ಬಿವಿಕೆ ಅಯ್ಯಂಗಾರ್ ರಸ್ತೆ, ಸುಲ್ತಾನ್ ಪೇಟೆ ಕ್ರಾಸ್, ಬಳೆಪೇಟೆ ಮಾರ್ಗದಲ್ಲಿ ಸಂಚರಿಸುತ್ತೀರಾ? ಹಾಗಾದರೆ ಈ ಮಾರ್ಗ ಬದಲಾವಣೆ ತಿಳಿದಿರಿ
ಬೆಂಗಳೂರು ನಗರದಲ್ಲಿ ಇಂದು ರಂಜಾನ್ ಹಬ್ಬದ ಪ್ರಯುಕ್ತ ಕೆಲವು ಕಡೆ ಸಂಚಾರ ಮಾರ್ಗಬದಲಾವಣೆ ಇದೆ. ಅದೇ ರೀತಿ ನಾಳೆಯಿಂದ ಬಿವಿಕೆ ಅಯ್ಯಂಗಾರ್ ರಸ್ತೆ, ಸುಲ್ತಾನ್ ಪೇಟೆ ಕ್ರಾಸ್, ಬಳೆಪೇಟೆ ಮಾರ್ಗದಲ್ಲಿ ಸಂಚರಿಸುತ್ತೀರಾ? ಹಾಗಾದರೆ ಈ ಮಾರ್ಗ ಬದಲಾವಣೆಯನ್ನು ತಿಳಿದಿರಬೇಕಾದ್ದು ಅವಶ್ಯ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ನಗರದ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯ ಆಯ್ದ ಭಾಗಗಳಲ್ಲಿ ಸಂಪೂರ್ಣವಾಗಿ ತಿಥಿಲವಾಗಿರುವ ಹಳೆಯ ಕಾಂಕ್ರೀಟ್ ರಸ್ತೆಯನ್ನು ಮರು ಕಾಂಕ್ರೀಟೀಕರಣಗೊಳಿಸಿ ವೈಟ್ ಟಾಪಿಂಗ್ ರಸ್ತೆ ನಿರ್ಮಿಸುವ ಕಾಮಗಾರಿ ಶುರುವಾಗಿದೆ. ಬಿಬಿಎಂಪಿ ಈ ಕಾಮಗಾರಿ ಮುಗಿಸುವ ತನಕ ಈ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ಅಡಚಣೆ ಆಗಲಿದೆ.
ಹೀಗಾಗಿ ಬೆಂಗಳೂರು ನಗರ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯ ಸುಲ್ತಾನ್ ಪೇಟೆ ಕ್ರಾಸ್‌ನಿಂದ ಕೋದಂಡರಾಮ ಮಂದಿರದವರೆಗೂ ಎರಡೂ ಬದಿಗೆ ತಾತ್ಕಾಲಿಕವಾಗಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಏ.11ರಿಂದ ಬಿ.ವಿ.ಕೆ ಆಯ್ಯಂಗಾರ್ ರಸ್ತೆಯಲ್ಲಿ ಕೋದಂಡರಾಮ ದೇವಸ್ಥಾನದವರೆಗೆ ಸಂಚಾರ ನಿರ್ಬಂಧ
ಈ ಹಿನ್ನೆಲೆಯಲ್ಲಿ ಏಪ್ರಿಲ್ 11 ರಿಂದ ಕಾಮಗಾರಿ ಮುಗಿಯುವವರೆಗೆ ತಾತ್ಕಲಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಮೊದಲನೇ ಹಂತದ ಕಾಮಗಾರಿಯು ಬಿ.ವಿ.ಕೆ ಆಯ್ಯಂಗಾರ್ ರಸ್ತೆಯ ಸುಲ್ತಾನಪೇಟೆ ಕ್ರಾಸ್ ನಿಂದ ಕೋದಂಡರಾಮ ದೇವಸ್ಥಾನದವರೆಗೆ (ಬಿ.ವಿ.ಕೆ ಅಯ್ಯಂಗಾರ್ ರಸ್ತೆಯ ಪಶ್ಚಿಮ ಭಾಗ) ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮೈಸೂರು ರಸ್ತೆಯಿಂದ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಮಾರ್ಗದಲ್ಲಿ ಬರುವ ವಾಹನಗಳು ಸುಲ್ತಾನಪೇಟೆ ಕ್ರಾಸ್‌ನಲ್ಲಿ ಎಡ ತಿರುವು ಪಡೆದು ಸುಲ್ತಾನಪೇಟೆ ಮುಖ್ಯ ರಸ್ತೆ - ಕೆವಿ ಟೆಂಪಲ್ ರಸ್ತೆ ಬಳೆಪೇಟೆ ಮುಖ್ಯ ರಸ್ತೆಯ ಮಾರ್ಗವಾಗಿ ಸಂಚರಿಸಿ ಕಿಲಾರಿ ರಸ್ತೆಗೆ ಬಲ ತಿರುವು ಪಡೆದು ಪುನಃ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯನ್ನು ಸಂಪರ್ಕಿಸಬಹುದಾಗಿದೆ. ಕೆ.ಜಿ ರಸ್ತೆಯ ಕಡೆಯಿಂದ ಮೈಸೂರು ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು ಎಂದಿನಂತೆ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯ ಪೂರ್ವ ಪಥದ ಮೂಲಕ ಸಂಚರಿಸಬಹುದು. ಚಿಕ್ಕಪೇಟೆ ಮುಖ್ಯ ರಸ್ತೆಯಿಂದ ಬರುವ ವಾಹನಗಳು ಓ.ಟಿ.ಸಿ ರಸ್ತೆಯ ಮೂಲಕ ಚಲಿಸಬಹುದಾಗಿದೆ.
ಎರಡನೇ ಹಂತದ ಕಾಮಗಾರಿಯು ಕೋದಂಡರಾಮ ದೇವಸ್ಥಾನದಿಂದ ಸುಲ್ತಾನ್ ಪೇಟೆ ಕ್ರಾಸ್ ವರೆಗೆ ಕಾಮಗಾರಿ ನಡೆಯುವ ವೇಳೆ (ಬಿವಿಕೆ ಅಯ್ಯಂಗಾರ್ ರಸ್ತೆಯ ಪೂರ್ವ ಭಾಗ) ಕೆ.ಜಿ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ಆರ್.ಟಿ ಸ್ಪೀಟ್ ಜಂಕ್ಷನ್‌ನಿಂದ ಒನ್ ವೇ ನಲ್ಲಿ (ಬಿವಿಕೆ ಅಯ್ಯಂಗಾರ್ ರಸ್ತೆಯ ಪಶ್ಚಿಮದ ಪಥದಲ್ಲಿ) ಸಾಗಿ ಸುಲ್ತಾನ್ ಪೇಟೆ ಜಂಕ್ಷನ್ ವರೆಗೆ ಸಂಚರಿಸಿ ಎಡಕ್ಕೆ ತಿರುಗಿ ನಂತರ ಮೈಸೂರು ರಸ್ತೆ ಕಡೆಗೆ ಸಾಗಬೇಕಿರುತ್ತದೆ.
ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಸುಲ್ತಾನ್‌ಪೇಟೆ ಕ್ರಾಸ್‌ನಲ್ಲಿ ಎಡ ತಿರುವು ಪಡೆದು ಕೆ.ಎ ಟೆಂಪಲ್ ರಸ್ತೆಗೆ ಬಲ ತಿರುವು ಪಡೆದು ಬಳೆಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಸಾಗಿ ಕಿಲಾರಿ ರಸ್ತೆಯಲ್ಲಿ ಬಲ ತಿರುವು ಪಡೆದು ಬಿ.ವಿ.ಕೆ ಅಯ್ಯಂಗಾರ್ ರಸ್ತೆಯನ್ನು ಸಂಪರ್ಕಿಸಬಹುದು ಎಂದು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.
ಬೆಂಗಳೂರು ರಂಜಾನ್ ಹಬ್ಬ; ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ರ ತನಕ ಸಂಚಾರ ನಿರ್ಬಂಧಿತ ರಸ್ತೆಗಳಿವು
ಬೆಂಗಳೂರು ನಗರದ ಮೈಸೂರು ರಸ್ತೆಯ ಬಿ.ಬಿ ಜಂಕ್ಷನ್ ಹತ್ತಿರವಿರುವ ಮಸೀದಿ ಬಳಿ ಮತ್ತು ಚಾಮರಾಜಪೇಟೆ 1ನೇ ಮುಖ್ಯರಸ್ತೆಯ 7ನೇ ಅಡ್ಡರಸ್ತೆ ಬಿ.ಬಿ.ಎಂ.ಪಿ ಆಟದ ಮೈದಾನಲ್ಲಿ ಸುಮಾರು 25,000 ಕ್ಕೂ ಹೆಚ್ಚಿನ ಮುಸ್ಲಿಮರು ರಂಜಾನ್ ಹಬ್ಬದ ಪ್ರಯುಕ್ತ ಇಂದು (ಏಪ್ರಿಲ್ 11) ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಸಂಬಂಧ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸಂಚಾರ ನಿರ್ಭಂಧಿಸಿರುವ ರಸ್ತೆ: ಸಿಟಿಮಾರ್ಕೆಟ್ ಪ್ರೈಓವರ್ ಯಿಂದ (ಬಿ.ಜಿ.ಎಸ್ ಪ್ರೈಓವರ್) ಟೋಲ್ ಗೇಟ್ ಜಂಕ್ಷನ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಸಂಪರ್ಕ ಮಾರ್ಗ ಬದಲಾವಣೆ ಮಾಡಿರುವ ವಿವರ ಹೀಗಿದೆ.
01) ಟೌನ್ ಹಾಲ್ ಕಡೆಯಿಂದ ಮೈಸೂರು ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು:- ಬಿ.ಜಿ.ಎಸ್ ಪ್ರೈಓವರ್ ಕೆಳಗಡೆ ಬಂದು ಸಿರ್ಸಿ ಸರ್ಕಲ್ ಹತ್ತಿರ ಬಲ ತಿರುವು ಪಡೆದು ಬಿನ್ನಿಮಿಲ್ ಜಂಕ್ಷನ್, ಹುಣಸೆಮರ ಜಂಕ್ಷನ್ ಎಡ ತಿರುವು, ಎಂ.ಸಿ ಸರ್ಕಲ್, ವಿರೇಶ್ ಚಿತ್ರಮಂದಿರ ಎಡ ತಿರುವು, ಹೊಸಹಳ್ಳಿ ಸಿಗ್ನಲ್ ಬಲ ತಿರುವು ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ಕಿಂಕೋ ಜಂಕ್ಷನ್ ಹತ್ತಿರ ಮೈಸೂರು ರಸ್ತೆ ತಲುಪುವುದು.
02) ಕೆಂಗೇರಿ ಕಡೆಯಿಂದ ಮಾರ್ಕೆಟ್ ಕಡೆಗೆ ಬರುವ ವಾಹನಗಳು:- ಕಿಂಕೋ ಜಂಕ್ಷನ್ ಹತ್ತಿರ ಎಡವ ತಿರುವ ಪಡೆದು ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ಹತ್ತಿಗುಪ್ಪೆ, ಎಂ.ಸಿ ಸರ್ಕಲ್ ಬಲ ತಿರುವು ಮಾಗಡಿ ರಸ್ತೆಯ ಮೂಲಕ ಹುಣಸೇಮರ ಜಂಕ್ಷನ್ ಹತ್ತಿರ ಬಲ ತಿರುವು ಬಿನ್ನಿಮಿಲ್ ಜಂಕ್ಷನ್, ಸಿಸಿ ವೃತ್ತದ ಬಳಿ ಎಡ ತಿರುವು ಪಡೆದು ಮಾರ್ಕೆಟ್‌ಗೆ ಹೋಗಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
