ಬೆಂಗಳೂರು: ಬಿಎಂಟಿಸಿ ಟಿಕೆಟ್ ರಹಿತ ಪ್ರಯಾಣ, 8 ಲಕ್ಷ ರೂ ದಂಡ ವಸೂಲು; ಕುದುರೆ ರೇಸ್ ರದ್ದುಗೊಳಿಸಿದ ಕೋರ್ಟ್, ಆಟೋ ಚಾಲಕರ ವಿರುದ್ಧ ಪ್ರಕರಣ
ಬೆಂಗಳೂರು ವ್ಯಾಪ್ತಿಯಲ್ಲಿ ಟಿಕೆಟ್ ರಹಿತ ಪ್ರಯಾಣದ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿರುವ ಬಿಎಂಟಿಸಿ, 8 ಲಕ್ಷ ರೂಪಾಯಿ ದಂಡ ವಸೂಲು ಮಾಡಿದೆ. ಇನ್ನೊಂದೆಡೆ, ಬಿಟಿಎಫ್‌ನಲ್ಲಿ ಕುದುರೆ ರೇಸ್, ಬೆಟ್ಟಿಂಗ್ ರದ್ದುಗೊಳಿಸಿ ಕೋರ್ಟ್ ಆದೇಶ ನೀಡಿದೆ. ಮತ್ತೊಂದೆಡೆ, ಸಂಚಾರ ನಿಯಮ ಉಲ್ಲಂಘಿಸಿದ ಆಟೋಗಳ ವಿರುದ್ಧ ಪ್ರಕರಣ ದಾಖಲಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಕರ್ನಾಟಕದ ರಾಜಧಾನಿಯ ಸಾರಿಗೆ ವ್ಯವಸ್ಥೆಯ ಹೊಣೆ ಹೊತ್ತುಕೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಟಿಕೆಟ್ ರಹಿತ ಪ್ರಯಾಣದ ವಿರುದ್ಧ ಕಠಿಣ ಕ್ರಮ ಜರುಗಿಸತೊಡಗಿದೆ. ಇದರಂತೆ, ಬಿಎಂಟಿಸಿ ಬಸ್‌ಗಳಲ್ಲಿ ಮೇ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಸಿದ 4,064 ಪ್ರಯಾಣಿಕರಿಂದ 8,25,210 ರೂ. ದಂಡ ವಸೂಲಿ ಮಾಡಲಾಗಿದೆ.
ಮೇ ತಿಂಗಳಲ್ಲಿ 19,125 ಟ್ರಿಪ್‌ಗಳ ತಪಾಸಣೆ ನಡೆಸಲಾಗಿತ್ತು. ಇದೇ ಕಾರಣಕ್ಕೆ ಕರ್ತವ್ಯ ಲೋಪ ಎಸಗಿದ 1,092 ನಿರ್ವಾಹಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿದ್ದ ಆಸನಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 501 ಪುರುಷ ಪ್ರಯಾಣಿಕರಿಗೆ 50,100 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ರೇಸ್ ಪಂದ್ಯಗಳು ರದ್ದು: ರೇಸ್ ಪ್ರಿಯರಿಗೆ ನಿರಾಸೆ
ರೇಸ್ ಪ್ರಿಯರಿಗೆ ಕಹಿ ಸುದ್ದಿ. ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ಪಂದ್ಯಗಳನ್ನು ನಡೆಸಲು ಜೂನ್ 18ರಂದು ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ತಡೆ ನೀಡಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ನೇತೃತ್ವದ ವಿಭಾಗೀಯ ಪೀಠ ಪ್ರಕಟಿಸಿದೆ.
ಮೇಲ್ಮನವಿ ಇತ್ಯರ್ಥವಾಗುವ ತನಕ ಬೆಂಗಳೂರು ಟರ್ಫ್ ಕ್ಲಬ್ ಬೆಂಗಳೂರು ಅಥವಾ ಇನ್ನಾವುದೇ ನಗರಗಳಲ್ಲಿ ರೇಸ್ ನಡೆಸುವಂತಿಲ್ಲ ಎಂದು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಶನಿವಾರ ಮಧ್ಯಾಹ್ನ 1.30ರಿಂದ ಆರಂಭವಾಗಬೇಕಿದ್ದ ರೇಸ್ ಪಂದ್ಯಗಳು ರದ್ದಾಗಿದ್ದವು. ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಕೆ.ಶಶಿಕಿಣ್ ಶೆಟ್ಟಿ ವಾದ ಮಂಡನೆ ಮಾಡಿದ್ದರು.
ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲು
ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕರ ವಿರುದ್ಧ 833 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಪಡೆಯುವ ಆಟೋ ಚಾಲಕರ ವಿರುದ್ಧ 213 ಪ್ರಕಣ ದಾಖಲಿಸಿದ್ದರೆ ಗ್ರಾಹಕರು ಕರೆದ ಕಡೆ ಬಾಡಿಗೆ ಹೋಗಲು ನಿರಾಕರಿಸಿದ ಚಾಲಕರ ವಿರುದ್ಧ 234 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲನಾ ಪರವಾನಗಿ (ಡಿಎಲ್) ಇಲ್ಲದೇ ಆಟೋ ಚಾಲನೆ ಮಾಡುತ್ತಿದ್ದ ಮೂವರ ವಿರುದ್ಧ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕರ ವಿರುದ್ಧ 383 ಪ್ರಕರಣಗಳನ್ನು ದಾಖಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದವು. ಜೊತೆಗೆ ಡಿಎಲ್ ಇಲ್ಲದೆ ಆಟೋ ಚಾಲನೆ ಮಾಡುತ್ತಿರುವುದು, ಕರೆದಲ್ಲಿ ಬರಲು ನಿರಾಕರಿಸುತ್ತಿರುವ ಮತ್ತು ಹೆಚ್ಚಿನ ದರಕ್ಕೆ ಬೇಡಿಕೆ ಇರಿಸುತ್ತಿರುವ ದೂರುಗಳು ಬಂದಿದ್ದರಿಂದ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ
ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ಬಟ್ಟೆ ಅಂಗಡಿಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು 4 ಲಕ್ಷ ರೂ. ಮೌಲ್ಯದ ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಮೂಲ್ ಪೇಟೆ ಅಂಗಡಿಯೊಂದರಲ್ಲಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಪ್ರತಿಷ್ಠಿತ ಕಂಪನಿಗಳ ಬಟ್ಟೆಗಳನ್ನು ಅಸಲಿ ಎಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡಿ ಅವರನ್ನು ವಂಚಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
