ಯಾನೇಜರ್ ಬಂಧನ
ಪೆಟ್ರೋಲ್ ಬಂಕ್ ಗಳಲ್ಲಿ ವಂಚನೆ ಸರ್ವೇ ಸಾಮಾನ್ಯ. ಕೊಟ್ಟಷ್ಟು ಹಣಕ್ಕೆ ಪೆಟ್ರೋಲ್ ಡೀಸೆಲ್ ತುಂಬಿಸುವುದೇ ಇಲ್ಲ ಎಂಬ ದೂರುಗಳು ಆಗಾಗ್ಗೆ ಕೇಳಿ ಬರುತ್ತವೆ. ಕಮೀಷನ್ ಗಿಂತಲೂ ಇಂತಹ ವಾಮ ಮಾರ್ಗಗಳಲ್ಲಿ ಸಂಪಾದಿಸುವ ಹಣವೇ ಹೆಚ್ಚು ಎಂದೂ ಹೇಳಲಾಗುತ್ತದೆ. ಇಂತಹ ವಂಚನೆಯ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ.
ಪೀಣ್ಯ ಎರಡನೇ ಹಂತದಲ್ಲಿರುವ ಎಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರೊಬ್ಬರು 500 ರೂಪಾಯಿ ನೀಡಿ ತಮ್ಮ ದ್ವಿಚಕ್ರ ವಹನಕ್ಕೆ ಪೆಟ್ರೋಲ್ ತುಂಬಿಸಲು ಹೇಳಿದ್ದಾರೆ. ಆದರೆ ಅಲ್ಲಿನ ಕೆಲಸಗಾರ 489 ರೂ.ಗೆ ಮಾತ್ರ ಪೆಟ್ರೋಲ್ ಹಾಕಿ ನಿಲ್ಲಿಸಿದ್ದಾನೆ. ಇದನ್ನು ಪ್ರಶ್ನಿಸಿದ ಗ್ರಾಹಕ ಅಬೂಬಕರ್ ಅವರು ಪ್ರಿಂಟೆಡ್ ಬಿಲ್ ನೀಡಲು ಕೇಳಿದಾಗ ನಿರಾಕರಿಸಿದ್ದಾರೆ. ಜೊತೆಗೆ ಇವರ ಮೇಲೆ ಮ್ಯಾನೇಜರ್ ತಿಮ್ಮಪ್ಪ ಮತ್ತು ಕೆಲಸಗಾರ ಸುರೇಶ್ ಹಲ್ಲೆ ನಡೆಸಿದ್ದಾರೆ. ಇದನ್ನು ಚಿತ್ರೀಕರಿಸಿದ್ದ ಸರ್ವಜನಿಕರೊಬ್ಬರು ಈ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅಬೂಬಕರ್ ದೂರು ಸಲ್ಲಿಸಿದ್ದಾರೆ. ಇವರ ದೂರಿನನ್ವಯ ಇಬ್ಬರನ್ನು ಬಂಧಿಸಿದ್ದಾರೆ. ಬಂಕ್ ಮಾಲೀಕ ರಂಗಸ್ವಾಮಿ ಮತು ಮತ್ತೊಬ್ಬ ಕೆಲಸಗಾರ ದೇವರಾಜ್ ತಲೆಮರೆಸಿಕೊಂಡಿದ್ದಾರೆ.
ಈ ಬಂಕ್‌ನಲ್ಲಿ ವಂಚನೆ ಎಸಗುವುದು ಸಾಮಾನ್ಯವಾಗಿದೆ. ಪ್ರಶ್ನಿಸಿದರೆ ಹಲ್ಲೆ ನಡೆಸುತ್ತಾರೆ ಎಂಬ ದೂರುಗಳು ಕೇಳಿ ಬಂದಿವೆ. ಈ ಬಂಕ್ ನಿಂದ ಯಾರಾದರೂ ಅನ್ಯಾಯಕ್ಕೊಳಗಾಗಿದ್ದರೆ ದೂರು ನೀಡುವಂತೆ ಪೀಣ್ಯ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ನೇಮಕಾತಿ: ನಕಲಿ ಆದೇಶ, ಎಫ್‌ಐಆರ್ ದಾಖಲು
ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗೆ ಮಾರ್ಚ್ 25, 26 ಮತ್ತು 27 ರಂದು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ ಎಂದು ಎಡಿಜಿಪಿ ಅವರ ಹೆಸರಿನಲ್ಲಿ ನಕಲಿ ಅದೇಶವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಆದೇಶದ ಪ್ರತಿಯನ್ನು ಗಮನಿಸಿದ್ದ ನೇಮಕಾತಿ ವಿಭಾಗದ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ. ಅಪರಿಚಿತರ ವಿರುದ್ಧ ಪ್ರಕಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ 3064 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದು, ದೈಹಿಕ ಪರೀಕ್ಷೆಯನ್ನು ಮಾರ್ಚ್ 18,19 ಮತ್ತು 20 ರಂದು ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಗಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದರೆ ಕಿಡಿಗೇಡಿಗಳು ನಕಲಿ ಪತ್ರವನ್ನು ಸೃಷ್ಟಿಸಿ ಹರಿಯಬಿಟ್ಟಿದ್ದರು.
(ವರದಿ- ಎಚ್.ಮಾರುತಿ, ಬೆಂಗಳೂರು)
-----------------
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
![Whats_app_banner Whats_app_banner](https://kannada.hindustantimes.com/static-content/1y/wBanner.png)