ಬೆಂಗಳೂರಿನ ಕದಂಬ ಹೋಟೆಲ್‌ಗೆ ಬಾಂಬ್ ಸ್ಫೋಟದ ಬೆದರಿಕೆ ಪತ್ರ; ತೀವ್ರ ತಪಾಸಣೆ ಬಳಿಕ ಹುಸಿ ಬೆದರಿಕೆ ಎಂದ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಕದಂಬ ಹೋಟೆಲ್‌ಗೆ ಬಾಂಬ್ ಸ್ಫೋಟದ ಬೆದರಿಕೆ ಪತ್ರ; ತೀವ್ರ ತಪಾಸಣೆ ಬಳಿಕ ಹುಸಿ ಬೆದರಿಕೆ ಎಂದ ಪೊಲೀಸರು

ಬೆಂಗಳೂರಿನ ಕದಂಬ ಹೋಟೆಲ್‌ಗೆ ಬಾಂಬ್ ಸ್ಫೋಟದ ಬೆದರಿಕೆ ಪತ್ರ; ತೀವ್ರ ತಪಾಸಣೆ ಬಳಿಕ ಹುಸಿ ಬೆದರಿಕೆ ಎಂದ ಪೊಲೀಸರು

ಬೆಂಗಳೂರಿನ ಕದಂಬ ಹೋಟೆಲ್‌ಗೆ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ. ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಕರೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. (ವರದಿ: ಎಚ್. ಮಾರುತಿ)

ಬೆಂಗಳೂರಿನ ಕದಂಬ ಹೋಟೆಲ್‌ಗೆ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಬಂದಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಕದಂಬ ಹೋಟೆಲ್‌ಗೆ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಬಂದಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣ ಹಸಿರಾಗಿರುವಾಗಲೇ ಮತ್ತೊಂದು ಹೋಟೆಲ್‌ಗೆ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಬಂದಿದ್ದು, ಆತಂಕ ಸೃಷ್ಟಿಸಿದೆ. ಬೆಂಗಳೂರಿನ ಜಾಲಹಳ್ಳಿಯಲ್ಲಿಯ ಎಚ್‌ಎಂಟಿ ಮೈದಾನದ ಹತ್ತಿರವಿರುವ ಕದಂಬ ಗಾರ್ಡೇನಿಯಾ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಮೈಸೂರಿನಿಂದ ಈ ಪತ್ರ ಬಂದಿದೆ ಎಂದು ಗೊತ್ತಾಗಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಪಾಸಣೆ ನಡೆಸಿದ್ದಾರೆ. ಈ ಹೋಟೆಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಪತ್ರ ಕಳುಹಿಸಿದ್ದಾನೆ. ಇದೇ ಪತ್ರದಲ್ಲಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟ ಮಾಡಿದ್ದು ನಾನೇ. ಈಗ ಕದಂಬ ಗಾರ್ಡೇನಿಯಾ ಹೋಟೆಲ್‌ನಲ್ಲಿಯೂ ನಾನೇ ಬಾಂಬ್ ಇಟ್ಟಿದ್ದು, ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಎಂದಿನಂತೆ ಪೋಸ್ಟ್ ಆಫೀಸ್ ಸಿಬ್ಬಂದಿ ಬೆಳಗ್ಗೆ 11.50ಕ್ಕೆ ಠಾಣೆಗೆ ಪತ್ರ ತಂದು ಕೊಟ್ಟಿದ್ದಾರೆ. ಈ ಪತ್ರವನ್ನು ಓದಿದ ಠಾಣೆಯ ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿದೆ. ಇವರು ಹೋಟೆಲ್‌ನಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆತಂಕಗೊಂಡು ಹೋಟೆಲ್‌ನಿಂದ ಹೊರಗೆ ಓಡಿದ ಜನ

ಮುನ್ನೆಚ್ಚರಿಕೆಯ ಕ್ರಮವಾಗಿ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದ್ದರು. ಹೋಟೆಲ್‌ನಲ್ಲಿ ಕುಟುಂಬವೊಂದರ ಸೀಮಂತ ಕಾರ್ಯಕ್ರಮ ನಡೆಯುತ್ತಿತ್ತು. ಬಂಧುಗಳು ಮತ್ತು ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹೋಟೆಲ್‌ನಲ್ಲಿ ಬಾಂಬ್ ಇಡಲಾಗಿದೆ ಎಂಬ ವಿಷಯ ತಿಳಿದು ಆತಂಕಕ್ಕೀಡಾಗಿ ಗಾಬರಿಯಿಂದ ಹೊರಗೆ ಓಡಿದ್ದಾರೆ. ಹೋಟೆಲ್‌ನ ಪ್ರತಿಯೊಂದು ಕೊಠಡಿ ಮತ್ತು ಹಾಲ್ ನಲ್ಲಿ ತಪಾಸಣೆ ನಡೆಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಪತ್ರ ಎನ್ನುವುದು ಗೊತ್ತಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೀಮಂತ ಕಾರ್ಯಕ್ರಮ ನಡೆಸುತ್ತಿದ್ದ ಕುಟುಂಬದ ಪರಿಚಯಸ್ಥರೇ ಬೆದರಿಕೆ ಒಡ್ಡಿರಬಹುದು ಎಂಬ ಶಂಕೆ ಇದೆ. ಬಾಂಬ್ ಸ್ಫೋಟ ಬೆದರಿಕೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಮತ್ತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Whats_app_banner