Namma Metro: ಬೆಂಗಳೂರು ತುಮಕೂರು ನಮ್ಮ ಮೆಟ್ರೋ ಸೇವೆ ಕನಸು ನನಸಾಗುವ ಸಾಧ್ಯತೆ; ಅಧ್ಯಯನಕ್ಕೆ ಬಿಡ್ ಆಹ್ವಾನಿಸಿದೆ ಬಿಎಂಆರ್‌ಸಿಎಲ್
ಬೆಂಗಳೂರು - ತುಮಕೂರು (Bengaluru- Tumakuru) ಗಳ ನಡುವೆ ಮೆಟ್ರೋವನ್ನು ವಿಸ್ತರಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಮುಕ್ತ ಬಿಡ್‌ಗಳನ್ನು ಬಿಎಂಆರ್‌ಸಿಎಲ್ ಆಹ್ವಾನಿಸಿದೆ. ಇಂದು ಟೆಂಡರ್ ಸಲ್ಲಿಕೆ ಅವಧಿ ಶುರುವಾಗಿದ್ದು, ಉಳಿದ ವಿವರಗಳು ಈ ವರದಿಯಲ್ಲಿದೆ.
ಬೆಂಗಳೂರು - ತುಮಕೂರು (Bengaluru- Tumakuru) ಗಳ ನಡುವೆ ಇಂಟರ್ ಸಿಟಿ ಮೆಟ್ರೋ ಸಂಪರ್ಕ (Intercity Metro Connectivity) ಬಯಸುತ್ತಿರುವ ಪ್ರಯಾಣಿಕರಿಗೆ ಸಿಹಿ ಸುದ್ದಿ ಇಲ್ಲಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ( BMRCL) ಸಾರ್ವಜನಿಕ-ಖಾಸಗಿ ಸಹಭಾಗಿತ್ವದಮಾದರಿಯಲ್ಲಿ ಉತ್ತರ ಬೆಂಗಳೂರಿನ ಮಾದಾವರದಿಂದ ತುಮಕೂರಿನವರೆಗೆ 52.41 ಕಿಮೀ ದೂರದವರೆಗೆ ಮೆಟ್ರೋವನ್ನು ವಿಸ್ತರಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಮುಕ್ತ ಬಿಡ್‌ಗಳನ್ನು ಆಹ್ವಾನಿಸಿದೆ.
ಟೆಂಡರ್ ಡಾಕ್ಯುಮೆಂಟ್ ಅನ್ನು ಇಂದಿನಿಂದ (ಮಾರ್ಚ್ 1) ಡೌನ್‌ಲೋಡ್ ಮಾಡಬಹುದು. ಬಿಡ್‌ಗಳನ್ನು ಸಲ್ಲಿಸಲು ಏಪ್ರಿಲ್ 2 ಕೊನೆಯ ದಿನಾಂಕ. ಅದೇ ದಿನ ಬಿಡ್‌ಗಳನ್ನು ತೆರೆಯಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೋ ಮಾರ್ಗಗಳನ್ನು ಘೋಷಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಮೆಟ್ರೋವನ್ನು ವಿಸ್ತರಿಸಲು ಕಾರ್ಯಸಾಧ್ಯತೆಯ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಬಿಡ್‌ಗಳನ್ನು ಆಹ್ವಾನಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಜಾಲಕ್ಕೆ 118 ಕಿ.ಮೀ. ಸೇರ್ಪಡೆ ಕಾರ್ಯಸಾಧ್ಯತೆ ಅಧ್ಯಯನ
ಕಳೆದ ವಾರ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಜಾಲಕ್ಕೆ 118 ಕಿಮೀ ಸೇರಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಡ್‌ಗಳನ್ನು ಆಹ್ವಾನಿಸಿತ್ತು. ಆದರೆ ಪಿಪಿಪಿ ಮಾದರಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮಾದಾವರ (ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ) ದಿಂದ ಕುಣಿಗಲ್ ಕ್ರಾಸ್ ವರೆಗೆ 11 ಕಿ.ಮೀ ದೂರದವರೆಗೆ ಹಸಿರು ಮಾರ್ಗವನ್ನು ವಿಸ್ತರಿಸಲು ಸರ್ಕಾರ ಆರಂಭದಲ್ಲಿ ಯೋಜಿಸಿತ್ತು. ಆದರೆ, ಕೊರಟಗೆರೆ ಶಾಸಕ, ಗೃಹ ಸಚಿವ ಜಿ ಪರಮೇಶ್ವರ ಅವರು ತಮ್ಮ ತವರು ಜಿಲ್ಲೆ ತುಮಕೂರಿಗೆ ಮೆಟ್ರೋವನ್ನು ಒಯ್ಯಲು ಉತ್ಸುಕರಾಗಿದ್ದಾರೆ. ತುಮಕೂರಿಗೆ ಮೆಟ್ರೋವನ್ನು ವಿಸ್ತರಿಸುವುದರಿಂದ ಬೆಂಗಳೂರಿನ ಮೇಲಿನ ಹೊರೆ ಕಡಿಮೆಯಾಗುತ್ತದೆ ಮತ್ತು ಖಾಸಗಿ ಕಂಪನಿಗಳು ಯೋಜನೆಯಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿವೆ ಎಂದು ಅವರು ಈ ಹಿಂದೆ ಹೇಳಿದರು. ರಾಷ್ಟ್ರೀಯ ಹೆದ್ದಾರಿ 48 ರ ಉದ್ದಕ್ಕೂ ಮೆಟ್ರೋ ಮಾರ್ಗವನ್ನು ನಿರ್ಮಿಸಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
ನಿರ್ಮಾಣದ ಅಂದಾಜು ವೆಚ್ಚ, ಟ್ರಾಫಿಕ್ ಸಮೀಕ್ಷೆ, ಮೆಟ್ರೋ ಮಾರ್ಗಗಳ ಜೋಡಣೆ, ಸ್ವಾಧೀನಪಡಿಸಿಕೊಳ್ಳಬೇಕಾದ ಆಸ್ತಿಗಳು, ಭೂಸ್ವಾಧೀನದಲ್ಲಿ ಸಂಭಾವ್ಯ ಅಡೆತಡೆಗಳು ಇತ್ಯಾದಿಗಳನ್ನು ಅಧ್ಯಯನವು ಒಳಗೊಂಡಿರುತ್ತದೆ ಎಂದು ಬಿಎಂಆರ್‌ಸಿಎಲ್‌ನ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ದೆಹಲಿ - ಮೀರತ್ ಮಾದರಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ
ಬೆಂಗಳೂರು - ತುಮಕೂರು ನಡುವಿನ ಅಂತರವು ದೆಹಲಿ ಮತ್ತು ಮೀರತ್ ನಂತೆ ಇದ್ದು, ಆ ನಗರಗಳ ನಡುವೆ ನಿರ್ಮಿಸುತ್ತಿರುವಂತೆಯೇ ಅರೆ-ಹೈ-ವೇಗದ ರೈಲು ಮಾರ್ಗವಾದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ಕಡೆಗೆ ಸರ್ಕಾರ ಗಮನಹರಿಸಬಹುದು. ಸರಳವಾಗಿ ಹೇಳಬೇಕು ಎಂದರೆ ಬೆಂಗಳೂರು ನಗರದಲ್ಲಿ ಮೆಟ್ರೋ ಮಾರ್ಗಗಳು ಪ್ರತಿ ಕಿಲೋಮೀಟರ್‌ಗೆ ನಿಲ್ದಾಣವನ್ನು ಹೊಂದಿವೆ. ಬೆಂಗಳೂರು ತುಮಕೂರು ನಡುವೆ ಮಾರ್ಗ ನಿರ್ಮಾಣವಾದರೆ ಆಗ ನಿಲ್ದಾಣಗಳ ಅಂತರ ಕನಿಷ್ಠ 5 ಕಿ.ಮೀ. ಇರಲಿದೆ.
ಕಾರ್ಯಸಾಧ್ಯತೆಯ ಅಧ್ಯಯನದ ಆಧಾರದ ಮೇಲೆ ಸರ್ಕಾರವು ಹೊಸ ಮಾರ್ಗಗಳನ್ನು ಅನುಮೋದಿಸುತ್ತದೆ ಅಥವಾ ತಿರಸ್ಕರಿಸುತ್ತದೆ. ಅನುಮೋದನೆಯ ಸಂದರ್ಭದಲ್ಲಿ, ಬಿಎಂಆರ್‌ಸಿಎಲ್ ವಿವರವಾದ ಯೋಜನಾ ವರದಿಗೆ (ಡಿಪಿಆರ್) ಹೋಗುತ್ತದೆ. ಯಾವುದೇ ಸಮಯಮಿತಿ ನಿಗದಿ ಮಾಡಿಲ್ಲ. ಆದರೂ ಮೆಟ್ರೋ ಮಾರ್ಗ ನಿರ್ಮಾಣ ಶುರುವಾಗಬೇಕಾದರೆ ಕನಿಷ್ಠ ಐದು ವರ್ಷ ಬೇಕಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)