ಕನ್ನಡ ಸುದ್ದಿ  /  Karnataka  /  Bengaluru News Ca From Bengaluru Tries To Sell Kidney Ends Up Losing Over <Span Class='webrupee'>₹</span>6 Lakh Karnataka Crime News Uks

Bengaluru Crime: ಕಿಡ್ನಿ ಮಾರಾಟ ಮಾಡಲು ಹೋಗಿ 6 ಲಕ್ಷ ರೂಪಾಯಿ ಕಳೆದುಕೊಂಡ ಬೆಂಗಳೂರು ಸಿಎ; ಸೈಬರ್ ವಂಚಕರ ಕೃತ್ಯ

ಬೆಂಗಳೂರಿನ ಲೆಕ್ಕ ಪರಿಶೋಧಕರೊಬ್ಬರು ತನ್ನ ಕಿಡ್ನಿ ಮಾರಾಟ ಮಾಡಲು ಹೋಗಿ 6 ಲಕ್ಷ ರೂಪಾಯಿ ಕಳೆದುಕೊಂಡರು. ಇದು ಸೈಬರ್ ವಂಚಕ ಕೃತ್ಯವಾಗಿದ್ದು, ಅವರು ಹೇಗೆ ವಂಚನೆಗೊಳಗಾದರು ಎಂಬ ಚಿತ್ರಣ ಇಲ್ಲಿದೆ. ಜಾಗೃತಿಯ ದೃಷ್ಟಿಯಿಂದ ಓದಬೇಕಾದ ಸುದ್ದಿ ಇದು.

ಕಿಡ್ನಿ (ಎಡ ಚಿತ್ರ); ಸೈಬರ್ ವಂಚಕ (ಬಲ ಚಿತ್ರ) ಸಾಂಕೇತಿಕ ಚಿತ್ರಗಳು
ಕಿಡ್ನಿ (ಎಡ ಚಿತ್ರ); ಸೈಬರ್ ವಂಚಕ (ಬಲ ಚಿತ್ರ) ಸಾಂಕೇತಿಕ ಚಿತ್ರಗಳು (Canva)

ಬೆಂಗಳೂರು: ಆರ್ಥಿಕ ಸಂಕಷ್ಟಗಳನ್ನು ನೀಗಿಸಿಕೊಳ್ಳುವುದಕ್ಕಾಗಿ ಮೂತ್ರ ಪಿಂಡ ಮಾರಾಟ ಮಾಡಲು ಹೊರಟ ಬೆಂಗಳೂರಿನ ಲೆಕ್ಕ ಪರಿಶೋಧಕ (ಸಿಎ) ಒಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 6 ಲಕ್ಷ ರೂಪಾಯಿಗೂ ಅಧಿಕ ಹಣ ಕಳೆದುಕೊಂಡ ಘಟನೆ ವರದಿಯಾಗಿದೆ.

ಬೆಂಗಳೂರಿನ ಚಾರ್ಟರ್ಡ್‌ ಅಕೌಂಟೆಂಟ್ (ಸಿಎ) ತನ್ನ ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಕಂಡಕೊಳ್ಳಲು ಮೂತ್ರಪಿಂಡ ಮಾರಾಟಕ್ಕೆ ಯತ್ನಿಸಿದ್ದರು. ಅವರು ಮೂತ್ರಪಿಂಡ ಹುಡುಕುವ ಜನರ ಸಂಪರ್ಕ ವಿವರ ಪಡೆಯಲು ಇಂಟರ್‌ನೆಟ್‌ನಲ್ಲಿ ಜಾಲಾಡಿದ್ದರು. ಅಲ್ಲಿ ಸೈಬರ್ ವಂಚಕರ ಜಾಲಕ್ಕೆ ಬಿದ್ದ ಅವರು, ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ.

ಮೂತ್ರ ಪಿಂಡ ಮಾರಾಟಕ್ಕೆ ಹೊರಟು 6 ಲಕ್ಷ ರೂಪಾಯಿ ಕಳೆದುಕೊಂಡದ್ದು ಹೀಗೆ

ವಂಚನೆಗೆ ಒಳಗಾದವರ ಹೆಸರನ್ನು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿಲ್ಲ. ಅವರ ಹೆಸರನ್ನು ಬದಲಾಯಿಸಿ ರಘುವರನ್ ಎಂದು ವರದಿಯಲ್ಲ ನಮೂದಿಸಿದೆ. ಈ ವ್ಯಕ್ತಿ ಆನ್‌ಲೈನ್‌ನಲ್ಲಿ ಕಿಡ್ನಿ ಬೇಕು ಎಂದು ಹುಡುಕುವ ಜನರ ಸಂಪರ್ಕ ವಿವರ ಪಡೆಯುವುದಕ್ಕೆ ಹುಡುಕಾಡಿದಾಗ “https://kidneysuperspecialist.org” ಎಂಬ ವೆಬ್‌ಸೈಟ್ ಕಂಡುಬಂದಿದೆ. ಅಲ್ಲಿ ಸಿಕ್ಕ ಮೊಬೈಲ್ ಸಂಖ್ಯೆ (9631688773) ಗೆ ಕರೆ ಮಾಡಿ ಸಂಪರ್ಕಿಸಿದ್ದರು.

ಅದಕ್ಕೆ ಸ್ಪಂದಿಸಿದ ಮೊಬೈಲ್ ಸಂಖ್ಯೆ ಹೊಂದಿದವರು, ವಾಟ್ಸ್ಆಪ್‌ ಮೂಲಕ ಸಂಪರ್ಕದಲ್ಲಿರುವಂತೆ ಸೂಚಿಸಿದ್ದರು. ಅವರನ್ನು ಸಂಪರ್ಕಿಸಿದ ಲೆಕ್ಕ ಪರಿಶೋಧಕರ ಹೆಸರು, ವಯಸ್ಸು, ವಿಳಾಸ ಮತ್ತು ರಕ್ತದ ಗುಂಪು ಮುಂತಾದ ವಿವರ ನೀಡುವಂತೆ ಸೂಚಿಸಿದ್ದರು. ಅಷ್ಟಾಗಿ, 2 ಕೋಟಿ ರೂಪಾಯಿಗೆ ಮೂತ್ರಪಿಂಡ ಮಾರಾಟದ ವ್ಯವಹಾರ ಕುದುರಿದೆ.

ಇದರಲ್ಲಿ ಅರ್ಧದಷ್ಟು ಹಣವನ್ನು ಕಿಡ್ನಿಯನ್ನು ಶರೀರದಿಂದ ಪ್ರತ್ಯೇಕಿಸುವಾಗ ನೀಡುವುದಾಗಿ ಸೈಬರ್ ವಂಚಕರು ಲೆಕ್ಕಪರಿಶೋಧಕನಿಗೆ ಭರವಸೆ ನೀಡಿದ್ದರು. ಇಷ್ಟಾದ ಬಳಿಕ ಅವರ ವಂಚನೆ ಪರ್ವ ಶುರುವಾಗಿದೆ. ನೋಂದಣಿ ಶುಲ್ಕ ಮತ್ತು ಎನ್‌ಒಸಿಗಾಗಿ 8,000 ರೂಪಾಯಿ ಪಾವತಿಸಿ ಎಂದು ಕೇಳಿದ್ದಾರೆ. ಅದಾದ ಬಳಿಕ ಕೋಡ್ ಒಂದನ್ನು ಪಡೆಯಲು 20,000 ರೂಪಾಯಿ, ಅದರ ನಿರ್ವಹಣೆಗೆ 85,000 ರೂಪಾಯಿ ಕೇಳಿ ಪಡೆದುಕೊಂಡಿದ್ದಾರೆ. ಇಷ್ಟಾದ ಬಳಿಕ ತೆರಿಗೆ ಕ್ಲಿಯರೆನ್ಸ್‌ಗಾಗಿ 5 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಕೇಳಿದ್ದಾರೆ.

ಇಷ್ಟನ್ನೂ ಪಾವತಿಸಿದ ರಘುವರನ್ ಬಳಿ, ಮಾದಕವಸ್ತು ವಿರೋಧಿ ಮತ್ತು ಭಯೋತ್ಪಾದಕ ಕ್ಲಿಯರೆನ್ಸ್ ಫಾರಂಗಳಿಗೆ 7.6 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಕೇಳಿದ್ದಾರೆ. ಆಗ ಅನುಮಾನಗೊಂಡ ಅವರು ಪರಿಣತರನ್ನು ಸಂಪರ್ಕಿಸಿದ್ದಾರೆ. ಅಲ್ಲಿಗೆ ಸೈಬರ್ ವಂಚನೆಗೆ ಒಳಗಾಗಿರುವುದು ಖಚಿತವಾಗಿದೆ ಎಂದು ವರದಿ ಹೇಳಿದೆ.

ಇಷ್ಟೆಲ್ಲವನ್ನೂ ಒಬ್ಬ ಮಹಿಳೆ ಕರೆ ಮಾಡಿ ನಿರ್ವಹಿಸಿದ್ದರು. ಆಕೆ ತಾನು ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದರು. ಇಮೇಲ್ ಮೂಲಕ ಅರ್ಜಿ ನಮೂನೆಯನ್ನೂ ಕಳುಹಿಸಿದ್ದರು. ಇದು ನೋಡಿ ಅನುಮಾನಗೊಂಡು ಸಹೋದ್ಯೋಗಿ ಮತ್ತು ಕಚೇರಿ ಮುಖ್ಯಸ್ಥರನ್ನು ಸಂಪರ್ಕಿಸಿದಾಗ ಅದು ಖಚಿತವಾಗಿ ಸೈಬರ್ ವಂಚನೆ ಎಂಬುದು ದೃಢಪಟ್ಟಿದೆ. ಹೀಗಾಗಿ ಪೊಲೀಸ್ ದೂರು ನೀಡಿದೆ ಎಂದು ಅವರು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಕಿಡ್ನಿ ಮಾರಾಟ ಮಾಡುವ ಸಂಕಷ್ಟ ಏನಿತ್ತು ಅವರಿಗೆ

ಕಾರಿನ ಇಎಂಐ ಪಾವತಿ, ಕ್ರೆಡಿಟ್ ಕಾರ್ಡ್‌ ಸಾಲ ಪಾವತಿ ಮತ್ತು ಇತರೆ ಹಣಕಾಸು ಸಂಕಷ್ಟಗಳಿಂದ ಹೊರಬರುವುದಕ್ಕಾಗಿ ಚಿಂತನೆ ನಡೆಸಿದ್ದೆ ಎಂದು ರಘುವರನ್‌ ಹೇಳಿದದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

ಕಿಡ್ನಿ ಮಾರಾಟ ಮಾಡುವುದಕ್ಕೆ ನಿಯಮಗಳ ಚೌಕಟ್ಟು ಇದೆ. ಅಪರಿಚಿತರಿಗೆ ಮೂತ್ರಪಿಂಡ ಮಾರಾಟ ಮಾಡುವುದು ಕಾನೂನು ಬಾಹಿರ ಎಂಬ ಅಂಶ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾಗಿ ವರದಿ ಹೇಳಿದೆ. ಅವರು ನೀಡಿದ ದೂರು ಆಧರಿಸಿ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 420 ಪ್ರಕಾರ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point