ಬೆಂಗಳೂರಲ್ಲಿ ಚಿಕನ್ ದರ; ಬಿಸಿಲಾಘಾತ ಕೋಳಿಗಳಿಗೆ, ದರ ಏರಿಕೆಯ ಆಘಾತ ಗ್ರಾಹಕರಿಗೆ, ಕೋಳಿ ಮಾಂಸ ಕಿಲೋಗೆ 300 ರೂಪಾಯಿ-bengaluru news chicken prices in bangalore goes upto rs 300 per kg as hot weather reduces supply chicken rate in bng uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಚಿಕನ್ ದರ; ಬಿಸಿಲಾಘಾತ ಕೋಳಿಗಳಿಗೆ, ದರ ಏರಿಕೆಯ ಆಘಾತ ಗ್ರಾಹಕರಿಗೆ, ಕೋಳಿ ಮಾಂಸ ಕಿಲೋಗೆ 300 ರೂಪಾಯಿ

ಬೆಂಗಳೂರಲ್ಲಿ ಚಿಕನ್ ದರ; ಬಿಸಿಲಾಘಾತ ಕೋಳಿಗಳಿಗೆ, ದರ ಏರಿಕೆಯ ಆಘಾತ ಗ್ರಾಹಕರಿಗೆ, ಕೋಳಿ ಮಾಂಸ ಕಿಲೋಗೆ 300 ರೂಪಾಯಿ

ಬೆಂಗಳೂರಲ್ಲಿ ಚಿಕನ್ ದರ ಹೆಚ್ಚಳದ ವಿಚಾರ ಈಗ ಗ್ರಾಹಕರ ನಡುವೆ ಚರ್ಚೆಗೆ ಒಳಗಾಗಿದೆ. ಬಿಸಿಲಾಘಾತ ಕೋಳಿಗಳಿಗೆ ಆದರೆ, ದರ ಏರಿಕೆಯ ಆಘಾತ ಗ್ರಾಹಕರಿಗೆ ಆಗತೊಡಗಿದೆ. ಸದ್ಯ ಕೋಳಿ ಮಾಂಸ ಕಿಲೋಗೆ 300 ರೂಪಾಯಿಗೆ ಬಿಕರಿಯಾಗುತ್ತಿದೆ. ಇದರ ವಿವರ ವರದಿ ಇಲ್ಲಿದೆ.

ಬೆಂಗಳೂರಲ್ಲಿ ಚಿಕನ್ ದರ; ಬಿಸಿಲಾಘಾತ ಕೋಳಿಗಳಿಗೆ, ದರ ಏರಿಕೆಯ ಆಘಾತ ಗ್ರಾಹಕರಿಗೆ, ಕೋಳಿ ಮಾಂಸ ಕಿಲೋಗೆ 300 ರೂಪಾಯಿ ಎಂಬುದೀಗ ಗ್ರಾಹಕರು, ವ್ಯಾಪಾರಿಗಳ ನಡುವಿನ ಚರ್ಚೆಯ ವಿಚಾರ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಚಿಕನ್ ದರ; ಬಿಸಿಲಾಘಾತ ಕೋಳಿಗಳಿಗೆ, ದರ ಏರಿಕೆಯ ಆಘಾತ ಗ್ರಾಹಕರಿಗೆ, ಕೋಳಿ ಮಾಂಸ ಕಿಲೋಗೆ 300 ರೂಪಾಯಿ ಎಂಬುದೀಗ ಗ್ರಾಹಕರು, ವ್ಯಾಪಾರಿಗಳ ನಡುವಿನ ಚರ್ಚೆಯ ವಿಚಾರ. (ಸಾಂಕೇತಿಕ ಚಿತ್ರ)

ಬೆಂಗಳೂರು: ಮುಂಗಾರು ಮಳೆಯ ಛಾಯೆ ಬೆಂಗಳೂರು ನಗರವನ್ನು ಆವರಿಸುತ್ತಿದ್ದು, ಬೇಸಿಗೆಯ ಬಿಸಿಲ ಧಗೆ ಕಡಿಮೆಯಾಗಿದೆ. ಮಳೆಗಾಲದಲ್ಲಿ ಬಿಸಿಬಿಸಿಯಾಗಿ ಚಿಕನ್ ಖಾದ್ಯ ತಿನ್ನಬೇಕು ಎನ್ನುವವರಿಗೆ ಕೊಂಚ ಆಘಾತ ನೀಡುವ ವಿಚಾರ ಇದು. ಬೆಂಗಳೂರಿನಲ್ಲಿ ಚಿಕನ್ ದರ (Chicken prices in Bangalore) ಏರಿಕೆಯಾಗಿದೆ. ಕೋಳಿ ಮಾಂಸದ ದರ ಕಿಲೋಗೆ 300 ರೂಪಾಯಿ ಗಡಿ ದಾಟಿದೆ.

ಕೋಳಿ ಮಾಂಸದ ದರ ಹೆಚ್ಚಳವಾಗಿರುವುದು ಮಾಂಸ ಪ್ರಿಯರ ಕಳವಳ ಹೆಚ್ಚಿಸಿದೆ. ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಕೋಳಿ ಮಾಂಸ ಬಳಕೆಯಾಗುತ್ತಿದೆ. ಹವಾಮಾನ ವೈಪರೀತ್ಯದ ಕಾರಣ ಕೋಳಿಗಳ ಆಹಾರದ ಬೆಲೆಯೂ ಏರಿಕೆಯಾಗಿದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪೂರೈಕೆಯೂ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.

ಬೆಂಗಳೂರಲ್ಲಿ ಕೋಳಿ ಮಾಂಸದ ದರ ಹೆಚ್ಚಳ ಕಾರಣವೇನು

ಬಿಸಿಲ ಝಳಕ್ಕೆ ಹಲವಾರು ಕೋಳಿಫಾರಂಗಳಲ್ಲಿ ಕೋಳಿಗಳು ಸತ್ತಿದ್ದರೆ, ಇನ್ನು ಕೆಲವರು ಬಿಸಿಲ ಆಘಾತಕ್ಕೆ ಕೋಳಿಗಳು ಬದುಕುವುದಿಲ್ಲ ಎಂದು ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳನ್ನು ಸಾಕಿಲ್ಲ. ಈ ನಡುವೆ, ಹವಾಮಾನ ವೈಪರೀತ್ಯ, ಕೋಳಿಗಳ ಆಹಾರದ ಬೆಲೆ ಏರಿಕೆಯಿಂದಾಗಿ ಕೋಳಿ ಮಾಂಸದ ದರ ಹೆಚ್ಚಳವಾಗಿದೆ ಎಂದು ಕೋಳಿ ವ್ಯಾಪಾರಿಗಳು ಹೇಳುತ್ತಿದ್ದಾರೆ.

ವಾರಗಳ ಹಿಂದೆ ಬೆಂಗಳೂರಿನಲ್ಲಿ ಕೋಳಿ ಮಾಂಸದ ದರ ಕಿಲೋಗೆ 220 ರೂಪಾಯಿಯಿಂದ 250 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಈಗ ಇದೇ ಕೋಳಿ ಮಾಂಸದ ದರ ಕಿಲೋಗೆ 300 ರೂಪಾಯಿಯಿಂದ 350 ರೂಪಾಯಿ ಆಗಿದೆ. ಜೀವ ಇರುವ ಕೋಳಿಯ ದರ ಕಿಲೋಗೆ180 ರೂಪಾಯಿಯಿಂದ 200 ರೂಪಾಯಿ ಆಗಿದೆ.

ಪೌಲ್ಟ್ರಿ ಫಾರ್ಮ್ ಮಾಲೀಕರು ಕೋಳಿ ಮಾಂಸದ ಬೆಲೆ ಹೆಚ್ಚಳದ ಕಾರಣಗಳನ್ನು ವಿವರಿಸುತ್ತ, ಕೋಳಿ ಮರಿಗಳ ಪೈಕಿ ಶೇಕಡ 30ರಷ್ಟು ಹುಟ್ಟಿದ ಎರಡೇ ವಾರಗಳಲ್ಲಿ ಬಿಸಿಲಿನ ಆಘಾತಕ್ಕೆ ಸಿಲುಕಿ ಮೃತಪಟ್ಟಿವೆ. ಫೆಬ್ರವರಿ ತಿಂಗಳಿಂದೀಚೆಗಿನ ತಾಪಮಾನ ಹೆಚ್ಚಾಗಿದ್ದ ಕಾರಣ ಕೋಳಿಮರಿಗಳಿಗೆ ಬಿಸಿಲಿನ ಝಳವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆಹಾರ ತಿನ್ನುವುದು ಕೂಡ ಕಷ್ಟ. ಕೋಳಿ ಮರಿ ಬೆಳೆದು ದೊಡ್ಡದಾಗಬೇಕಾದರೆ 40 ರಿಂದ 60 ದಿನ ಬೇಕು. ಈ ಅವಧಿಯಲ್ಲಿ ಅನೇಕ ಮರಿಗಳು ಮೃತಪಡುವ ಕಾರಣ, ಕೋಳಿ ಮಾಂಸದ ದರ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಕಿಲೋಗೆ 200 ರೂ.ನಿಂದ 220 ರೂಪಾಯಿಗೆ ಸ್ಥಿರವಾಗಿದ್ದ ಕೋಳಿ ಮಾಂಸದ ದರ

ಕೊರೊನಾ ಸಾಂಕ್ರಾಮಿಕ ರೋಗದ ನಂತರ ಬೆಂಗಳೂರಿನಲ್ಲಿ ಕೋಳಿ ಬೆಲೆಗಳು 200 ಮತ್ತು 220 ರೂ. ರ ನಡುವೆ ಸ್ಥಿರವಾಗಿತ್ತು. ಆದರೆ ಈಗ ಚಿಕನ್ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಇದು ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಲವು ಕೋಳಿಮಾಂಸ ವ್ಯಾಪಾರಿಗಳು ತಿಳಿಸಿದ್ದಾರೆ.

ಕೋಳಿ ಆಹಾರದ ದರ ಏರಿಕೆ ಆಗಿರುವುದು ಕೂಡ ಇದಕ್ಕೆ ಕಾರಣ. ಮೆಕ್ಕೆ ಜೋಳದ ಬೆಲೆ ಟನ್‌ಗೆ 26,500 ರೂಪಾಯಿ, ಸೋಯಾ ದರ ಟನ್‌ಗೆ 46,000 ರೂಪಾಯಿ ಆಗಿದೆ. ಕೋಳಿ ಆಹಾರ ತಯಾರಿಕೆಯಲ್ಲಿ ಈ ಎರಡೂ ಕೃಷಿ ಉತ್ಪನ್ನಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಅಕ್ಕಿಯ ಪೂರಯಕೆ ಕೂಡ ಕಡಿಮೆಯಾಗಿದೆ. ಕಡಿ ಅಕ್ಕಿಯನ್ನು ಈಗ ಎಥೆನಾಲ್ ಕೈಗಾರಿಕೆಗಳಿಗೆ ಪೂರೈಸಲಾಗುತ್ತಿದ್ದು, ಇದು ಕೋಳಿ ಆಹಾರ ದುಬಾರಿಯಾಗಲು ಕಾರಣವಾಗಿದೆ.