ಕನ್ನಡ ಸುದ್ದಿ  /  Karnataka  /  Bengaluru News Bjp-jds Alliance In Karnataka For Lok Sabha Polls Seat Sharing Finalised Political News In Kannada Uks

BJP-JDS Alliance: ಲೋಕಸಭೆ ಚುನಾವಣೆಗೆ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಫಿಕ್ಸ್, ಬಿಎಸ್‌ವೈ ಮತ್ತು ಇತರರು ಹೇಳಿರುವುದೇನು, ಇಲ್ಲಿದೆ ವಿವರ

ಬಿಜೆಪಿ-ಜೆಡಿಎಸ್ ಮೈತ್ರಿ ಬಹುತೇಕ ಅಧಿಕೃತವಾಗಿದೆ. ವಿಧಾನ ಸಭೆಯಲ್ಲಷ್ಟೇ ಅಲ್ಲ, ಲೋಕಸಭೆ ಚುನಾವಣೆಗೂ ಈ ಮೈತ್ರಿ ವಿಸ್ತರಣೆ ಆಗಿರುವ ಸುಳಿವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೀಡಿದ್ದಾರೆ. ಈ ಕುರಿತು ವಿವಿಧ ನಾಯಕರು ಪ್ರತಿಕ್ರಿಯಿಸಿದ್ದು, ವಿದ್ಯಮಾನದ ಚಿತ್ರಣಕ್ಕೆ ಈ ವರದಿ ಗಮನಿಸಿ.

ಲೋಕಸಭೆ ಚುನಾವಣೆಗೆ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಫಿಕ್ಸ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (ಕಡತ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ)
ಲೋಕಸಭೆ ಚುನಾವಣೆಗೆ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಫಿಕ್ಸ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (ಕಡತ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ) (HT)

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024) ಕರ್ನಾಟಕದಲ್ಲಿ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ (BJP-JDS Alliance In Karnataka) ಬಹುತೇಕ ಫಿಕ್ಸ್ ಆಗಿದೆ. ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yeddyurappa) ಈ ಬಗ್ಗೆ ಸುಳಿವು ನೀಡಿದ್ದು, ಸೀಟು ಹಂಚಿಕೆ (Seat Sharing) ವಿಚಾರ ಅಮಿತ್ ಶಾ ಉಪಸ್ಥಿತಿಯಲ್ಲಿ ಅಂತಿಮಗೊಂಡಿದೆ ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಬಳಿಕ ವಿಧಾನ ಮಂಡಲ ಅಧಿವೇಶನ ಶುರುವಾದಾಗ ಜೆಡಿಎಸ್‌ ಜತೆಗೂಡಿ ಕಾಂಗ್ರೆಸ್‌ ಸರ್ಕಾರವನ್ನು ಎದುರಿಸುವುದಾಗಿ ಬಿಎಸ್‌ವೈ ಹೇಳಿದ್ದರು. ಆಗಲೇ ಲೋಕಸಭೆ ಚುನಾವಣೆಗೆ ಈ ಎರಡೂ ಪಕ್ಷಗಳ ಮೈತ್ರಿ ವಿಚಾರ ಮುನ್ನೆಲಗೆ ಬಂದಿತ್ತು. ಇಂದು (ಸೆ.8) ಅದು ಖಚಿತವಾಗಿದೆ.

ಲೋಕಸಭೆಗೆ ಬಿಜೆಪಿ -ಜೆಡಿಎಸ್‌ ಮೈತ್ರಿ ಲೆಕ್ಕ 23+5 ಅಥವಾ 24+4: ಬಿಎಸ್ ಯಡಿಯೂರಪ್ಪ ಹೇಳಿರುವುದು ಇಷ್ಟು

ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಎಷ್ಟರಲ್ಲಿ ಸ್ಪರ್ಧಿಸಲಿದೆ. ಜೆಡಿಎಸ್ ಎಷ್ಟರಲ್ಲಿ ಸ್ಪರ್ಧಿಸಲಿದೆ. ಸ್ಥಾನ ಹಂಚಿಕೆ ಫಿಕ್ಸ್ ಆಗಿದಾ ಎಂಬಿತ್ಯಾದಿ ಸಂದೇಹ ಈಗ ಶುರುವಾಗಿದೆ.

ಸುದ್ದಿಗಾರ ಜತೆಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಜೆಡಿಎಸ್​ ಜತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ರವಾನಿಸಿದ್ದಾರೆ. ಜೆಡಿಎಸ್‌ ಜತೆಗಿನ ಮೈತ್ರಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ ಪ್ರಕಾರ, ಅಮಿತ್ ಶಾ ಅವರು ನಾಲ್ಕು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿಕೊಂಡಿದ್ಧಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೂ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ತಮಗೆ ಕೊಡಿ ಎಂದು ಜೆಡಿಎಸ್‌ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಬಹುತೇಕ ಮಂಡ್ಯದಲ್ಲಿ ಸುಮಲತಾ ಅವರು ಇರುವ ಕಾರಣ, ಅದನ್ನು ಬಿಟ್ಟು ಉಳಿದ ಕ್ಷೇತ್ರಗಳನ್ನು ಪರಿಗಣಿಸುವಂತೆ ಜೆಡಿಎಸ್ ನಾಯಕರನ್ನು ಬಿಜೆಪಿ ನಾಯಕರು ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹತ್ವದ ಬೆಳವಣಿಗೆ ಎಂದ ಮಾಜಿ ಡಿಸಿಎಂ ಅಶ್ವತ್ಥನಾರಾಯಣ್

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಬೆಳವಣಿಗೆ.ಅವರು ಎನ್‌ಡಿಎ ಸೇರಬೇಕಾದ್ದು ಸಮಯದ ಅಗತ್ಯ. ಜೆಡಿಎಸ್ ಆಸಕ್ತಿಯ ತೋರಿರುವುದು ಸ್ವಾಗತಾರ್ಹ ವಿದ್ಯಮಾನ. ಅವರನ್ನು ಸ್ವಾಗತಿಸುತ್ತೇವೆ. ಆದರೆ ಇದುವರೆಗೆ ಅಧಿಕೃತವಾದ ಘೋಷಣೆ ಆಗಿಲ್ಲ ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಹೇಳಿದರು.

ಕಳೆದ ಸಲ ನಾವು 28ರಲ್ಲಿ 25 ಸ್ಥಾನ ಗೆದ್ದುಕೊಂಡಿದ್ದೆವು. ಈ ಸಲ ಎಲ್ಲ ಸ್ಥಾನಗಳನ್ನೂ ಗೆಲ್ಲುವ ಭರವಸೆ ಇದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಅಗತ್ಯ ಬೇಕಾಗಿದ್ದ ವಿದ್ಯಮಾನ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬಿಜೆಪಿ -ಜೆಡಿಎಸ್‌ ಮೈತ್ರಿ ಮಾತುಕತೆ ಬಹಳ ಅವಶ್ಯಕ ಮತ್ತು ಮಹತ್ವದ್ದಾಗಿದೆ. ಈ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗುವುದು ಮುಖ್ಯ. ನಾವು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಶುರು ಮಾಡಿದ್ದೇವೆ. ಅದನ್ನು ಮುಂದುವರಿಸುತ್ತೇವೆ. ಮೈತ್ರಿ ಮಾಡುವುದು, ಸ್ಥಾನಗಳ ಹಂಚಿಕೆ ಬಗ್ಗೆ ಮುಂದೆ ತೀರ್ಮಾನ ಆಗಲಿದೆ. ನಮ್ಮ ಪಕ್ಷದ ವರಿಷ್ಠರು ಇದರ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.