ಕನ್ನಡ ಸುದ್ದಿ  /  ಕರ್ನಾಟಕ  /  ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಬೆಂಗಳೂರು: ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಕೆ ಮಾಡುತ್ತಿದ್ದ ವಿಶಾಖ ಪಟ್ಟಣಂನ ನಾರಾ ಶ್ರೀನಿವಾಸ್ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಗೋವಾ ಮಹಿಳೆಯ ಬ್ಲಾಕ್ ಮೇಲ್ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ: ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ವಿಶಾಖಪಟ್ಟಣಂನ ನಾರಾ ಶ್ರೀನಿವಾಸ್ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ: ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ವಿಶಾಖಪಟ್ಟಣಂನ ನಾರಾ ಶ್ರೀನಿವಾಸ್ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಸಾರ್ವಜನಿಕರ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಸೈಬರ್ ವಂಚಕರಿಗೆ ಪೂರೈಕೆ ಮಾಡುತ್ತಿದ್ದ ಆರೋಪಿ ನಾರಾ ಶ್ರೀನಿವಾಸ್ ರಾವ್ ಎಂಬಾತನನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಂಧ್ರಪ್ರದೇಶ ಮೂಲದದ 55 ವರ್ಷದ ನಾರಾ ಶ್ರೀನಿವಾಸ್ ರಾವ್ ಸಿಮ್ ಕಾರ್ಡ್‌ಗಳನ್ನು ಜೀನ್ಸ್ ಪ್ಯಾಂಟ್‌ನೊಳಗೆ ಅಡಗಿಸಿಟ್ಟು ವಿಮಾನದ ಮೂಲಕ ಬೇರೆ ದೇಶಗಳಿಗೆ ಪೂರೈಸುತ್ತಿದ್ದ ಎಂದು ತಿಳಿದು ಬಂದಿದೆ.

ವಿವಿಧ ಮೂಲಗಳಿಂದ ಸಾರ್ವಜನಿಕರ ಆಧಾರ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಆರೋಪಿ ಸಂಗ್ರಹಿಸುತ್ತಿದ್ದ. ನಂತರ ಮೊಬೈಲ್ ಸೇವಾ ಕಂಪನಿಯ ಪ್ರತಿನಿಧಿಗಳನ್ನು ಓಲೈಸಿಕೊಂಡು ಅವರ ಸಹಾಯದಿಂದ ಹೊಸ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದ. ಅವುಗಳನ್ನು ಕೊರಿಯರ್ ಮೂಲಕ ಕಾಂಬೋಡಿಯಾ, ತೈವಾನ್ ಮೊದಲಾದ ದೇಶಗಳಿಗೆ ಕಳುಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್ ಸಿಮ್ ಸಾಗಣೆ ಹೇಗೆ- ಪೊಲೀಸರು ನೀಡಿದ ವಿವರ

ಜೀನ್ಸ್ ಪ್ಯಾಂಟ್‌ನೊಳಗೆ 24 ಸಿಮ್ ಕಾರ್ಡ್‌ಗಳನ್ನು ಬಚ್ಚಿಟ್ಟು ಚೆನ್ನೈ ಮೂಲದ ಉದ್ಯಮಿಯೊಬ್ಬರು ನಡೆಸುತ್ತಿರುವ ಕೊರಿಯರ್ ಕಂಪನಿ ಮೂಲಕ ವಿದೇಶಕ್ಕೆ ಕಳುಹಿಸಲು ಪ್ರಯತ್ನಿಸಿದ್ದ. ವಿಮಾನ ನಿಲ್ದಾಣದ ಕಾರ್ಗೊ ವಿಭಾಗಕ್ಕೆ ಬಂದಿದ್ದ ಪಾರ್ಸೆಲ್ ಗಳನ್ನು ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಸಿಮ್‌ ಕಾರ್ಡ್‌ಗಳು ಪತ್ತೆಯಾಗಿದ್ದವು.

ಇದನ್ನು ಪತ್ತೆ ಮಾಡಿದ ಭದ್ರತಾ ಸಿಬ್ಬಂದಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಪಾರ್ಸೆಲ್ ಬುಕ್ಕಿಂಗ್ ಮಾಡಿದ್ದ ವಿಳಾಸ ಆಧರಿಸಿ ನಾರಾ ಶ್ರೀನಿವಾಸ್ ರಾವ್ ನನ್ನು ಬಂಧಿಸಲಾಗಿದೆ. ಈತ ಹಲವು ತಿಂಗಳಿನಿಂದ ವಿದೇಶಗಳಿಗೆ ಸಿಮ್‌ ಕಾರ್ಡ್‌ಗಳನ್ನು ಕಳುಹಿಸುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಿವಾಸ್ ರಾವ್ ಕಳುಹಿಸುತ್ತಿದ್ದ ಸಿಮ್‌ ಕಾರ್ಡ್‌ಗಳು, ತೈವಾನ್ ಹಾಗೂ ಕಾಂಬೋಡಿಯಾದಲ್ಲಿರುವ ಸೈಬರ್ ವಂಚಕರಿಗೆ ತಲುಪುತ್ತಿದ್ದವು. ಅವರು ಈ ಸಿಮ್‌ಕಾರ್ಡ್ ಗಳನ್ನು ಬಳಸಿಕೊಂಡು ಭಾರತೀಯರಿಗೆ ಕರೆ ಮಾಡುತ್ತಿದ್ದರು. ಉದ್ಯೋಗ, ಅರೆಕಾಲಿಕ ಉದ್ಯೋಗ, ಹಣ ಗಳಿಸುವ ಇತರೆ ಮೂಲಗಳ ಹೆಸರಿನಲ್ಲಿ ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಧ್ಯ ಆರೋಪಿ ಶ್ರೀನಿವಾಸ್ ರಾವ್ ಬಳಿ 100ಕ್ಕೂ ಹೆಚ್ಚು ಸಿಮ್‌ಕಾರ್ಡ್‌ಗಳು ಪತ್ತೆಯಾಗಿವೆ. ಸಾರ್ವಜನಿಕರ ಈ ದಾಖಲೆಗಳು ಆರೋಪಿಗೆ ಹೇಗೆ ಸಿಗುತ್ತಿದ್ದವು ಎನ್ನುವುದನ್ನು ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗೋವಾ ಮಹಿಳೆಯ ಬ್ಲಾಕ್ ಮೇಲ್; ಬೆಂಗಳೂರಿನ ವ್ಯಕ್ತಿ ಅರೆಸ್ಟ್

ಆನ್‌ಲೈನ್‌ನಲ್ಲಿ ನಕಲಿ ಉದ್ಯೋಗ ಜಾಹೀರಾತು ಪ್ರಕಟಿಸಿ ಚಾಟಿಂಗ್ ಆ್ಯಪ್ ಮೂಲಕ ಮಹಿಳೆಯೊಬ್ಬರನ್ನು ಬೆದರಿಸಿ ಸುಲಿಗೆ ಮಾಡಿದ ಆರೋಪದ ಮೇಲೆ ಗೋವಾ ಸೈಬರ್ ಕ್ರೈಂ ಪೊಲೀಸರು ಬೆಂಗಳೂರು ಮೂಲದ ವಿ. ಮೋಹನ್ ರಾಜ್ ಎಂಬಾತನನ್ನು ಬಂಧಿಸಿದ್ದಾರೆ.

ಸಂದರ್ಶನಕ್ಕೆ ಹಾಜರಾಗಿ ಮೋಸ ಹೋಗಿದ್ದ ಗೋವಾ ಮೂಲದ ಮಹಿಳೆಯೊಬ್ಬರು ಪಣಜಿಯಲ್ಲಿ ದೂರು ದಾಖಲಿಸಿದ್ದರು. 33 ವರ್ಷದ ಆರೋಪಿ ಮೋಹನ್ ರಾಜ್ ವಿದೇಶಿ ಬ್ಯಾಂಕ್ ವೊಂದರಲ್ಲಿ ಹುದ್ದೆ ಖಾಲಿ ಇದೆ ಎಂದು ನಕಲಿ ಉದ್ಯೋಗ ಜಾಹೀರಾತು ಪ್ರಕಟಿಸಿ, ಚಾಟಿಂಗ್ ಆ್ಯಪ್ ಮೂಲಕ ಸಂಪರ್ಕಿಸುವಂತೆ ಸೂಚಿಸಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯು ವಿಡಿಯೊ ಕಾಲ್ ಮೂಲಕ ಗೋವಾದ ಮಹಿಳೆಯ ಆನ್‌ಲೈನ್ ಸಂದರ್ಶನ ನಡೆಸಿದ್ದ. ಸಂದರ್ಶನ ನಡೆಯುವಾಗ ಹಾಜರಿದ್ದ ಕೆಲವರನ್ನು ಬ್ಯಾಂಕ್ ಪ್ರತಿನಿಧಿಗಳು ಎಂದು ಪರಿಚಯಿಸಿದ್ದ. ನಂತರ ವಿವಸ್ತ್ರರಾಗುವಂತೆ ಮಹಿಳೆಗೆ ಒತ್ತಾಯಿಸಿದ್ಧ. ಉದ್ಯೋಗದ ಆಸೆಗೆ ಮಹಿಳೆ ಒಪ್ಪಿಕೊಂಡಿದ್ದರು. ಆರೋಪಿಯು ಈ ದೃಶ್ಯಗಳನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡಿದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಗೋವಾ ಪೊಲೀಸರು ಹೇಳಿದ್ದಾರೆ.

ನಂತರ ಆರೋಪಿ ಮೋಹನ್ ರಾಜ್ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿ ಬೆಂಗಳೂರಿಗೆ ಬಂದು ತನ್ನನ್ನು ಭೇಟಿಯಾಗಬೇಕು ಎಂದು ಬೆದರಿಕೆ ಹಾಕಿದ್ದಾನೆ. ಬಾರದಿದ್ದರೆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಸತತ 2 ತಿಂಗಳು ಹೆದರಿಸಿದ್ದಾನೆ. ಅಂತಿಮವಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಗೋವಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ಅವರ ತಂಡ ಸಂತ್ರಸ್ತೆಯೊಂದಿಗೆ ಬೆಂಗಳೂರಿಗೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮೋಹನ್ ರಾಜ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ. ಆರೋಪಿಯ ಮೊಬೈಲ್ ಅನ್ನು ವಶಕ್ಕೆ ಪಡೆದು, ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಹುಲ್ ಗುಪ್ತಾ ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024