ಕನ್ನಡ ಸುದ್ದಿ  /  Karnataka  /  Bengaluru News Car Washing Using Cauvery Water 22 Cases In 3 Days Bssw Collected Rs 11 Lakh Fine Rmy

ಎಚ್ಚರಿಕೆ ಕೊಟ್ರೂ ಕೇಳದ ಬೆಂಗಳೂರು ಜನ; ಕಾವೇರಿ ನೀರು ಬಳಸಿ ಕಾರು ವಾಷಿಂಗ್, 3 ದಿನದಲ್ಲಿ 22 ಪ್ರಕರಣ, 1.1 ಲಕ್ಷ ದಂಡ ವಸೂಲಿ

ಕುಡಿಯುವ ನೀರನ್ನು ದುರ್ಬಳಕೆ ಮಾಡಿಕೊಂಡರೆ ದಂಡ ವಿಧಿಸಲಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ಎಚ್ಚರಿಕೆ ನೀಡಿದರೂ ಕೆಲವರು ಕಾರು ತೊಳೆಯಲು ಕಾವೇರಿ ನೀರು ಬಳಸಿದ್ದಾರೆ. ಇದಕ್ಕೆ ಬೆಲೆಯನ್ನು ತೆತ್ತಿದ್ದಾರೆ.

ಎಚ್ಚರಿಕೆಯ ನಡುವೆಯೂ ಬೆಂಗಳೂರಿನಲ್ಲಿ ಮಾರ್ಚ್ 22 ರಿಂದ 3 ದಿನಗಳ ಅವಧಿಯಲ್ಲಿ ಕಾವೇರಿ ನೀರು ಬಳಸಿ ಕಾರು ವಾಶ್ ಮಾಡಿರುವ ಬಗ್ಗೆ 22 ಪ್ರಕರಣಗಳು ದಾಖಲಾಗಿದ್ದು, 1.1 ಲಕ್ಷ ರೂಪಾಯಿ ದಂಡ ವಸೂಲಾಗಿದೆ.
ಎಚ್ಚರಿಕೆಯ ನಡುವೆಯೂ ಬೆಂಗಳೂರಿನಲ್ಲಿ ಮಾರ್ಚ್ 22 ರಿಂದ 3 ದಿನಗಳ ಅವಧಿಯಲ್ಲಿ ಕಾವೇರಿ ನೀರು ಬಳಸಿ ಕಾರು ವಾಶ್ ಮಾಡಿರುವ ಬಗ್ಗೆ 22 ಪ್ರಕರಣಗಳು ದಾಖಲಾಗಿದ್ದು, 1.1 ಲಕ್ಷ ರೂಪಾಯಿ ದಂಡ ವಸೂಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಇದರ ನಡುವೆ ಅಧಿಕಾರಗಳ ಎಚ್ಚರಿಕೆಯನ್ನೂ ಲೆಕ್ಕಿಸದೆ ಕೆಲವರು ಕಾವೇರಿ ಮತ್ತು ಬೋರ್‌ವೆಲ್ ನೀರು ಬಳಸಿ ಕಾರುಗಳನ್ನು ತೊಳೆದಿದ್ದಾರೆ. ಈ ಸಂಬಂಧ ಕಳೆದ 3 ದಿನಗಳಲ್ಲಿ (ಮಾರ್ಚ್ 22 ರಿಂದ 24) 22 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) 1.1 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ.

ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಯಾರೂ ಕೂಡ ಕಾರು ತೊಳೆಯುವುದು ಸೇರಿದಂತೆ ನೀರನ್ನು ದುರ್ಬಳಕೆ ಮಾಡಿಕೊಂಡರೆ 5000 ರೂಪಾಯಿ ದಂಡ ವಿಧಿಸುವುದಾಗಿ ಬಿಡಬ್ಲ್ಯುಎಸ್‌ಎಸ್‌ಬಿ ಮಾರ್ಚ್ 10 ರಂದು ನೋಟಿಸ್ ಹೊರಡಿಸಿತ್ತು. ಆದರೆ ಜಲಮಂಡಳಿಯ ಎಚ್ಚರಿಕೆಯ ನಡುವೆಯೂ ಕೆಲವರು ಕಾವೇರಿ ಅಥವಾ ಬೋರ್‌ವೆಲ್ ನೀರು ಬಳಸಿ ಕಾರು ತೊಳೆಯುತ್ತಿರುವುದು ಕಂಡು ಬರುತ್ತಿದೆ.

ಕಳೆದ ಶುಕ್ರವಾರ (ಮಾರ್ಚ್ 22), ಶನಿವಾರ (ಮಾರ್ಚ್ 23) ಹಾಗೂ ಭಾನುವಾರ (ಮಾರ್ಚ್ 24) ಮೂರು ದಿನಗಳಲ್ಲಿ ನೀರನ್ನು ದುರ್ಬಳಕೆ ಮಾಡಿಕೊಂಡಿರುವವರನ್ನು ಗುರುತಿಸಿ 22 ಪ್ರಕರಣಗಳನ್ನು ದಾಖಲಸಿಕೊಂಡಿದ್ದು, ದಂಡವನ್ನು ವಿಧಿಸಿದ್ದೇವೆ. ಟ್ರಾಫಿಕ್ ಪೊಲೀಸರ ಮೂಲಕ ಅವರಿಗೆ ದಂಡದ ರಶೀದಿಗಳನ್ನು ನೀಡಿದ್ದೇವೆ. ನೀರು ದುರ್ಬಳಕೆಯಲ್ಲಿ ಕಾರು ತೊಳೆಯುತ್ತಿರುವುದು ಪ್ರಮುಖವಾಗಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಜನರು ನೇರವಾಗಿ ನಲ್ಲಿಗಳಿಗೆ ಸ್ಪ್ರೇಗಳನ್ನು ಅಳವಡಿಸಿಕೊಂಡು ಕಾರ್ ವಾಷ್ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ನೀರು ವ್ಯರ್ಥವಾಗುತ್ತಿದೆ. ಸ್ಥಳೀಯರು ನೀಡಿದ ದೂರಿನ ಮೇರೆಗೆ ಈ ಪ್ರಕರಣಗಳನ್ನ ಪತ್ತೆ ಹಚ್ಚಲಾಗುತ್ತಿದ್ದು, ಇದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ನೀರಿನ ಅಸಮರ್ಪಕ ಪೂರೈಕೆಗೆ ಅಕ್ರಮ ನೀರು ಸಂಪರ್ಕವೂ ಕಾರಣ

ಬೆಂಗಳೂರಿನಲ್ಲಿ ನೀರಿಲ್ಲದೆ ಕೋಟ್ಯಂತರ ನಾಗರಿಕರು ಪರದಾಡುತ್ತಿದ್ದಾರೆ. ನೀರಿನ ಅಸಮರ್ಪಕ ಪೂರೈಕೆಗೆ ಅಕ್ರಮ ನೀರು ಸಂಪರ್ಕವೂ ಕಾರಣ. ಆದರೆ ಅತ್ತ ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್ ಫೋರ್ಸ್(ಬಿಎಂಟಿಎಫ್) ಅಕ್ರಮ ನಲ್ಲಿ ಸಂಪರ್ಕ ಪ್ರಕರಣಗಳೂ ಸೇರಿದಂತೆ ಕಳೆದ 5 ವರ್ಷಗಳಲ್ಲಿ 309 ಪ್ರಕರಣಗಳನ್ನು ಮುಕ್ತಾಯಗೊಳಿಸಿದೆ.

ಬೆಂಗಳೂರಿನಲ್ಲಿ ಅಕ್ರಮ ನೀರಿನ ಸಂಪರ್ಕಗಳು ಸರ್ವೇ ಸಾಮಾನ್ಯವಾಗಿದ್ದು, ನಗರದಾದ್ಯಂತ ಇಂತಹ ಪ್ರಕರಣಗಳನ್ನು ಕಾಣಬಹುದಾಗಿದೆ. ಹಾಗಾಗಿ ಅಕ್ರಮ ನೀರು ಸಂಪರ್ಕದ ಪ್ರಕರಣಗಳ ಸಂಖ್ಯೆಯೂ ಹೆಚ್ಚು ಎಂದು ಬಿಟಿಎಂಎಫ್ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹೇಳುತ್ತಾರೆ. ಆದರೆ ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ದೂರುದಾರರು ಬೇರೆಯದ್ದೇ ಆದ ವಾದವನ್ನು ಮಂಡಿಸುತ್ತಾರೆ.

ಅಕ್ರಮ ನೀರಿನ ಸಂಪರ್ಕಗಳನ್ನು ಕುರಿತು ವಿಚಾರಣೆ ನಡೆಸದೆ ಇತ್ಯರ್ಥಗೊಳಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ಇನ್ನಷ್ಟು ಅಕ್ರಮ ಸಂಪರ್ಕಗಳು ಹೆಚ್ಚುತ್ತವೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಅಕ್ರಮ ನೀರು ಸಂಪರ್ಕದ ಪ್ರಕರಣಗಳನ್ನು ತಡೆಯುವುದು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಲಿಯ ಜವಬ್ದಾರಿ.

ಅಕ್ರಮ ನೀರು ಸಂಪರ್ಕಗಳನ್ನು ತಡೆಯಲು ಆಸ್ತಿ ಗುರುತು ಸಂಖ್ಯೆ(ಪಿಐಡಿ ನಂಬರ್) ಯನ್ನು ಜಲ ಮಂಡಲಿಯ ಆರ್ ಆರ್ ನಂಬರಿನ ಜೊತೆ ಜೋಡಿಸಿದರೆ ಅಕ್ರಮ ಸಂಪರ್ಕ ಮತ್ತು ನೀರಿನ ಸೋರಿಕೆಯನ್ನು ತಡೆಗಟ್ಟಬಹುದಾಗಿದೆ. ಇದೇನೂ ಹೊಸ ಅನ್ವೇಷಣೆಯಲ್ಲ. 9 ವರ್ಷಗಳ ಹಿಂದೆಯೇ ಇಂತಹದೊಂದು ಯೋಜನೆಯನ್ನು ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿತ್ತು. ಆಗ ಅಲ್ಲಿ 26 ಸಾವಿರ ಗ್ರಾಹಕರಿದ್ದು, 23,500 ಗ್ರಾಹಕರು ತಮ್ಮ ಆರ್ ಆರ್ ನಂಬರ್ ಗಳನ್ನು ಪಿಐಡಿ ನಂಬರ್ ಜೊತೆ ಜೋಡಿಸಿದ್ದರು. ಆಗ ಮಂಡಲಿಯ ಈ ಪ್ರಯೋಗ ಯಶಸ್ವಿಯಾಗಿತ್ತು. ಒಂದು ವೇಳೆ ಬೆಂಗಳೂರು ನಗರದಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಿದ್ದರೆ ಸಾವಿರಾರು ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ಜಲ ಮಂಡಲಿ ಮುಂದುವರೆಸಲಿಲ್ಲ.

IPL_Entry_Point