Viral News: ಬೆಂಗಳೂರು ಬಸ್‌ನಲ್ಲಿ ಮಹಿಳೆಗೆ ಹೊಡೆದ ಪ್ರಕರಣದ ವಿಡಿಯೋ ವೈರಲ್; ಬಿಎಂಟಿಸಿ ಕಂಡಕ್ಟರ್ ಅಮಾನತು
ಬೆಂಗಳೂರು ಬಸ್‌ನಲ್ಲಿ ಮಹಿಳೆಗೆ ಹೊಡೆದ ಪ್ರಕರಣದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಿಗೆ ಬಿಎಂಟಿಸಿ ಬಸ್ ಕಂಡಕ್ಟರ್ ಅನ್ನು ಅಮಾನತುಗೊಳಿಸಿದೆ. ಅಲ್ಲದೆ, ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದಾಗಿ ಬಿಎಂಟಿಸಿ ಸ್ಪಷ್ಟಪಡಿಸಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.
ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರನ್ನು ಥಳಿಸಿದ ಆರೋಪದ ಮೇಲೆ ಬೆಂಗಳೂರಿನ ಬಸ್ ಕಂಡಕ್ಟರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಜಯನಗರ ಪೂರ್ವ ವಲಯದ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬಿಎಂಟಿಸಿ ಬಸ್ ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು.
ಈ ಘಟನೆ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಂಗಳವಾರ, ಬಸ್ ಕಂಡಕ್ಟರನ್ನು ಅಮಾನತುಗೊಳಿಸಿರುವುದಾಗಿ ಹೇಳಿದೆ. ಅಲ್ಲದೆ, ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದೆ.
ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಕಂಡಕ್ಟರ್ ಮತ್ತು ಮಹಿಳೆ ವಾದಿಸುತ್ತಿರುವುದು ಕಂಡುಬಂದಿದೆ. ಸ್ವಲ್ಪ ಸಮಯದ ನಂತರ ಆ ಮಹಿಳೆಯು ಬಸ್ ಕಂಡಕ್ಟರ್‌ನ ಕಪಾಳಕ್ಕೆ ಹೊಡೆದಳು. ಇದಕ್ಕೆ ಪ್ರತೀಕಾರವಾಗಿ ಕಂಡಕ್ಟರ್ ಆಕೆಗೆ ಹೊಡೆಯುತ್ತಿರುವುದು ಕಂಡುಬಂದಿದೆ.
ಇಲ್ಲಿದೆ ಆ ವೈರಲ್ ವೀಡಿಯೊ
ಮಹಿಳಾ ಸುರಕ್ಷತೆಗೆ ಆದ್ಯತೆ, ಬಿಎಂಟಿಸಿ ಸ್ಪಷ್ಟೀಕರಣ
ಬಸ್ ಪ್ರಯಾಣದ ಟಿಕೆಟ್ ವಿಚಾರದಲ್ಲಿ ಮಹಿಳೆ ಮತ್ತು ಬಸ್ ನಿರ್ವಾಹಕನ ನಡುವೆ ವಾದ ನಡೆಯುತ್ತಿತ್ತು. ಒಂದು ಹಂತದಲ್ಲಿ ಸಹನೆ ಮೀರಿ ವರ್ತಿಸಿದ ಮಹಿಳೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದರು. ಪ್ರತಿಯಾಗಿ ಕಂಡಕ್ಟರ್ ಕೂಡ ಹಲ್ಲೆ ನಡೆಸಿದರು. ಈ ವಿಚಾರವಾಗಿ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಹಿಳೆ ಮೇಲೆ ಹಲ್ಲೆ ನಡೆಸಿದ ಕಂಡಕ್ಟರ್ ಹೊನ್ನಪ್ಪ ನಾಗಪ್ಪ ಅಗಸರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಸ್ ಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನ, ಪ್ರತ್ಯೇಕ ಬಾಗಿಲು, ಪ್ಯಾನಿಕ್ ಬಟನ್ ಅಳವಡಿಕೆ, ಸಿಸಿಟಿವಿ, ಮಾಹಿತಿ ಫಲಕಗಳ ಅಳವಡಿಕೆ, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ, ಸಹಾಯವಾಣಿ ಮುಂತಾದ ಕ್ರಮಗಳನ್ನು ನಿಗಮ ಕೈಗೊಂಡಿದೆ. ಮಹಿಳಾ ಪ್ರಯಾಣಿಕರು ಕಂಪನಿಯ ಬಸ್ಸುಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.
ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಭಾವನೆ ಮೂಡಿಸಲು ಎಲ್ಲಾ 27,000 ಚಾಲನಾ ಸಿಬ್ಬಂದಿಗೆ ಲಿಂಗ ಸಂವೇದನಾ ತರಬೇತಿ ನೀಡಲಾಗುತ್ತಿದೆ. ನಮ್ಮ ನಿಗಮವು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದೆ ಮತ್ತು ಮಹಿಳಾ ಪ್ರಯಾಣಿಕರ ವಿರುದ್ಧ ಯಾವುದೇ ರೀತಿಯ ಹಿಂಸಾಚಾರ, ಅಸಭ್ಯ ವರ್ತನೆ ಮತ್ತು ಅಹಿತಕರ ಘಟನೆಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಬಿಎಂಟಿಸಿ ವಿವರಿಸಿದೆ.
ಕಂಡಕ್ಟರ್ ಮೇಲಾದ “ಹಲ್ಲೆ” ನಿರ್ಲಕ್ಷಿಸಲ್ಪಡುತ್ತಿದೆ ನೋಡಿ…
ಆದಾಗ್ಯೂ, ಈ ಪ್ರಕರಣದಲ್ಲಿ ಹಲವಾರು ಇಂಟರ್ನೆಟ್ ಬಳಕೆದಾರರು ಮಹಿಳೆಯೇ ಮೊದಲು ಕಂಡಕ್ಟರ್‌ಗೆ ಹೊಡೆದರು. ಕಂಡಕ್ಟರ್ ನಡೆಸಿರುವ ಹಲ್ಲೆ ಪ್ರತೀಕಾರದ ಕ್ರಮ ಎಂಬುದರ ಕಡೆಗೆ ಗಮನಸೆಳೆದರು.
“ಇಲ್ಲಿ ಕಂಡಕ್ಟರ್ ಅನ್ನು ಬೆಂಬಸುತ್ತಿಲ್ಲ. ಆದರೆ, ವಿಡಿಯೋದಲ್ಲಿರುವ ಘಟನೆ ಪ್ರಕಾರ, ಮೊದಲು ಕಂಡಕ್ಟರ್‌ಗೆ ಹೊಡೆದಿರುವುದು ಮಹಿಳೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಂಡಕ್ಟರ್ ಆ ಮಹಿಳೆಗೆ ಹೊಡೆದಿರುವುದು ಕಂಡುಬಂದಿದೆ. ಆದರೆ ಬಿಎಂಟಿಸಿ ಸೇರಿ ಇತರೆ ಏಜೆನ್ಸಿಗಳು ಇದನ್ನು ಅನುಕೂಲಕರವಾಗಿ ನಿರ್ಲಕ್ಷಿಸಿವೆ” ಎಂಬುದರ ಕಡೆಗೆ ಬೆಂಗಳೂರು ನಿವಾಸಿ ಯತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.