Bitcoin Scam: ಬಿಟ್‌ಕಾಯಿನ್ ಪ್ರಕರಣ, ತಲೆಮರೆಸಿಕೊಂಡ ಡಿವೈಎಸ್‌ಪಿ ಶ್ರೀಧರ್ ಕೆ ಪೂಜಾರ್ ಸುಳಿವು ನೀಡಿದರೆ ಬಹುಮಾನ
ಕರ್ನಾಟಕದಲ್ಲಿ 2020ರಲ್ಲಿ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಅಕ್ರಮ ಕೇಸ್‌ನ ಪ್ರಮುಖ ಆರೋಪಿ, ತಲೆಮರೆಸಿಕೊಂಡ ಡಿವೈಎಸ್‌ಪಿ ಶ್ರೀಧರ್ ಕೆ ಪೂಜಾರ್ ಸುಳಿವು ನೀಡಿದರೆ ಬಹುಮಾನ ನೀಡುವುದಾಗಿ ಸಿಐಡಿ ಘೋಷಿಸಿದೆ. ಇದುವರೆಗೂ ಮೂವರು ಪ್ಲೀಸ್ ಮತ್ತು ಖಾಸಗಿ ಸೈಬರ್ ತಜ್ಞ ಅರೆಸ್ಟ್ ಆಗಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಬಹುಕೋಟಿ ರೂಪಾಯಿಯ ಬಿಟ್‌ಕಾಯಿನ್ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದ ತನಿಖಾಧಿಕಾರಿಗಳ ಮೇಲೆ ಕಾರು ಹತ್ತಿಸಿ ಕೊಲೆಗೆ ಪ್ರಯತ್ನ ನಡೆಸಿ ತಪ್ಪಿಸಿಕೊಂಡಿರುವ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಕುರಿತು ಸುಳಿವು ನೀಡಿದರೆ ಬಹುಮಾನ ನೀಡಲಾಗುವುದು ಎಂದು ಸಿಐಡಿ ಪ್ರಕಟಣೆ ನೀಡಿದೆ.
ಶ್ರೀಧರ್ ಪೂಜಾರ್ (47) ಅವರನ್ನು ಬಂಧಿಸಲು ಫೆಬ್ರವರಿ 27ರಂದು ತೆರಳಿದ್ದ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖಾಧಿಕಾರಿಗಳ ಮೇಲೆ ಕಾರು ಹತ್ತಿಸಿ ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿದ್ದರು. ಇದುವರೆಗೂ ಅವರ ಸುಳಿವು ಸಿಕ್ಕಿಲ್ಲ. ಹಾಗಾಗಿ ಡಿವೈಎಸ್‌ಪಿ ಶ್ರೀಧರ್ ಅವರ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಸಿಐಡಿ ತಿಳಿಸಿದೆ.
ಬಿಟ್‌ಕಾಯಿನ್ ಅಕ್ರಮ ಕೇಸ್ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಶ್ರೀಧರ್ ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಇವರನ್ನು 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ಘೋಷಿತ ಅಪರಾಧಿ ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಶ್ರೀಧರ್ ಕೆ ಪೂಜಾರ್ ಅವರ ಕುರಿತು ಮಾಹಿತಿ ನೀಡಿದರೆ ಅಥವಾ ಅವರನ್ನು ಹಿಡಿದು ಕೊಟ್ಟರೆ ಅಂಥವರಿಗೆ ಬಹುಮಾನ ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಜಾಮೀನು ಪಡೆಯಲು ಪ್ರಯತ್ನಿಸಿದ್ದ ಶ್ರೀಧರ್ ಕೆ ಪೂಜಾರ್
ಆಂತರಿಕ ಭದ್ರತಾ ವಿಭಾಗದ ಡಿವೈಎಸ್‌ಪಿಯಾಗಿದ್ದ ಶ್ರೀಧರ್ ಅವರು ಈ ಕೇಸ್‌ನಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಆದ್ದರಿಂದ ಅವರನ್ನು ಬಂಧಿಸಲು ಫೆಬ್ರವರಿ 27ರಂದು ಎಸ್‌ಐಟಿಯ ಇಬ್ಬರು ಅಧಿಕಾರಿಗಳು ಬಲೆ ಬೀಸಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜು ಸಮೀಪವಿರುವ ಮೆಟ್ರೊ ನಿಲ್ದಾಣದ ಹತ್ತಿರ ವಕೀಲರ ಜೊತೆಗೆ ಕಾರಿನಲ್ಲಿದ್ದ ಶ್ರೀಧರ್ ಅವರು ತನಿಖಾಧಿಕಾರಿಗಳನ್ನು ನೋಡುತ್ತಿದ್ದಂತೆ ತಪ್ಪಿಸಿಕೊಂಡು ಪರಾರಿಯಾಗಲು ಮುಂದಾದರು.
ಅವರನ್ನು ಹಿಡಿಯಲು ತನಿಖಾಧಿಕಾರಿಗಳು ಬೆನ್ನಟ್ಟಿ ಕಾಫಿ ಬೋರ್ಡ್ ಸಿಗ್ನಲ್ ಬಳಿ ಶ್ರೀಧರ್ ಅವರನ್ನು ಹಿಡಿಯಲು ಮುಂದಾದಾಗ ಎಸ್‌ಐಟಿ ಅಧಿಕಾರಿಗಳ ಮೇಲೆ ಕಾರು ಹತ್ತಿಸಿ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಶ್ರೀಧರ್ ವಿರುದ್ದ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಎಎಸ್‌ಐ ಭಾಸ್ಕರ್ ಗಂಭೀರವಾಗಿ ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಅವರನ್ನು ಬಂಧಿಸಿತ್ತು. ಬಿಟ್ ಕಾಯಿನ್ ಹಗರಣದಲ್ಲಿ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳಾದ ಪ್ರಶಾಂತ್ ಬಾಬು ಮತ್ತು ಚಂದ್ರಧರ್ ಎಸ್ ಆರ್ ಹಾಗೂ ಖಾಸಗಿ ಸೈಬರ್ ತಜ್ಞ ಸಂತೋಷ್ ಕುಮಾರ್ ಅವರನ್ನು ಬಂಧಿಸಿದೆ. ಹಿರಿಯ ಐಪಿಎಸ್ ಅಧಿಕಾರಿಗಳ ವಿಚಾರಣೆಯೂ ನಡೆದಿದೆ.
ಮಾಹಿತಿ ನೀಡಬೇಕಾದ್ದು ಯಾರಿಗೆ, ಯಾವ ಫೋನ್ ನಂಬರ್‌ಗೆ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಪ್ರಕರಣ ಭಾರಿ ಸದ್ದು ಮಾಡಿತ್ತು. ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಎಸ್‌ಐಟಿಗೆ ನೀಡಿತ್ತು.
ಡಿವೈಎಸ್‌ಪಿ, ಫೈನಾನ್ಷಿಯಲ್ ಇಂಟೆಲಿಜೆನ್ಸ್ ವಿಭಾಗ, ಸಿಐಡಿ, ಬೆಂಗಳೂರು, ದೂರವಾಣಿ: 080 22094485, 22094498 (ಸಿಐಡಿ ಕಂಟ್ರೋಲ್ ರೂಂ), ಮೊಬೈಲ್: 94808 00181, ತನಿಖಾಧಿಕಾರಿಗಳು: 94481 49915 ಸಂಖ್ಯೆಗಳನ್ನು ಸಂಪರ್ಕಿಸಿ ಶ್ರೀಧರ್ ಕೆ ಪೂಜಾರ್ ಕುರಿತು ಮಾಹಿತಿ ನೀಡಬಹುದಾಗಿದೆ ಎಂದು ಸಿಐಡಿ ತಿಳಿಸಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)
(This copy first appeared in Hindustan Times Kannada website. To read more like this please logon to kannada.hindustantimes.com)
