Nandi Hills: ನಂದಿಹಿಲ್ಸ್‌ಗೆ ಹೋಗಬೇಕು ಅಂತಿದ್ರೆ ಗಮನಿಸಿ, ಒಂದು ತಿಂಗಳು ನಂದಿ ಗಿರಿಧಾಮ ಬಂದ್; ಈ ದಿನಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ
Nandi Hills Entry Restriction: ಬೆಂಗಳೂರಲ್ಲಿ ಮಳೆ ಶುರುವಾಗಿದೆ, ನಂದಿ ಬೆಟ್ಟದ ಕಡೆ ಹೋಗಿ ಬರೋಣ, ವೆದರ್ ಸೂಪರ್ ಇರುತ್ತೆ ಅಂತ ಅಂದುಕೊಳ್ತಾ ಇದ್ದರೆ ನಿಮಗೆ ಇಲ್ಲಿದೆ ಕಹಿ ಸುದ್ದಿ. ಒಂದು ತಿಂಗಳ ಕಾಲ ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ, ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರಿಗೆ ಸಮೀಪದಲ್ಲೇ ಇರುವ ನಂದಿಬೆಟ್ಟ ಎಂದರೆ ಸಿಲಿಕಾನ್ ಸಿಟಿಯ ಜನರಿಗೆ ಸ್ವರ್ಗದಂತೆ. ನಂದಿ ಗಿರಿಧಾಮವು ಬೆಂಗಳೂರು ಸಮೀಪದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದು. ಇದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ವೀಕೆಂಡ್‌ಗಳಲ್ಲಿ ಬೆಂಗಳೂರು ಜನರು ನಂದಿ ಬೆಟ್ಟಕ್ಕೆ ಜಾಲಿರೈಡ್ ಹೋಗುವುದು ಸಾಮಾನ್ಯ. ಅದರಲ್ಲೂ ಇದೀಗ ಕೊಂಚ ಮಳೆ ಕೂಡ ಸುರಿದಿದ್ದು, ವಾತಾವರಣ ಸೂಪರ್ ಆಗಿರುತ್ತೆ, ಒಮ್ಮೆ ನಂದಿಬೆಟ್ಟದ ಕಡೆ ಹೋಗಿ ಪ್ರಕೃತಿ ಸೌಂದರ್ಯವನ್ನು ಸವಿದು ಬರೋಣ ಅಂತ ನೀವು ಅಂದುಕೊಳ್ತಾ ಇದ್ರೆ ಕೊಂಚ ಯೋಚಿಸಿ. ಯಾಕಂದ್ರೆ ನಂದಿ ಬೆಟ್ಟಕ್ಕೆ ಒಂದು ತಿಂಗಳ ಕಾಲ ಪ್ರವೇಶ ನಿರ್ಬಂಧ ಹೇರಲಾಗಿದೆ. ಹಾಗಂತ ಬೇಸರ ಪಡುವ ಅಗತ್ಯವೂ ಇಲ್ಲ. ವಾರಾಂತ್ಯದಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಈ ಪ್ರವೇಶ ನಿರ್ಬಂಧ ನಾಳೆಯಿಂದ ಅಂದರೆ ಮಾರ್ಚ್ 24 ರಿಂದಲೇ ಆರಂಭವಾಗಲಿದೆ.
ರಸ್ತೆ ನವೀಕರಣ ಕಾಮಗಾರಿ
ನಂದಿಗಿರಿಧಾಮದ ರಸ್ತೆ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ 1 ತಿಂಗಳ ಕಾಲ ನಂದಿಬೆಟ್ಟ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ. ನಂದಿಗಿರಿ ಧಾಮಕ್ಕೆ ಹೋಗುವ ರಸ್ತೆಯು ಅಲ್ಲಲ್ಲಿ ಹಾಳಾಗಿರುವ ಕಾರಣ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರಮುಖ ರಸ್ತೆಯ ಕಾಮಗಾರಿಯೇ ನಡೆಯುವ ಕಾರಣ ವಾರದ ದಿನಗಳಲ್ಲಿ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಗುತ್ತಿಗೆದಾರರು ಮನವಿ ಮಾಡಿರುವ ಹಿನ್ನೆಲೆ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ನಂದಿಬೆಟ್ಟದ ರಸ್ತೆಯಲ್ಲಿ ಹೇರ್‌ಪಿನ್ ತಿರುವುಗಳಿದ್ದು, ಇಲ್ಲಿ ಕಾಮಗಾರಿ ಕೆಲಸ ನಿರ್ವಹಿಸುವುದು ಸವಾಲಾಗಿರುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಪ್ರವೇಶ ನಿರ್ಬಂಧ ಮಾಡಲಾಗಿದೆ.
ಗುತ್ತಿಗೆದಾರರ ಮನವಿಯಂತೆ ಮಾರ್ಚ್ 24 ರಿಂದ ಏಪ್ರಿಲ್ 25ರವರೆಗೆ ವಾರದ ದಿನಗಳಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧದ ಆದೇಶ ಹೊರಡಿಸಿದೆ ಜಿಲ್ಲಾಡಳಿತ. ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ರಾತ್ರಿ 6.30 ರಿಂದ ಸೋಮವಾರ ಬೆಳಿಗ್ಗೆ 8 ಗಂಟೆವರೆಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶವಿದೆ.
ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧ ಮಾಡಿರುವುದು ಬೆಂಗಳೂರಿನ ಜನತೆಗೆ ಖಂಡಿತ ಬೇಡ ಮೂಡಿಸಿರುತ್ತದೆ. ಆದರೆ ವಾರಾಂತ್ಯದಲ್ಲಿ ಮಾತ್ರ ಪ್ರವೇಶ ಅವಕಾಶ ಕಲ್ಪಿಸಿರುವುದು ಇನ್ನಷ್ಟು ಟ್ರಾಫಿಕ್ ಹಾಗೂ ಜನಸಂದಣಿಗೆ ಕಾರಣವಾಗಬಹುದು. ಯಾಕೆಂದರೆ ವಾರಾಂತ್ಯದಲ್ಲಿ ಬೆಂಗಳೂರಿಗರಿಗೆ ನಂದಿಬೆಟ್ಟಕ್ಕೆ ರೈಡ್ ಹೋಗುವುದು ನೆಚ್ಚಿನ ಹವ್ಯಾಸವಾಗಿರುತ್ತದೆ. ವಾರಾಂತ್ಯದ ದಿನಗಳಲ್ಲಿ ನಂದಿಬೆಟ್ಟ ಜನಜಂಗುಳಿಯಿಂದ ಕೂಡಿರುತ್ತದೆ. ಇದೀಗ ವಾರದ ದಿನಗಳಲ್ಲಿ ಪ್ರವೇಶ ನಿರ್ಬಂಧ ಮಾಡಿರುವುದು ವಾರಾಂತ್ಯದಲ್ಲಿ ಇನ್ನಷ್ಟು ಜನಜಂಗುಳಿಗೆ ಕಾರಣವಾಗಬಹುದು.
