ಕನ್ನಡ ಸುದ್ದಿ  /  Karnataka  /  Bengaluru News Ccb Police Arrested 6 Who Selling Drugs Kumaraswamy Layout Police Arrested Laptop Thieves Mrt

Bengaluru News: ಸಿಸಿಬಿ ಪೊಲೀಸರಿಂದ 44 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ; ಮೂವರು ವಿದೇಶಿಯರು ಸೇರಿ 6 ಮಂದಿ ಬಂಧನ

Bengaluru News: ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ವಿದೇಶಿಯರು ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 44 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕುಮಾರಸ್ವಾಮಿ ಲೇ ಔಟ್‌ ಪೊಲೀಸರು ಲ್ಯಾಪ್‌ಟಾಪ್‌ ಕಳ್ಳರನ್ನು ಬಂಧಿಸಿದ್ದಾರೆ.

44 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ವಶ
44 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ವಶ

ಬೆಂಗಳೂರು ನ್ಯೂಸ್‌: ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು, ಫೆಬ್ರವರಿ ತಿಂಗಳಲ್ಲಿ 44 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ಮೂವರು ವಿದೇಶಿಯರು ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ. 80 ಕೆ.ಜಿ ಗಾಂಜಾ, 198 ಗ್ರಾಂ ಅಫೀಮು, 1 ಕೆಜಿ ಕೊಕೇನ್, 1. 814 ಎಂಡಿಎಂಎ, 1273 ಎಕ್ಸ್‌ಟೆಸ್ಸಿ ಮಾತ್ರೆಗಳು ಹಾಗೂ 1 ಎಲ್‌ಎಸ್‌ಡಿ ಕಾಗದದ ಚೂರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ಕಾರು ಮಾರಾಟದ ಏಜೆನ್ಸಿಯೊಂದರ ವ್ಯವಸ್ಥಾಪಕ ಮತ್ತು ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಡೆಲಿವರಿ ಬಾಯ್‌ನನ್ನು ಸೆರೆ ಹಿಡಿಯಲಾಗಿದೆ. ಮೂವರು ವಿದೇಶಿ ಪ್ರಜೆಗಳು, ಶಿಕ್ಷಣ ಹಾಗೂ ವ್ಯಾಪಾರ ವೀಸಾದಡಿ ನಗರಕ್ಕೆ ಬಂದು ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲ್ಯಾಪ್‌ಟಾಪ್ ಕಳ್ಳರ ಬಂಧನ

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ಕಂಪನಿಯೊಂದರಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಲ್ಯಾಬ್‌ ಟೆಕ್ನೀಷಿಯನ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಂಪನಿಯಲ್ಲಿದ್ದ ಲ್ಯಾಪ್‌ಟಾಪ್ ಹಾಗೂ ಇತರೆ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಬಗ್ಗೆ ಮಾಲೀಕರು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ತನಿಖೆ ನಡೆಸಲಾಯಿತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡರು ಎಂದು ಪೊಲೀಸರು ಹೇಳಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲ್ಯಾಬ್‌ ಟೆಕ್ನಿಷಿಯನ್‌ಗಳು, ಕಳ್ಳತನಕ್ಕೆ ಸಂಚು ರೂಪಿಸಿ, ಮೂವರು ಕಳ್ಳರ ಸಹಾಯ ಪಡೆದಿದ್ದರು. ಎಲ್ಲರೂ ಸೇರಿ ಕಂಪನಿಯಲ್ಲಿದ್ದ ಲ್ಯಾಪ್‌ಟಾಪ್ ಹಾಗೂ ಇತರೆ ಸಾಮಗ್ರಿಗಳನ್ನು ಕದ್ದೊಯ್ದಿದ್ದರು. ಇವರಿಂದ ರೂ. 16 ಲಕ್ಷ ಮೌಲ್ಯದ 29 ಲ್ಯಾಪ್‌ಟಾಪ್ ಹಾಗೂ 59 ಕ್ರೋಮ್ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾತ್ರೆ ಹಾಗೂ ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡಿದ್ದ 6 ಮಂದಿ ಬಂಧನ

ಜನರು ಹೆಚ್ಚು ಸೇರುವ ಜಾತ್ರೆಗಳು ಹಾಗೂ ಆಭರಣ ಮಳಿಗೆಯಲ್ಲಿ ಚಿನ್ನದ ಸರ ಕಳ್ಳತನ ಮಾಡಿದ್ದ 6 ಆರೋಪಿಗಳನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಠಾಣೆಯ ವ್ಯಾಪ್ತಿಯಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಚಿನ್ನದ ಸರ ಕಳ್ಳತನವಾಗಿರುವ ಬಗ್ಗೆ ಮಾಲೀಕರು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ತನಿಖೆ ಕೈಗೊಂಡು ಆರೋಪಿಗಳಾದ ಜಯದುಂಬಿ, ಶೌಕತ್, ಚುಮನ್‌ಸಾಬ್, ಮುನ್ನಾ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು, ಚಿತ್ರದುರ್ಗ ಜಿಲ್ಲೆಯ ಭರಮಸಾಗರದವರು ಎಂದು ತಿಳಿದು ಬಂದಿದೆ. ಇವರಿಂದ 16 ಲಕ್ಷ ರೂಪಾಯಿ ಮೌಲ್ಯದ 383 ಗ್ರಾಂ ತೂಕದ ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ. ಬನಶಂಕರಿ ಹಾಗೂ ಇತರೆ ಜಾತ್ರೆಗಳಲ್ಲಿ ಓಡಾಡುತ್ತಿದ್ದ ಆರೋಪಿಗಳು, ಜನ ದಟ್ಟಣೆಯಲ್ಲಿ ಮಹಿಳೆಯರ ಚಿನ್ನದ ಸರ ಕದಿಯುವ ರೂಢಿ ಮಾಡಿಕೊಂಡಿದ್ದರು. ಈ ರೀತಿ ಕದ್ದ ಸರಗಳನ್ನು ಮಾರಿ ಹಣ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು. ಜಾತ್ರೆಗಳು ಇಲ್ಲದ ಸಂದರ್ಭದಲ್ಲಿ, ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ವರದಿ: ಮಾರುತಿ. ಹೆಚ್‌, ಬೆಂಗಳೂರು

IPL_Entry_Point