Bengaluru News: ಬೆಂಗಳೂರಿನ ಉದ್ದಗಲಕ್ಕೂ ಸಂಚರಿಸಲಿವೆ ಬಿಎಂಟಿಸಿಯ 120 ಮಿನಿ ಇ-ಬಸ್‌ಗಳು; ಪ್ರಗತಿಯಲ್ಲಿದೆ ಟೆಂಡರ್
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರಿನ ಉದ್ದಗಲಕ್ಕೂ ಸಂಚರಿಸಲಿವೆ ಬಿಎಂಟಿಸಿಯ 120 ಮಿನಿ ಇ-ಬಸ್‌ಗಳು; ಪ್ರಗತಿಯಲ್ಲಿದೆ ಟೆಂಡರ್

Bengaluru News: ಬೆಂಗಳೂರಿನ ಉದ್ದಗಲಕ್ಕೂ ಸಂಚರಿಸಲಿವೆ ಬಿಎಂಟಿಸಿಯ 120 ಮಿನಿ ಇ-ಬಸ್‌ಗಳು; ಪ್ರಗತಿಯಲ್ಲಿದೆ ಟೆಂಡರ್

ಬೆಂಗಳೂರಿನ ಮೂಲೆ ಮೂಲೆಯ ಸಾರಿಗೆ ಸಂಪರ್ಕಕ್ಕೆ 120 ಮಿನಿ ಇ-ಬಸ್‌ಗಳನ್ನು ಓಡಿಸಲು ಬಿಎಂಟಿಸಿ ಚಿಂತನೆ ನಡೆಸಿದೆ. ಕಿರಿದಾದ ರಸ್ತೆಗಳಲ್ಲಿ ಸಂಚರಿಸಬಲ್ಲ 9 ಮೀಟರ್ ಉದ್ದದ ಇ- ಬಸ್ ಇದಾಗಿದ್ದು, ಅತ್ಯಾಧುನಿಕ ಸೌಕರ್ಯ ಹೊಂದಿರಲಿದೆ. ಇದಕ್ಕೆ ಸಂಬಂಧಿಸಿದ ಟೆಂಡರ್ ಅನ್ನು ಇತ್ತೀಚೆಗೆ ಆಹ್ವಾನಿಸಿದೆ.

ಜೆಬಿಎಂ ಎನ್‌ಟಿಪಿಸಿ ಮಿಡಿ ಬಸ್‌ (ಸಂಗ್ರಹ ಚಿತ್ರ)
ಜೆಬಿಎಂ ಎನ್‌ಟಿಪಿಸಿ ಮಿಡಿ ಬಸ್‌ (ಸಂಗ್ರಹ ಚಿತ್ರ) (PC - Srinivas Alavilli / BMTC)

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಕಿರಿದಾದ ರಸ್ತೆಗಳ ಮೂಲಕ ಹೆಚ್ಚು ಒಳಭಾಗದಲ್ಲಿರುವ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಮಿನಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 120 ನಾನ್ ಎಸಿ ಮಿನಿ ಎಲೆಕ್ಟ್ರಿಕ್ ಬಸ್‌ಗಳನ್ನು ಲೀಸ್ ಮಾದರಿಯಲ್ಲಿ ಸೇರಿಸಲು ಟೆಂಡರ್ ಆಹ್ವಾನಿಸಿದೆ.

ಒಟ್ಟು ವೆಚ್ಚದ ಒಪ್ಪಂದದ ಮಾದರಿಯಲ್ಲಿ ಈ ಬಸ್‌ಗಳನ್ನು ಬಳಸಲು ಬಿಎಂಟಿಸಿ ಮುಂದಾಗಿದೆ. ಒಂಬತ್ತು ಮೀಟರ್ ಉದ್ದದ ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳ ಸಂಗ್ರಹಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡುವುದಕ್ಕಾಗಿ ಬಿಎಂಟಿಸಿ ಟೆಂಡರ್ ಕರೆದಿರುವಂಥದ್ದು.

ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಪ್ಯಾಸೆಂಜರ್ ಡಿಸ್‌ಪ್ಲೇ ಬೋರ್ಡ್‌ಗಳು, ಸಿಸಿಟಿವಿ ವ್ಯವಸ್ಥೆಗಳು, ಪ್ಯಾನಿಕ್ ಬಟನ್‌ಗಳು ಇತ್ಯಾದಿಗಳನ್ನು ಇ -ಬಸ್‌ಗಳಲ್ಲಿ ಅಳವಡಿಸಲಾಗಿದೆ. ಬಿಎಂಟಿಸಿಯು ಫೆಬ್ರವರಿ 13 ರಂದು ಟೆಂಡರ್ ತೆರೆಯುವ ನಿರೀಕ್ಷೆಯಿದೆ.

ರಾಷ್ಟ್ರೀಯ ಕ್ಲೀನ್ ಏರ್ ಪ್ರೋಗ್ರಾಂ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ ರಾಜ್ಯ ನಗರ ಸಾರಿಗೆ ನಿಧಿ ಭಾಗವಾಗಿ ಒಟ್ಟು ವೆಚ್ಚದ ಒಪ್ಪಂದದ ಮಾದರಿಯಲ್ಲಿ ಈ ಬಸ್‌ಗಳನ್ನು ಬೆಂಗಳೂರು ರಸ್ತೆಗಳಲ್ಲಿ ಬಳಕೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಮನಿ ಕಂಟ್ರೋಲ್ ವರದಿ ಹೇಳಿದೆ.

ಈ ಒಪ್ಪಂದಕ್ಕೆ ಒಳಪಟ್ಟ ಸೇವಾ ಪೂರೈಕೆದಾರರು ಪ್ರತಿ ಬಸ್‌ಗೆ ಪ್ರತಿದಿನ 180 ಖಚಿತ ಕಿಲೋಮೀಟರ್ ಸಂಚಾರ ನಿರ್ವಹಣೆಯ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಈ ಇ-ಬಸ್‌ಗಳ ಕಾರ್ಯಾಚರಣೆಗಾಗಿ ಬಿಎಂಟಿಸಿಯಿಂದ ಮೂರು ಡಿಪೋಗಳು ಮತ್ತು ಅವಕಾಶ ಶುಲ್ಕ ವಿಧಿಸಲು ಮೂರು ಸ್ಥಳಗಳನ್ನು ಒದಗಿಸಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ ಬಿಎಂಟಿಸಿಯು ನಗರದ ಆಯ್ದ ರಸ್ತೆಗಳಲ್ಲಿ ಮಿನಿ ಬಸ್‌ಗಳನ್ನು ಮೆಟ್ರೋ ಸಂಪರ್ಕದ ಸಾರಿಗೆ ವ್ಯವಸ್ಥೆಯಲ್ಲಿ ಬಳಸುತ್ತಿದೆ. 2022ರ ಫೆಬ್ರವರಿಯಲ್ಲಿ 10 ದಿನಗಳ ಪ್ರಾಯೋಗಿಕ ಸೇವೆ ಸಂದರ್ಭದಲ್ಲಿ ಎರಡು ಬಸ್‌ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಆಗ ತಾತ್ಕಾಲಿಕವಾಗಿ ತನ್ನ ಅಧೀನದಲ್ಲಿದ್ದ 186 ಬಸ್‌ಗಳ ಸೇವೆಯನ್ನು ಬಿಎಂಟಿಸಿ ತಡೆಹಿಡಿದಿತ್ತು. ಈ ಬಸ್‌ಗಳು 9.2 ಮೀಟರ್ ಉದ್ದ ಇದ್ದು, ಸಾಮಾನ್ಯ ಬಸ್‌ಗಳ (12 ಮೀಟರ್‌) ಉದ್ದಕ್ಕೆ ಹೋಲಿಸಿದರೆ ಕಡಿಮೆ. ಈ ಬಸ್‌ನಲ್ಲಿ 30 ಪ್ರಯಾಣಿಕರಷ್ಟೇ ಪ್ರಯಾಣಿಸಬಹುದು.

ಪ್ರಸ್ತುತ, ಬಿಎಂಟಿಸಿ ಅಧೀನದಲ್ಲಿ 90 ನಾನ್-ಎಸಿ ಮಿನಿ (9ಮೀ) ಜೆಬಿಎಂ ಎನ್‌ಟಿಪಿಸಿ ಬಸ್‌ಗಳು ಮತ್ತು ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆ ಸ್ವಿಚ್ ಮೊಬಿಲಿಟಿ ಲಿಮಿಟೆಡ್‌ನ 300 (12ಮೀ) ಬಸ್‌ಗಳು ಸೇರಿ 390 ಇ-ಬಸ್‌ಗಳು ಕಾರ್ಯನಿರ್ವಹಿಸುತ್ತದೆ.

ಏತನ್ಮಧ್ಯೆ, ಬಿಎಂಟಿಸಿ ಮೂರನೇ ಬಾರಿಗೆ 320 ಎಸಿ ಇ-ಬಸ್‌ಗಳಿಗೆ ಟೆಂಡರ್ ಆಹ್ವಾನಿಸಿದೆ. ಮೊದಲ ಟೆಂಡರ್‌ಗೆ ಯಾವುದೇ ಬಿಡ್‌ದಾರರು ಪಾಲ್ಗೊಂಡಿರಲಿಲ್ಲ. ಎರಡನೇ ಟೆಂಡರ್‌ಗೆ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಮಾತ್ರ ಬಿಡ್ ಸಲ್ಲಿಸಿತ್ತು.ಇ-ಬಸ್‌ಗಳನ್ನು ನಿರ್ವಹಿಸಲು ಪ್ರತಿ ಕಿ.ಮೀಗೆ 85 ರೂಪಾಯಿ ನಮೂದಿಸಿತ್ತು. ಹೀಗಾಗಿ ಬಿಎಂಟಿಸಿ ಮತ್ತೊಂದು ಸುತ್ತಿನ ಟೆಂಡರ್ ಕರೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ (ಡಿಸೆಂಬರ್ 26) ಬಿಎಂಟಿಸಿಯ 100 ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಿದ್ದರು. ಅಲ್ಲದೆ, ಏಪ್ರಿಲ್ 2024ರೊಳಗೆ 1400 ಹೊಸ ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿ ಸೇರಲಿವೆ ಎಂದು ಹೆಳಿದ್ದರು.

Whats_app_banner