ಮರ ಕಡಿದು ಸಾಗಿಸಿದ ಪ್ರಕರಣ; ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಬಂಧನ, ಜಾಮೀನಿನ ಮೇಲೆ ಬಿಡುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  ಮರ ಕಡಿದು ಸಾಗಿಸಿದ ಪ್ರಕರಣ; ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಮರ ಕಡಿದು ಸಾಗಿಸಿದ ಪ್ರಕರಣ; ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಹಾಸನದ ಬೇಲೂರು ವ್ಯಾಪ್ತಿಯಲ್ಲಿ ಮರ ಕಡಿದು ಸಾಗಿಸಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ ಅವರ ಬಂಧನವಾಗಿದೆ. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಲ್ಲಿ ಜಾಮೀನಿನ ಮೇಲೆ ಅವರ ಬಿಡುಗಡೆಯಾಗಿದೆ.

ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ
ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ

ಬೆಂಗಳೂರು: ಹಾಸನದ ಬೇಲೂರು ತಾಲೂಕು ನಂದಗೊಂಡನ ಹಳ್ಳಿಯಲ್ಲಿ 125ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಬೇಲೂರು ತಹಸೀಲ್ದಾರ್ ಮಮತಾ ಅವರು ನೀಡಿದ್ದ ವರದಿ ಮೇರೆಗೆ ಡಿ.16 ರಂದು ಮರ ಕಡಿದು ಸಾಗಿಸಿದ ಪ್ರಕರಣ ದಾಖಲಾಗಿತ್ತು. ಆರಂಭಿಕ ವಿಚಾರಣೆಗೆ ಅರಣ್ಯ ಅಧಿಕಾರಿಗಳ ಎದುರು ಹಾಜರಾಗಿದ್ದ ವಿಕ್ರಮ್ ಸಿಂಹ ಬಳಿಕ ತಪ್ಪಿಸಿಕೊಂಡಿದ್ದರು.

ವಿಕ್ರಮ್ ಸಿಂಹ ಬೆಂಗಳೂರಿನಲ್ಲಿರುವ ಮಾಹಿತಿ ಪಡೆದ ಅಧಿಕಾರಿಗಳು ಇಂದು ವಿಚಾರಣೆಗಾಗಿ ಅವರನ್ನು ಜಾರುಬಂಡೆ ಕಾವಲ್‌ನಲ್ಲಿರುವ ಕಚೇರಿಗೆ ಕರೆದೊಯ್ದು ಬಂಧನ ದಾಖಲಿಸಿದರು. ಹಾಸನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಬಿರಾದಾರ್ ಮತ್ತು ಬೆಂಗಳೂರು ಅಪರಾಧ ವಿಭಾಗದ ಎಸಿಪಿ ನೇತೃತ್ವದ ಜಂಟಿ ತಂಡವು ವಿಕ್ರಮ್ ಸಿಂಹನನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು.

ಬಳಿಕ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಇಲಾಖೆ ಕಚೇರಿಯಲ್ಲಿ ಹೆಚ್ಚುವರಿ ವಿಚಾರಣೆ ನಡೆಯಿತು. ಅದಾಗಿ ಅವರನ್ನು ಬೇಲೂರಿನಲ್ಲಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಅಲ್ಲಿ ವಿಕ್ರಮ್ ಸಿಂಹ ಅವರಿಗೆ ಜಾಮೀನು ಸಿಕ್ಕಿದೆ.

ಬಂಧನವಾಗುತ್ತಿದ್ದಂತೆ ವಿಕ್ರಮ ಸಿಂಹ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು. ಅಧಿಕ ರಕ್ತದೊತ್ತಡದ ಕಾರಣ ತೊಂದರೆ ಅನುಭವಿಸಿದ್ದ ವಿಕ್ರಮ ಸಿಂಹ ಅವರಿಗೆ ಹಾಸನದ ಆಸ್ಪತ್ರೆಯಲ್ಲಿ ಕೆಲ ಹೊತ್ತು ಚಿಕಿತ್ಸೆ ನೀಡಿ ವಿಶ್ರಾಂತಿ ತೆಗೆದುಕೊಳ್ಳಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಮರ ಕಡಿದು ಸಾಗಿಸಿದ ಪ್ರಕರಣದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪಕ್ಕಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ ಮೋಹನ್ ಕುಮಾರ್ ಸೇರಿ ಐವರು ಅಧಿಕಾರಿಗಳನ್ನು ಅರಣ್ಯ ಇಲಾಖೆ ಅಮಾನತು ಮಾಡಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ: ವಿಕ್ರಮ್ ಸಿಂಹ ಬಂಧನವಾದ ನಂತರ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, "ಸಿದ್ದರಾಮಯ್ಯ ಸರ್ ಅವರನ್ನು ಎರಡು ಕಾರಣಗಳಿಗಾಗಿ ಹಾರ ಹಾಕಿ ಅಭಿನಂದಿಸಲು ಬಯಸುತ್ತೇನೆ. ಅವರ ಮಗನ ಭವಿಷ್ಯಕ್ಕಾಗಿ ಮತ್ತು ಅವರ ರಾಜಕೀಯ ಜೀವನಕ್ಕಾಗಿ ಅವರು ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು. ಅವರು ಮೈಸೂರು-ಕೊಡಗು ಕ್ಷೇತ್ರದಲ್ಲಿ ತಮ್ಮ ಮಗನನ್ನು ಲೋಕಸಭಾ ಚುನಾವಣೆಗೆ ಇಳಿಸಲು ಚಿಂತನೆ ನಡೆಸಿದ್ದು, ಇದಕ್ಕಾಗಿ ಈ ರೀತಿ ದಾಳಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರಂತಹ ಅಪ್ಪ ಎಲ್ಲರಿಗೂ ಸಿಗಲ್ಲ. ಅವರು ತಮ್ಮ ಪುತ್ರನ ಹಿತ ಕಾಪಾಡುವುದಕ್ಕಾಗಿ ಯಾವ ರೀತಿ ಕೆಲಸ ಮಾಡುವುದಕ್ಕೂ ಹೇಸಲ್ಲ. ನಮ್ಮ ಕುಟುಂಬವನ್ನು ನಾಶಮಾಡಿಯಾದರೂ ಯತೀಂದ್ರನ ಹಿತ ಕಾಪಾಡಲು ಅವರು ಮುಂದಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದರು.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ವರುಣಾದಿಂದ ಸಿದ್ದರಾಮಯ್ಯನವರ ಸ್ಪರ್ಧೆ ಕಾರಣಕ್ಕೆ ಯತೀಂದ್ರ ಹಿಂದೆ ಸರಿದಿದ್ದರು. ಈ ಹಿಂದೆ ಯತೀಂದ್ರ ಅವರು ವರುಣಾದ ಶಾಸಕರಾಗಿದ್ದರು.

Whats_app_banner