BMTC News: ಬೆಂಗಳೂರು ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕಿ, ಚಾಲಕನ ಸಮಯಪ್ರಜ್ಞೆ; ಮೂವರು ಕಳ್ಳಿಯರ ಬಂಧನ
Bengaluru News: ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ಮೊಬೈಲ್ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಮೂವರು ಕಳ್ಳಿಯರನ್ನು ಬಸ್ ನಿರ್ವಾಹಕಿ ಮತ್ತು ಚಾಲಕ ಚಾಣಾಕ್ಷ್ಯತನದಿಂದ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೊಬೈಲ್ ಕಳ್ಳರ ಕಳ್ಳತನವನ್ನು ಮೊದಲು ಗುರುತಿಸಿದ ನಿರ್ವಾಹಕಿ ಈ ವಿಚಾರವನ್ನ ಚಾಲಕನ ಗಮನಕ್ಕೆ ತಂದಿದ್ದಾರೆ.

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್, ಪರ್ಸ್, ಚಿನ್ನಾಭರಣ ಕಳವು ಅವ್ಯಾಹತವಾಗಿ ನಡೆಯುತ್ತಿದೆ. ಇದೇ ರೀತಿ ಬಿಎಂಟಿಸಿ ಬಸ್‌ನಲ್ಲಿ ಮೊಬೈಲ್ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಮೂವರು ಕಳ್ಳಿಯರನ್ನು ಬಸ್ ನಿರ್ವಾಹಕಿ ಮತ್ತು ಚಾಲಕ ಚಾಣಾಕ್ಷ್ಯತನದಿಂದ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೊಬೈಲ್ ಕಳ್ಳರ ಕಳ್ಳತನವನ್ನು ಮೊದಲು ಗುರುತಿಸಿದ ನಿರ್ವಾಹಕಿ ಈ ವಿಚಾರವನ್ನ ಚಾಲಕನ ಗಮನಕ್ಕೆ ತಂದಿದ್ದಾರೆ. ತಕ್ಷಣ, ಬಾಗಿಲುಗಳನ್ನು ಲಾಕ್ ಮಾಡಿದ ಚಾಲಕ ಈ ಮೂವರು ಕಳ್ಳಿಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಯಾಣಿಕರ ಮೊಬೈಲ್ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ ಓಜಿಕುಪ್ಪಂ ತಂಡದ ಮೂವರನ್ನು ಬೆಂಗಳೂರಿನ ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಜಾವಾಣಿ ವರದಿ ತಿಳಿಸಿದೆ. ಇವರನ್ನು ಆಂಧ್ರಪ್ರದೇಶದ ಓಜಿಕುಪ್ಪಂನವರು ಎಂದು ಗುರುತಿಸಲಾಗಿದೆ. 36 ವರ್ಷ ವಯಸ್ಸಿನ ಅಮೃತಾ, 34 ವರ್ಷದ ಕೋಕಿಲಾ ಮತ್ತು 30 ವರ್ಷ ವಯಸ್ಸಿನ ನಕ್ಷತ್ರಾ ಬಂಧಿತರು. ಇವರು ಪ್ರಯಾಣಿಕರಿಗೆ ಅನುಮಾನ ಬಾರದಂತ ಪ್ರಯಾಣಿಕರ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದರು.
ಈ ಘಟನೆ ಮಾರ್ಚ್ 10ರಂದು ನಡೆದಿದೆ. ಅಂದು ರಾತ್ರಿ ಮೆಜೆಸ್ಟಿಕ್‌ನಿಂದ ವಿಜಿಪುರಕ್ಕೆ ಹೋಗುವ ಬಸ್‌ನಲ್ಲಿ ಇವರಿದ್ದರು. ಈ ಮೂವರು ಕಳ್ಳಿಯರಲ್ಲಿ ಒಬ್ಬಾಕೆ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿದ್ದ ಮೊಬೈಲ್ ಕಳ್ಳತನ ಮಾಡಿದಳು. ಇದನ್ನು ಬಸ್ ನಿರ್ವಾಹಕಿ ಗಮನಿಸಿದ್ದಾರೆ. "ಇದೆಲ್ಲ ಮಾಮೂಲು, ನನಗ್ಯಾಕೆ ತಲೆಬಿಸಿ. ರಾತ್ರಿಯಾಯಿತು, ಬೇಗ ಮನೆಗೆ ಸೇರಿಕೊಳ್ಳೋಣ" ಎಂದು ಯೋಚಿಸದ ಆ ಕಂಡೆಕ್ಟರ್ ಈ ವಿಷಯವನ್ನು ಬಸ್ ಚಾಲಕನ ಗಮನಕ್ಕೆ ತಂದಿದ್ದಾರೆ. ಚಾಲಕ ತಕ್ಷಣ ಬಸ್‌ನ ಬಾಗಿಲುಗಳನ್ನು ಲಾಕ್ ಮಾಡಿದ್ದಾರೆ.
ಅನಿರೀಕ್ಷಿತವಾಗಿ ನಡೆದ ಈ ಬೆಳವಣಿಗೆಯಿಂದ ಮೂವರು ಆತಂಕಗೊಂಡಿದ್ದಾರೆ. "ಮಗು ಅಳ್ತಿದೆ, ಬಾಗಿಲು ತೆರೆಯಿರಿ, ನಾವು ಇಳಿಯಬೇಕು" ಎಂದು ಹೈಡ್ರಾಮಾ ಮಾಡಿದ್ದಾರೆ. ಬಾಗಿಲು ತೆರೆಯದ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವಾಗ ಈ ಮೂವರು ತಾವು ಕದ್ದ ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಬಸ್‌ನ ಸೀಟಿನ ಕೆಳಗೆ ಎಸೆದಿದ್ದಾರೆ.
ಪೊಲೀಸರು ಪರಿಶೀಲಿಸಿದ ವೇಳೆಯಲ್ಲಿ ಇವರ ಬ್ಯಾಗ್ನಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ಕೆಲವು ಮೊಬೈಲ್‌ಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ. "ಇವರು ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಆಂಧ್ರಪ್ರದೇಶದ ಓಜಿಕುಪ್ಪಂನಲ್ಲಿ ಮಾರಾಟ ಮಾಡುತ್ತಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ. ಬಿಎಂಟಿಸಿ ಬಸ್‌ನ ನಿರ್ವಾಹಕಿ ಮತ್ತು ಚಾಲಕನ ಸಮಯ ಪ್ರಜ್ಞೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಬೆಂಗಳೂರು ಬಿಎಂಟಿಸಿ ಬಸ್‌ಗಳಲ್ಲ ಪರ್ಸ್, ಮೊಬೈಲ್ ಕಳ್ಳತನವಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ವಿಶೇಷವಾಗಿ ಹೆಚ್ಚು ಜನದಟ್ಟಣೆ ಇರುವ ಬಸ್‌ಗಳನ್ನು ಇಂತಹ ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ. ಈಗ ಚಿನ್ನಾಭರಣಗಳ ದರವೂ ದುಬಾರಿಯಾಗಿದೆ. ಚಿನ್ನದ ಕಳ್ಳತನ ಹೆಚ್ಚಾಗಿದೆ. ಈ ಸಮಯದಲ್ಲಿ ಪ್ರಯಾಣಿಕರು ಹೆಚ್ಚಿನ ಜಾಗೃತೆಯಿಂದ ಇರಬೇಕಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪೊಲೀಸರು ಎಚ್ಚರಿಸಿದ್ದಾರೆ.
