ಕನ್ನಡ ಸುದ್ದಿ  /  Karnataka  /  Bengaluru News Bwssb Proposes Community Rainwater Harvesting To Fill Lakes In Bengaluru Water Crisis Uks

ಬೆಂಗಳೂರು ನೀರಿನ ಸಮಸ್ಯೆ; ಕೆರೆಗಳಿಗೆ ಮಳೆ ನೀರು ಹರಿಸಲು ಜಲ ಮಂಡಳಿ ಚಿಂತನೆ; ಸಮುದಾಯ ಮಳೆಕೊಯ್ಲು ಜಾರಿಗೆ ಒಲವು

ಮಳೆ ನೀರನ್ನು ಕೆರೆಗಳಿಗೆ ಹರಿಸಲು ಬೆಂಗಳೂರು ಜಲ ಮಂಡಳಿ ಚಿಂತನೆ ನಡೆಸಿದೆ. ಇದಕ್ಕಾಗಿ ಸಮುದಾಯ ಮಳೆ ಕೊಯ್ಲು ಜಾರಿಗೊಳಿಸುವ ಕಡೆಗೆ ಒಲವು ತೋರಿದೆ. ಈ ಯೋಜನೆ ಹೇಗೆ ಕೆಲಸ ಮಾಡಲಿದೆ ಮತ್ತು ಹೇಗೆ ಕೆರೆಗಳಿಗೆ ನೀರು ತುಂಬಲಿದೆ? ಇಲ್ಲಿದೆ ಉತ್ತರ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ನೀರಿನ ಸಮಸ್ಯ ನಿವಾರಿಸಲು  ಸಮುದಾಯ ಮಳೆಕೊಯ್ಲು ಜಾರಿಗೆ ಜಲಮಂಡಳಿ ಒಲವು ವ್ಯಕ್ತವಾಗಿದೆ. (ಸಾಂದರ್ಭಿಕ ಚಿತ್ರ)
ಬೆಂಗಳೂರು ನೀರಿನ ಸಮಸ್ಯ ನಿವಾರಿಸಲು ಸಮುದಾಯ ಮಳೆಕೊಯ್ಲು ಜಾರಿಗೆ ಜಲಮಂಡಳಿ ಒಲವು ವ್ಯಕ್ತವಾಗಿದೆ. (ಸಾಂದರ್ಭಿಕ ಚಿತ್ರ)

ಬೆಂಗಳೂರಿನಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳಿಗೆ ಮಳೆ ನೀರು ತುಂಬಿಸುವ ಸಮುದಾಯ ಮಳೆ ಕೊಯ್ಲು (Community Rainwater Harvesting) ಪದ್ಧತಿಯನ್ನು ಜಾರಿಗೆ ತರಲು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಚಿಂತನೆ ನಡೆಸಿದೆ.

ಒಂದು ವೇಳೆ ಈ ಯೋಜನೆ ಯಶಸ್ವಿಯಾದಲ್ಲಿ ಕ್ರಾಂತಿಕಾರಿ ಯೋಜನೆ ಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಕಟ್ಟಡಗಳಲ್ಲಿನ ಸ್ಥಳದ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ.

ತೋರಿಕೆಯ ಮಳೆ ಕೊಯ್ಲು ಬೇಡ

ಬಹುತೇಕ ಕಟ್ಟಡಗಳಲ್ಲಿ ಕೇವಲ ಕಟ್ಟಡದ ನಿರ್ಮಾಣಕ್ಕೆ ಅನುಮತಿ ಪಡೆಯಲು ಮಾತ್ರ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಇನ್ನು ಮನೆಗಳಿಗೆ ಕಾವೇರಿ ನೀರು ಸಂಪರ್ಕ ಪಡೆಯಲು ಮಳೆ ನೀರು ಕೊಯ್ಲು ಅಳವಡಿಸಿರುವ ಭಾವಚಿತ್ರವನ್ನು ನೀಡಬೇಕಾಗುತ್ತದೆ. ಇದನ್ನೂ ತೋರಿಕೆಗಾಗಿ ಮಾಡಲಾಗುತ್ತದೆ. ಉತ್ತಮ ಫಿಲ್ಟರ್ ಅಳವಡಿಸಿಕೊಂಡರೆ ಮಳೆಗಾಲದಲ್ಲಿ ಮನೆಯ ತಾರಿಸಿನಲ್ಲಿ ಬೀಳುವ ಮಳೆ ನೀರನ್ನು ನೇರವಾಗಿ ಸಂಪಿಗೆ ಬಿತ್ತುಕೊಳ್ಳಬಹುದು. ಆದರೆ ಯಾರೂ ಈ ಕೆಲಸ ಮಾಡುವುದಿಲ್ಲ.

ಇನ್ನು ಬೃಹತ್ ಕಟ್ಟಡ, ವಾಣಿಜ್ಯ ಮಳಿಗೆ ಅಪಾರ್ಟ್ ಮೆಂಟ್ ಗಳಲ್ಲಿ ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಹರಿಯಬಿಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ನಗರದ ಒಳಚರಂಡಿ ವ್ಯವಸ್ಥೆ ಒತ್ತಡಕ್ಕೆ ಒಳಗಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಅಲ್ಲದೆ, ಅಮೂಲ್ಯ ನೀರು ವ್ಯರ್ಥವಾಗಿ ಹರಿದು ಚರಂಡಿ ಪಾಲಾಗುತ್ತಿದೆ. ನೀರು ವ್ಯರ್ಥವಾಗದಂತೆ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಅಂತರ್ಜಲ ವೃದ್ದಿಗೆ ಬಳಸಿಕೊಳ್ಳಲು ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಏನಿದು ಸಮುದಾಯ ಮಳೆ ಕೊಯ್ಲು?

ಈ ವರ್ಷ ಮಳೆಯ ಕೊರತೆಯಾಗಿ ಮಳೆ ನೀರು ಕಡಿಮೆಯಾಗಿರಬಹುದು. ಮಳೆಗಾಲದಲ್ಲಿ ಸಾಮಾನ್ಯವಾಗಿ ಉತ್ತಮ ಮಳೆ ಯಾಗುತ್ತಲೇ ಇದೆ. ಮುಂದಿನ ಮುಂಗಾರು ಮಳೆ ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ ಮಳೆ ನೀರು ಹರಿದು ಚರಂಡಿ ಪಾಲಾಗುತ್ತಿದೆ. ಈ ರೀತಿ ವ್ಯರ್ಥವಾಗಿ ಹರಿಯುವ ಮಳೆ ನೀರನ್ನು ಸಮರ್ಪಕವಾದ ವ್ಯವಸ್ಥೆಯ ಮೂಲಕ ಕೆರೆಗಳಿಗೆ ಹರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರಿನ ಕೆರೆಗಳಿಂದ 500 ಮೀಟರ್‌ ಸುತ್ತಳತೆಯಲ್ಲಿರುವಂತಹ ಅಪಾರ್ಟ್‌ಮೆಂಟ್‌ಗಳು, ಸಾರ್ವಜನಿಕ ಪ್ರದೇಶಗಳು ಹಾಗೂ ದೊಡ್ಡ ಕಟ್ಟಡಗಳಿಂದ ಮಳೆ ನೀರನ್ನು ಪೈಪ್‌ಲೈನ್‌ ಮೂಲಕ ಕೆರೆಗಳಿಗೆ ನೇರವಾಗಿ ಹರಿಸುವುದೇ ಸಮುದಾಯ ಮಳೆ ಕೊಯ್ಲು. ಈ ವ್ಯವಸ್ಥೆಯಿಂದ ಕೆರೆಗಳಿಗೆ ಮಳೆ ನೀರು ಹರಿದು ಅಂತರ್ಜಲವೃದ್ದಿಯಾಗಲಿದೆ ಎಂದು ಜಲಮಂಡಳಿ ನಿರೀಕ್ಷಿಸಿದೆ. ಮೊದಲ ಹಂತದಲ್ಲಿ ವರ್ತೂರು, ಬೆಳ್ಳಂದೂರು ಕೆರೆಗಳ ಭಾಗದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಂಡಳಿ ಚಿಂತನೆ ನಡೆಸಿದೆ.

ಬೆಂಗಳೂರಲ್ಲಿ ಸದ್ಯ ನೀರಿನ ಸಮಸ್ಯೆ ತೀವ್ರವಾಗಿದ್ದು, ನಗರವಾಸಿಗಳು ಟ್ಯಾಂಕರ್ ನೀರನ್ನು ಆಶ್ರಯಿಸಿದ್ದಾರೆ. ಈ ನಡುವೆ, ನೀರಿನ ಸಮಸ್ಯೆಗೆ ತತ್‌ಕ್ಷಣದ ಪರಿಹಾರ ಕ್ರಮಗಳನ್ನು ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ತೆಗೆದುಕೊಂಡಿವೆ. ಆದಾಗ್ಯೂ, ದೀರ್ಘಾವಧಿ, ಮಧ್ಯಮಾವಧಿಯ ಪರಿಹಾರ ಉಪಕ್ರಮಗಳ ಕಡೆಗೂ ಸ್ಥಳೀಯಾಡಳಿತ ಸಂಸ್ಥೆಗಳು ಈ ಬಾರಿ ಗಮನಹರಿಸತೊಡಗಿವೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point