ಕನ್ನಡ ಸುದ್ದಿ  /  Karnataka  /  Bengaluru News Child Marriage Victim From Bihar Dies By Suicide In Bangalore Says Police Karnataka Crime News Uks

Bengaluru Crime: ಬೆಂಗಳೂರಿನಲ್ಲಿ ಬಾಲ್ಯ ವಿವಾಹ ಸಂತ್ರಸ್ತೆ ಆತ್ಮಹತ್ಯೆ; ಬಿಹಾರ ಮೂಲದ 26 ವರ್ಷದ ಪತಿಯ ಬಂಧನ

ಬೆಂಗಳೂರು ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಈ ಪ್ರಕರಣ ಸಂಬಂಧ ಆಕೆಯ 26 ವರ್ಷದ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಬೆಂಗಳೂರಿನಲ್ಲಿ ಬಾಲ್ಯ ವಿವಾಹ ಸಂತ್ರಸ್ತೆ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಹಾರ ಮೂಲದ 26 ವರ್ಷದ ಪತಿಯ ಬಂಧನವಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ ಬಾಲ್ಯ ವಿವಾಹ ಸಂತ್ರಸ್ತೆ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಹಾರ ಮೂಲದ 26 ವರ್ಷದ ಪತಿಯ ಬಂಧನವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬಿಹಾರ ಮೂಲದ 17 ವರ್ಷದ ಯುವತಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಆಕೆಯ 26 ವರ್ಷದ ಪತಿಯನ್ನು ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಈ ಯುವತಿ ಕೇವಲ 20 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದಳು. ಮಾರ್ಚ್‌ 13ರಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈಚೆಗಷ್ಟೆ ಬಹಿರಂಗವಾಯಿತು. 2023ರ ಫೆಬ್ರವರಿಯಲ್ಲಿ ಬಿಹಾರದಲ್ಲಿ ಇವರ ವಿವಾಹವಾಗಿತ್ತು. ಆರೋಪಿಯು ಒಂದು ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಯಶವಂತಪುರದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನ ಬಾಲಕಿ ಹಿನ್ನೆಲೆ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನಿಖೆ

ವಿವಾಹಿತ ಬಾಲಕಿಯ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಆತ್ಮಹತ್ಯೆ ನಡೆದ ಬಾಡಿಗೆ ಮನೆಯ ಸುತ್ತಮುತ್ತ ವಿಚಾರಿಸಿದಾಗ, ಆಕೆಯ ಆತ್ಯಹತ್ಯೆಗೆ ಪ್ರಾಥಮಿಕ ಕಾರಣ ಮಾನಸಿಕ ಒತ್ತಡ ಎಂಬುದು ಮನದಟ್ಟಾಗಿದೆ. ಬಾಲ್ಯ ವಿವಾಹದಿಂದ ಉಂಟಾಗಿರುವ ಒತ್ತಡ ಅದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಚ್ ಕೆ ಆಶಾದೇವಿ ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಶಾರೀರಿಕ ಸಂಬಂಧ ಬೆಳೆಸುವುದಕ್ಕಾಗಿ ಆಕೆಯ ಪತಿ ಹಿಂಸೆ ಮಾಡಿರಬಹುದು. ಇದರಿಂದ ಬೇಸತ್ತ ಆಕೆ ಈ ಅತಿರೇಕ ತೋರಿರುವ ಸಾಧ್ಯತೆ ಇದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಇದನ್ನು ಖಚಿತಪಡಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಇದಲ್ಲದೆ, ಬಿಹಾರ ಮಕ್ಕಳ ಹಕ್ಕು ರಕ್ಷಣಾ ಘಟಕಕ್ಕೂ ಸಂಪರ್ಕ ಮಾಡಿದ್ದು, ಮೃತ ಬಾಲಕಿಯ ಪಾಲಕರಿಗೆ ಕೌನ್ಸೆಲಿಂಗ್ ಮಾಡಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಆಶಾ ದೇವಿ ವಿವರಿಸಿದರು.

ಪೋಕ್ಸೋ ಕಾಯಿದೆ ಪ್ರಕಾರ ದೂರು ದಾಖಲು

ವಿವಾಹಿತ ಯುವತಿಗೆ 18 ವರ್ಷ ತುಂಬಿರದ ಕಾರಣ ಆಕೆ ಬಾಲಕಿ. ಹೀಗಾಗಿ ಪೋಕ್ಸೋ ಕಾಯ್ದೆ ಪ್ರಕಾರ ಪತಿಯನ್ನೇ ಶಂಕಿತ ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿಗಳು ನೀಡಿದ ದೂರು ಆಧರಿಸಿ ಈ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆಗೆ ಭಾರತೀಯ ದಂಡ ಸಂಹಿತೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನೂ ಪತಿಯ ಮೇಲೆ ಹೇರಲಾಗಿದೆ ಎಂದು ಇನ್‌ಸ್ಪೆಕ್ಟರ್ ರೆಡ್ಡಿ ತಿಳಿಸಿದ್ದಾರೆ.

ಆರೋಪಿಯನ್ನು ಆನೇಕಲ್ ಜೆಎಂಎಫ್‌ಸಿ (ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಫಸ್ಟ್‌ ಕ್ಲಾಸ್ ) ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಅಲ್ಲಿ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ರೆಡ್ಡಿ ವಿವರಿಸಿದರು.

ಗಮನಿಸಿ, ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರ ಅಲ್ಲ…

ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)