Caste Census Report: ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದ ಜಾತಿ ಗಣತಿ ವರದಿ ಮುದ್ರಣ, ಮೂಲ ವರದಿ ಎಲ್ಲಿ? ಹಳೆಯ ಪತ್ರ ವೈರಲ್
ಕರ್ನಾಟಕದಲ್ಲಿ ಜಾತಿ ಗಣತಿ ವರದಿ ವಿಚಾರ ಭಾರಿ ಚರ್ಚೆಯಲ್ಲಿದೆ. ಈ ಸನ್ನಿವೇಶದಲ್ಲೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಅವರು ಬರೆದ ಹಳೇಪತ್ರ ವೈರಲ್ ಆಗಿದೆ. ಈ ನಡುವೆ, ಜಾತಿಗಣತಿ ವರದಿ ಜನವರಿಯೊಳಗೆ ಸಲ್ಲಿಸಲು ಕಾಲಾವಕಾಶ ನೀಡಿರುವ ಸುದ್ದಿ ಬಂದಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Govt) ಜಾತಿ ಗಣತಿ ವರದಿ (Caste Census Report) ವ್ಯಾಪಕ ಚರ್ಚೆಗೆ ಒಳಗಾಗಿರುವ ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ( K Jayaprakash Hegde ) ಅವರು 2021ರಲ್ಲಿ ಬರೆದ ಪತ್ರ ಈಗ ಬಹಿರಂಗವಾಗಿದೆ.
ಈ ಪತ್ರ ಬಹಿರಂಗವಾದ ಬೆನ್ನಿಗೆ ಮೂಲ ವರದಿ ಇದೆಯೇ ಅಥವಾ ಕಾಣೆಯಾಗಿದೆಯೇ ಎಂಬ ಸಂದೇಹ ಕಾಡತೊಡಗಿದೆ. ಈ ಪತ್ರವನ್ನು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದು, ವರದಿಯ ಮಾನ್ಯತೆಯನ್ನು ಪ್ರಶ್ನಿಸಿದ್ದಾರೆ. ಈ ನಡುವೆ, ಕೆ. ಜಯಪ್ರಕಾಶ್ ಹೆಗ್ಡೆ ಅವರು ಇಂದು (ನ.22) ಮಾಧ್ಯಮ ಪತ್ರಿನಿಧಿಗಳ ಜತೆಗೆ ಮಾತನಾಡಿ ಸ್ಪಷ್ಟೀಕರಣ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರ ಟ್ವೀಟ್‌ನಲ್ಲಿ ಏನಿದೆ
ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಜಾತಿ ಗಣತಿ ವರದಿ ಮೂಲ ಪ್ರತಿ ಅಲ್ಲ ಎಂಬುದು ಹೊಣೆಗಾರಿಕೆಯ ಕೊರತೆ ಅಥವಾ ಪಿತೂರಿಯ ಭಾಗ. ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದೇ ಇರುವ ದಾಖಲೆಯ ಮಾನ್ಯತೆ ಪ್ರಶ್ನಾರ್ಹ. ಈ ವಿದ್ಯಮಾನ ಗೌಪ್ಯವಾಗಿ ನಡೆದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಇದು ಉದ್ದೇಶ ಪೂರ್ವಕ ಸರ್ಕಾರವೇ ಮಾಡಿದ ನಾಟಕ ಎಂದೆನಿಸುತ್ತಿದೆ ಎಂದು ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜತೆಗೆ ಕೆ ಜಯಪ್ರಕಾಶ್ ಹೆಗ್ಡೆ ಅವರ ಪತ್ರವನ್ನೂ ಅವರು ಶೇರ್ ಮಾಡಿದ್ದಾರೆ.
ಕೆ.ಜಯಪ್ರಕಾಶ್ ಹೆಗ್ಡೆ ಪತ್ರದಲ್ಲಿ ಏನಿದೆ
“ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರಲ್ಲಿ ಸಂಗ್ರಹಿಸಿದ ಅಂಕಿ ಅಂಶ ಮತ್ತು ಇತರ ವಿವರಗಳನ್ನು ಒಳಗೊಂಡ ಸೀಲ್ ಮಾಡಿದ ಬಾಕ್ಸ್‌ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು, ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಹಿಂದುಳಿದ ವರ್ಗಗಳ ಆಯೋಗ ಕಚೇರಿಯಲ್ಲಿ ಇರಿಸಲಾಗಿದ್ದ ಸೀಲ್ಡ್ ಬಾಕ್ಸ್‌ಗಳನ್ನು 2021ರ ಅಗಸ್ಟ್ 26 ರಂದು ತೆರೆದು ನೋಡಲಾಗಿದೆ. ಆದರೆ ಮುದ್ರಿತ ಮುಖ್ಯವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇರುವುದಿಲ್ಲ. ಮೂಲ ಪತ್ರಿ ಅಥವಾ ಹಸ್ತಪ್ರತಿ ಬಾಕ್ಸ್‌ನಲ್ಲಿ ಇಲ್ಲದ ಕಾರಣ ಅದನ್ನು ಕೂಡಲೇ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು. ಸದರಿಯವರು ಸೂಚನೆಗೆ ಉತ್ತರ ನೀಡಿದ್ದು, ಅದರ ಪ್ರತಿಯನ್ನು ಲಗತ್ತಿಸಿದೆ. ಸದರಿ ವಿಷಯವನ್ನು ಸರ್ಕಾರದ ಗಮನಕ್ಕೆ ತರಬಯಸುತ್ತಾ, ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಹಂತದಲ್ಲಿ ಸ್ಪಷ್ಟಪಡಿಸುವಂತೆ ಕೋರುತ್ತೇನೆ" ಎಂಬ ಅಂಶ ಕೆ ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಬರೆದ ಹಳೆಯ ಪತ್ರದಲ್ಲಿದೆ.
ಕೆ. ಜಯಪ್ರಕಾಶ್ ಹೆಗ್ಡೆ ಸ್ಟಷ್ಟೀಕರಣದಲ್ಲಿದ್ದ 5 ಅಂಶಗಳು
ಹಳೇಪತ್ರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟೀಕರಣ ನೀಡಿದ ಕೆ. ಜಯಪ್ರಕಾಶ್ ಹೆಗ್ಡೆ, ಹೇಳಿದ 5 ಅಂಶಗಳಿವು
1. ಪತ್ರದಲ್ಲಿರುವ ಅಂಶಗಳು ಅಷ್ಟೂ ನಿಜ. ಅದಕ್ಕೆ ಸಂಬಂಧಿಸಿ ಸರ್ಕಾರದ ಪ್ರತಿನಿಧಿಗಳ ಜತೆಗೆ ಮಾತುಕತೆ ಆಗಿದೆ. ಅವೆಲ್ಲವನ್ನೂ ಬಹಿರಂಗಪಡಿಸಲು ಆಗುವುದಿಲ್ಲ.
2. ಕಾಂತರಾಜ್ ವರದಿ ಅಥವಾ ಜಯಪ್ರಕಾಶ್ ಹೆಗ್ಡೆ ವರದಿ ಕೊಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
3. ಕಾಂತರಾಜ್ ಅವರ ವರದಿ ಶೇಕಡ 100ರಷ್ಟು ಸುರಕ್ಷಿತವಾಗಿದೆ. ಅದಕ್ಕೆ ಸಂಬಂಧಿಸಿದ ವರ್ಕ್‌ಶೀಟ್‌ಗಳು ಕೂಡ ಸುರಕ್ಷಿತವಾಗಿವೆ. ಅವುಗಳನ್ನು ಆಧರಿಸಿಯೇ ವರದಿ ಸಿದ್ಧಪಡಿಸುತ್ತೇವೆ
4. ಮುಖ್ಯಮಂತ್ರಿಗಳು ಜಾತಿಗಣತಿ ವರದಿ ಸಲ್ಲಿಸುವುದಕ್ಕೆ ಜನವರಿ ತನಕ ಕಾಲಾವಕಾಶ ನೀಡುವುದಾಗಿ ಹೇಳಿದ್ದಾರೆ. ಅದರೊಳಗೆ ವರದಿ ಸಲ್ಲಿಸುತ್ತೇವೆ.
5. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಹೊಸ ಸಮಿತಿ ಸದಸ್ಯರನ್ನು ಒಳಗೊಂಡು ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಅದನ್ನೇ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.