ಬಿಜೆಪಿಯಲ್ಲಿ ಆಂತರಿಕ ಬೇಗುದಿ ಹೆಚ್ಚಳ, ಚೌತಿ ಬಳಿಕ ಮತ್ತೊಂದು ಪಾದಯಾತ್ರೆ, ಚರ್ಚೆಗೆ ಗ್ರಾಸವಾಗಿದೆ ಭಿನ್ನಮತೀಯರ ಬೆಳಗಾವಿ ಸಭೆ
ಕರ್ನಾಟಕದಲ್ಲಿ ಬಿಜೆಪಿಯೊಳಗೆ ಆಂತರಿಕ ಭಿನ್ನಮತ ಹೆಚ್ಚಳವಾಗಿದ್ದು, ಯತ್ನಾಳ, ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಬೆಳಗಾವಿ ಸಭೆ ಈಗ ಚರ್ಚೆಗೆ ಗ್ರಾಸವಾಗಿದೆ. ಗಣೇಶ ಚತುರ್ಥಿ ನಂತರ ಪಾದಯಾತ್ರೆ ಆಯೋಜಿಸಲು ಭಿನ್ನಮತೀಯ ನಾಯಕರು ಮುಂದಾಗಿದ್ದಾರೆ.(ವಿಶೇಷ ವರದಿ-ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ರಾಜ್ಯ ಬಿಜಪಿ ಘಟಕದ ಆಂತರಿಕ ಬೇಗುದಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪಕ್ಷದ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ವಿರುದ್ಧ ಭಿನ್ನಮತ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಬಿಎಸ್ ವೈ ಕುಟುಂಬದ ಕಡು ವಿರೋಧಿ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಭಾನುವಾರ ಸಭೆ ನಡೆಯಿತು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ಮುಗಿದ ಬೆನ್ನಲ್ಲೇ ಈ ಸಭೆ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಚರ್ಚೆಗೆ ಗ್ರಾಸವಾಗಿದೆ ಭಿನ್ನಮತೀಯರ ಬೆಳಗಾವಿ ಸಭೆ
ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಸಮೀಪವಿರುವ ರೆಸಾರ್ಟ್ ವೊಂದರಲ್ಲಿ ಈ ಸಭೆ ನಡೆದಿದೆ. ಈ ಸಭೆಯಲ್ಲಿ ಬಿಜೆಪಿ ನಾಯಕರಾದ ಯತ್ನಾಳ, ಜಾರಕಿಹೊಳಿ, ಮಾಜಿ ಸಂಸದರಾದ ಅಣ್ಣಾ ಸಾಹೇಬ ಜೊಲ್ಲೆ, ಪ್ರತಾಪಸಿಂಹ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಮತ್ತು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಎನ್. ಆರ್.ಸಂತೋಷ ಭಾಗವಹಿಸಿದ್ದರು. ಇನ್ನೂ ಕೆಲವು ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದು, ಕೆಲವರು ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಭ್ರಷ್ಟ ವ್ಯಕ್ತಿಗಳಿಂದ ಕರ್ನಾಟಕ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂಬ ಅಜೆಂಡಾದೊಂದಿಗೆ ಸಭೆ ನಡೆಸಿದ್ದಾರೆಯಾದರೂ ಇನ್ನೂ ಹಲವು ವಿಷಯಗಳನ್ನು ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ಬಿಜೆಪಿ ನಡೆಸಿರುವ ಪಾದಯಾತ್ರೆ ಮೈಸೂರಿಗೆ ಮಾತ್ರ ಸೀಮಿತವಾಗಿದೆ. ಆದರೆ ನಾವು ನಡೆಸಲಿರುವ ಪಾದಯಾತ್ರೆ ಇಡೀ ರಾಜ್ಯವ್ಯಾಪಿಯಾಗಿರುತ್ತದೆ. ಈ ಪಾದಯಾತ್ರೆಗೆ ಕೇಂದ್ರ ನಾಯಕರನ್ನು ಆಹ್ವಾನಿಸಲಿದ್ದೇವೆ ಎಂದು ಸಭೆಯ ನಂತರ ಯತ್ನಾಳ ತಿಳಿಸಿದ್ದಾರೆ.
ಬಿಎಸ್‌ವೈ ಕುಟುಂಬದ ಹಿಡಿತದ ಕಾರಣ ಬೇಸತ್ತ ಬಿಜೆಪಿ ನಾಯಕರು
ಈ ಸಭೆ ಯಾರೋ ಒಬ್ಬರನ್ನು ನಾಯಕನನ್ನಾಗಿ ರೂಪಿಸಲು ಮಾಡುವ ಹೋರಾಟ ಅಲ್ಲ. ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಕ್ಷವನ್ನು ಮುಕ್ತಗೊಳಿಸದಿದ್ದರೆ ದಕ್ಷಣ ಭಾರತದಲ್ಲಿ ಮುಂಚೂಣಿಯಲ್ಲಿರುವ ಪಕ್ಷ ಕರ್ನಾಟಕದಲ್ಲಿ ಹಿನ್ನೆಡೆ ಅನುಭವಿಸಲಿದೆ ಎಂದೂ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಭ್ರಷ್ಟ ವ್ಯಕ್ತಿಗಳಿಂದ ಪಕ್ಷ ನಡೆಯುವುದನ್ನು ಪಕ್ಷದ ಪ್ರಾಮಾಣಿಕ ಮತ್ತು ನಿಷ್ಟಾವಂತ ಕಾರ್ಯಕರ್ತರು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ನಾಯಕತ್ವ ಬದಲಾಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಮುಂದಿನ ದಿನಗಳಲ್ಲಿ 15-20 ಶಾಸಕರು ನಮ್ಮ ಗುಂಪನ್ನು ಸೇರಿಕೊಳ್ಳಲಿದ್ದಾರೆ ಎಂದೂ ತಿಳಿಸಿದ್ದಾರೆ.
ಪಕ್ಷದ ನಾಯಕತ್ವಕ್ಕಾಗಿ ಜಾರಕಿಹೊಳಿ ಈ ಪ್ರಯತ್ನ ಮಾಡುತ್ತಿಲ್ಲ. ಸ್ವಚ್ಛ ಪ್ರಾಮಾಣಿಕರಾದವರು ಪಕ್ಷವನ್ನು ಮುನ್ನೆಡೆಸಬೇಕು. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ನಾಯಕತ್ವ ಬದಲಾಗಲೇಬೇಕು ಎಂದು ಯತ್ನಾಳ ಒತ್ತಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಜಿ.ಎಂ.ಸಿದ್ಧೇಶ್ವರ, ಬಿ.ಬಿ.ನಾಯಕ ಸೇರಿದಂತೆ ಅನೇಕ ಮಾಜಿ ಸಂಸದರು ಮತ್ತು ಶಾಸಕರು ಮತ್ತು ಹಾಲಿ 15-20 ಸಾಸಕರು ಬೆಂಬಲ ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿಯಲ್ಲಿ ನಾಯಕತ್ವಕ್ಕಾಗಿ ಆಂತರಿಕ ಭಿನ್ನಮತವಿದ್ದರೂ ಜಾರಕಿಹೊಳಿ ಮತ್ತು ಜೊಲ್ಲೆ ಕೈಜೋಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಗಣೇಶ ಹಬ್ಬದ ನಂತರ ಬಾಗಲಕೋಟೆಯಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಮೇಲ್ನೋಟಕ್ಕೆ ಇದು ರಾಜ್ಯ ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಪಾದಯಾತ್ರೆಯಾದರೂ ನಿಜ ಅರ್ಥದಲ್ಲಿ ಯಡಿಯೂರಪ್ಪ ವಿರುದ್ಧ ನಡೆಸುತ್ತಿರುವ ಪಾದಯಾತ್ರೆ ಎಂದರೆ ತಪ್ಪಾಗಲಿಕ್ಕಿಲ್ಲ. ಜಾರಕಿಹೊಳಿ ಮತ್ತು ಯತ್ನಾಳ ವಿರುದ್ಧ ಹೈಕಮಾಂಡ್ ಗೆ ದೂರು ನೀಡಲು ಪಕ್ಷದ ಅಧ್ಯಕ್ಷರು ತೀರ್ಮಾನಿಸಿದ್ದಾರೆ. ಆದರೆ ಈ ಸಭೆ ಭಿನ್ನಮತೀಯ ಚಟುವಟಿಕೆ ಅಲ್ಲ ಎಂದು ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ. ಯತ್ನಾಳ ಮತ್ತು ಜಾರಕಿಹೊಳಿ ಜೋಡಿಗೆ ಹೈಕಮಾಂಡ್ ಮಟ್ಟದ ನಾಯಕರೊಬ್ಬರ ಆಶೀರ್ವಾದ ಇದೆ ಎನ್ನಲಾಗುತ್ತಿದೆ.
(ವಿಶೇಷ ವರದಿ-ಎಚ್.ಮಾರುತಿ, ಬೆಂಗಳೂರು)