Bengaluru News: ಬೆಂಗಳೂರಿನ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇಮೇಲ್; ಪರಿಶೀಲನೆ ಬಳಿಕ ಹುಸಿ ಬಾಂಬ್ ಎಂದ ಪೊಲೀಸರು
ಬೆಂಗಳೂರು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದ ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅದು ಹುಸಿ ಬಾಂಬ್ ಬೆದರಿಕೆ ಅನ್ನೋದು ಗೊತ್ತಾಗಿದೆ. ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಶಾಲೆಗಳು ಹಾಗೂ ಹೋಟೆಲ್‌ಗಳ ಬಳಿಕ ಇದೀಗ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬೆಂಗಳೂರಿನ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಭಾನುವಾರ (ಮೇ 12) ಬಾಂಬ್ ಬೆದರಿಕೆ (Bomb Threat to Hospitals) ಇಮೇಲ್ ಬಂದಿದ್ದು, ಪೊಲೀಸರು ಬಾಂಬ್ ಸ್ಕ್ವಾಡ್‌ನೊಂದಿಗೆ ಆಸ್ಪತ್ರೆಯ ಎಲ್ಲಾ ಶಾಖೆಗಳಿಗೆ ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಂತರ ಇದು ಹುಸಿ ಬಾಂಬ್ ಬೆದರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದು, ಸಂದೇಶ ಕಳಿಸಿರುವ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂದು ವರದಿಯ ಪ್ರಕಾರ, ಬೆಂಗಳೂರು ಪೊಲೀಸರ ವಿಶೇಷ ಶಾಖೆಗೆ ಭಾನುವಾರ ಇ-ಮೇಲ್ ಬಂದಿದ್ದು, ಸ್ಫೋಟಕ ವಸ್ತುಗಳನ್ನು ಆಸ್ಪತ್ರೆಯೊಳಗೆ ಇರಿಸಲಾಗಿದೆ ಎಂದು ಹೇಳಲಾಗಿದೆ. ಮೇಲ್ ಶಾಖೆಯನ್ನು ನಿರ್ದಿಷ್ಟಪಡಿಸಲಿಲ್ಲ ಮತ್ತು ಪೊಲೀಸರು ಎಲ್ಲಾ ಆಸ್ಪತ್ರೆ ಶಾಖೆಗಳಿಗೆ ಧಾವಿಸಿದ್ದಾರೆ. ಕಾರ್ಯಾಚರಣೆಯ ನಂತರ, ಹುಸಿ ಬೆದರಿಕೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದರ ಹಿಂದಿರುವ ಅಪರಾಧಿಗಳನ್ನು ಹಿಡಿಯಲು ಬೆಂಗಳೂರು ಪೊಲೀಸರು ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರು ಮಾತ್ರವಲ್ಲದೆ, ದೆಹಲಿ ವಿಮಾನ ನಿಲ್ದಾಣ ಮತ್ತು ಆಸ್ಪತ್ರೆಗಳಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿರುವುದಾಗಿ ವರದಿಯಾಗಿದೆ.
ಈ ಹಿಂದೆ ಶಾಲೆಗಳು, ಹೋಟೆಲ್‌ಗೆ ಬಾಂಬ್ ಬೆದರಿಕೆ ಸಂದೇಶ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಅಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿಯಲ್ಲಿ ಆತಂಕದ ವಾತಾವರಣಕ್ಕೆ ಕಾರಣವಾಗಿತ್ತು. ಅಂದೂ ಕೂಡ ಹುಸಿ ಇಮೇಲ್ ಎಂಬುದನ್ನು ನಗರ ಪೊಲೀಸರು ಸ್ಪಷ್ಟಪಡಿಸಿದ್ದರು.
ಕಮಾಂಡ್ ಸೆಂಟರ್‌ನಿಂದ ನಮಗೆ ಕರೆ ಬಂತು. ತಕ್ಷಣ ನಮ್ಮ ತಂಡಗಳನ್ನು ನಗರದ ವಿವಿಧ ಭಾಗಗಳಲ್ಲಿನ ಶಾಲೆಗಳಿಗೆ ರವಾನಿಸಿದೆವು. ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶಾಲಾ ಆವರಣದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಸಮಗ್ರ ಶೋಧ ನಡೆಸಿದಾಗ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ, ಮತ್ತು ಮೇಲ್ನೋಟಕ್ಕೆ, ಇದು ಹುಸಿ ಸಂದೇಶ ಎಂದು ತೋರಿತು. ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಕದಂಬ ಹೋಟೆಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಈ ಹಿಂದೆ ಹಲವು ಬಾಂಬ್ ಬೆದರಿಕೆಗಳು ಬಂದಿದ್ದವು. ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು.
