ತೆಂಗಿನಕಾಯಿ ದರ ತುಟ್ಟಿ, ಹೋಟೆಲ್‌ನಲ್ಲಿ ಕೇಳದಿರಿ ಚಟ್ನಿ; ಎಳನೀರು ಮಾರಾಟ ಹೆಚ್ಚಳ, ಕುಸಿದ ಇಳುವರಿಯಿಂದ ಕಾಯಿ ದುಬಾರಿ
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ತೆಂಗಿನಕಾಯಿ ದರ ದುಬಾರಿಯಾಗಿದೆ. ಎಳನೀರು ಮಾರಾಟಕ್ಕೆ ರೈತರು ಆದ್ಯತೆ ನೀಡಿದ್ದು, ಕುಸಿದ ಇಳುವರಿಯಿಂದಾಗಿ ಕಾಯಿ ದರ ದುಬಾರಿಯಾಗಿದೆ. ಹೋಟೆಲ್, ರೆಸ್ಟೂರೆಂಟ್, ಕೆಟರಿಂಗ್‌ನವರು ಇದರಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.
![ತೆಂಗಿನಕಾಯಿ ದರ ತುಟ್ಟಿ, ಹೋಟೆಲ್‌ನಲ್ಲಿ ಕೇಳದಿರಿ ಚಟ್ನಿ; ಕುಸಿದ ಇಳುವರಿಯಿಂದ ಕಾಯಿ ದುಬಾರಿ ತೆಂಗಿನಕಾಯಿ ದರ ತುಟ್ಟಿ, ಹೋಟೆಲ್‌ನಲ್ಲಿ ಕೇಳದಿರಿ ಚಟ್ನಿ; ಕುಸಿದ ಇಳುವರಿಯಿಂದ ಕಾಯಿ ದುಬಾರಿ](https://images.hindustantimes.com/kannada/img/2025/01/02/550x309/Coconut_Prices_Is_1735809913511_1735809919958.png)
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ಕೆಲವು ಹೋಟೆಲ್‌ಗಳಲ್ಲಿ ತಟ್ಟೆಯಲ್ಲಿ ಚಟ್ನಿ ಮಿಸ್ ಆಗಿರುವುದನ್ನು ಗಮನಿಸಿರಬಹುದು. ಕೆಲವೊಂದು ಹೋಟೆಲ್‌ಗಳು ಗಟ್ಟಿ ಚಟ್ನಿ ಬದಲು ತೆಳು ಚಟ್ನಿಯನ್ನಷ್ಟೇ ನೀಡಲು ಆರಂಭಿಸಿವೆ. ಒಂದು ಚಿಕ್ಕ ವಡೆಗೆ ಎರಡೆರಡು ಬಾರಿ ಚಟ್ನಿ ಕೇಳಿ ಹಾಕಿಸ್ಕೊಂಡ್ರೆ ಹೋಟೆಲ್ ಮಾಲೀಕರು ನಿಮ್ಮನ್ನು ದುರುಗಟ್ಟಿ ನೋಡಿದರೂ ಅಚ್ಚರಿಯಿಲ್ಲ. ಹೌದು, ಕರ್ನಾಟಕದಲ್ಲಿ ತೆಂಗಿನಕಾಯಿ ದುಬಾರಿಯಾಗಿದೆ. ಒಂದು ಸಾಧಾರಣ ತೆಂಗಿನಕಾಯಿಗೆ ಕೆಲವೆಡೆ 40 ರೂನಿಂದ 45 ರೂಪಾಯಿ ಕೇಳಲು ಆರಂಭಿಸಿದ್ದಾರೆ. 20 ರೂಪಾಯಿಗೆ ಸಿಗುತ್ತಿದ್ದ ಚಿಕ್ಕಚಿಕ್ಕ ತೆಂಗಿನಕಾಯಿ ದರ ಈಗ 30 ದಾಟಿದೆ.
ತೆಂಗಿನಕಾಯಿ ದರ ಎಷ್ಟಿದೆ?
ಉದಾಹರಣೆಗೆ ಕಮಾಡಿಟಿ ಆನ್‌ಲೈನ್ ಪ್ರಕಟಿಸಿದ ಮಂಡಿ ದರದ ಪ್ರಕಾರ ಬೆಂಗಳೂರಿನಲ್ಲಿ ಗ್ರೇಡ್1 ತೆಂಗಿನಕಾಯಿ ದರ ಕ್ವಿಂಟಲ್‌ಗೆ ಕನಿಷ್ಠ 25 ಸಾವಿರ ರೂಪಾಯಿ, ಗರಿಷ್ಠ 35 ಸಾವಿರ ರೂಪಾಯಿ ಇದೆ. ಸರಾಸರಿ ದರ 30 ಸಾವಿರ ರೂಪಾಯಿ ಇದೆ. ಹಾಸನದ ಅರಸಿಕೆರೆಯಲ್ಲಿ ಕ್ವಿಂಟಲ್‌ಗೆ 15 ಸಾವಿರ ರೂಪಾಯಿ ಕನಿಷ್ಠ ದರ ಮತ್ತು ಗರಿಷ್ಠ ದರ 31 ಸಾವಿರ ರೂಪಾಯಿ ಇದೆ. ಮಡಿಕೇರಿಯ ಸೋಮವಾರಪೇಟೆಯಲ್ಲಿ 12,500 ರೂಪಾಯಿ ಆಸುಪಾಸಿನಲ್ಲಿದೆ.
ಆನ್‌ಲೈನ್‌ನಲ್ಲಿಯೂ ದುಬಾರಿ
ಫಾರ್ಮ್ ಫ್ರೆಶ್ ಬೆಂಗಳೂರು ವೆಬ್‌ಸೈಟ್‌ನಲ್ಲಿ ಒಂದು ತೆಂಗಿನಕಾಯಿ ದರ 55 ರೂಪಾಯಿ ಇದೆ. ಇಂಡಿಯಾ ಮಾರ್ಟ್‌ನಲ್ಲಿ ದೊಡ್ಡ ತೆಂಗಿನಕಾಯಿ ದರ 63 ರೂಪಾಯಿ, ಸಣ್ಣ ತೆಂಗಿನಕಾಯಿ ದರ 45 ರೂಪಾಯಿ ಇದೆ.
ತರಕಾರಿ ಅಂಗಡಿಗಳಲ್ಲಿಯೂ ತುಟ್ಟಿ
ಬೆಂಗಳೂರಿನ ವಿವಿಧ ತರಕಾರಿ ಅಂಗಡಿಗಳಲ್ಲಿಯೂ ತೆಂಗಿನಕಾಯಿ ದರ ದುಬಾರಿಯಾಗಿದೆ. ದೊಡ್ಡ ತೆಂಗಿನಕಾಯಿಗೆ 40-50 ರೂಪಾಯಿ, ಸಣ್ಣ ತೆಂಗಿನಕಾಯಿ ದರ 30 ರೂಪಾಯಿಗಿಂತ ಹೆಚ್ಚಿದೆ. ಇನ್ನು ಕೆಲವೇ ದಿನಗಳಲ್ಲಿ ತೆಂಗಿನಕಾಯಿ ದರ ಇನ್ನಷ್ಟು ಹೆಚ್ಚಾದರ ಅಚ್ಚರಿಯಿಲ್ಲ ಎನ್ನುತ್ತಿದ್ದಾರೆ ಅಂಗಡಿಯವರು.
ತೆಂಗಿಕಾಯಿ ದರ ದುಬಾರಿಯಾಗಲು ಕಾರಣವೇನು?
ಇಳುವರಿ ಕುಸಿತ ತೆಂಗಿನಕಾಯಿ ದುಬಾರಿಯಾಗಲು ಪ್ರಮುಖ ಕಾರಣ. ಇದರೊಂದಿಗೆ ರೈತರು ಎಳನೀರು ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೂ ತೆಂಗಿನಕಾಯಿ ಪೂರೈಕೆ ಮೇಲೆ ಪರಿಣಾಮ ಬೀರಿದೆ.
ಕೆಲವು ತಿಂಗಳ ಹಿಂದೆ ಎಳನೀರಿನ ದರ 60 ರೂಪಾಯಿಗಿಂತಲೂ ಹೆಚ್ಚಾಗಿತ್ತು. ಈ ಸಮಯದಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇದ್ದ ಕಾರ ಸಾಕಷ್ಟು ರೈತರು ಎಳನೀರು ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ಇದು ಸಹಜವಾಗಿ ತೆಂಗಿನಕಾಯಿ ಇಳುವರಿ ಕುಸಿತಕ್ಕೆ ಕಾರಣವಾಗಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ. ಮಳೆ ಸರಿಯಾಗಿ ಆಗದೆ ಇರುವುದು ಕೂಡ ಇಳುವರಿ ಕುಸಿತಕ್ಕೆ ಕಾರಣವಾಗಿದೆ.
ಹೋಟೆಲ್‌ಗಳಿಗೆ ಹೊರೆ
"ಚಟ್ನಿ ಮಾತ್ರವಲ್ಲ ಸಾಂಬಾರ್ ಇತ್ಯಾದಿಗಳಿಗೆ ತೆಂಗಿನಕಾಯಿ ಬೇಕು. ಸದ್ಯ ನಾವು ದರ ಹೆಚ್ಚಿಸಿಲ್ಲ. ಆದರೆ, ಮುಂದೆ ಇದೇ ರೀತಿ ದರ ಏರಿಕೆ ಮುಂದುವರೆದರೆ ತೆಂಗಿನಕಾಯಿ ಕಡಿಮೆ ಬಳಕೆ ಮಾಡುವುದು ಅನಿವಾರ್ಯವಾಗುತ್ತದೆ" ಎಂದು ಬೆಂಗಳೂರಿನ ಹೋಟೆಲ್ ಮಾಲೀಕರೊಬ್ಬರು ಹೇಳಿದ್ದಾರೆ.
ಕರ್ನಾಟಕದಲ್ಲಿ ಇಂದಿನ ತೆಂಗಿನಕಾಯಿ ದರ
(ಕಿಸಾನ್‌ಡೀಲ್ಸ್ ವೆಬ್‌ಸೈಟ್ ಪ್ರಕಾರ ಕರ್ನಾಟಕದಲ್ಲಿ ಇಂದಿನ ತೆಂಗಿನಕಾಯಿ ದರ)
ತೆಂಗಿನಕಾಯಿ ಒಂದು ಕೆಜಿ ದರ: 152 ರೂಪಾಯಿ
ತೆಂಗಿನಕಾಯಿ 10 ಕೆಜಿ ದರ: 152 ರೂಪಾಯಿ
ತೆಂಗಿನಕಾಯಿ ಒಂದು ಕ್ವಿಂಟಲ್ ದರ: 1523 ರೂಾಯಿ
ತೆಂಗಿನಕಾಯಿ ಸರಾಸರಿ ದರ (ಕ್ವಿಂಟಲ್‌ಗೆ): 15228 ರೂಪಾಯಿ
ತೆಂಗಿನಕಾಯಿ ಗರಿಷ್ಠ ದರ (ಕ್ವಿಂಟಲ್‌ಗೆ): 30000 ರೂಪಾಯಿ
![Whats_app_banner Whats_app_banner](https://kannada.hindustantimes.com/static-content/1y/wBanner.png)