ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ; ಪ್ರಧಾನಿ ಮೋದಿಗೆ 2ನೇ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಅಶ್ಲೀಲ ವಿಡಿಯೊ ಪ್ರಕರಣ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ 2ನೇ ಪತ್ರ ಬರೆದಿದ್ದಾರೆ. ವಿದೇಶಾಂಗ ಸಚಿವಾಲಯ ಸ್ಪಂದಿಸಿದೆ.
ಬೆಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ( Hassan MP Prajwal Revanna Suxual Assault Case) ವಿದೇಶಕ್ಕೆ ತೆರಳಿದ ಬಳಿಕ ತೆಲೆಮರೆಸಿಕೊಂಡಿದ್ದಾರೆ. ಅಶ್ಲೀಲ ವಿಡಿಯೊ ವೈರಲ್ ಆದ ಬಳಿಕ ಈ ಪ್ರಕರಣ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿದೆ. ಪ್ರಕರಣದ ತನಿಖೆಗಾಗಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ದಳವನ್ನು (SIT) ನೇಮಿಸಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ (Prajwal Revanna Diplomatic Passport) ರದ್ದು ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ 2ನೇ ಬಾರಿಗೆ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಮೊದಲ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಮಧ್ಯ ಪ್ರವೇಶಿಸಬೇಕೆಂದು ಎರಡನೇ ಪತ್ರ ಬರೆದಿದ್ದಾರೆ. ಇನ್ನ ಸಿಎಂ ಸಿದ್ದರಾಮಯ್ಯ ಅವರ 2ನೇ ಪತ್ರಕ್ಕೆ ವಿದೇಶಾಂಗ ಸಚಿವಾಲಯ ಸ್ಪಂದಿಸಿದ್ದು, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಎಎನ್‌ಐ ವರದಿಯಾಗಿದೆ.
ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕರ್ನಾಟಕ ಸರ್ಕಾರದಿಂದ ಪತ್ರ ಬಂದಿದೆ. ಈ ಸಂಬಂಧ ಕೆಲವೊಂದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡ ಸ್ವತಂತ್ರ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಶೇಷ ತನಿಖಾ ತಂಡ (ಎಸ್ಐಟಿ) ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ ಎಂಬ ಬಿಜೆಪಿ ಮುಖಂಡ ಮತ್ತು ವಕೀಲ ಜಿ.ದೇವರಾಜೇಗೌಡ ಅವರ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.
ಎಸ್ಐಟಿ ರಿಮೋಟ್ ಕಂಟ್ರೋಲ್‌ನಲ್ಲಿ ಕೆಲಸ ಮಾಡುತ್ತಿದೆ. ಇದು ಸರ್ಕಾರದ ರಬ್ಬರ್ ಸ್ಟಾಂಪ್ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಅವರ ಆರೋಪವು ಸಂಪೂರ್ಣವಾಗಿ ಸುಳ್ಳು. ಇದು ಅಪರಾಧಿಗಳನ್ನು ರಕ್ಷಿಸುವ ದುರುದ್ದೇಶದಿಂದ ತನಿಖೆಯಿಂದ ತಪ್ಪಿಸಿಕೊಳ್ಳುವ ತಂತ್ರವಾಗಿದೆ" ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಅಪರಾಧಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಬದ್ಧವಾಗಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯ್ದ ದಕ್ಷ ಅಧಿಕಾರಿಗಳನ್ನು ಸೇರಿಸಿ ಎಸ್ಐಟಿ ರಚಿಸಲಾಗಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.
ಬಿಜೆಪಿ ನಾಯಕರ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಬಿಜೆಪಿ ನಾಯಕರ ಆರೋಪಗಳಿಗೂ ತಿರುಗೇಟು ನೀಡಿರುವ ಸಿಎಂ, "ಈ ಪ್ರಕರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಕಳಂಕ ತರಲಾಗುತ್ತಿದೆ ಎಂದು ಬಿಜೆಪಿ ನಾಯಕರು ಕೂಗುವುದರಲ್ಲಿ ಅರ್ಥವಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೊದಲು ಬಿಜೆಪಿ ಈ ಬಗ್ಗೆ ಯೋಚಿಸಬೇಕಿತ್ತು. ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಸಹಕಾರ ನೀಡಬೇಕು. ಜೆಡಿಎಸ್ ಜೊತೆ ಇನ್ನೂ ರಾಜಕೀಯ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹಾಸನ ಲೋಕಸಭೆಯಿಂದ ಮರು ಆಯ್ಕೆ ಬಯಸಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ಹೊರಬಂದ ನಂತರ ಎಸ್ಐಟಿಯನ್ನು ರಚಿಸಲಾಯಿತು. ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊದಲ್ಲಿ ಇದ್ದವರು ಎನ್ನಲಾದ ಮಹಿಳೆಯನ್ನು ಅಪಹರಿಸಿದ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ತಂದೆ, ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದು. ಜಾಮೀನ ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)