BMTC Updates: ಬಿಎಂಟಿಸಿ ಬಸ್‌ಗಳಲ್ಲಿ ರಾತ್ರಿ ಪ್ರಯಾಣದರ ಏರಿಕೆ ರದ್ದು, ನಮ್ಮ ಬಿಎಂಟಿಸಿ ಆಪ್ ಸೆಪ್ಟೆಂಬರ್ 25ಕ್ಕೆ ಬಿಡುಗಡೆ
ಬಿಎಂಟಿಸಿ ಬಸ್‌ಗಳ ರಾತ್ರಿ ಪ್ರಯಾಣದರ ಒಂದೂವರೆ ಪಟ್ಟು ಹೆಚ್ಚಿತ್ತು. ಇದನ್ನು ರದ್ದುಗೊಳಿಸುವ ತೀರ್ಮಾನವನ್ನು ಬಿಎಂಟಿಸಿ ಪ್ರಕಟಿಸಿದೆ. ಇದಲ್ಲದೆ ಇದೇ ತಿಂಗಳ 25ಕ್ಕೆ ನಮ್ಮ ಬಿಎಂಟಿಸಿ ಆಪ್ ಬಿಡುಗಡೆ ಮಾಡುವುದಕ್ಕೂ ಚಿಂತನೆ ನಡೆಸಿದೆ ಎಂದು ವರದಿಗಳು ಹೇಳಿವೆ.
ಬಿಎಂಟಿಸಿ ಬಸ್ ಪ್ರಯಾಣ ದರವು ದಿನದ 24 ಗಂಟೆಯೂ ಒಂದೇ ಆಗಿರುತ್ತದೆ ಮತ್ತು ರಾತ್ರಿ ಪ್ರಯಾಣ ದರ ಏರಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಘೋಷಿಸಿದೆ.
ರಾತ್ರಿ ಪ್ರಯಾಣದರ ಏರಿಕೆ ರದ್ದುಗೊಳಿಸಿದ ಬಗ್ಗೆ ಬಿಎಂಟಿಸಿ ಹೇಳಿರುವುದು ಇಷ್ಟು
ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ದಕ್ಷ, ವಿಶ್ವಾಸಾರ್ಹ, ಆರಾಮದಾಯಕ ಮತ್ತು ಕೈಗೆಟುಕುವ ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ, ತಡರಾತ್ರಿ ಮತ್ತು ಮುಂಜಾನೆ, ಬಿಎಂಟಿಸಿ ರಾತ್ರಿ-ಸೇವಾ ವೇಳಾಪಟ್ಟಿಯನ್ನು ನಿರ್ವಹಿಸುತ್ತಿದೆ. ಪ್ರಯಾಣಿಕರ ಬಸ್ ದರಗಳಲ್ಲಿ ಏಕರೂಪತೆಯನ್ನು ತರುವ ಉದ್ದೇಶದಿಂದ, ರಾತ್ರಿ-ಸೇವೆಗಳಿಗೆ ಸಾಮಾನ್ಯ ಸೇವಾ ಪ್ರಯಾಣಿಕರ ಬಸ್ ದರಗಳನ್ನು ಜಾರಿಗೆ ತಂದಿದೆ. ರಾತ್ರಿ ಪಾಳಿ ಮುಗಿಸಿ ತಡರಾತ್ರಿ ಅಥವಾ ಮುಂಜಾನೆ ಕೆಲಸ ಮುಗಿಸಿ ಹಿಂತಿರುಗುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಬಸ್ ದರವನ್ನು ಒಂದೂವರೆ ಪಟ್ಟು ಹೆಚ್ಚಿಸಲಾಗಿತ್ತು. ಆದಾಗ್ಯೂ, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಹೆಂಗಸರು ಬಿಎಂಟಿಸಿ ಬಸ್‌ಗಳಲ್ಲಿ 24 ಗಂಟೆಯೂ ಪ್ರಯಾಣಿಸುತ್ತಿದ್ಧಾರೆ. ಪ್ರಯಾಣಿಕರ ಕೊರತೆ ಬಸ್‌ಗಳನ್ನು ಕಾಡಿಲ್ಲ. ಕಳೆದ ಕೆಲವು ತಿಂಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಹೆಚ್ಚುವರಿ ಬಸ್ ಸೇವೆ ಒದಗಿಸಬೇಕಾಗಿ ಬಂದಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ನಮ್ಮ ಬಿಎಂಟಿಸಿ ಆಪ್ ಸೆ.25ಕ್ಕೆ ಬಿಡುಗಡೆ
ಬಿಎಂಟಿಸಿ ಬಸ್‌ಗಳ ಲೈವ್ ಟ್ರಾಕಿಂಗ್ ಅನುಕೂಲ ಮಾಡಿಕೊಡುವ ನಮ್ಮ ಬಿಎಂಟಿಸಿ ಆಪ್ ಅನ್ನು ಬಿಡುಗಡೆ ಮಾಡಲು ಬಿಎಂಟಿಸಿ ಚಿಂತನೆ ನಡೆಸಿದೆ. ವರದಿಗಳ ಪ್ರಕಾರ, ನಮ್ಮ ಬಿಎಂಟಿಸಿ ಆಪ್ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ. ಬಿಎಂಟಿಸಿಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಉಪಕ್ರಮ ಜಾರಿಗೊಳಿಸಲಾಗುತ್ತಿದೆ.