ಚಿಕ್ಕಮಗಳೂರಿನ ಪ್ರಜಾವಾಣಿ ವರದಿಗಾರ ವಿಜಯಕುಮಾರ್‌ಗೆ ಬಿಆರ್ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಬಗ್ಗೆ ವಿಜಯಕುಮಾರ್ ಅವರಿಗೆ ವಿಶೇಷ ಕಾಳಜಿ. ಇದೇ ಕಾರಣಕ್ಕೆ ಹಲವರ ಅವಕೃಪೆಗೂ ಒಳಗಾಗಿದ್ದು ಉಂಟು. 'ಬೂದಿಯಾಗದ ಕೆಂಡ' ಇವರು ಬರೆದ ಕೃತಿ. ಇದು 2015ರಲ್ಲಿ ಪ್ರಕಟವಾಯಿತು. ಈ ಕೃತಿಯ 'ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು' ಎಂಬ ಲೇಖನವು ಮೈಸೂರು ವಿಶ್ವವಿದ್ಯಾನಿಲಯದ ಬಿಎ ನಾಲ್ಕನೇ ಸೆಮಿಸ್ಟರ್‌ಗೆ ಪಠ್ಯವಾಗಿದೆ.

ಬೆಂಗಳೂರು: ದಿವಂಗತ ಪತ್ರಕರ್ತ ಬಿ.ಆರ್.ರೋಹಿತ್ ಅವರ ನೆನಪಿನಲ್ಲಿ ಭಾರತೀಯ ಸಮೂಹ ಮಾಧ್ಯಮ ಮತ್ತು ಸಂಶೋಧನಾ ಸಂಸ್ಥೆಯು ಪ್ರತಿವರ್ಷ ನೀಡುವ ಪ್ರತಿಷ್ಠಿತ, 'ಬಿ.ಆರ್.ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ'ಗೆ ಚಿಕ್ಕಮಗಳೂರಿನ 'ಪ್ರಜಾವಾಣಿ' ಪ್ರತಿನಿಧಿ ಎಸ್.ಕೆ.ವಿಜಯಕುಮಾರ್ ಆಯ್ಕೆಯಾಗಿದ್ದಾರೆ. ಬೆಂಗಳೂರು ನಗರದ ಮಂತ್ರಿಮಾಲ್ ಬಳಿ ಇರುವ ಗ್ರೀನ್ ಪಾತ್ ಆರ್ಗಾನಿಕ್ ಹೊಟೆಲ್‌ನಲ್ಲಿ ಶನಿವಾರ (ಜೂನ್ 1) ಬೆಳಿಗ್ಗೆ 10:30 ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ರೋಹಿತ್ ಅವರ ತಂದೆ ಸಿ.ರಾಜಣ್ಣ ಮತ್ತು ತಾಯಿ ಕೆ.ವಿ.ಲಲಿತಾ ದಂಪತಿ ವಿಜಯಕುಮಾರ್ ಅವರನ್ನು ಗೌರವಿಸಿ, ಸನ್ಮಾನಿಸಲಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಅಂಡ್ ರಿಸರ್ಚ್ ಈ ಕಾರ್ಯಕ್ರಮ ಆಯೋಜಿಸಿದೆ.
ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಕೆ.ಪಿ.ಕೃಷ್ಣ ಪ್ರಸಾದ್ ಹಾಗೂ ವಿಜ್ಞಾನ ಲೇಖಕ ಡಾ ಉದಯ ಶಂಕರ ಪುರಾಣಿಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಅಂಡ್ ರಿಸರ್ಚ್ ಸಂಸ್ಥೆಯ ಅಧ್ಯಕ್ಷ ಡಾ ಕೆ.ವಿ.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾಜಕ್ಕೆ ಮಿಡಿಯುವ ಪತ್ರಕರ್ತ ವಿಜಯಕುಮಾರ್
ಮೂಲತಃ ಹಾಸನ ಜಿಲ್ಲೆಯವರಾದ ಪತ್ರಕರ್ತ ವಿಜಯಕುಮಾರ್ ಸಮಕಾಲೀನ ಕನ್ನಡ ಪತ್ರಿಕೋದ್ಯಮದಲ್ಲಿ ಸಾಮಾಜಿಕ ಕಳಕಳಿಯ ವರದಿಗಳಿಗೆ ಹೆಸರಾದವರು. ಪ್ರಸ್ತುತ ಅವರು 'ಪ್ರಜಾವಾಣಿ'ಯ ಚಿಕ್ಕಮಗಳೂರು ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ ಹಂಚಿಕೆಯ ಮೂಲಕ ಪತ್ರಿಕೋದ್ಯಮದ ಸೆಳೆತ ಬೆಳೆಸಿಕೊಂಡ ಅವರು ಹಾಸನದ ಸ್ಥಳೀಯ ಪತ್ರಿಕೆಗಳಾದ ಜ್ಞಾನದೀಪ, ಹಾಸನ ಮಿತ್ರ, ಜನಮಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ವಿಜಯವಾಣಿಗೆ ಸೇರ್ಪಡೆಯಾಗುವ ಮೂಲಕ ಅವರ ವೃತ್ತಿ ಬದುಕು ಮತ್ತೊಂದು ಮಗ್ಗುಲಿಗೆ ಹೊರಳಿತು. 'ಪ್ರಜಾವಾಣಿ' ದಿನಪತ್ರಿಕೆಯ ಬೆಂಗಳೂರು ವರದಿಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಬಗ್ಗೆ ವಿಜಯಕುಮಾರ್ ಅವರಿಗೆ ವಿಶೇಷ ಕಾಳಜಿ. ಇದೇ ಕಾರಣಕ್ಕೆ ಹಲವರ ಅವಕೃಪೆಗೂ ಒಳಗಾಗಿದ್ದು ಉಂಟು. 'ಬೂದಿಯಾಗದ ಕೆಂಡ' ಇವರು ಬರೆದ ಕೃತಿ. ಇದು 2015ರಲ್ಲಿ ಪ್ರಕಟವಾಯಿತು. ಈ ಕೃತಿಯ 'ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು' ಎಂಬ ಲೇಖನವು ಮೈಸೂರು ವಿಶ್ವವಿದ್ಯಾನಿಲಯದ ಬಿಎ ನಾಲ್ಕನೇ ಸೆಮಿಸ್ಟರ್‌ಗೆ ಪಠ್ಯವಾಗಿದೆ.
ಇದೀಗ 44 ರ ಹರೆಯದಲ್ಲಿರುವ ವಿಜಯಕುಮಾರ್ ಪತ್ರಿಕೋದ್ಯಮದಲ್ಲಿ ದಾಪುಗಾಲು ಹಾಕುವ ಹುಮ್ಮಸ್ಸಿನಲ್ಲಿದ್ದಾರೆ. ಇವರ ವೃತ್ತಿಪರತೆಯನ್ನು ಕಂಡು ಭಾರತೀಯ ಸಮೂಹ ಮಾಧ್ಯಮ ಮತ್ತು ಸಂಶೋಧನಾ ಸಂಸ್ಥೆಯು ಬಿ.ಆರ್.ರೋಹಿತ್ ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನು ವಿಜಯಕುಮಾರ್ ಅವರಿಗೆ ಕೊಡಲು ನಿರ್ಧರಿಸಿದೆ. ಕಳೆದ ವರ್ಷ ಈ ಪ್ರಶಸ್ತಿಯನ್ನು 'ವಿಜಯವಾಣಿ'ಯ ತುಮಕೂರು ವರದಿಗಾರ ಜಗನ್ನಾಥ ಕಾಳೇನಹಳ್ಳಿ ಅವರಿಗೆ ನೀಡಲಾಗಿತ್ತು.
ಬಿಆರ್ ರೋಹಿತ್ ಪರಿಚಯ
ತುಮಕೂರು ಜಿಲ್ಲೆ ಬೇವಿನಹಳ್ಳಿ ಮೂಲದ ಬಿ.ಆರ್.ರೋಹಿತ್ ಚಿಕ್ಕಂದಿನಿಂದಲೂ ಸಾಮಾಜಿಕ ಕಳಕಳಿ ಹೊಂದಿದ್ದವರು. ಪದವಿ ಹಂತದಲ್ಲಿ ಬಿಎಸ್‌ಸಿ ಓದಿದರೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 'ವಿಜಯ ಕರ್ನಾಟಕ'ದ ಪುರವಣಿ ವಿಭಾಗದ ಮೂಲಕ ವೃತ್ತಿ ಬದುಕು ಆರಂಭಿಸಿದರು. ನಂತರ ವಿಜಯ್ ಟೈಮ್ಸ್, ಬೆಂಗಳೂರು ಮಿರರ್, ಡಿಎನ್‌ಎ, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ವರದಿಗಾರರಾಗಿ ದುಡಿದರು.
ಪರಿಸರ, ಗ್ರಾಮೀಣಾಭಿವೃದ್ಧಿ ಅವರ ಇಷ್ಟದ ಕ್ಷೇತ್ರಗಳಾಗಿದ್ದವು. ಮುಳಬಾಗಿಲು ತಾಲ್ಲೂಕಿನ ಜಲಮೂಲಗಳು ಬಗ್ಗೆ ಐಸೆಕ್ (Institute for Social and Economic Change - ISEC) ಸಂಸ್ಥೆಯಲ್ಲಿ ಫೆಲೊಶಿಪ್ ಅಧ್ಯಯನ ಮಾಡಿದ್ದರು. ನಗರ ಯೋಜನೆ, ಬೆಂಗಳೂರಿನ ಸುಸ್ಥಿರ ಅಭಿವೃದ್ಧಿಯ ಬಗ್ಗೆ ತಮ್ಮದೇ ಆದ ಚಿಂತನೆ ಹೊಂದಿದ್ದರು. ಹತ್ತಾರು ತಲಸ್ಪರ್ಶಿ ಬರಹಗಳ ಮೂಲಕ ನಗರ ಯೋಜನೆಯಲ್ಲಿ ಜನರ ಧ್ವನಿಗೆ ಮಾನ್ಯತೆ ದೊರಕಿಸಲು ಪ್ರಯತ್ನಿಸಿದ್ದರು. 2020 ನೇ ಇಸವಿಯಲ್ಲಿ ಕೊರಟಗೆರೆ ತಾಲ್ಲೂಕು ಕದಿರನಹಳ್ಳಿ ಗ್ರಾಮದಲ್ಲಿರುವ ತಮ್ಮ ತೋಟದ ಬಾವಿಯಲ್ಲಿ ಈಜುವಾಗ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದರು.
ಬಿ.ಆರ್.ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ
ತಮ್ಮ ಪುತ್ರ ಬಿ.ಆರ್.ರೋಹಿತ್ ಸ್ಮರಣಾರ್ಥ ಅವರ ತಂದೆ-ತಾಯಿ ದತ್ತಿನಿಧಿ ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಯ ಮೂಲಕ ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಪತ್ರಕರ್ತರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯನ್ನು ಐಎಂಎಸ್‌ಆರ್ ಸಂಸ್ಥೆ ನಿರ್ವಹಿಸುತ್ತಿದೆ. ಪತ್ರಕರ್ತರು ಮತ್ತು ಪತ್ರಿಕಾ ಶಿಕ್ಷಣ ಕ್ಷೇತ್ರದ ತಜ್ಞರು ಸ್ಥಾಪಿಸಿದ್ದು, ಯುವ ಪತ್ರಕರ್ತರಿಗೆ ಆಧುನಿಕ ತಂತ್ರಜ್ಞಾನದಲ್ಲಿ ತರಬೇತಿ ಮತ್ತು ಉತ್ತೇಜನ ನೀಡುವ ಕಾರ್ಯಕೈಗೊಂಡಿದೆ.
